ಕಾರ್ಮಿಕ ಕಾನೂನು ಬದಲಾವಣೆ ಪರಾಮರ್ಶೆಗೆ ಸಕಾಲ

Update: 2016-04-30 17:12 GMT

ಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ 31ನೆ ವಾರ್ಷಿಕ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ‘‘ಕಾರ್ಮಿಕ ವಿರೋಧಿ ಹಾಗೂ ಎನ್‌ಡಿಎ ಸರಕಾರದ ಕಲ್ಪನೆಗೂ ನಿಲುಕದ ಆರ್ಥಿಕ ನೀತಿಗಳ’’ ವಿರುದ್ಧ ಧ್ವನಿ ಎತ್ತಿದರು. ಹಾಲಿ ಇರುವ ಕಾರ್ಮಿಕ ಕಾನೂನುಗಳನ್ನು ಬದಲಿಸಿ, ಕೇಂದ್ರದ ಎನ್‌ಡಿಎ ಸರಕಾರ ತರಲು ಉದ್ದೇಶಿಸಿರುವ ವೇತನ ಬಗೆಗಿನ ಕಾರ್ಮಿಕ ಸಂಹಿತೆ ಹಿನ್ನೆಲೆಯಲ್ಲಿ ಮತ್ತು ಕಾರ್ಮಿಕ ಸಂರಕ್ಷಣೆಗಾಗಿ ಇರುವ ಹಲವು ಕಾಯ್ದೆಗಳಿಗೆ ತಿದ್ದುಪಡಿ ತರಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಈ ಇಂಟೆಕ್ ಸಮಾವೇಶ ಹಾಗೂ ಮನಮೋಹನ್ ಸಿಂಗ್ ಹೇಳಿಕೆಗೆ ವಿಶೇಷ ಮಹತ್ವವಿದೆ. ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ದೇಶದ ಹತ್ತು ಪ್ರಮುಖ ಕಾರ್ಮಿಕ ಸಂಘಟನೆಗಳು ನಡೆಸಿದ ಒಂದು ದಿನದ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲೂ ಈ ಸಮಾವೇಶ ಮಹತ್ವದ್ದಾಗಿದೆ. ಬಿಜೆಪಿ ಹಿನ್ನೆಲೆಯ ಭಾರತೀಯ ಮಜ್ದೂರ್ ಸಂಘ ಹೊರತುಪಡಿಸಿ ಉಳಿದೆಲ್ಲ ಕಾರ್ಮಿಕ ಸಂಘಟನೆಗಳು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದವು. ಎನ್‌ಡಿಎ ಸರಕಾರ ತರಲು ಉದ್ದೇಶಿಸಿರುವ ಕಾರ್ಮಿಕ ಸುಧಾರಣೆಗಳನ್ನು ವಿರೋಧಿಸಿ ದೇಶಾದ್ಯಂತ ಈ ಪ್ರತಿಭಟನೆ ನಡೆಯುತ್ತಿದೆ. ಇದು ಕೈಗಾರಿಕಾ ಘಟಕಗಳನ್ನು ಮುಚ್ಚಲು ಸುಲಭ ಮಾರ್ಗವನ್ನು ಕಲ್ಪಿಸಲಿದ್ದು, ಕಾರ್ಮಿಕರ ಉದ್ಯೋಗ ಭದ್ರತೆಗೆ ಮಾರಕ ಎಂದು ಹೇಳಲಾಗಿದೆ.

ಭಾರತದಲ್ಲಿ ಕಾರ್ಮಿಕ ಸುಧಾರಣೆಗಳು ದೀರ್ಘಕಾಲದಿಂದಲೂ ಬಾಕಿ ಉಳಿದಿವೆ. ದೇಶದಲ್ಲಿ ಶೇಕಡ 90ರಷ್ಟು ಕಾರ್ಮಿಕರು ಇಂದಿಗೂ ಸಾಂದರ್ಭಿಕ ಕಾರ್ಮಿಕರಾಗಿಯೇ ಉಳಿದಿದ್ದು, ಇವರಿಗೆ ಯಾವುದೇ ಕಾರ್ಮಿಕ ಪರ ಕಾನೂನು ಅಥವಾ ನಿಬಂಧನೆಗಳು ರಕ್ಷಣೆಗೂ ದೊರಕುತ್ತಿಲ್ಲ. ಇನ್ನೊಂದೆಡೆ, ಕೈಗಾರಿಕೆಯ ಕೆಲ ವಲಯ ಹಾಗೂ ಆಧುನಿಕ- ಉದಾರವಾದಿ ಚಿಂತನೆಯ ಮಂದಿ ದೇಶದ ಕಾರ್ಮಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಥಿತಿಸ್ಥಾಪಕತ್ವ ಬೇಕು ಎಂದು ವಾದಿಸುತ್ತಾರೆ. ಸಾಮರ್ಥ್ಯ ಹಾಗೂ ಸ್ಪರ್ಧಾತ್ಮಕತೆ ಹೆಚ್ಚಿಸುವ ಸಲುವಾಗಿ ಕೈಗಾರಿಕೆಗಳು ತಮಗೆ ಬೇಕಾದಂತೆ ಅಗತ್ಯ ಶ್ರಮಿಕ ವರ್ಗವನ್ನು ಆಯ್ಕೆ ಮಾಡಿಕೊಳ್ಳಲು ಹಾಗೂ ಬೇಡವೆಂದಾಗ ಹೊರಗೆ ಕಳುಹಿಸಲು ಅವಕಾಶ ಮಾಡಿಕೊಡಬೇಕು ಎನ್ನುವುದು ಈ ವರ್ಗದ ಆಗ್ರಹ. ಇದು ಮಾತ್ರ ದೇಶದಲ್ಲಿ ಉತ್ಪಾದನೆ ಹೆಚ್ಚಿಸಲು ಪೂರಕ ಎನ್ನುವುದು ಇವರ ವಾದ.

ಕಾರ್ಮಿಕರ ಆರೋಗ್ಯ, ಸುರಕ್ಷೆ ಹಾಗೂ ಕಲ್ಯಾಣ ಕ್ರಮಗಳಿಗೆ ಕಡಿಮೆ ಆದ್ಯತೆ ಇರುವ, ಕೈಗಾರಿಕಾ ಆಕಸ್ಮಿಕಗಳು ಅಧಿಕವಾಗಿರುವ ವೈದ್ಯಕೀಯ ವಿಮೆ ಹಾಗೂ ಸಾಮಾಜಿಕ ಭದ್ರತಾ ಕ್ರಮಗಳು ದುರ್ಬಲವಾಗಿರುವ, ಕನಿಷ್ಠ ವೇತನ ಕಾಯ್ದೆಯ ಮಾರ್ಗಸೂಚಿಯನ್ನು ಪದೇ ಪದೇ ಉಲ್ಲಂಘಿಸುತ್ತಿರುವ ಭಾರತದಂಥ ದೇಶದಲ್ಲಿ, ಕಾರ್ಮಿಕ ಸಂಹಿತೆ ಹಾಗೂ ಉದ್ದೇಶಿತ ಬದಲಾವಣೆಗಳು ಒಳ್ಳೆಯ ಪರಿಣಾಮ ಬೀರುವುದಕ್ಕಿಂತ ಹಾನಿ ಮಾಡುವ ಸಾಧ್ಯತೆಯೇ ಹೆಚ್ಚು.

ಕೈಗಾರಿಕಾ ವ್ಯಾಜ್ಯ ಪರಿಹಾರ ಕಾಯ್ದೆಯಲ್ಲಿ ತರಲು ಉದ್ದೇಶಿಸಿರುವ ತಿದ್ದುಪಡಿ ಅನ್ವಯ, ಗರಿಷ್ಠ 300 ಕಾರ್ಮಿಕರನ್ನು ಹೊಂದಿರುವ ಕಂಪೆನಿಗಳು ಯಾವುದೇ ಕಾನೂನು ಕ್ರಮಗಳನ್ನು ಅನುಸರಿಸದೆ, ಮನಸೋ ಇಚ್ಛೆ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಮತ್ತು ಕೆಲಸದಿಂದ ಕಿತ್ತುಹಾಕಲು ಅವಕಾಶವಿದೆ. ಇದಕ್ಕೆ ಸರಕಾರದ ಅನುಮತಿ ಪಡೆಯಬೇಕಿಲ್ಲ. ಈ ಹಿಂದೆ 100ಕ್ಕಿಂತ ಕಡಿಮೆ ಕಾರ್ಮಿಕರು ಇರುವ ಕಂಪೆನಿಗಳಿಗಷ್ಟೇ ಈ ಅವಕಾಶ ಇತ್ತು. ನೇಮಕಾತಿ ವಿಚಾರ ಬಂದಾಗ ಬೆರಳೆಣಿಕೆಯ ದೊಡ್ಡ ಕಂಪೆನಿಗಳು ಮಾತ್ರ ಸರಕಾರದ ಕಾನೂನು ಹಾಗೂ ನಿಯಮಾವಳಿಯ ಅಡಿಯಲ್ಲಿ ಬರಲಿವೆ. ಇದರ ಜತೆಗೆ ಕಾರ್ಮಿಕ ಸಂಘಟನೆಗಳನ್ನು ರೂಪಿಸುವುದು ಮತ್ತು ಕಟ್ಟುವುದು ಕೂಡಾ ತ್ರಾಸದಾಯಕ ಕೆಲಸವಾಗಲಿದೆ. ಏಕೆಂದರೆ ಆ ನಿರ್ದಿಷ್ಟ ಕೈಗಾರಿಕಾ ಘಟಕದಲ್ಲಿರುವ ಒಟ್ಟು ಕಾರ್ಮಿಕ ಬಲದ ಶೇಕಡ 30ರಷ್ಟು ಮಂದಿ ಹೊಸ ಕಾರ್ಮಿಕ ಸಂಘಟನೆ ಕಟ್ಟಲು ಒಪ್ಪಿಗೆ ನೀಡಬೇಕು. ಈ ಮೊದಲು ಶೇಕಡ 10ರಷ್ಟು ಕಾರ್ಮಿಕರು ಸಹಿ ಮಾಡಿದರೆ ಹೊಸ ಕಾರ್ಮಿಕ ಸಂಘಟನೆ ಕಟ್ಟಲು ಅವಕಾಶವಿತ್ತು.

ಕೆಲಸದ ಸ್ಥಳದಲ್ಲಿ ಉದ್ಯೋಗಿಗಳಿಗೆ ವೃತ್ತಿ ಭದ್ರತೆ, ಆರೋಗ್ಯ, ಕಲ್ಯಾಣ ಕ್ರಮಗಳನ್ನು ಖಚಿತಪಡಿಸುವ ಸಲುವಾಗಿ ರೂಪಿಸಿದ್ದ ಫ್ಯಾಕ್ಟರಿಗಳ ಕಾಯ್ದೆಗೆ ತರಲು ಉದ್ದೇಶಿಸಿರುವ ತಿದ್ದುಪಡಿ ಅನ್ವಯ, ಈ ಕಾಯ್ದೆಯ ವ್ಯಾಪ್ತಿಯಲ್ಲಿ ಬರುವ ಘಟಕಗಳ ಗಾತ್ರವನ್ನು ಹೆಚ್ಚಿಸಲಾಗಿದೆ. ವಿದ್ಯುತ್ ಸೌಕರ್ಯ ಇರುವ ಘಟಕಗಳಲ್ಲಿ 20 ಮಂದಿ ಕಾರ್ಮಿಕರು (ಮೊದಲು 10 ಆಗಿತ್ತು) ಹಾಗೂ ವಿದ್ಯುತ್ ಇಲ್ಲದ ಕೈಗಾರಿಕಾ ಘಟಕಗಳಲ್ಲಿ 40 (ಈ ಹಿಂದೆ 20 ಆಗಿತ್ತು) ಮಂದಿ ಕಾರ್ಮಿಕರಿದ್ದರೆ ಮಾತ್ರ ಈ ಕಾಯ್ದೆ ಅನ್ವಯವಾಗುತ್ತದೆ. ಅದಾಗ್ಯೂ ಇವೆಲ್ಲಕ್ಕಿಂತ ಪ್ರಮುಖ ಬದಲಾವಣೆ ಎಂದರೆ ಗುತ್ತಿಗೆ ಕಾರ್ಮಿಕ ಪದ್ಧತಿಯಲ್ಲಿ ತರಲು ಉದ್ದೇಶಿಸಿರುವ ತಿದ್ದುಪಡಿ. ಏಕೆಂದರೆ ದೇಶದ ಒಟ್ಟು ಶ್ರಮಿಕ ವರ್ಗದಲ್ಲಿ ಶೇ.50ಕ್ಕಿಂತ ಹೆಚ್ಚು ಮಂದಿ ಗುತ್ತಿಗೆ ಕಾರ್ಮಿಕರಿದ್ದು, ಈ ಪೈಕಿ ಬಹುತೇಕ ಮಂದಿ ಬಡವರು ಹಾಗೂ ವಲಸೆ ಕಾರ್ಮಿಕರು. ಉದ್ದೇಶಿತ ತಿದ್ದುಪಡಿಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗುವವರು ಈ ವರ್ಗದ ಕಾರ್ಮಿಕರು. ಹೊಸ ನಿಯಮಾವಳಿ ಅನ್ವಯ, 50ಕ್ಕಿಂತ ಕಡಿಮೆ ಗುತ್ತಿಗೆ ಕಾರ್ಮಿಕರನ್ನು ನೇಮಕ ಮಾಡಿಕೊಂಡಿರುವ ಘಟಕಗಳು ಗುತ್ತಿಗೆ ಕಾರ್ಮಿಕ ಕಾಯ್ದೆ ವ್ಯಾಪ್ತಿಯಿಂದ ವಿನಾಯಿತಿ ಪಡೆಯಲಿವೆ. ಈ ಮೊದಲು 20 ಗುತ್ತಿಗೆ ಕಾರ್ಮಿಕರನ್ನು ನೇಮಕ ಮಾಡಿಕೊಂಡ ಘಟಕಗಳಿಗೂ ಇದು ಅನ್ವಯವಾಗುತ್ತಿತ್ತು.
ಸೆಪ್ಟಂಬರ್‌ನಲ್ಲಿ ಹಮ್ಮಿಕೊಂಡಿದ್ದ ಸಾರ್ವತ್ರಿಕ ಮುಷ್ಕರದ ವೇಳೆ 13 ಬೇಡಿಕೆಗಳ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಲಾಯಿತು. ಇದರಲ್ಲಿ ಬೆಲೆ ಏರಿಕೆಯನ್ನು ವಿರೋಧಿಸುವುದು, ಹೊಸ ಉದ್ಯೋಗಾವಕಾಶಗಳು ಕಡಿಮೆ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿರುವುದು. ರೈಲ್ವೆ, ರಕ್ಷಣೆ ಹಾಗೂ ವಿಮಾ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಎನ್‌ಡಿಎ ಸರಕಾರ ಮುಂದಾಗಿರುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾಗಿತ್ತು.

ಡಾ.ಮನಮೋಹನ್ ಸಿಂಗ್ ಅವರ ಭಾಷಣದಲ್ಲಿ ಕಾರ್ಮಿಕ ಸಮಸ್ಯೆಗಳ ವಿಸ್ತೃತ ದೃಷ್ಟಿಕೋನವೂ ವ್ಯಕ್ತವಾಗಿದೆ. ಎನ್‌ಡಿಎ ಸರಕಾರದ ನೀತಿಯಿಂದಾಗಿ ಉದ್ಭವಿಸಬಹುದಾದ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳ ಬಗ್ಗೆಯೂ ಅವರು ಬೆಳಕು ಚೆಲ್ಲಿದರು. ಪ್ರಗತಿ ಪ್ರಕ್ರಿಯೆ ಎನ್ನುವುದು ಪರಿಸರದ ದೃಷ್ಟಿಯಿಂದ ಸುಸ್ಥಿರವಾಗಿರಬೇಕು ಮತ್ತು ನ್ಯಾಯಹಂಚಿಕೆ ವ್ಯವಸ್ಥೆಗೆ ಪೂರಕವಾಗಿರಬೇಕು ಎಂಬ ಸಿದ್ಧಾಂತವನ್ನು ಅವರು ಪ್ರತಿಪಾದಿಸಿದರು. ಈ ಪ್ರತಿಭಟನೆಗೆ ಪ್ರತಿಕ್ರಿಯಾತ್ಮಕವಾಗಿ ಸರಕಾರ ಅಂತರ ಸಚಿವಾಲಯ ಸಮಿತಿಯನ್ನು ರಚನೆ ಮಾಡಿತು. ಈ ಮೂಲಕ ಕಾರ್ಮಿಕ ಸುಧಾರಣೆಗಳು ಸಲಹಾ ಆಧರಿತವಾಗಿವೆ ಎಂದು ಬಿಂಬಿಸುವ ಪ್ರಯತ್ನ ಮಾಡಿತು. ಇದೀಗ ಕಾರ್ಮಿಕರು ಹಾಗೂ ಕಾರ್ಮಿಕ ಸಂಘಟನೆಗಳ ಚಳವಳಿಗೆ ವಿರೋಧ ಪಕ್ಷಗಳಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಭಾರತದಲ್ಲಿ ಕಾರ್ಮಿಕ ಸ್ಥಿತಿಗತಿಗಳ ಚಿತ್ರಣದತ್ತ ಗಮನ ಸೆಳೆಯುವಲ್ಲಿ ಇಂಟೆಕ್ ಸಮಾವೇಶ ಮಹತ್ವದ ಹೆಜ್ಜೆಯಾಗಲಿದೆ. ಜತೆಗೆ ಕಾನೂನಿನ ಉದ್ದೇಶಿತ ತಿದ್ದುಪಡಿ ಬಗೆಗಿನ ಮರುಚಿಂತನೆಗೂ ಇದು ಅವಕಾಶ ಕಲ್ಪಿಸಲಿದೆ.

ನಿಷ್ಠ ವೇತನ, ಗುತ್ತಿಗೆ, ಆರೋಗ್ಯ ಹಾಗೂ ಪಿಂಚಣಿ ಸೌಲಭ್ಯ, ಹೆಚ್ಚುವರಿ ಕೆಲಸದ ಭತ್ತೆ ಹಾಗೂ ಕೆಲಸದ ಸ್ಥಳದಲ್ಲಿ ಸುರಕ್ಷೆ ಮತ್ತು ನೈರ್ಮಲ್ಯವನ್ನು ಖಾತ್ರಿಪಡಿಸದೇ ಖಂಡಿತವಾಗಿಯೂ ಆರ್ಥಿಕ ಪ್ರಗತಿಯನ್ನು ಸಾಧಿಸಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸರಕಾರ ಹಾಗೂ ಕಾರ್ಮಿಕ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ದುರ್ಬಲ ವರ್ಗದ ಬಗ್ಗೆ ಅದರಲ್ಲೂ ಮುಖ್ಯವಾಗಿ ಮಹಿಳೆಯರು ಮತ್ತು ವಲಸೆ ಕಾರ್ಮಿಕರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅನಿವಾರ್ಯತೆ ಇದೆ. ದೇಶದಲ್ಲಿ ಬಾಲಕಾರ್ಮಿಕ ಕಾನೂನನ್ನು ಕೂಡಾ ಹೆಚ್ಚು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯವಿದೆ. ಕಾರ್ಮಿಕ ಕಾಳಜಿಗಳು ಕೇವಲ ಫ್ಯಾಕ್ಟರಿ ಕಾರ್ಮಿಕರಿಗಷ್ಟೇ ಸೀಮಿತವಾಗಿರದೆ, ಕೃಷಿ ಕಾರ್ಮಿಕರ ಭವಿಷ್ಯ, ಮನೆಕೆಲಸದ ಕಾರ್ಮಿಕರು ಹಾಗೂ ಪ್ಲಾಂಟೇಷನ್ ಕಾರ್ಮಿಕರ ಸ್ಥಿತಿಗತಿ ಬಗೆಗೆ ಕೂಡಾ ವ್ಯಾಪಕ ಹಾಗೂ ವಿಸ್ತೃತ ಚರ್ಚೆ ಆಗುವ ಅಗತ್ಯವಿದೆ.
             ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್

Writer - ಸ್ವಾತಿ ಸಕ್ಸೇನಾ

contributor

Editor - ಸ್ವಾತಿ ಸಕ್ಸೇನಾ

contributor

Similar News