ಕೋತಿಯ ಕೈಯಲ್ಲಿ ಕೊಹಿನೂರ್!
ಕೊಹಿನೂರ್ ನಿಜಕ್ಕೂ ಯಾರದ್ದು? ನಾದಿರ್ ಶಾ ಈ ವಜ್ರವನ್ನು ಹೊಂದಿರುವುದರಿಂದ ಇರಾನ್ ಇದರ ಮೇಲೆ ಹಕ್ಕು ಸಾಸಲು ಹೊರಡುತ್ತದೆ. ಲಾಹೋರ್ ರಾಜನ ಬಳಿ ಇದ್ದುದರಿಂದ, ಪಾಕಿಸ್ತಾನವೂ ಈ ವಜ್ರದ ಕುರಿತಂತೆ ತನ್ನ ಅಕಾರವನ್ನು ಎತ್ತಿ ಹಿಡಿಯುತ್ತದೆ. ಅಹ್ಮದ್ ಶಾ ದುರಾನಿ ಬಳಿ ಇದ್ದುದರಿಂದ ಅಫ್ಘಾನಿಸ್ತಾನಕ್ಕೂ ಈ ಕೊಹಿನೂರ್ ಮೇಲೆ ಕಣ್ಣಿದೆ. ಆದರೆ ಭಾರತ ಮಾತ್ರ ವಿರಾಗಿಯಂತೆ ಕೊಹಿನೂರ್ ಬಗ್ಗೆ ಇತ್ತೀಚೆಗೆ ಹೇಳಿಕೆಯನ್ನು ನೀಡಿದೆ. ಈವರೆಗೆ ಕೊಹಿನೂರ್‌ನ್ನು ಭಾರತದ ಪರಂಪರೆಯನ್ನು ಜೋಡಿಸಿ ಮಾತನಾಡುತ್ತಿದ್ದವರು ಏಕಾಏಕಿ ನ್ಯಾಯಾಲಯಕ್ಕೆ ಕೊಹಿನೂರ್ ಬಗ್ಗೆ ತದ್ವಿರುದ್ಧ ಹೇಳಿಕೆಯನ್ನು ನೀಡಿದೆ. ‘ಕೋಹಿನೂರ್’ನ್ನು ಭಾರತದ ರಾಜ, ಬ್ರಿಟಿಷರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಆದುದರಿಂದ, ಅದನ್ನು ಮರಳಿ ಕೇಳುವುದಿಲ್ಲ. ಅದರ ಸಂಪೂರ್ಣ ಅಕಾರ ಬ್ರಿಟಿಷ್ ರಾಣಿಗೆ ಸೇರಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಬಹುಶಃ ಈ ಹೇಳಿಕೆಯನ್ನು ಈ ಹಿಂದೆ ಕಾಂಗ್ರೆಸ್ ಸರಕಾರವೇನಾದರೂ ಹೇಳಿದ್ದರೆ, ಕೋಹಿನೂರನ್ನೇ ಮುಂದಿಟ್ಟುಕೊಂಡು ಬಿಜೆಪಿ ಮತ್ತು ಆರೆಸ್ಸೆಸ್ ಒಂದು ಚಳವಳಿಯನ್ನು ನಡೆಸುತ್ತಿತ್ತೋ ಏನೋ. ಯಾಕೆಂದರೆ, ತಾಜ್‌ಮಹಲನ್ನು ತೇಜೋಮಹಲ್ ಎಂದು ಆರೆಸ್ಸೆಸ್ ಕರೆಯುವಂತೆಯೇ, ಕೊಹಿನೂರ್ ಕುರಿತಂತೆಯೂ ಸಂಘಪರಿವಾರದ ಜನರಲ್ಲಿ ಒಂದು ನಂಬಿಕೆಯಿದೆ. ಅದೆಂದರೆ, ಪುರಾಣ ಕಾಲದಲ್ಲಿ ಕೃಷ್ಣನಲ್ಲಿದ್ದ ‘ಶ್ಯಮಂತಕ ಮಣಿ’ಯೇ ಈ ಕೊಹಿನೂರ್ ಎಂದು ಕೆಲವರು ಗುಟ್ಟಾಗಿ ನಂಬುತ್ತಾರೆ. ಸದ್ಯಕ್ಕೆ ಬಿಜೆಪಿ ಸರಕಾರವೇ ಕೊಹಿನೂರ್ ನಮ್ಮದಲ್ಲ ಎಂದು ಹೇಳಿಕೆ ನೀಡಿರುವುದರಿಂದ ಅದು ವಿವಾದವಾಗಿಲ್ಲ. ಬೇರೆ ರಾಜಕೀಯ ಪಕ್ಷದ ಜನರು ಇದರ ಕುರಿತು ಇಂತಹದೊಂದುಹೇಳಿಕೆ ನೀಡಿದ್ದೇ ಆದರೆ, ಅವರಿಷ್ಟರಲ್ಲೇ ದೇಶದ್ರೋಹಿಗಳಾಗಿ ಬಿಂಬಿತವಾಗುತ್ತಿದ್ದರು. ಕೋಹಿನೂರು ಭಾರತಕ್ಕೆ ಯಾಕೆ ಮುಖ್ಯ? ಎನ್ನುವ ಪ್ರಶ್ನೆಗೆ ಉತ್ತರ ಸ್ಪಷ್ಟವಿದೆ. ಕೋಹಿನೂರು ವಜ್ರವನ್ನು ಭಾರತದ ಇತಿಹಾಸದ ಬೇರುಗಳು ಸುತ್ತಿಕೊಂಡಿವೆ. ಭಾರತದ ಪುರಾಣ, ಇತಿಹಾಸ, ವರ್ತಮಾನಗಳ ಜೊತೆ ಕೋಹಿನೂರಿಗೆ ನೇರ ಸಂಬಂಧವಿದೆ. ಆಂಧ್ರದಿಂದ ದಿಲ್ಲಿಯವರೆಗೆ ಕೊಹಿನೂರ್ ವಜ್ರದ ರೋಚಕ ಪಯಣ ಭಾರತದ ರಕ್ತಸಿಕ್ತ ಇತಿಹಾಸವನ್ನು ತೆರೆದಿಡುತ್ತದೆ. ಕಾಕತೀಯ ದೊರೆಗಳಿಂದ ಮಲಿಕಾರ್‌ಗೆ, ಈತನಿಂದ ಖಿಲ್ಜಿ ವಂಶದ ತಿಜೋರಿ ಸೇರಿದ ಈ ವಜ್ರ ಬಳಿಕ, ಮೊಗಲ್ ಸಾಮ್ರಾಜ್ಯದ ವಶವಾಗುತ್ತದೆ. ನಾದಿರ್ ಶಾನ ದಾಳಿಯಿಂದಾಗಿ, ದಿಲ್ಲಿಯಿಂದ ಪರ್ಶಿಯಾಕ್ಕೆ ಕೊಹಿನೂರ್ ಹಸ್ತಾಂತರವಾಗುತ್ತದೆ. ಬಳಿಕ ನಾದಿರ್ ಸೇನಾಪತಿ ದುರ್ಹಾನಿಯ ಮೂಲಕ ಅ್ಘಾನಿಸ್ತಾನ ಸೇರುತ್ತದೆ. ಇಲ್ಲಿಂದ, ಮುಹಮ್ಮದ್ ಶಾ ಎಂಬಾತನ ಮೂಲಕ ಲಾಹೋರ್‌ಗೆ ಅಂದರೆ ಮತ್ತೆ ಭಾರತದ ಮಣ್ಣಿಗೇ ವಾಪಸಾಗುತ್ತದೆ. ಮುಹಮ್ಮದ್ ಶಾನು ಕೊಹಿನೂರ್ ಮೂಲಕ ಲಾಹೋರ್‌ನ ದೊರೆ ರಣಜಿತ್‌ಗೆ ಶರಣಾದಾಗ, ಪ್ರತಿಯಾಗಿ ಆತನಿಂದ ರಾಜ ಕೋಹಿನೂರನ್ನು ಪಡೆದುಕೊಳ್ಳುತ್ತಾನೆ. ಅಂತಿಮವಾಗಿ ಈಸ್ಟ್ ಇಂಡಿಯಾ ಕಂಪೆನಿ ರಣಜಿತ್ ಸಿಂಗ್‌ನ ಸಾವಿನ ಬಳಿಕ ಈ ವಜ್ರವನ್ನು ಉಪಾಯವಾಗಿ ತನ್ನದಾಗಿಸಿಕೊಂಡು ರಾಣಿ ವಿಕ್ಟೋರಿಯಾಗೆ ಸಮರ್ಪಿಸುವ ನಿರ್ಧಾರವನ್ನು ಮಾಡುತ್ತದೆ. ಕೋಹಿನೂರು ವಜ್ರವನ್ನು ಭಾರತದಿಂದ ಬ್ರಿಟನ್‌ಗೆ ಒಯ್ಯುವುದರ ಬಗ್ಗೆ ಆ ಸಂದರ್ಭದಲ್ಲೇ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು. ಯಾಕೆಂದರೆ, ಲಾಹೋರ್ ಒಪ್ಪಂದವನ್ನು ಬ್ರಿಟಿಷರು ಮುಂದಿಟ್ಟಾಗ ಅದರ ಮಹಾರಾಜನ ವಯಸ್ಸು ಬರೇ 13. ಆತನ ಹೆಸರಿನಲ್ಲಿ ಇತರರು ಆಳ್ವಿಕೆ ಮಾಡುತ್ತಿದ್ದರು. ಪರೋಕ್ಷವಾಗಿ ಒಂದು ಎಳೆಯ ಮಗುವನ್ನು ಬೆದರಿಸಿ, ಅದರ ಕೈಯಿಂದ ಬ್ರಿಟಿಷರು ಕೋಹಿನೂರನ್ನು ಕಿತ್ತುಕೊಂಡರು. ಕನಿಷ್ಠ ಆ ಕಳಂಕವನ್ನು ಬ್ರಿಟಿಷರು ಈವರೆಗೂ ಕೊಹಿನೂರ್ ಜೊತೆಗೆ ಧರಿಸಿಕೊಂಡಿದ್ದಾರೆ ಎನ್ನುವುದನ್ನು ನಾವು ಮರೆಯುವ ಹಾಗಿಲ್ಲ. ಆದರೆ ಇದೇ ಸಂದರ್ಭದಲ್ಲಿ ನರೇಂದ್ರ ಮೋದಿ ಸರಕಾರ ಬ್ರಿಟಿಷರ ವಂಚನೆಯನ್ನು ಸಮರ್ಥಿಸಲು ಮುಂದಾಗಿದೆ. ಅವರ ಕಳಂಕವನ್ನು ಅಳಿಸಿ, ಅವರಿಗೆ ಕ್ಲೀನ್ ಚಿಟ್‌ನ್ನು ನೀಡಲು ನಿರ್ಧರಿಸಿದೆ. ಕೊಹಿನೂರ್‌ನ್ನು ಬ್ರಿಟಿಷರು ಕಿತ್ತುಕೊಂಡಿಲ್ಲ, ಬದಲಿಗೆ ಅಂದಿನ ರಾಜ ಅವರಿಗೆ ಉಡುಗೊರೆಯಾಗಿ ನೀಡಿದ್ದ ಎಂದು ಹೇಳುವ ಮೂಲಕ ಬ್ರಿಟಿಷರ ಗುಲಾಮತನವನ್ನು ಕೊಹಿನೂರ್ ವಜ್ರ ಎಂಬಂತೆ ಸ್ವೀಕರಿಸಿದೆ. ಮೋದಿ ಸರಕಾರ ಅಕಾರಕ್ಕೆ ಬಂದ ದಿನದಿಂದ ವಿದೇಶಿಯರ ಜೀತಕ್ಕೆ ತಹತಹಿಸುತ್ತಿದೆ. ಮೇಕ್ ಇನ್ ಇಂಡಿಯಾ ಹೆಸರಿನಲ್ಲಿ ಇಡೀ ದೇಶವನ್ನೇ ವಿದೇಶಿಯರಿಗಾಗಿ ಒತ್ತೆಯಿಟ್ಟಿದೆ. ಇದೀಗ ಕೊಹಿನೂರ್ ವಜ್ರವನ್ನೇ ಮೇಕ್ ಇನ್ ಇಂಡಿಯಾ ಭಾಗವಾಗಿ ಬ್ರಿಟನ್‌ಗೆ ಉಡುಗೊರೆಯಾಗಿ ನೀಡಲು ಮುಂದಾಗಿದೆ. ಅದು ತನ್ನದಲ್ಲ ಎನ್ನುವುದನ್ನು ಬಹಿರಂಗವಾಗಿ ಘೋಷಿಸಿದೆ. ಕೊಹಿನೂರ್ ಭಾರತದ್ದು ಎನ್ನುವ ಹೆಮ್ಮೆಗೆ ಕೇಂದ್ರ ಸರಕಾರದ ಹೇಳಿಕೆ ಹಿನ್ನಡೆ ತಂದಿದೆ. ವಿಪರ್ಯಾಸವೆಂದರೆ, ಇಂತಹದೊಂದು ಹೇಳಿಕೆಯನ್ನು ನೀಡಿದ ಒಂದೇ ದಿನದಲ್ಲಿ, ಅದು ‘‘ಕೋಹಿನೂರು ಭಾರತಕ್ಕೆ ಸೇರಿದ್ದು, ಅದನ್ನು ಮರಳಿ ತರಲು ಪ್ರಯತ್ನಿಸುತ್ತೇವೆ’’ ಎಂದು ಉಲ್ಟಾ ಹೊಡೆದಿದೆ. ಭಾರತದ ಅಮೂಲ್ಯ ಸಂಪತ್ತಿನ ಕುರಿತಂತೆ ಕೇಂದ್ರ ಸರಕಾರ ಎಷ್ಟು ಬೇಜವಾಬ್ದಾರಿಯನ್ನು ಹೊಂದಿತ್ತು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ‘‘ಅದನ್ನು ಮರಳಿ ತರುತ್ತೇನೆ’’ ಎಂದು ಇದೀಗ ಹೇಳಿಕೆ ನೀಡಿರುವುದು ಸತ್ಯವೇ ಆಗಿದ್ದರೆ, ಎರಡು ದಿನಗಳ ಹಿಂದೆ ನ್ಯಾಯಾಲಯಕ್ಕೆ ಸುಳ್ಳು ಹೇಳಿಕೆಯನ್ನು ನೀಡಿದ್ದಾದರೂ ಯಾಕೆ? ಬ್ರಿಟಿಷರು ಕೋಹಿನೂರನ್ನು ಬಲವಂತವಾಗಿ ಕಿತ್ತುಕೊಂಡಿರುವ ಸತ್ಯ ಈಗಾಗಲೇ ಇತಿಹಾಸದಲ್ಲಿ ದಾಖಲಾಗಿದೆ. ಹೀಗಿರುವಾಗ, ಅದನ್ನು ಭಾರತ ಉಡುಗೊರೆಯಾಗಿ ನೀಡಲಾಗಿತ್ತು ಎಂದು ಹೇಳುವ ಆವಶ್ಯಕತೆಯಾದರೂ ಏನಿತ್ತು? ಬಾಬರಿ ಮಸೀದಿ ಹಿಂದೂಗಳಿಗೆ ಸೇರಿದ್ದು, ತಾಜ್, ತೇಜೋಮಹಲ್ ಆಗಿತ್ತು ಎಂದೆಲ್ಲ ವಿವಾದಗಳನ್ನು ಹುಟ್ಟು ಹಾಕಿ, ದೇಶದಲ್ಲಿ ಅಶಾಂತಿಯನ್ನು ಬಿತ್ತುವ ಬಿಜೆಪಿ, ಕೋಹಿನೂರು ಭಾರತಕ್ಕೆ ಸೇರಿದ್ದು ಎಂದು ಹೇಳಲು ಅಂಜುತ್ತಿರುವುದು ಯಾಕೆ? ಭಾರತ ಪರಂಪರೆಯ ಕುರಿತಂತೆ ಬಿಜೆಪಿಯ ನಾಯಕರಿಗಿರುವ ಗೊಂದಲ, ಅಜ್ಞಾನವನ್ನು ಇದು ಬಯಲಾಗಿಸುತ್ತದೆ. ಮಂಗನ ಕೈಯಲ್ಲಿ ಮಾಣಿಕ್ಯ ಎಂಬ ಗಾದೆಯನ್ನು ಸದ್ಯಕ್ಕೆ ಬಿಜೆಪಿ ಕೈಯಲ್ಲಿ ಕೊಹಿನೂರ್ ಎಂದು ತಿದ್ದುಪಡಿ ಮಾಡುವುದೇ ಒಳಿತು. ಕೋಹಿನೂರು ಮತ್ತೆ ಭಾರತಕ್ಕೆ ಸೇರುವುದು ಅನುಮಾನವೇ ಸರಿ. ಹಾಗೆಂದು, ಅದರ ಹಕ್ಕುದಾರಿಕೆಯಿಂದ ಹಿಂದೆ ಸರಿಯುವುದು ನಮ್ಮ ಪರಂಪರೆಗೆ ನಾವು ಬಗೆಯುವ ಅನ್ಯಾಯವಾಗುತ್ತದೆ. ಬ್ರಿಟಿಷರು ಭಾರತಕ್ಕೆ ಮಾಡಿರುವ ಅನ್ಯಾಯ, ಅಕ್ರಮಗಳನ್ನು ನಾವೇ ಸಕ್ರಮಗೊಳಿಸಿದಂತಾಗುತ್ತದೆ. ಆದುದರಿಂದ ಕೋಹಿನೂರು ಸೇರಿದಂತೆ, ವಿದೇಶಗಳಲ್ಲಿರುವ ಭಾರತದ ಐತಿಹಾಸಿಕ ಮಹತ್ವವುಳ್ಳ ಸಂಪತ್ತುಗಳ ಕುರಿತು ಕೇಂದ್ರ ಸರಕಾರ ತನ್ನ ಸ್ಪಷ್ಟ ನಿಲುವೊಂದನ್ನು ಬಹಿರಂಗಪಡಿಸಬೇಕಾಗಿದೆ.