×
Ad

ಚದುರಂಗ: ಜನ್ಮಶತಾಬ್ದಿಯ ಸ್ಮರಣೆ

Update: 2016-04-30 23:43 IST

ಚದುರಂಗರಿಗೆ ನಮಸ್ಕಾರ,

........1998. ರಾತ್ರಿ 11:30. ಟೆಲಿಫೋನ್ ಟ್ರಿಂಟಿಣಿಸಿತು. ಆಕಡೆಯಿಂದ ಕೇಳಿ ಬಂದ ದನಿ:

‘‘ನಾನು ವಿಕ್ರಂ ಮಾತಾಡ್ತಿರೋದು. ರಂಗನಾಥ ರಾವ್, ಚದುರಂಗರು ನಿಮ್ಮ ಹತ್ತಿರ ಮಾತಾಡ್ಬೇಕಂತೆ’’

‘‘ಸಾರ್ ನಮಸ್ಕಾರ, ಏನ್ಸಾರ್ ಇಷ್ಟುಹೊತ್ತಿನಲ್ಲಿ.ಇನ್ನೂ ಮಲಗಲಿಲ್ವೇ?’’

‘‘ನಿನ್ನ ಹತ್ತಿರ ಮಾತಾಡ್ಬೇಕೂಂತ ಅನ್ನಿಸ್ತು, ಅದಕ್ಕೆ. ಹೇಗಿದೀಯ?’’

‘‘ನಾನು ಚೆನ್ನಾಗಿದೀನಿ. ನೀವು ಹೇಗಿದೀರಿ ಸಾರ್?’’

‘‘ಇದೀನಪ್ಪ...ಎದೆ ನೋವು. ಮೊಲೆ ತೊಟ್ಟಿನಲ್ಲಿ ತುಂಬ ನೋಯುತ್ತೆ’’

‘‘ಡಾಕ್ಟ್ರು ಏನ್ ಹೇಳಿದಾರೆ ಸಾರ್...’’

‘‘ಔಷಧಿ ಕೊಟ್ಟಿದಾರೆ, ವಾಸಿ ಆಗುತ್ತೆ ಅಂತಾರೆ’’

‘‘ಬೆಳಗ್ಗೆ ಹೊತ್ತಿಗೆ ಸರಿಹೋಗ್ತೀರಿ. ಈಗ ಮಲಕ್ಕೊಳ್ಳಿ ಸಾರ್, ಹೊತ್ತಾಯಿತು’’

‘‘ಮಲಗೋದೆ...’’
 
ಎಂದರು. ಫೋನ್ ಸಂಪರ್ಕ ತಪ್ಪಿತು. ಸ್ವಲ್ಪ ದಿನಗಳಲ್ಲೇ ಚದುರಂಗರು ಸ್ವರ್ಗಸ್ಥರಾಗಿ ಶೋಕ ನಮ್ಮನ್ನು ಆವರಿಸಿತು.

ಇದು ಮೈಸೂರಿನೊಂದಿಗಿನ ನನ್ನ ಅಂತ:ಕರಣದ ಸಂಬಂಧ.
 *** *** ***
ಇಪ್ಪತ್ತನೆ ಶತಮಾನ ಕಂಡ ಕನ್ನಡದ ಅಪ್ರತಿಮ ಮಾನವ ತಾವಾದಿ ಸಾಹಿತಿ ಚದುರಂಗರ ನಿಜನಾಮಧೇಯ, ಎಂ.ಸುಬ್ಬಹ್ಮಣ್ಯರಾಜ ಅರಸು. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯವರು. ಕಲ್ಲಹಳ್ಳಿ ಎಂದರೆ ಮೈಮನ ಪುಳಕಗೊಳ್ಳುತ್ತೆ. ದೇಶ ಕಂಡ ಅಪ್ರತಿಮ ಮಾನವತಾವಾದಿ ರಾಜಕಾರಿಣಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಜನ್ಮಕೊಟ್ಟಿದ್ದೂ ಕಲ್ಲಹಳ್ಳಿಯೇ. ಎಂ.ಸುಬ್ರಹ್ಮಣ್ಯರಾಜೇ ಅರಸ್, ‘ಚದುರಂಗ’ ಹುಟ್ಟದ್ದು ಜನವರಿ 1, 1916. ಅಂದರೆ ಇದು ಅವರ ಜನ್ಮಶತಾಬ್ದಿಯ ವರುಷ. ತಂದೆ ಮುದ್ದುರಾಜೇ ಅರಸ್ ತಲಕಾಡಿನ ಗಂಗರಸರ ವಂಶಸ್ಥರು. ತಾಯಿ ಮರುದೇವಮ್ಮಣ್ಣಿ ಕಲ್ಲಹಳ್ಳಿಯಿಂದ ಆಳಿದ ಮಂಗರಸನ ವಂಶಸ್ಥರು. ಚದುರಂಗರು ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್ ಅವರ ಸಮಕಾಲೀನರು. ರಾಜಕುಮಾರರ ವಿದ್ಯಾಭ್ಯಾಸಕ್ಕೆಂದೇ ಇದ್ದ ರಾಯಲ್ ಸ್ಕೂಲಿನಲ್ಲಿ ಜಯಚಾಮರಾಜೇಂದ್ರ ಒಡೆಯರ ಸಹಪಾಠಿಯಾಗಿ ಕಲಿತ ಚದುರಂಗರು ಹೈಸ್ಕೂಲ್ ಮುಗಿದ ನಂತರ ಬೆಂಗಳೂರು ಇಂಟರ್‌ಮೀಡಿಯಟ್ ಕಾಲೇಜ್ ಸೇರಿದರು. ಮಹಾರಾಜ ಕಾಲೇಜಿನಲ್ಲಿ ಬಿ.ಎ. ಮುಗಿಸಿದರು. ಮುಂದೆ ಎಂ.ಎ. ಮಾಡಲು, ನ್ಯಾಯ ಶಾಸ್ತ್ರ ಕಲಿಯಲು ಪುಣೆಗೆ ಹೋದರು. ಪುಣೆಯಲ್ಲಿ ಚಲನಚಿತ್ರ, ಪತ್ರಿಕೋದ್ಯಮ ರಂಗಗಳ ಹಲವಾರು ಮಂದಿಯ ಪರಿಚಯವಾಯಿತು. ಮಾರ್ಕ್ಸ್ ಸಿದ್ಧಾಂತಗಳಿಂದ ಆಕರ್ಷಿತರಾದರು. ಚಳವಳಿಗಳಲ್ಲಿ ಭಾಗವಹಿಸಿದರು. ಎಂ.ಎನ್. ರಾಯ್ ತತ್ವಾದರ್ಶಗಳಿಗೆ ಮಾರು ಹೋದರು. ಪುಣೆಯಲ್ಲಿದ್ದಾಗ ‘ಮೋಷನ್ ಪಿಕ್ಚರ್ ಮ್ಯಾಗ್ಸೈನ್’ ಪತ್ರಿಕೆಗೆ ಲೇಖನಗಳನ್ನು ಬರೆದರು. ಗಾಂಧೀಜಿಯವರ ಪ್ರಭಾವಕ್ಕೊಳಗಾದರು, ಖಾದಿ ವ್ರತ ತೊಟ್ಟರು. ಇಂಟರ್ ಓದುತ್ತಿದ್ದಾಗ ಶ್ರೀ ಕೃಷ್ಣರಾಜ ಒಡೆಯರ್ ಮತ್ತು ದಿವಾನ್ ಮಿರ್ಜಾ ಇಸ್ಮಾಯೀಲ್ ಅವರು ಕರೆದಿದ್ದ ವಿದ್ಯಾರ್ಥಿ ಮುಖಂಡರ ಸಭೆಯಲ್ಲಿ, ಮಹಾರಾಜರ ಎದುರೇ ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿ ಸಭಿಕರನ್ನು ದಂಗುಬಡಿಸಿದ್ದರಂತೆ. ಇದೇ ವೇಳೆಯಲ್ಲಿ ಕುವೆಂಪು, ಅನಕೃ, ಮಾಸ್ತಿ, ವಿಸೀ ಮೊದಲಾದ ಕನ್ನಡ ಸಾಹಿತ್ಯ ಗಣ್ಯರ ಪರಿಚಯವಾಗಿ ಬುದ್ಧಿಮನಸ್ಸುಗಳು ಸಾಹಿತ್ಯ ರಚನೆಯತ್ತ ಮಾಗತೊಡಗಿತು.

ಚದುರಂಗರದು ಬಹುಮುಖ ಪ್ರತಿಭೆ. ಸಣ್ಣ ಕತೆ, ಕಾದಂಬರಿ, ಕಾವ್ಯ, ನಾಟಕ, ಸಿನೆಮಾ ಹೀಗೆ ವಿವಿಧ ಕಲಾ ಪ್ರಕಾರಗಳಲ್ಲಿ ಪ್ರಯೋಗಶೀಲರಾದ ಅವರ ಸೃಜನಶೀಲ ಪ್ರತಿಭೆಯ ಹಾಸುಬೀಸುಗಳಿಗೆ ಒಗ್ಗಿ ಬಂದದ್ದು ಕಾದಂಬರಿ. ಚದುರಂಗರು ಓತಪ್ರೋತವಾಗಿ ಬರೆದವರಲ್ಲ. ಅವರು ಬರದದ್ದು ಕಡಿಮೆ. ಆದರೆ ಬರೆದದ್ದೆಲ್ಲವೂ ಚಿನ್ನ. ನಾಲ್ಕು ಕಾದಂಬರಿಗಳು (‘ಸರ್ವಮಂಗಳಾ’, ‘ಉಯ್ಯೆಲೆ’, ‘ವೈಶಾಖ’ ಮತ್ತು ‘ಹೆಜ್ಜಾಲ’), ಆರು ಕಥಾ ಸಂಕಲನಗಳು (‘ಸ್ವಪ್ನ ಸುಂದರಿ’, ‘ಶವದಮನೆ’, ‘ಇಣುಕು ನೋಟ’, ‘ನನ್ನ ರಸಿಕ, ಬಂಗಾರದ ಗೆಜ್ಜೆ’ ಮತ್ತು ‘ಮೀನಿನ ಹೆಜ್ಜೆ’), ಎರಡು ನಾಟಕಗಳು(‘ಕುಮಾರ ರಾಮ’, ‘ಇಲಿ ಬೋನು’). ಒಂದು ಹನಿಗವಿತೆಗಳ ಸಂಕಲನ ಪ್ರಕಟವಾಗಿದೆ. ಮೊದಲ ಕಥಾ ಸಂಕಲನ ‘ಸ್ವಪ್ನ ಸುಂದರಿ’ ಪ್ರಕಟವಾದದ್ದು 1948ರಲ್ಲಿ. ಇದಕ್ಕೆ ಮುನ್ನುಡಿ ಬರೆದಿರುವ ಅ.ನ.ಕೃಷ್ಣ ರಾಯರು ಆಗ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸಣ್ಣ ಕತೆಗಳ ಪ್ರಕಾರವನ್ನು ಪ್ರಸ್ತಾಪಿಸಿ ಹೀಗೆ ಬರೆದಿದ್ದಾರೆ: ‘‘ನಮ್ಮ ಓದುಗರ ಅಭಿರುಚಿಯೇ ಕೆಟ್ಟಿದೆಯೋ, ಅಥವಾ ನಮ್ಮ ಲೇಖಕರ ಪ್ರತಿಭೆಯ ಬುಗ್ಗೆಗಳು ಬರಿದಾಗಿವೆಯೋ?...ಈ ಸಹರಾ ಮರುಭೂಮಿಯಲ್ಲಿ ಒಂದೆರಡು ಖರ್ಜೂರದ ಗಿಡಗಳನ್ನು ನೆಡಲೆತ್ನಿಸುತ್ತಿರುವವರಲ್ಲಿ ‘ಚದುರಂಗ’ರೊಬ್ಬರು’’. ಚದುರಂಗರು ಆ ಕಾಲಕ್ಕೆ ಅ.ನ.ಕೃ. ನೇತೃತ್ವದ ಪ್ರಗತಿಶೀಲ ಪಂಥದ ಪ್ರಮುಖ ಲೇಖಕರೆಂದು ಮಾನ್ಯರಾದವರು. ಇಂಥ ಯಾವುದೇ ಹಣೆಪಟ್ಟಿಯ ಅಗತ್ಯವಿಲ್ಲದ ಕನ್ನಡದ ಪ್ರಮುಖ ಲೇಖಕರು ಅವರು. ಹಾ.ಮಾ.ನಾಯಕರು ಹೇಳಿರುವ ಕೆಲವು ಮಾತುಗಳನ್ನು ಇದಕ್ಕೆ ನಿದರ್ಶನವಾಗಿ ನೋಡಬಹುದು: ‘‘...ಆ ಕಾಲ ಹಾಗಿತ್ತು.ಪ್ರಗತಿಯ ಹೆಸರಿನಲ್ಲಿ ನೂರಾರು ಹಕ್ಕಿಗಳು ಹಾಡಿದವು, ಅರಚಿದವು, ಕೂಗಿದವು. ಆ ಗುಂಪಿನಲ್ಲಿ ಕಾಗೆಗಳೂ ಇದ್ದವು. ಕೆಲವು ಕೋಗಿಲೆಗಳು, ಸೋಗಿನವೂ ಇದ್ದವು! ಈಗ ನಲವತ್ತು ವರ್ಷಗಳ ನಂತರ ಹಿಂದಿರುಗಿ ನೋಡಿದಾಗ ಆ ಸಮೂಹದಿಂದ ಉಳಿದುಕೊಂಡು ಬಂದ ನಿಜವಾದ ಕೋಗಿಲೆಗಳು ಎರಡೋ ಮೂರೋ ಕಾಣಿಸಬಹುದು. ಅವುಗಳಲ್ಲಿ ಚದುರಂಗ ಒಬ್ಬರು.’’ ಶೋಷಣೆ ವಿರುದ್ಧ, ಸಮಾನತೆಯ ಪರವಾಗಿ ಸೊಲ್ಲೆತ್ತಿರುವ ಅವರ ಕತೆ, ಕಾದಂಬರಿಗಳಲ್ಲಿ ಶೋಷಿಸುವ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಬಂಡಾಯವೇಳುವ ಪ್ರಗತಿಶೀಲ ಮನೋಧರ್ಮ ಢಾಳವಾಗಿ ಅಭಿವ್ಯಕ್ತಗೊಂಡಿದೆ.

ಆಧುನಿಕ ವಿಮರ್ಶೆ ಗುರುತಿಸಿರುವಂತೆ, ಚದುರಂಗರು ನವೋದಯ, ಪ್ರಗತಿಶೀಲ ಮತ್ತು ನವ್ಯ ಈ ಮೂರನ್ನೂ ಒಳಗೊಂಡ ತಮ್ಮದೇ ಆದ ಬರವಣಿಗೆಯ ರೀತಿಯನ್ನು ರೂಪಿಸಿಕೊಂಡವರು. ಈ ಮಾತಿಗೆ ‘ವೈಶಾಖ’ ಮತ್ತು ‘ಹೆಜ್ಜಾಲ‘ ಕಾದಂಬರಿಗಳನ್ನು ಹಾಗೂ ‘ಕ್ವಾಟೆ’ ಮೊದಲಾದ ಕೆಲವು ಸಣ್ಣಕತೆಗಳನ್ನೂ ನಿದರ್ಶನವಾಗಿ ನೋಡಬಹುದು. ಅವರ ಈ ತಮ್ಮದೇ ಆದ ರೀತಿಯ ಬರವಣಿಗೆಯಲ್ಲೂ ಸೋಗಲಾಡಿತನವಿಲ್ಲ, ಘೋಷಣೆಗಳಿಲ್ಲ, ಕಾಮಕಾಮನೆಗಳ ವಿಜೃಂಭಣೆಯಿಲ್ಲ. ಜಿ.ಎಚ್.ನಾಯಕರು ಹೇಳುವಂತೆ, ‘‘ಹೃದಯವಂತಿಕೆ, ಮಾನವೀಯವಾದ ಅನುಕಂಪ, ಅಂತಃಕರಣದ ಮಟ್ಟಿಗೆ ಹೇಳುವುದಾದರೆ, ಮಾಸ್ತಿಯವರ ಬರವಣಿಗೆಯ ಹತ್ತಿಹತ್ತಿರ ಬರುವಂಥ ಆರ್ದ್ರತೆ, ಆಪ್ತತೆಯನ್ನು’’ ಚದುರಂಗರು ತೋರಿಸುತ್ತಾರೆ.

 ಚದುರಂಗರ ನಾಲ್ಕೂ ಕಾದಂಬರಿಗಳು ಓದುಗರನ್ನು ಬೆರಗುಗೊಳಿಸುವಷ್ಟು ಅನನ್ಯವಾದವು. ‘ಸರ್ವಮಂಗಳ’(1950) ನವೋದಯದ ರಮ್ಯತೆ ಮತ್ತು ಆದರ್ಶವಾದಗಳ ಸಂಯೋಗವಾದರೆ, ‘ಉಯ್ಯಲೆ’(1960) ಪ್ರಗತಿಶೀಲ ಮನೋವೃತ್ತಿಯ ಟಂಕಸಾಲೆಯಿಂದ ಒಡಮೂಡಿದೆ. ‘ವೈಶಾಖ’ (1981) ಮತ್ತು ‘ಹೆಜ್ಜಾಲ’(1998) ನವ್ಯಮಾರ್ಗದ ಪ್ರಮುಖ ಅಂಶಗಳನ್ನು ಮೈಗೂಡಿಸಿಕೊಂಡ ನವವಾಸ್ತವ ಮಾರ್ಗದ ಕಾದಂಬರಿಗಳು. ಗ್ರಾಮೀಣ ಸಮಾಜದ ದಟ್ಟ ಚಿತ್ರಣ ಹಾಗೂ ಮನುಷ್ಯ ಸ್ವಭಾವಗಳ ಮೇಲಾಟದಲ್ಲಿನ ಮೂಲಕಾಮನೆಗಳ ಶೋಷಣೆಯ ಪ್ರವೃತ್ತಿಯ ಸೂಕ್ಷಾಮಾತಿಸೂಕ್ಷ್ಮ ಅಭಿವ್ಯಕ್ತಿ ಮತ್ತು ವಿಶ್ಲೇಷಣೆ ಈ ಎರಡು ಕಾದಂಬರಿಗಳ ವಿಶೇಷ ಗುಣಲಕ್ಷಣಗಳಾಗಿವೆ. ಹಳೆಯ ಮೈಸೂರಿನ ಗ್ರಾಮೀಣ ಸಂಸ್ಕೃತಿಯನ್ನು ಚದುರಂಗರು ಈ ಎರಡು ಕಾದಂಬರಿಗಳಲ್ಲಿ ಆಳವಾಗಿ ಶೋಧಿಸಿದ್ದಾರೆ. ಹಳ್ಳಿಯ ಸಾಮಾಜಿಕ ಜೀವನ, ಗ್ರಾಮ ಸಮಾಜದಲ್ಲಿನ ವಿವಿಧ ಬಗೆಯ ಶೋಷಣೆಗಳು ಕಣ್ಣಗೆ ರಾಚುತ್ತವೆ. ಶೋಷಿತರ ದಯನೀಯ ಬದುಕು ನಮ್ಮ ಸಂವೇದನೆಯನ್ನು ಘಾತಿಸುತ್ತದೆ. ‘ಹೆಜ್ಜಾಲ’ವಂತೂ, ಖ್ಯಾತ ವಿಮರ್ಶಕರಾದ ಕೆ.ನರಸಿಂಹ ಮೂರ್ತಿಯವರು ಹೇಳುವಂತೆ, ‘‘ಜೀತದಾಳುಗಳ ಶೋಷಣೆಯ ಪ್ರಸ್ತುತ ಸಾಮಾಜಿಕ ವಿಷಮತೆಯನ್ನೂ ಹದಗೆಡುತ್ತಿರುವ ನಮ್ಮ ಗ್ರಾಮಿಣ ಜೀವನದ ದುರವಸ್ಥೆಯನ್ನೂ ನಮ್ಮ ಸಂಸ್ಕೃತಿ ಸತ್ವಹೀನವಾಗುತ್ತಿರುವ ಶೋಚನೀಯ ಪರಿಸ್ಥಿತಿಯನ್ನೂ’’ ಮಾರ್ಮಿಕವಾಗಿ ಚಿತ್ರಿಸುತ್ತದೆ.

ಕನ್ನಡ ರಂಗ ಭೂಮಿಯಲ್ಲಿ ಅಸಂಗತ ನಾಟಕಗಳ ಉಬ್ಬರವಿದ್ದಾಗ ಬಂದ ನಾಟಕ ‘ಇಲಿ ಬೋನು’. ಬದುಕಿನ ಸಹಜ ಗತಿಗೆ ವಿರುದ್ಧವಾಗಿ ನಡೆಯಲೆತ್ನಿಸುವ ಮನಸ್ಸುಗಳ ದ್ವಂದ್ವಗಳನ್ನೂ ಇಂಥ ಮನಸ್ಸಿನ ಅಸಂಗತ ಧೋರಣೆಯನ್ನು ಸಮರ್ಥವಾಗಿ ಬಿಂಬಿಸುವ ನಾಟಕ. ರಿಕ್ತ ಮನಸ್ಸುಗಳು ಸಹಜ ನೆಲೆ ಕಂಡುಕೊಳ್ಳುವುದರಲ್ಲಿ ನಾಟಕದ ಯಶಸ್ಸಿದೆ.

   ಚದುರಂಗರ ಸೃಜನಶೀಲತೆಯ ಇನ್ನೊಂದು ಆಯಾಮ ಸಿನೆಮಾ. ಪುಣೆಯಲ್ಲಿ ಬೆಳೆದ ಸಿನೆಮಾ ಒಲವು ಅವರ ಸೃಜನಶೀಲ ಪ್ರತಿಭೆಯ ಒಂದು ಮೂಲೆಯಲ್ಲಿ ಸುಪ್ತವಾಗಿ ದಾಂಗುಡಿಯಿಟ್ಟಿರಲಿಕ್ಕೆ ಸಾಕು. 1948ರಷ್ಟು ಹಿಂದೆಯೇ ಅವರು ‘ಭಕ್ತ ರಾಮದಾಸ’ ಚಿತ್ರಕ್ಕೆ ಕಥೆ ಬರದಿದ್ದರು, ಸಹ ನಿರ್ದೇಶನ ಮಾಡಿದ್ದರು. ಹಾ.ಮಾ.ನಾಯಕರು ಹೇಳುವಂತೆ, ವಿಶ್ವ ವಿಖ್ಯಾತ ಎಂ.ಜಿ.ಎಂ. ಸಂಸ್ಥೆ ಮೈಸೂರಿನಲ್ಲಿ ನಿರ್ಮಿಸಿದ ‘ಮಾಯಾ’ ಇಂಗ್ಲಿಷ್ ಚಿತ್ರಕ್ಕೂ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ‘ಸರ್ವಮಂಗಳಾ’ ಕಾದಂಬರಿಯನ್ನು ಸ್ವತ: ನಿರ್ದೇಶಿಸಿ ಬೆಳ್ಳಿ ತೆರೆಗೆ ತಂದರು. ಸರ್ವಮಂಗಳಾ ಚಲಚಿತ್ರ ಮೂರು ಪ್ರಶಸ್ತಿಗಳನ್ನು ಗೆದ್ದುಕೊಂಡದ್ದು ಈಗ ಇತಿಹಾಸ. ಕುವೆಂಪು ಕುರಿತ ಸಾಕ್ಷ್ಯ ಚಿತ್ರ ನಿರ್ದೇಶಿಸಿದರು. ಅದನ್ನು ಕಂಡು ಕುವೆಂಪು ಅವರು ‘ನಾ ಧನ್ಯ ನಾ ಧನ್ಯ’ ಎಂದು ಸಂಭ್ರಮಿಸಿದ್ದರು. ಕರ್ನಾಟಕ ಸರಕಾರಕ್ಕಾಗಿ ಎರಡು ಸಾಕ್ಷಚಿತ್ರಗಳನ್ನು ತಯಾರಿಸಿಕೊಟ್ಟರು. ಎನ್.ಲಕ್ಷ್ಮೀನಾರಾಯಣ್ ನಿರ್ದೇಶನದಲ್ಲಿ ‘ಉಯ್ಯಾಲೆ’ ಬೆಳ್ಳಿ ತೆರೆಯಲ್ಲೂ ಜನಪ್ರಿಯತೆಯನ್ನು ಸೂರೆಗೊಂಡಿತು.

 *** *** ***
 
ಚದುರಂಗರದು ಅಪರಂಜಿ ವ್ಯಕ್ತಿತ್ವ. ಅರಮನೆಗೆ ಹತ್ತಿರವಾಗಿದ್ದ ಅವರ ನಡವಳಿಕೆಯಲ್ಲಿ ಆ ಡೌಲು, ಆ ಶ್ರೀಮಂತಿಕೆಯ ಧಿಮಾಕುಗಳು ಎಳ್ಳಷ್ಟೂ ಕಾಣುತ್ತಿರಲಿಲ್ಲ. ಕಿರಿಯರನ್ನೂ ಸಮಾನಸ್ಕಂದರಂತೆ ಕಾಣುತ್ತಿದ್ದ ಅವರು ಸರಸ ಸಂಭಾಷಣೆ, ಸಂವಾದಗಳಿಗೆ ತೆರೆದ ಮನಸ್ಸಿನ ಸ್ನೇಹಜೀವಿಯಾಗಿದ್ದರು. ಅವರ ಸ್ನೇಹದ ಲಾಭ ಪಡೆದುಕೊಂಡು ಜೀವನಕ್ಕೆ ದಾರಿ ಕಂಡುಕೊಂಡವರು ಅನೇಕ ಮಂದಿ ಎನ್ನುತ್ತಾರೆ ಹಾಮಾನಾ. ‘ಚದುರಂಗ:ವ್ಯಕ್ತಿ-ಅಭಿವ್ಯಕ್ತಿ’ (1988)ಎಪ್ಪತ್ತು ವಸಂತಗಳನ್ನು ದಾಟಿದಾಗ ಗೆಳೆಯರ ಬಳಗ ಅವರಿಗೆ ಅರ್ಪಿಸಿದ ಅಭಿನಂದನಾ ಗ್ರಂಥ. ಇದು ಚದುರಂಗರ ಜನ್ಮಶತಾಬ್ದಿ ವರುಷ. ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾವ ಮೂಲೆಯಿಂದಲೂ ಜನ್ಮ ಶತಮಾನೋತ್ಸವದ ಸದ್ದು, ಸಡಗರಗಳು ಕೇಳಿ ಬರುತ್ತಿಲ್ಲ.

ನಾವು, ಕನ್ನಡಿಗರು, ಕೃತಘ್ನರಾಗುತ್ತಿದ್ದೇವೆಯೇ?

ಭರತ ವಾಕ್ಯ:

ಜೀವನದಲ್ಲಿ ತುಂಬ ಆಘಾತಗಳನ್ನೆದುರಿಸಿಯೂ ಹೃದಯದ ಕೋಮಲತೆಯನ್ನು ಕಳೆದುಕೊಳ್ಳದ ಸಾಹಿತಿ.

ಒಬ್ಬ ಸಜ್ಜನನಾಗಿಯೂ ನಾನು ಇವರನ್ನು ತುಂಬ ಮೇಲ್ಮಟ್ಟದ ವ್ಯಕ್ತಿ ಎಂದು ಗೌರವಿಸುತ್ತೇನೆ.

ಎಂ.ಗೋಪಾಲಕೃಷ್ಣ ಅಡಿಗ

24-12-1988

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News