ಸಾಲ ಮರುಪಾವತಿ:ಬ್ಯಾಂಕುಗಳಿಗೆ ತನ್ನ ಆಫರ್ ಹೆಚ್ಚಿಸಿದ ವಿಜಯ ಮಲ್ಯ
ಹೊಸದಿಲ್ಲಿ,ಎ.22: ತನ್ನ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಜಾರಿಯಾಗುವುದರೊಂದಿಗೆ ಪೇಚಿಗೆ ಸಿಲುಕಿರುವ ಮದ್ಯದ ದೊರೆ ವಿಜಯ ಮಲ್ಯ ಇದೀಗ ಸಾಲವನ್ನು ಇತ್ಯರ್ಥಗೊಳಿಸಿಕೊಳ್ಳಲು ಬ್ಯಾಂಕುಗಳ ಮುಂದೆ ತಾನಿಟ್ಟಿದ್ದ ಆಫರ್‌ನ ಮೊತ್ತವನ್ನು 2,468 ಕೋ.ರೂ.ಗಳಷ್ಟು ಹೆಚ್ಚಿಸಿದ್ದಾರೆ. ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಕೂಟಕ್ಕೆ 9,000 ಕೋ.ರೂ.ಗೂ ಅಧಿಕ ಸಾಲವನ್ನು ಬಾಕಿಯಿಟ್ಟು ಬ್ರಿಟನ್ನಿಗೆ ಪರಾರಿಯಾಗಿರುವ ಮಲ್ಯ ಈ ಹಿಂದೆ 4,400 ಕೋ.ರೂ.ಮರುಪಾವತಿಯ ಕೊಡುಗೆಯನ್ನು ಮುಂದಿಟ್ಟಿದ್ದರು. ಈಗ ಈ ಮೊತ್ತವನ್ನು 6,868 ಕೋ.ರೂ.ಗಳಿಗೆ ಏರಿಸಿದ್ದಾರೆ.
ಭಾರತಕ್ಕೆ ತನ್ನ ವಾಪಸಾತಿ ಕುರಿತು ನ್ಯಾಯಾಲಯದ ಪ್ರಶ್ನೆಗೆ ಯಾವುದೇ ಉತ್ತರವನ್ನು ನೀಡುವ ಗೋಜಿಗೆ ಮಲ್ಯ ಹೋಗಿಲ್ಲ. ಹೆಚ್ಚಿನ ಇಂಧನ ದರಗಳು,ಅತಿರೇಕದ ತೆರಿಗೆ ಮತ್ತು ದೋಷಪೂರ್ಣ ವಿಮಾನ ಇಂಜಿನ್‌ಗಳಿಂದಾಗಿ ಕಿಂಗ್‌ಫಿಷರ್ ಏರ್‌ಲೈನ್ಸ್‌ನ್ನು ನಡೆಸುವ ತನ್ನ ಪ್ರಯತ್ನ ವಿಫಲಗೊಂಡಿದ್ದು, ಇದರಿಂದಾಗಿ ತನಗೆ, ತನ್ನ ಕುಟುಂಬಕ್ಕೆ, ಯುಬಿ ಸಮೂಹಕ್ಕೆ ಮತ್ತು ಕಿಂಗ್‌ಫಿಷರ್ ಫಿನ್‌ವೆಸ್ಟ್‌ಗೆ ಒಟ್ಟೂ 6,107 ಕೋ.ರೂ.ನಷ್ಟವುಂಟಾಗಿದೆ. ಈ ಹಿನ್ನೆಲೆಯಲ್ಲಿ ಇದು ತಾನು ಮುಂದಿಡಬಹುದಾದ ಅತ್ಯುತ್ತಮ ಕೊಡುಗೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಯುಬಿ ಸಮೂಹದ ಕಾರ್ಪೊರೇಟ್ ಖಾತರಿ ಮತ್ತು ಮಲ್ಯರ ವೈಯಕ್ತಿಕ ಖಾತರಿಯ ಸಿಂಧುತ್ವ ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲ್ಪಟ್ಟಿದೆಯಾದರೂ ‘ಒಟ್ಟಾರೆ ಇತ್ಯರ್ಥದ ಹಿತಾಸಕ್ತಿ’ಯಲ್ಲಿ ಈ ಹೊಸ ಕೊಡುಗೆಯನ್ನು ಮುಂದಿರಿಸಲಾಗಿದೆ ಎಂದು ಮಲ್ಯ ಹೇಳಿದ್ದಾರೆ.
ತನ್ನ ಮೂವರು ಮಕ್ಕಳಾದ ಸಿದ್ದಾರ್ಥ,ಲೀನಾ ಮತ್ತು ತಾನ್ಯಾ ಅಮೆರಿಕದ ಪ್ರಜೆಗಳಾಗಿದ್ದಾರೆ ಮತ್ತು ತನ್ನ ಪರಿತ್ಯಕ್ತ ಪತ್ನಿ 1996ರಿಂದ ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿದ್ದಾಳೆ. ಅವರು ಸವೋಚ್ಚ ನ್ಯಾಯಾಲಯದ ಅಧಿಕಾರ ವ್ಯಾಪ್ತಿಗೊಳಪಡುವುದಿಲ್ಲವಾದರೂ ತಾನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಿರುವ ಸೀಲ್ ಆಗಿರುವ ಲಕೋಟೆಯಲ್ಲಿ ಭಾರತ ಮತ್ತು ವಿದೇಶಗಳಲ್ಲಿರುವ ತನ್ನ ಇಡೀ ಕುಟುಂಬದ ಆಸ್ತಿಗಳ ಪಟ್ಟಿಯನ್ನು ನೀಡಿದ್ದೇನೆ ಎಂದು ಮಲ್ಯ ಹೇಳಿದ್ದಾರೆ. ಕಿಂಗ್ ಫಿಷರ್ ಏರ್‌ಲೈನ್ಸ್‌ಗೆ ಸಾಲ ಮಂಜೂರು ಮಾಡುವಾಗ ಬ್ಯಾಂಕುಗಳೆಂದೂ ತನ್ನ ಆಸ್ತಿಗಳನ್ನು ಪರಿಗಣಿಸಿರಲಿಲ್ಲ ಎನ್ನುವುದನ್ನು ಅವರು ಗುರುವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
6,868 ಕೋ.ರೂ.ಗಳನ್ನು ಬ್ಯಾಂಕುಗಳ ಕೂಟಕ್ಕೆ ಪಾವತಿಸಲು ತಾನು ಸಿದ್ಧವೆಂದಿರುವ ಮಲ್ಯ,ಯುನೈಟೆಡ್ ಸ್ಪಿರಿಟ್ಸ್‌ನಲ್ಲಿಯ ಯುಬಿಯ ಶೇರುಗಳು(660 ಕೋ.ರೂ), ಯುನೈಟೆಡ್ ಸ್ಪಿರಿಟ್ಸ್‌ನಲ್ಲಿಯ ಕಿಂಗ್‌ಫಿಷರ್ ಫಿನ್‌ವೆಸ್ಟ್‌ನ ಶೇರುಗಳು(243 ಕೋ.ರೂ) ಮತ್ತು ಏರ್‌ಬಸ್‌ನಲ್ಲಿಯ ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಶೇರುಗಳ(688 ಕೋ.ರೂ.)ಗಳ ಮಾರಾಟದಿಂದ 1,591 ಕೋ.ರೂ.ಗಳನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಠೇವಣಿ ಇರಿಸಬಹುದಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಿವಿಧ ಪ್ರಕರಣಗಳ ಸಂಬಂಧ ಠೇವಣಿಯಿರಿಸಿರುವ 1,329 ಕೋ.ರೂ.ಗಳನ್ನೂ ಇದಕ್ಕಾಗಿ ಬಳಸಬಹುದಾಗಿದೆ ಎಂದು ಮಲ್ಯ ತಿಳಿಸಿದ್ದಾರೆ.
ತಾನು ಅನಿವಾಸಿ ಭಾರತೀಯ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿರುವ ಅವರು,ಎನ್ನಾರೈ ತನ್ನ ಆದಾಯ ತೆರಿಗೆ ರಿಟರ್ನ್‌ನಲ್ಲಿ ಕೂಡ ತನ್ನ ವಿದೇಶಿ ಆಸ್ತಿಗಳನ್ನು ಬಹಿರಂಗಗೊಳಿಸಬೇಕಿಲ್ಲ ಎಂದಿದ್ದಾರೆ. ಎ.26ರಂದು ಸೀಲ್ ಮಾಡಲಾದ ಲಕೋಟೆಯಲ್ಲಿ ತನ್ನ ಆಸ್ತಿಗಳ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿಯನ್ನು ಕೋರಿರುವ ಅವರು,ಯಾವುದೇ ಸಾಲ ಅಥವಾ ಬ್ಯಾಂಕುಗಳು ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಒದಗಿಸಿದ್ದ ಹಣದಿಂದ ತಾನು ವಿದೇಶಿ ಆಸ್ತಿಗಳನ್ನು ಖರೀದಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜಿ ಸಂಧಾನ ವ್ಯವಸ್ಥೆಯ ಮೂಲಕ ಸಾಲಗಳನ್ನು ತೀರಿಸಲು ತಾನು ಸಿದ್ಧನಿದ್ದೇನೆ ಎಂದಿರುವ ಮಲ್ಯ, ಆದರೆ ಏಕಪಕ್ಷೀಯವಾಗಿ ತನ್ನ ಪಾಸ್‌ಪೋರ್ಟ್‌ನ ಅಮಾನತು ಮತ್ತು ತನ್ನ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಂತಹ ಸರಕಾರದ ಬಲವಂತದ ಕ್ರಮಗಳಿಂದಾಗಿ ಅಂತಹ ಮಾತುಕತೆಗೆ ಪೂರಕ ವಾತಾವರಣ ಲಭ್ಯವಾಗುವುದಿಲ್ಲ ಎಂದಿದ್ದಾರೆ.