ಗಾರ್ಮೆಂಟ್ಸ್ ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆಗಳು
Update: 2016-04-20 23:35 IST
ಪೊಲೀಸರ ಸಹಾಯ ಪಡೆದು ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಾರೆ. ಕೆಲ ಪೊಲೀಸ್ ಅಧಿಕಾರಿಗಳೂ ಮಾಲಕರ ಜೊತೆ ಶಾಮೀಲಾಗುತ್ತಾರೆ. ಹೋರಾಟದ ಮುಂಚೂಣಿಯಲ್ಲಿರುವ ಕಾರ್ಮಿಕ ಮುಖಂಡರ ವಿರುದ್ಧ ಸುಳ್ಳು ಆರೋಪ ಹೊರಿಸಿ ಮೊಕದ್ದಮೆ ಹೂಡುತ್ತಾರೆ. ಕಾರ್ಖಾನೆ ಮುಚ್ಚುವುದಾಗಿಯೂ, ನೀವು ಕೆಲಸ ಕಳೆದುಕೊಳ್ಳುತ್ತೀರೆಂದು ಭಯ ಹುಟ್ಟಿಸುತ್ತಾರೆ. ಮುಷ್ಕರ ನಿರತರ ನಡುವೆ ಸಂಘದ ಮುಖಂಡರ ವಿರುದ್ಧ ಅಪಪ್ರಚಾರ ಮಾಡುತ್ತಾರೆ. ಹೋರಾಟದ ಸಂದರ್ಭಗಳಲ್ಲಿ ಸಮಾಜಘಾತುಕ ಶಕ್ತಿಗಳು ಒಳನುಸುಳುವಂತೆ ಮಾಡಿ ಗಲಭೆ ಸೃಷ್ಟಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಜಾತಿ, ಭಾಷೆ ಹೆಸರಿನ ಸಂಘದ ನಾಯಕರೂ ಮುಷ್ಕರ ಮುರಿಯುವ ಯತ್ನದಲ್ಲಿ ಮಾಲಕರ ಜೊತೆ ಕೈಜೋಡಿಸುತ್ತಾರೆ. ಗಲಭೆಯ ಕಾರಣ ನೀಡಿ ನ್ಯಾಯಾಲಯದಿಂದ ಮುಷ್ಕರ ತಡೆ ಹಿಡಿಯುವ ಆದೇಶ ಪಡೆಯುತ್ತಾರೆ. ಕಾರ್ಮಿಕ ಇಲಾಖೆಯ ಕೆಲ ಅಧಿಕಾರಿಗಳೂ ಮಾಲಕರ ಆಮಿಷಕ್ಕೆ ಬಲಿಯಾಗಿ, ಕಾರ್ಮಿಕರ ಪರವಾಗಿ ನಿಲ್ಲದೆ ವೌನವಾಗುತ್ತಾರೆ. ಒಬ್ಬನೇ ಮಾಲಕ ಹಲವು ಕಾರ್ಖಾನೆ ಹೊಂದಿರುವುದರಿಂದ ಅವರ ಉತ್ಪನ್ನ ಕುಂಠಿತಗೊಳ್ಳುವುದಿಲ್ಲ. (ಒಮ್ಮೆ ಅಶೋಕ ಸಾಮ್ರಾಟ ಗಾರ್ಮೆಂಟ್ಸಿನ ಎಲ್ಲಾ 11 ಕಾರ್ಖಾನೆಗಳ ಕಾರ್ಮಿಕರೂ ಒಮ್ಮೆಗೆ ಮುಷ್ಕರಕ್ಕಿಳಿದಿದ್ದರು. ಪೊಲೀಸ್ ಬಲ ಪ್ರಯೋಗಿಸಿ ಮುಷ್ಕರವನ್ನು ಹತ್ತಿಕ್ಕುವ ಪ್ರಯತ್ನ ನಡೆಯಿತು. ಮಾಲಕ ತನ್ನೆಲ್ಲಾ ಕಾರ್ಖಾನೆಗಳನ್ನು ಮುಚ್ಚಿದನು. ಕಾರ್ಮಿಕರ ಬೇಡಿಕೆ ಈಡೇರಲೇ ಇಲ್ಲ. ಕಾರ್ಮಿಕರಿಂದ ಕಡಿತ ಮಾಡಿದ್ದ ಪಿಎಫ್ ಹಣವನ್ನು ತುಂಬದ ಮಾಲಕನ ವಿರುದ್ಧ ಹೋರಾಡಲು ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾಯಿತು.) ಮುಷ್ಕರವೇನಾದರೂ ತಿಂಗಳು ಗಟ್ಟಲೆ ನಡೆದರೆ, ಬಡ ಕಾರ್ಮಿಕರೇ ತುಂಬಿರುವ ಕಾರಣದಿಂದ ಕೆಲ ಕಾರ್ಮಿಕರು ಜೀವನ ನಡೆಸಲು ಮತ್ತೊಂದು ಕಾರ್ಖಾನೆಗೆ ಸೇರಿಕೊಳ್ಳುತ್ತಾರೆ. ಕಾರ್ಖಾನೆ ಮುಚ್ಚಿ ಮತ್ತೊಂದು ಕಾರ್ಖಾನೆ ಸ್ಥಾಪನೆಯಾಗುತ್ತದೆ. ಸರಕಾರಗಳೂ ಕಾರ್ಮಿಕರ ಪರವಾಗಿ ನಿಲ್ಲುವುದಿಲ್ಲ. ಕಾರ್ಮಿಕರು ಬೇಸತ್ತು ಬೇರೆ ಕಾರ್ಖಾನೆ ಸೇರಿಕೊಳ್ಳುತ್ತಾರೆ. ಕಾರ್ಮಿಕ ಸಂಘಗಳ ನಾಯಕರು ಕಾರ್ಖಾನೆ ಮುಚ್ಚಿಸುತ್ತಾರೆ. ನಾಯಕರು ಮಾಲಕರೊಡನೆ ಶಾಮೀಲಾಗಿ ಕಾರ್ಮಿಕರಿಗೆ ಮೋಸ ಮಾಡುತ್ತಾರೆ ಎಂದು ನಿರಂತರವಾಗಿ ಅಪಪ್ರಚಾರ ಮಾಡುತ್ತಾರೆ. ವರ್ಗಪ್ರಜ್ಞೆ ಇಲ್ಲದ ಬಹಳಷ್ಟು ಕಾರ್ಮಿಕರು ಬಂಡವಾಳಶಾಹಿಗಳು ಮಾಡುವ ಅಪಪ್ರಚಾರಕ್ಕೆ ಮರುಳಾಗುತ್ತಾರೆ. ಇಷ್ಟೆಲ್ಲದರ ನಡುವೆಯೂ, ರಾಜ್ಯದಲ್ಲಿ ಕಾರ್ಮಿಕರ ನಡುವೆ ವರ್ಗಪ್ರಜ್ಞೆ ಮೂಡಿಸಿ ಸಂಘಟಿಸುವ ಕಾರ್ಯದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ವೈಫಲ್ಯಗಳನ್ನು ಅಲ್ಲಗಳೆಯಲಾಗದು.