ಹಣ್ಣು, ತರಕಾರಿಗಳಲ್ಲಿರುವ ಕ್ರಿಮಿನಾಶಕವನ್ನು ಹೀಗೆ ತೆಗೆಯಿರಿ

Update: 2016-04-29 06:17 GMT

ಬಹುಶಃ ಇಂದಿನ ದಿನಗಳಲ್ಲಿ ಕ್ರಿಮಿನಾಶಕ ಸಿಂಪಡಿಸದ ಹಣ್ಣು- ತರಕಾರಿಗಳು ದುರ್ಲಭ. ಹೀಗೆ ಹಣ್ಣು- ತರಕಾರಿಯ ಜತೆ ಕ್ರಿಮಿನಾಶಕದ ವಿಷ ಅಂಶಗಳು ಕೂಡಾ ನಮ್ಮ ದೇಹವನ್ನು ಸೇರುತ್ತವೆ. ಇದು ದೇಹದಲ್ಲಿ ಸಂಗ್ರಹವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದಲೇ ಇದೀಗ ಎಲ್ಲರ ಚಿತ್ತ ಸಾವಯವ ಕೃಷಿಯತ್ತ!

ಎಲ್ಲ ವೇಳೆಯಲ್ಲೂ ಸಾವಯವ ತರಕಾರಿ, ಹಣ್ಣು ಸಿಗದಿದ್ದರೆ? ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಹಣ್ಣು- ತರಕಾರಿಯ ಮೇಲ್ಭಾಗದಲ್ಲಿರುವ ಕೀಟನಾಶಕಗಳನ್ನು ನೀವು ಸುಲಭವಾಗಿ ಸ್ವಚ್ಛಗೊಳಿಸಲು ದಾರಿ ಇಲ್ಲಿದೆ. ಬಹುಶಃ ನೀವು ಇದರಲ್ಲಿ ಕೆಲವನ್ನು ಅನುಸರಿಸುತ್ತಲೂ ಇರುತ್ತೀರಿ.

ಸಿಪ್ಪೆ ಸುಲಿಯಿರಿ

ಹಣ್ಣು ಹಾಗೂ ತರಕಾರಿಗಳ ಸಿಪ್ಪೆ ಸುಲಿಯುವುದು ಕೀಟನಾಶಕಗಳಿಂದ ಮುಕ್ತಿ ಪಡೆಯಲು ಅತ್ಯಂತ ಸುಲಭ ಹಾಗೂ ಸುರಕ್ಷಿತ ವಿಧಾನ. ಸೇಬು, ಕಿತ್ತಳೆ, ಆಲೂಗಟ್ಟೆ, ಬೀಟ್‌ರೂಟ್, ಈರುಳ್ಳಿಗಳನ್ನು ಸುಲಭವಾಗಿ ಕೀಟನಾಶಕ ಮುಕ್ತವಾಗಿಸಬಹುದು. ಇದು ಇನ್ನಷ್ಟು ಪರಿಣಾಮಕಾರಿಯಾಗಲು ಬೆಚ್ಚಗಿನ ನೀರಲ್ಲಿ ಸ್ವಲ್ಪ ಹೊತ್ತು ನೆನೆಹಾಕಿ.

ಬಿಸಿನೀರಲ್ಲಿ ತೊಳೆಯಿರಿ

ಇನ್ನೊಂದು ಸುಲಭ ವಿಧಾನವೆಂದರೆ ಬಿಸಿನೀರಿನಿಂದ ತೊಳೆಯುವುದು. ಸಿಪ್ಪೆ ತೆಗೆಯಲಾಗದ ಹಣ್ಣು- ತರಕಾರಿಗಳಿಗೆ ಇದು ಅತ್ಯುತ್ತಮ ವಿಧಾನ. ಜತೆಗೆ ಸಿಪ್ಪೆಯಲ್ಲಿ ಪೋಷಕಾಂಶ ಹೊಂದಿರುವ ಹಣ್ಣು- ತರಕಾರಿಗಳಿಗೂ ಈ ವಿಧಾನ ಅನುಸರಿಸಬಹುದು.

ಒದ್ದೆ ಬಟ್ಟೆಯಿಂದ ಉಜ್ಜಿ

ಬಿಸಿ ನೀರಲ್ಲಿ ತೊಳೆದ ಬಳಿಕ ಒದ್ದೆ ಬಟ್ಟೆಯಿಂದ ಒರೆಸುವುದರಿಂದ ಇನ್ನಷ್ಟು ಸುರಕ್ಷತೆ ಪಡೆಯಬಹುದು. ಇದರಿಂದ ಅಂಟಿಕೊಂಡಿರುವ ಕ್ರಿಮಿಗಳು ಹಾಗೂ ರಾಸಾಯನಿಕಗಳನ್ನು ತೆಗೆಯಬಹುದು.

ಉಪ್ಪುನೀರಲ್ಲಿ ನೆನೆಹಾಕಿ

ಕೆಲ ಹಣ್ಣು, ತರಕಾರಿಗಳನ್ನು ರಾಸಾಯನಿಕಮುಕ್ತಗೊಳಿಸಬೇಕಾದರೆ ಬೆಚ್ಚಗಿನ ನೀರು ಸಾಲದು. ಅಂಥದ್ದನ್ನು ಉಪ್ಪು ನೀರಿನಲ್ಲಿ ಕೆಲ ಕಾಲ ನೆನೆಸುವುದು ಸೂಕ್ತ. ಒಂದು ಬೋಗುಣಿ ನೀರಿಗೆ ಅರ್ಧ ಚಮಚದಷ್ಟು ಉಪ್ಪುಹಾಕಿ ಕರಗಿಸಿ ಅದರಲ್ಲಿ ಹಣ್ಣು ಹಾಗೂ ತರಕಾರಿಗಳನ್ನು ಕೆಲ ನಿಮಿಷಗಳ ಕಾಲ ನೆನೆಹಾಕಿ ಬಳಸುವುದು ಒಳ್ಳೆಯ ವಿಧಾನ.

ಅಂತೆಯೇ ವಿನಿಗರ್‌ನಲ್ಲಿ ಮುಳುಗಿಸಿ ಇಡುವುದು ಹಾಗೂ ಕ್ಲೀನಿಂಗ್ ಸ್ಪ್ರೇ ಚಿಮುಕಿಸಿ ತೊಳೆಯುವುದು ಇಂಥ ಇನ್ನೆರಡು ವಿಧಾನಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News