ಪಾಕ್: 12 ಸೇನಾಧಿಕಾರಿಗಳ ವಜಾ
ಇಸ್ಲಾಮಾಬಾದ್, ಎ. 21: ಭ್ರಷ್ಟಾಚಾರದ ಆರೋಪದಲ್ಲಿ ಇಬ್ಬರು ಜನರಲ್‌ಗಳು ಸೇರಿದಂತೆ ಪಾಕಿಸ್ತಾನದ 12 ಸೇನಾಧಿಕಾರಿಗಳನ್ನು ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಫ್ ಗುರುವಾರ ವಜಾಗೊಳಿಸಿದ್ದಾರೆ.
ದೇಶದಿಂದ ಭ್ರಷ್ಟಾಚಾರವನ್ನು ಮೂಲೋತ್ಪಾಟನೆ ಗೊಳಿಸುವುದಕ್ಕಾಗಿ ‘‘ಎಲ್ಲರೂ ಉತ್ತರದಾಯಿತ್ವ’’ ಹೊಂದಿರಬೇಕು ಎಂಬುದಾಗಿ ಶರೀಫ್ ಕರೆ ನೀಡಿದ ಎರಡು ದಿನಗಳ ಬಳಿಕ ಈ ಅಭೂತಪೂರ್ವ ದಂಡನಾ ಕ್ರಮ ವರದಿಯಾಗಿದೆ.
ವಜಾಗೊಂಡ ಸೇನಾಧಿ ಕಾರಿಗಳೆಂದರೆ ಲೆಫ್ಟಿನೆಂಟ್ ಜನರಲ್ ಉಬೈದುಲ್ಲಾ ಖಟ್ಟಕ್, ಓರ್ವ ಮೇಜರ್‌ಜನರಲ್, ಐವರು ಬ್ರಿಗೇಡಿಯರ್‌ಗಳು, ನಾಲ್ವರು ಕರ್ನಲ್‌ಗಳು ಮತ್ತು ಓರ್ವ ಮೇಜರ್ ಎಂದು ಟಿವಿ ಸುದ್ದಿ ಚಾನೆಲ್‌ಗಳು ವರದಿ ಮಾಡಿವೆ.
ಮಂಗಳವಾರ ಪನಾಮ ದಾಖಲೆಗಳ ಸೋರಿಕೆ ಬಗ್ಗೆ ಮಾತನಾಡಿದ್ದ ಶರೀಫ್, ದೇಶದಲ್ಲಿ ಸಮೃದ್ಧಿಯನ್ನು ತರುವುದಕ್ಕಾಗಿ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದ್ದರು.
ಈಶಾನ್ಯ ಪಾಕಿಸ್ತಾನದಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸೇನಾ ಮುಖ್ಯಸ್ಥರು, ‘‘ಪಾಕಿಸ್ತಾನದ ಏಕತೆ, ಸಮಗ್ರತೆ ಮತ್ತು ಸಮೃದ್ಧಿಗಾಗಿ ಸರ್ವರೂ ಉತ್ತರದಾಯಿತ್ವ ಹೊಂದುವುದು ಅಗತ್ಯವಾಗಿದೆ ಎಂದಿದ್ದರು.
‘‘ನಮ್ಮ ಮುಂದಿನ ತಲೆಮಾರುಗಳಿಗೆ ಉತ್ತಮ ಭವಿಷ್ಯವನ್ನು ಖಾತರಿಪಡಿಸುವ ದಿಕ್ಕಿನಲ್ಲಿ ಸಾಗುವ ಎಲ್ಲ ಅರ್ಥಪೂರ್ಣ ಪ್ರಯತ್ನಗಳನ್ನು ಪಾಕಿಸ್ತಾನದ ಸಶಸ್ತ್ರ ಪಡೆಗಳು ಬೆಂಬಲಿಸುವುದು’’ ಎಂದಿದ್ದರು.
ತಮ್ಮ ದೇಶಗಳಲ್ಲಿ ತೆರಿಗೆ ವಂಚಿಸಿ ವಿದೇಶಗಳಲ್ಲಿ ಹಣ ಹೂಡಿರುವ ವ್ಯಕ್ತಿಗಳಿಗೆ ಸಂಬಂಧಿಸಿದ ಪನಾಮ ದಾಖಲೆಗಳು ಪ್ರಧಾನಿ ನವಾಝ್ ಶರೀಫ್‌ರ ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯ ಹೆಸರುಗಳನ್ನು ಬಹಿರಂಗಪಡಿಸಿದ ಬಳಿಕ, ನವಾಝ್ ಶರೀಫ್ ತನ್ನ ದೇಶದಲ್ಲಿ ಭಾರೀ ಟೀಕೆಗೊಳಗಾಗಿದ್ದಾರೆ.
ಪನಾಮದ ಕಾನೂನು ಕಂಪೆನಿ ಯೊಂದರಿಂದ ಸೋರಿಕೆಯಾಗಿರುವ ಬೃಹತ್ ಪ್ರಮಾಣದ ದಾಖಲೆಗಳಲ್ಲಿ ಸುಮಾರು 220 ಪಾಕಿಸ್ತಾನೀಯರ ಹೆಸರುಗಳಿವೆ.
ಭ್ರಷ್ಟಾಚಾರದ ಪಿಡುಗನ್ನು ತೊಡೆದುಹಾಕದೆ ಭಯೋತ್ಪಾದನೆಯ ವಿರುದ್ಧದ ಸಮರವನ್ನು ಜಯಿಸಲು ಸಾಧ್ಯವಿಲ್ಲ ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.