ಕೊಲೆಗಾರನ ಗುರುತು!

Update: 2016-04-23 18:49 GMT
Editor : ಮಗು

ಸಂತ ಮತ್ತು ಆತನ ಶಿಷ್ಯ ಆ ದಾರಿಯ ಪಕ್ಕದಲ್ಲಿರುವ ಮರದಡಿಯಲ್ಲಿ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.
ಅಷ್ಟರಲ್ಲಿ ಆ ರಾಜ್ಯದ ರಾಜನ ಭಟರು ಅಲ್ಲಿಗೆ ಧಾವಿಸಿ ಬಂದರು. ಏದುಸಿರು ಬಿಟ್ಟು ಕೇಳಿದರು ‘‘ಈ ದಾರಿಯಲ್ಲಿ ಒಬ್ಬ ಭಯಾನಕ ಕೊಲೆಗಾರ ಹೋಗುವುದನ್ನು ನೋಡಿದಿರಾ...ಜೈಲಿನಿಂದ ತಪ್ಪಿಸಿಕೊಂಡಿದ್ದಾನೆ.....’’
ಸಂತ ಕೇಳಿದ ‘‘ಈ ದಾರಿಯಲ್ಲಿ ತುಂಬಾ ಜನರು ಹಾದು ಹೋಗಿದ್ದಾರೆ. ಅವರಲ್ಲಿ ಯಾರನ್ನು ನಾನು ಭಯಾನಕ ಕೊಲೆಗಾರ ಎಂದು ತಿಳಿಯಲಿ...?’’
ಭಟರು ಹೇಳಿದರು ‘‘ಅವನಿಗೆ ಮೀಸೆ ಇರಲಿಲ್ಲ. ಆದರೆ ತುಂಬಾ ಕಪ್ಪಗಿದ್ದ....ಮುಖದಲ್ಲಿ ಕ್ರೌರ್ಯವಿತ್ತು...’’
ಸಂತ ಹೇಳಿದ ‘‘ಇನ್ನಷ್ಟು ವಿವರಗಳು ಬೇಕು...’’
‘‘ಅವನು ಬಿಳಿ ಬಟ್ಟೆ ತೊಟ್ಟುಕೊಂಡಿದ್ದ...’’
ಅಷ್ಟರಲ್ಲಿ ಶಿಷ್ಯ ಕೇಳಿದ ‘‘ಕೊಲೆಗಾರರೆಂದರೆ ಕಪ್ಪು ಬಟ್ಟೆ ತೊಟ್ಟುಕೊಳ್ಳುವುದಲ್ಲವೇ?’’
ಸಂತ ಸಮಾಧಾನಿಸಿದ ‘‘ಶಿಷ್ಯ, ಕೊಲೆಗಾರರಿಗೆ ಸಮವಸ್ತ್ರಗಳಿರುವುದಿಲ್ಲ...’’
‘‘ಅವನ ಕಣ್ಣುಗಳು ಹೇಗಿದ್ದವು?’’ ಸಂತ ಕೇಳಿದ.
ಭಟರು ವಿವರಿಸಿದರು ‘‘ಅವನ ಕಣ್ಣುಗಳು ಕೆಂಪಗಿದ್ದವು..’’
ಸಂತನಿಗೆ ಸಮಾಧಾನವಾಗಲಿಲ್ಲ. ‘‘ಇನ್ನೇನಾದರೂ ವಿವರಗಳಿವೆಯೇ?’’
‘‘ಅವನ ಕೋರೆಹಲ್ಲುಗಳು ನೀಳವಾಗಿದ್ದವು....’’ ಭಟರು ವಿವರಿಸಿದರು.
‘‘ಮೂಗು...’’ ಸಂತ ಕೇಳಿದ.
‘‘ಅದು ವಕ್ರವಾಗಿತ್ತು...’’ ಭಟರು ವಿವರಿಸಿದರು.
ಸಂತ ಮತ್ತು ಶಿಷ್ಯ ಇಬ್ಬರೂ ಒಟ್ಟಾಗಿ ಹೇಳಿದರು ‘‘ನೀವು ವಿವರಿಸಿದ ಯಾರೂ ಈ ದಾರಿಯಲ್ಲಿ ಬರಲಿಲ್ಲ’’
ಭಟರು ನಿರಾಶರಾಗಿ ವಾಪಸಾದರು.
ಶಿಷ್ಯ ಸಂತನಲ್ಲಿ ಕೇಳಿದ ‘‘ಗುರುಗಳೇ...ಕೊಲೆಗಾರ ಈ ದಾರಿಯಲ್ಲಿ ಬಂದಿರಲಿಕ್ಕಿಲ್ಲವೇ?’’
‘‘ಬಂದಿರಬಹುದು...’’ ಸಂತ ಉತ್ತರಿಸಿದ.
‘‘ಹಾಗಾದರೆ ನಾವು ಅವನನ್ನು ನೋಡಿರಲೇ ಬೇಕಲ್ಲ....ಭಟರು ಹೇಳಿದ ಗುಣಲಕ್ಷಣಗಳಿರುವ ಯಾರನ್ನೂ ನಾವು ನೋಡಿಲ್ಲವಲ್ಲ’’ ಶಿಷ್ಯ ಗೊಂದಲದಲ್ಲಿ ಕೇಳಿದ.
‘‘ಶಿಷ್ಯಾ...ನಾವು ನೋಡಿದ ವ್ಯಕ್ತಿ ಕೊಲೆಗಾರ ಎಂದು ನಮಗೆ ಗೊತ್ತಿರಲಿಲ್ಲ. ಆದುದರಿಂದಲೇ ಅವನ ಮುಖದಲ್ಲಿ ಕ್ರೌರ್ಯವನ್ನು ನಮಗೆ ಕಾಣಲಾಗಲಿಲ್ಲ. ಅವನ ಕಣ್ಣಲ್ಲಿರುವ ಕೆಂಪನ್ನು ನಮಗೆ ಗುರುತಿಸಲಾಗಲಿಲ್ಲ. ಅವನ ಕೋರೆಹಲ್ಲುಗಳನ್ನು ಗಮನಿಸಲಾಗಲಿಲ್ಲ. ಭಟರಿಗೆ ಅವನು ಕೊಲೆಗಾರ ಎನ್ನುವುದು ಗೊತ್ತಿದೆ. ಅವರು, ಒಬ್ಬ ಕೊಲೆಗಾರನಿಗಿರುವ ಲಕ್ಷಣಗಳನ್ನು ವಿವರಿಸಿದ್ದಾರೆ. ನಾವು ನೋಡಿದ ವ್ಯಕ್ತಿ ಕೊಲೆಗಾರ ಎನ್ನುವುದು ನಮಗೆ ತಿಳಿಯುವವರೆಗೆ ಆ ಲಕ್ಷಣಗಳನ್ನು ನಮಗೆ ಗುರುತಿಸಲು ಸಾಧ್ಯವಿಲ್ಲ...’’
ಸಂತ ಮುಂದುವರಿಸಿ ಹೇಳಿದ ‘‘ನನ್ನನ್ನು ನೀನು ಇದೇ ಮೊದಲು ನೋಡುವುದಾಗಿದ್ದರೆ ಮತ್ತು ನನ್ನನ್ನು ಯಾರಾದರೂ ಭಯಾನಕ ಕೊಲೆಗಾರ ಎಂದು ಹೇಳಿ ಬಿಟ್ಟಿದ್ದರೆ ಭಟರು ಹೇಳಿದ ಎಲ್ಲ ಲಕ್ಷಣಗಳೂ ನಿನಗೆ ನನ್ನ ಮುಖದಲ್ಲಿ ಕಂಡು ಬಿಡುತ್ತಿದ್ದವು.’’
 

Writer - ಮಗು

contributor

Editor - ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !