×
Ad

ಡಬ್ಬಿಂಗ್ ಎನ್ನುವ ರಾಗಿಮುದ್ದೆಯ ಬರ್ಗರ್

Update: 2016-04-30 23:50 IST

ನಿನ್ನೆಯ ಸಂಚಿಕೆಯಿಂದ

ಇಲ್ಲಿ ಕನಿಷ್ಠ 4 ರಿಂದ 6ರಷ್ಟು ಜನರಲ್ ಕೆಟಗರಿಯ ಟಿಆರ್ಪಿ/ಟಿವಿಆರ್ ಇದ್ದರೆ ಮಾತ್ರ ಉಳಿಗಾಲ. ಅದಕ್ಕಿಂತ ಕಡಿಮೆ ಇದ್ದರೆ ಆ ಕಾರ್ಯಕ್ರಮ ತಯಾರಕರು ಬಾಗಿಲು ಹಾಕಿಕೊಳ್ಳಲು ಸಿದ್ಧರಾಗಿ ರಬೇಕು. ಪ್ರಕಾಶ್ ಬೆಳವಾಡಿ ನಿರ್ದೇಶನದ ‘ಗರ್ವ’ ಧಾರಾವಾಹಿಯು ನಾನು ಮಾತ್ರವಲ್ಲ ಅನೇಕರು ಮೆಚ್ಚುವ ಧಾರಾವಾಹಿಯಲ್ಲಿ ಒಂದಾಗಿತ್ತು. ಆದರೆ ಅದಕ್ಕೆ ವಾರಾಂತ್ಯದಲ್ಲಿ ಸಿಕ್ಕ ಸಂಖ್ಯೆಗಳು ಕಡಿಮೆ ಇದ್ದುದರಿಂದ ಆ ಧಾರಾವಾಹಿಯು ಅರ್ಧ ದಾರಿಯಲ್ಲೇ ನಿಲ್ಲಬೇಕಾಯಿತು. ಹೀಗೆ ಗರ್ಭಪಾತಕ್ಕೊಳಗಾದ ಕಾರ್ಯಕ್ರಮಗಳ ಸಂಖ್ಯೆ ದೊಡ್ಡದು. ಈ ಸಂಖ್ಯಾ ಲೆಕ್ಕಾಚಾರದಲ್ಲಿಯೇ ಇಂದು ಜಗತ್ತಿನ ಬಹುತೇಕ ವಹಿವಾಟು ನಡೆಯುತ್ತಾ ಇರುವುದು. ಇದು ಹೃದಯಹೀನ ಜಗತ್ತು ಎಂಬುದನ್ನು ಮತ್ತೆ ಹೇಳಬೇಕಾಗಿಲ್ಲ. ಹೀಗಾಗಿಯೇ ಇಲ್ಲಿ ಗೆದ್ದವರಿಗಿಂತ ಸೋತವರ ಕತೆಗಳೇ ಹೆಚ್ಚು.
ಇಂತಹ ಸಂಖ್ಯೆಗಳ ಜಗತ್ತಲ್ಲಿ ನನಗಿಂತ ಮುಂಚಿತವಾಗಿ ಮಾತಾಡಿದ ಗೆಳೆಯರ ಮಾತಿನಂತೆ ಡಬ್ಬಿಂಗ್ ಎಂಬ ವಿಕೃತಿಯು ಬಳಕೆಗೆ ಬಂದಿತು ಎಂದುಕೊಳ್ಳುವ, ಆಗ ಮೊದಲ ಹೊಡೆತ ಬೀಳುವುದು ಸಿನೆಮಾಕ್ಕಲ್ಲ, ಟೆಲಿವಿಷನ್ನಿಗೆ. ಅದು ಹೇಗೆ ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ಈಗಿರುವ ವ್ಯವಸ್ಥೆಯಲ್ಲಿ ಅತಿ ಹೆಚ್ಚು ಪುನರವತರಣಿಕೆಗಳ ಚಿತ್ರೀಕರಣವಾಗುತ್ತಾ ಇದೆ. ಆದರೂ ಒಂದು ಧಾರಾವಾಹಿಯ ತಯಾರಿಕೆಯಲ್ಲಿ ಅನೇಕ ಸ್ಥಳೀಯರು ಅವಕಾಶ ಪಡೆಯುತ್ತಾ ಇದ್ದಾರೆ. ಜೊತೆಗೆ ಪ್ರತಿ ಪ್ರಕರಣಕ್ಕೆ ಕನಿಷ್ಠ 70-80 ಸಾವಿರ ತಯಾರಿಕಾ ವೆಚ್ಚ, 30-40 ಸಾವಿರ ಪ್ರಸಾರ ವೆಚ್ಚ, 20-30 ಸಾವಿರ ಮಾರುಕಟ್ಟೆ ವೆಚ್ಚ ಎಂಬಂತೆ ಸರಿಸುಮಾರು 1.60-1.80 ಲಕ್ಷ ರೂ. ವರೆಗಿನ ಖರ್ಚು ರಾಯಧನದ ಕಾರ್ಯಕ್ರಮಗಳಿಗೆ, 2.30-2.50 ಲಕ್ಷ ರೂ.ವರೆಗಿನ ಖರ್ಚು ಪ್ರಾಯೋಜಿತ ಕಾರ್ಯಕ್ರಮಗಳಿಗೆ ಆಗುತ್ತಾ ಇದೆ.

ಹೀಗೆ ಹೂಡಿದ ಹಣವನ್ನು ಹಿಂಪಡೆಯುವಲ್ಲಿ 6ಕ್ಕಿಂತ ಹೆಚ್ಚು ಟಿವಿಆರ್‌ಇದ್ದರೆ ಸಾಧ್ಯವಾದೀತು. ಅದಕ್ಕಿಂತ ಕಡಿಮೆ ಸಂಖ್ಯೆ ಇದ್ದರೆ ಬರುವಆದಾಯ ಕಡಿಮೆಯಾಗುತ್ತಾ ಹೋಗುತ್ತದೆ. ಇಂತಹ ಸಂದರ್ಭದಲ್ಲಿ ‘ಡಬ್ಬಿಂಗ್ ಧಾರಾವಾಹಿಗಳು’ ಬರಲು ಶುರುವಾದರೆ ಆ ಕಾರ್ಯಕ್ರಮಗಳ ತಯಾರಿಕೆಗೆ ತಗಲುವ ವೆಚ್ಚ ಕೇವಲ ಏಳೆಂಟು ಸಾವಿರ ರೂ.ಗಳು ಮಾತ್ರ. ಹೀಗಾಗಿ ಅಂತಹ ಕಾರ್ಯಕ್ರಮದ ಒಟ್ಟು ಖರ್ಚು 50 ಸಾವಿರ ರೂ. ದಾಟುವುದಿಲ್ಲ. ಇಂತಹ ಕಾರ್ಯಕ್ರಮಗಳು ಚೆನ್ನಾಗಿರಲಿ ಬಿಡಲಿ ಅವು ಗಳಿಗೆ ಕೇವಲ ಒಂದು ಟಿವಿಆರ್‌ನಷ್ಟು ಸಂಖ್ಯೆ ಇದ್ದರೂ ಸಾಕು, ಆಯಾ ವಾಹಿನಿಯ ಮಾರುಕಟ್ಟೆಯ ಅಧಿಕಾರಿಗಳು ಕಡಿಮೆ ಹಣಕ್ಕೆ ಮಾರಿ ಲಾಭ ತಂದುಕೊಡುತ್ತಾರೆ.

ಖಾಸಗಿ ವಾಹಿನಿಗೆ ಹಣ ಹೂಡಿರುವ ಮಾಲಕನಿಗೆ ಬೇಕಾಗಿರುವುದು ಸಹ ಲಾಭವೇ ಆಗಿರುವುದರಿಂದ ಅಂತಹ ಕಾರ್ಯಕ್ರಮಗಳು ಇಡಿಯಾಗಿ ಟೆಲಿವಿಷನ್ ಅನ್ನು ಆವರಿಸಿಕೊಳ್ಳುತ್ತವೆ. ಆ ಮೂಲಕ ಟೆಲಿವಿಷನ್ ಮಾಧ್ಯಮಕ್ಕೆ ಇರುವ ‘ಸೋಷಿಯೋ-ಡೆಮಾಕ್ರಟಿಕ್ ಫ್ಯಾಬ್ರಿಕ್’ನ್ನು ಹಾಗೂ ‘ಎಲ್ಲರಿಗೂ ಸಮಾನ ಅವಕಾಶ’ ಎಂಬ ತೆರಪನ್ನು ಹರಿದೊಗೆಯುತ್ತವೆ. ಇಷ್ಟಲ್ಲದೆ ಸ್ಥಳೀಯ ಸಂಸ್ಕೃತಿ ಇರಲಿ ಸ್ಥಳೀಯ ಭಾಷೆಯ ಮೇಲೂ ಈ ಡಬ್ಬಿಂಗ್ ವಿಕೃತಿಯು ತನ್ನ ಪರಿಣಾಮವನ್ನು ಬೀರುತ್ತಾ ಸಾಗುತ್ತದೆ.

ತಮಿಳರು ಡಬ್ಬಿಂಗ್ ಕಾರ್ಯಕ್ರಮಗಳನ್ನು ನೋಡುತ್ತಾ ವಣಕ್ಕಂ ಎಂಬ ತಮಿಳಿನ ಮೂಲ ಶಬ್ದವನ್ನು ಮರೆತಿದ್ದಾರೆ ಎಂದು ಹಿರಿಯ ತಮಿಳು ಕವಿಗಳಾದ ವೈರಮುತ್ತು ಅವರು ಸಂದರ್ಶನವೊಂದರಲ್ಲಿ ಹೇಳಿರುವ ಹಾಗೆ ನಾವೂ ಸಹ ಗೊಣಗುತ್ತಾ? ಹಲುಬುತ್ತಾ ಕೂರಬೇಕಾಗುತ್ತದೆ. (ತಮಿಳಿನಲ್ಲಿ ಬಹುತೇಕ ಮನರಂಜನಾ ವಾಹಿನಿಗಳು ಡಬ್ಬಿಂಗ್ ಆದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಹೀಗೆ ಪರಭಾಷೆಯಿಂದ ಬರುವ ಕಾರ್ಯಕ್ರಮಗಳಲ್ಲಿ ‘ನಮಸ್ಕಾರ್/ನಮಸ್ಕಾರಮ್/ನಮಸ್ಕಾರ’ ಎಂಬ ಪದ ಬಳಸಿದ್ದರೆ ಅದಕ್ಕೆ ಸಂವಾದಿಯಾದ ತಮಿಳಿನ ‘ವಣಕ್ಕಂ’ ಪದದ ಬದಲಿಗೆ ತುಟಿ ಚಲನೆಗೆ ಮಾತು ಕೂಡಿಸುವವರು ‘‘ನಮಸ್ಕಾರಂ’’ ಎಂದು ಡಬ್ ಮಾಡುತ್ತಾರೆ. ಇದರಿಂದಾಗಿ ‘ವಣಕ್ಕಂ’ ಪದದ ಬಳಕೆ ಕಡಿಮೆಯಾಗುತ್ತಾ ಇದೆ ಎಂಬುದು ವೈರಮುತ್ತು ಅವರ ಹೇಳಿಕೆಗೆ ಕಾರಣ.)

ಇನ್ನು ಟೆಲಿವಿಷನ್ನಿನಲ್ಲಿ ಪ್ರಸಾರವಾಗುವ ಸಿನೆಮಾಗಳ ವಿಷಯಕ್ಕೆ ಬಂದರೆ ಈಗ ಕೋಟ್ಯಂತರ ರೂ.ಗಳನ್ನು ಕೊಟ್ಟು ಮೂಲ ಚಿತ್ರ ಕೊಳ್ಳುತ್ತಾ ಇರುವ ವಾಹಿನಿಗಳಿದ್ದಾವೆ. (ಆ ಮಾರುಕಟ್ಟೆಯೂ ಇತ್ತೀಚಿನ ದಿನಗಳಲ್ಲಿ ಭಾರೀ ಹೊಡೆತ ತಿಂದಿದೆ. ಆ ಬಗ್ಗೆ ಇಲ್ಲಿ ಮತ್ತಷ್ಟು ವಿಸ್ತರಿಸುವುದು ಅನಗತ್ಯ.) ಆ ವಾಹಿನಿಗಳವರು ಅತ್ಯಂತ ಕಡಿಮೆ ದುಡ್ಡಿಗೆ ಡಬ್ ಆದ ಚಿತ್ರಗಳನ್ನು ಕೊಂಡು ಪ್ರಸಾರದ ಸಮಯವನ್ನು ತುಂಬಿಸಿಕೊಳ್ಳುತ್ತವೆ. ಅದಕ್ಕಾಗಿ ತೊಡಗಿಸಿದ ಸಣ್ಣ ಹಣವನ್ನು ಮೂಲ ಸಿನೆಮಾದಲ್ಲಿ ಇರುವ ಪರಭಾಷೆಯ ಸ್ಟಾರ್ಗಳ ಹೆಸರಲ್ಲಿ ಎತ್ತುವುದು ಸಹ ಸಾಧ್ಯವಾಗುತ್ತದೆ. ಅಂತಹ ಸಿನೆಮಾಗಳಲ್ಲಿ ಸಣ್ಣ ಲಾಭ ಬಂದರೂ ಸ್ಥಳೀಯ ಸಿನೆಮಾಗಳನ್ನು ಟೆಲಿವಿಷನ್ನಿಗಾಗಿ ಕೊಳ್ಳುವ ಮಾರುಕಟ್ಟೆಯು ಕೇವಲ ಸ್ಟಾರ್ ಸಿನೆಮಾಗಳಿಗೆ ಮಾತ್ರ ಉಳಿದು, ಸಣ್ಣ ಸಿನೆಮಾ ತಯಾರಕರ ಪಾಲಿಗೆ ಇಲ್ಲವಾಗಿ ಹೋಗುತ್ತದೆ. ಆ ಮೂಲಕ ಸಣ್ಣ ಸಿನೆಮಾ ತಯಾರಕರಿಗೆ ದೊರಕುತ್ತಿದ್ದ ಸಣ್ಣ ಉಸಿರಾಟದ ಅವಕಾಶವೂ ಕರಗಿ, ಹೊಸ ಪ್ರಯೋಗ ಎಂಬುದು ನಾಪತ್ತೆಯಾಗುತ್ತದೆ.

ಈ ಮಾತನ್ನಾಡಿದ ಕೂಡಲೇ ‘ನೆರೆಯ ರಾಜ್ಯಗಳಲ್ಲಿ ಹಾಗಾಗಿಲ್ಲವಲ್ಲ. ಅಲ್ಲಿ ಭಾಷೆಗಾಗಲಿ ಸಂಸ್ಕೃತಿಗಾಗಲಿ ತೊಂದರೆಯಾಗಿಲ್ಲವಲ್ಲ’ ಎಂದು ಡಬ್ಬಿಂಗ್ ಪರವಾಗಿರುವವರು ಮರುಪ್ರಶ್ನೆ ಹಾಕುತ್ತಾರೆ. ಇಲ್ಲಿ ನಾವು ಗಮನಿಸಬೇಕಾದ್ದು ಕರ್ನಾಟಕದ ಪರಿಸ್ಥಿತಿಯು ಬೇರೆಲ್ಲಾ ಭಾಷಾವಾರು ಪ್ರಾಂತಕ್ಕಿಂತ ಭಿನ್ನ. ನಮ್ಮ ರಾಜ್ಯದಲ್ಲಿ ಇರುವ 29 ಜಿಲ್ಲೆಗಳಲ್ಲಿ ಕನ್ನಡ ಭಾಷಿಕರು ಬಹುಸಂಖ್ಯಾತರಾಗಿರುವ ಜಿಲ್ಲೆಗಳ ಸಂಖ್ಯೆ 10ನ್ನು ಮೀರುವುದಿಲ್ಲ. ಉಳಿದ ಜಿಲ್ಲೆಗಳಲ್ಲಿ ನೆರೆಯ ಸೋದರ ಭಾಷೆಗಳು ಪ್ರಾಬಲ್ಯ ಹೊಂದಿವೆ. (ಈ ಜನರನ್ನು ಕರ್ನಾಟಕ ಎಂಬ ಒಂದು ಪ್ರಾಂತದೊಳಗಡೆಗೆ ತರುವುದಕ್ಕೆ ಆದ ಏಕೀಕರಣ ಚಳವಳಿಯ ವಿವರಗಳನ್ನು ಗಮನಿಸಿದರೆ ಅಚ್ಚರಿ ಮೂಡಿಸುವ ವಿವರಗಳು ದೊರೆಯುತ್ತವೆ.)

ಹೀಗಾಗಿ ಕರ್ನಾಟಕದಲ್ಲಿ ಡಬ್ಬಿಂಗ್ ಜಾರಿಗೆ ತಂದು ಕನ್ನಡ ಸಿನೆಮಾಗಳನ್ನು ಮಾತ್ರ ಬಿಡುಗಡೆ ಮಾಡುತ್ತೇವೆ ಎಂಬಂತಹ ಪರಿಸ್ಥಿತಿ ತರುವುದಸಾಧ್ಯ. ಹೀಗಾಗಿ ಈ ಡಬ್ಬಿಂಗ್ ಎಂಬ ಆರೋಪಿತ ಕನ್ನಡ ಸಿನೆಮಾಗಳು ಮೂಲ ಸಿನೆಮಾಗಳ ಮಾರುಕಟ್ಟೆಯಲ್ಲಿ ತುಂಬಿಕೊಳ್ಳುತ್ತವೆ. ಇಲ್ಲಿಯೂ ಸ್ಟಾರ್ ಸಿನೆಮಾಗಳು ಉಳಿದುಕೊಂಡು ಸಣ್ಣ ಸಿನೆಮಾಗಳು ಬಹುತೇಕ ನಾಪತ್ತೆಯಾಗುತ್ತವೆ. ಒಟ್ಟಾರೆಯಾಗಿ ಅಪದ್ಧಗಳನ್ನು ಬೇಡುತ್ತಾ ಇರುವ ಕೆಲವು ಕನ್ನಡಿಗ ಸಹೋದರರ ಬೇಡಿಕೆಯ ಹಿನ್ನೆಲೆಯಲ್ಲಿ ನಿನ್ನೆ ಬೆಂಗಳೂರಿನಲ್ಲಿ ಆದಂತಹ ಕಾರ್ಮಿಕ ಚಳವಳಿಯಂತಹವನ್ನು ಸಿನೆಮಾ ಮತ್ತು ಟಿವಿ ಕಾರ್ಮಿಕರು ಸಹ ಮಾಡಬೇಕಾದ ಪರಿಸ್ಥಿತಿ ಬರುತ್ತದೆ.

ಈ ಮಾತಾಡಿದಾಗ ಡಬ್ಬಿಂಗ್ ಬಯಸುವ ಗೆಳೆಯರು ಹೇಳುತ್ತಾರೆ, ‘ಆಟೋ ಬಂತೆಂದು ಜಟಕಾ ಗಾಡಿಯವರು ಮುಷ್ಕರ ಮಾಡಿದಂತಾಯಿತು’ ಎಂದು. ಆ ಮಾತನ್ನು ಒಪ್ಪೋಣ. ಬದಲಾದ ಪರಿಸ್ಥಿತಿಗೆ ಹೊಂದಿಕೊಂಡು ಹೊಸ ಬದುಕು ಕಟ್ಟಿಕೊಳ್ಳುವುದು ಮನುಷ್ಯ ಸಹಜ ಗುಣವೇ? ಆದರೆ ಇದು ಯಾವ ಬೆಲೆ ತೆತ್ತು ಮಾಡಿಕೊಳ್ಳಬೇಕಾದ ಹೊಂದಾಣಿಕೆ ಎಂಬುದು ನೆನಪಲ್ಲಿರಬೇಕು. ಕೆಲವರ ಅಗತ್ಯಕ್ಕಾಗಿ ಸುಮಾರು ಆರು ಸಾವಿರ ಕಾರ್ಮಿಕರು ಇರುವ ಚಲನಚಿತ್ರ ಉದ್ಯಮವನ್ನು ಮತ್ತು ಹದಿನೈದು ಸಾವಿರ ಕಾರ್ಮಿಕರನ್ನೊಳಗೊಂಡ ಟೆಲಿವಿಷನ್ ಉದ್ಯಮವನ್ನು ಮುಳಗಿಸುವುದೇ ಉದ್ದೇಶವಾಗಬಾರದು.

ಕಳೆದ ಮೂರು ದಶಕಗಳಿಂದ ಭಾರತದಲ್ಲಿ ಬಂದಿರುವ ಮುಕ್ತ ಮಾರುಕಟ್ಟೆಯ ವ್ಯವಸ್ಥೆ ಮತ್ತು ಜಾಗತೀಕರಣಗಳು ಅದಾಗಲೇ ಸೋಷಿಯಲ್ ಸೆಕ್ಯುರಿಟಿ ಎಂಬುದನ್ನು ನುಂಗಿಕೊಂಡಿದೆ. ಅದರ ಜೊತೆಗೆ ‘ಡಬ್ಬಿಂಗ್’ನಂತಹದು ಬಂದರೆ ರೈತರ ಆತ್ಮಹತ್ಯೆಯ ಪಟ್ಟಿಗೆ ಸಮಾನಾಂತರವಾಗಿ ದೃಶ್ಯೋದ್ಯಮದ ಕೃಷಿಕರ ಆತ್ಮಹತ್ಯೆಯ ಪಟ್ಟಿಯನ್ನು ಸಹ ಪ್ರಕಟಿಸಬೇಕಾಗುತ್ತದೆ.

ಜೊತೆಯಲ್ಲಿಯೇ ಹೇಳಬೇಕಾದ ಕೆಲವು ವಿವರಗಳು
ಈ ಹಿಂದೆಯೂ ನಾನು ಆಡಿರುವ ಅನೇಕ ಮಾತುಗಳಲ್ಲಿ/ಲೇಖನಗಳಲ್ಲಿ ‘ಡಬ್ಬಿಂಗ್ ಯಾಕೆ ಅಪದ್ಧ’ ಎಂಬುದನ್ನು ತಿಳಿಸಿದ್ದೇನೆ. ಆಸಕ್ತರು ಈ ವಿಷಯ ಕುರಿತು ನಾನು ಬರೆದಿರುವ ಅನೇಕ ಲೇಖನಗಳನ್ನು ನನ್ನ ಬ್ಲಾಗಿನಲ್ಲಿ ಗಮನಿಸಬಹುದು. ಅವುಗಳಲ್ಲಿ ಅತಿ ಮುಖ್ಯವಾದುದು ಡಬ್ಬಿಂಗ್ ಎಂಬುದು ತುಟಿ ಚಲನೆಗೆ ಮಾತು ಹೊಂದಿಸುವ ಆರೋಪಿತ ಭಾಷಾ ಪ್ರಯೋಗ ಎಂಬುದು ಮುಖ್ಯವಾದುದು. ಈ ಪ್ರಯೋಗದಿಂದ ಅದಾಗಲೇ ಕನ್ನಡದ್ದು ಎಂದು ಕಾಣಿಸಿಕೊಳ್ಳುತ್ತಾ ಇರುವ ಬಹುತೇಕ ಜಾಹೀರಾತುಗಳಲ್ಲಿ ಕನ್ನಡ ವಾಕ್ಯ ಕಟ್ಟುವ ಜಾಯಮಾನವು ಪಲ್ಲಟವಾಗಿವೆ.
ಇದಕ್ಕೆ ಉದಾಹರಣೆಯಾಗಿ ‘ಮಮ್ಮೀಕೋ ದೇಖೋ! ಹೆಲ್ತ್ ಕೋ ದೇಖೋ!’ ಎಂಬುದು ‘ಮಮ್ಮಿಗೇ ನೋಡು, ಹೆಲ್ತ್ಗೆ ನೋಡು’ ಎಂದು ಡಬ್ ಆಗಿ ಪ್ರಸಾರವಾಗುತ್ತಾ ಇರುವುದನ್ನು ಗಮನಿಸಬಹುದು. ಈ ಕನ್ನಡ ಎಂದು ಕರೆಸಿಕೊಳ್ಳುವ ವಾಕ್ಯದಲ್ಲಿ ‘ಮಮ್ಮಿಗೆ ನೋಡು’ ಎನ್ನುವಾಗಲೇ ಕನ್ನಡ ವಾಕ್ಯ ರಚನಾ ಜಾಯಮಾನ ನಾಪತ್ತೆಯಾಗಿದೆ. ಇಂತಹ ಉದಾಹರಣೆಯ ಅಡಿಗೆ ನಿತ್ಯ ಪ್ರಸಾರವಾಗುತ್ತಾ ಇರುವ ಅನೇಕ ಜಾಹೀರಾತುಗಳನ್ನು ಗಮನಿಸಬಹುದು. ಈ ವಿಷಯ ತಿಳಿಸಿದ ಕೂಡಲೇ ಕೆಲವು ಡಬ್ಬಿಂಗ್ ಪರ ನಿಂತಿ ರುವವರು, ‘‘ಜಾಹೀರಾತಿನಲ್ಲಿ ಡಬ್ಬಿಂಗ್ ಬಿಟ್ಟು, ಬೇರೆಯದನ್ನು ಯಾಕೆ ತಡೆದಿದ್ದೀರಿ’’ ಎಂದು ಕೇಳುತ್ತಾರೆ.

ಮೊದಲಿಗೆ ಆ ಜನ ಅರಿಯಬೇಕಾದ್ದು ಇಲ್ಲಿ ಯಾವುದನ್ನೂ ಯಾರೂ ತಡೆದಿಲ್ಲ. ಇಲ್ಲಿ ಯಾವುದೇ ನಿಷೇಧಗಳಿಲ್ಲ. ಅ.ನ.ಕೃ. ಮುಂತಾದ ಕನ್ನಡದ ಸಾಹಿತಿಗಳು ನೀಡಿದ ಕರೆಗೆ ಕನ್ನಡ ಸಂಘಟನೆಗಳು ಓಗೊಟ್ಟು 1061ರಿಂದ 1965ರವರೆಗೆ ನಡೆಸಿದ ‘ಡಬ್ಬಿಂಗ್ ವಿರೋಧಿ ಚಳವಳಿ’ ಕಾರಣವಾಗಿ 1965ರಲ್ಲಿ ಸಿನೆಮಾ ಪ್ರದರ್ಶನ ಮಂದಿ ರದ ಮಾಲಕರು ಮೌಖಿಕವಾಗಿ ‘ನಾವು ಡಬ್ ಸಿನೆಮಾಗಳನ್ನು ಪ್ರದರ್ಶಿಸುವುದಿಲ್ಲ’ ಎಂದು ತಿಳಿಸಿದರಷ್ಟೆ. ಇದು ಲಿಖಿತ ಒಪ್ಪಂದವೂ ಅಲ್ಲ. ಕೇವಲ ಮೌಖಿಕ ಒಪ್ಪಂದ.

ಹಾಗಾಗಿ ಮನರಂಜನಾ ಸಿನೆಮಾಗಳು ಡಬ್ ಆಗಿ ಬಾರದಂತೆ ನಮ್ಮಲ್ಲಿ ಒಂದು ಸಾಮಾಜಿಕ ಕಟ್ಟುಪಾಡು ಇದೆಯಷ್ಟೆ. ದೂರದರ್ಶನ ಹಾಗೂ ಖಾಸಗಿ ವಾಹಿನಿಗಳವರು ಸಿನಿಮೋದ್ಯಮದವರ ಜೊತೆಗೆ ಮಾಡಿಕೊಂಡ ಒಪ್ಪಂದದಂತೆ ಜಾಹೀರಾತುಗಳನ್ನು ಡಬ್ ಮಾಡಬಹುದು ಎಂಬಂತೆ ಕಟ್ಟುಪಾಡುಗಳನ್ನು ಸಡಿಲಗೊಳಿಸಲಾಯಿತು. ಇನ್ನೂ ಟೆಲಿವಿಷನ್ನಿನಲ್ಲಿ ಬರುವ ಡಬ್ ಆದ ಜಾಹೀರಾತುಗಳಲ್ಲಿ ಕನ್ನಡವನ್ನು ನಿಯಂತ್ರಿಸುವ ವ್ಯವಸ್ಥೆಯು ಈ ಹಿಂದೆ ದೂರದರ್ಶನ ಎಂಬ ಒಂದೇ ವಾಹಿನಿ ಇದ್ದಾಗ ಜಾರಿಯ ಲ್ಲಿತ್ತು. ಆ ಸಂಸ್ಥೆಯಲ್ಲಿದ್ದ ಅಧಿಕಾರಿಗಳು ಪ್ರತಿ ಜಾಹೀರಾತನ್ನೂ ಗಮನಿಸಿ ಪ್ರಸಾರ ಯೋಗ್ಯವಾದರೆ ಮಾತ್ರ ಬಿಡುತ್ತಾ ಇದ್ದರು. ಖಾಸಗಿ ವಾಹಿನಿಗಳ ಸಂಖ್ಯೆ ಹೆಚ್ಚಾ ದಂತೆ ದೂರದರ್ಶನದ ಪರವಾನಿಗೆಯು ಇಲ್ಲದೆ ಜಾಹೀರಾತುಗಳ ಪ್ರಸಾರ ಆರಂಭ ವಾಯಿತು. ಈ ಖಾಸಗಿ ವಾಹಿನಿಗಳಲ್ಲಿ, ಅದಾಗಲೇ ತಿಳಿಸಿದ ಹಾಗೆ ‘ಕನ್ನಡಿಗರು’ ಎನ್ನುವವರೇ ಅಲ್ಪಸಂಖ್ಯಾತರಾಗಿರುವುದರಿಂದ ಆದಾಯ ಬಂದರೆ ಸಾಕು ಎಂದು ಜಾಹೀರಾತುಗಳ ಪ್ರಸಾರ ಆರಂಭವಾಯಿತು. ಇದರಿಂದಾಗಿ ಜಾಹೀರಾತುಗಳಲ್ಲಿ ಬಳಕೆಯಾಗುವ ಕನ್ನಡದ ಮೇಲೆ ನಿಯಂತ್ರಣ ತಪ್ಪಿತು. ಹೀಗಾಗಿ ಇಂದು ನಾವು ನೋಡುತ್ತಿರುವ ವೈರುಧ್ಯಗಳು ಹಾಗೂ ಅಪದ್ಧಗಳು ಉಳಿದುಕೊಂಡಿವೆ.

ಇಂತಹ ಕೆಲವು ವಿವರಗಳಲ್ಲದೆ ಕೆಲ ಹೊತ್ತಿಗೆ ಮುಂಚೆ ಪ್ರೊ. ಸಿಎನ್‌ಆರ್ ಅವರು ಅತ್ಯಂತ ಅಕಡೆಮಿಕ್ ಆದ ವಿವರಗಳ ಜೊತೆಗೆ ಡಬ್ಬಿಂಗ್ ಯಾಕೆ ಬೇಡ ಎಂಬುದನ್ನು ತಿಳಿಸಿದ್ದಾರೆ ಮತ್ತು ಕೆಲವು ಮಾಹಿತಿ ಪೂರ್ಣ ವಿಷಯಗಳು ಡಬ್ ಆಗಬಹುದು ಎಂದಿದ್ದಾರೆ. ಅವರಾಡಿದ ಬಗೆಯಲ್ಲಿಯೇ ಇಂದು ನಮ್ಮ ನಾಡಿನಲ್ಲಿ ಡಬ್ಬಿಂಗ್ ಎಂಬುದು ಚಾಲ್ತಿಯಲ್ಲಿದೆ. ಮನರಂಜನಾತ್ಮಕವಾದ ಕಥಾನಕಗಳನ್ನು ಉಳಿದು ಸಾಕ್ಷ್ಯ ಚಿತ್ರಗಳು ಮತ್ತು ಇನ್ನಿತರ ಮಾಹಿತಿ ಪೂರ್ಣ ವಿವರಗಳು ಡಬ್ ಆಗಿ ಬರುತ್ತಾ ಇವೆ. ಅವುಗಳನ್ನು ಯಾರೂ ಕಳೆದ ಐವತ್ತು ವರ್ಷಗಳಿಂದ ಬೇಡವೆಂದಿಲ್ಲ. ಆದರೆ ನನಗಿಂತ ಮುಂಚಿತವಾಗಿ ಮಾತಾಡಿದ ಗೆಳೆಯರು ಬಯಸಿದ ಮನರಂಜನೆಗಾಗಿಯೇ ತಯಾರಾದ ಕೃತಿಗಳನ್ನು ಡಬ್ ಮಾಡುವುದು ಯಾವತ್ತಿಗೂ ಅಪಾಯ ಮತ್ತು ಯಾವ ಮನಾಪಲಿ ವ್ಯಾಪಾರಿ ವ್ಯವಸ್ಥೆಯನ್ನು ತಪ್ಪಿಸಲೆಂದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರೂಪಿಸಿದ್ದೇವೋ ಆ ಉದ್ದೇಶವೇ ಸೋಲುತ್ತದೆ.

ಕಾನೂನು ಎಂಬ ಹಳವಂಡ
ಈ ಮಧ್ಯೆ ಕೆಲವು ಕನ್ನಡ ಪ್ರಿಯ ಡಬ್ಬಿಂಗ್ ಪರ ಇರುವ ಗೆಳೆಯರು ಸ್ಪರ್ಧಾತ್ಮಕ ಆಯೋಗಕ್ಕೆ ದೂರು ನೀಡಿ, ಆ ಆಯೋಗವು ಒಂದು ವರದಿಯನ್ನು ನೀಡಿದೆ. ಕೆಲ ಸಂಸ್ಥೆಗಳಿಗೆ ದಂಡ ಹಾಕಿ ಸ್ಪರ್ಧಾತ್ಮಕ ವ್ಯಾಪಾರಕ್ಕೆ ಚ್ಯುತಿ ಉಂಟು ಮಾಡಿದ್ದೀರಿ ಎಂದಿದೆ. ಇದು ವ್ಯಾಪಾರಿ ಧೋರಣೆಯ ಆಯೋಗ ಹೇಳಬೇಕಾದ ಮಾತೇ. ಅದರಲ್ಲಿಯೂ ಮುಕ್ತ ಮಾರುಕಟ್ಟೆ ಒಪ್ಪಂದವನ್ನು ಭಾರತ ಸರಕಾರವು ವಿಶ್ವಬ್ಯಾಂಕ್ ಜೊತೆಗೆ ಮಾಡಿಕೊಂಡ ನಂತರ ಆರಂಭವಾದ ಅದೇ ಧೋರಣೆಯ ಆಯೋಗಕ್ಕೆ ನಮ್ಮ ಸಮಾಜವಾದಿ ನಿಲುವನ್ನು ಅರ್ಥೈಸಿಕೊಳ್ಳುವ ಹೃದಯವಾದರೂ ಎಲ್ಲಿರುತ್ತದೆ ಹೇಳಿ. ಇನ್ನೂ ಆ ಆಯೋಗದಲ್ಲಿರುವ ಸದಸ್ಯರಾದರೂ ಈ ಹಿಂದೆ ಬೃಹತ್ ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಈಗ ಬಹುತೇಕ ವಾಹಿನಿಗಳನ್ನು ನಿಯಂತ್ರಿಸುತ್ತಾ ಇರುವ ಕಂಪೆನಿಗಳಲ್ಲಿ ದುಡಿದು ಬಂದವರು. ಅವರ ಆಲೋಚನಾ ಕ್ರಮಕ್ಕೆ ನಾವು ಡಬ್ಬಿಂಗ್ ಅನ್ನುವುದು ನಮ್ಮ ಸಾಂಸ್ಕೃತಿಕ ಲೋಕದ ಮೇಲೆ ಆಗುವ ಧಾಳಿ ಎಂದು ಹೇಳಿದರೂ ಅದು ವ್ಯಾಪಾರಕ್ಕೆ ಸಂಬಂಧಿಸಿದ ವಿಷಯವಲ್ಲ ಮತ್ತು ಹೈಪಾಥೆಟಿಕಲ್ ಆಲೋಚನೆ ಎಂದು ದೂರ ತಳ್ಳಿಬಿಡುತ್ತಾರೆ.

ಹೀಗಿರುವಾಗ ಒಂದು ಸಾಮಾಜಿಕ ಕಟ್ಟುಪಾಡಿಗೆ ಕಾನೂನಿನ ಬೇಲಿಯನ್ನು ಹಾಕುವುದೆಂದರೆ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಜಾರಿಗೆ ತರಲು ಕರ್ನಾಟಕ ಸರಕಾರ ಕಳೆದ ಮೂರು ವರ್ಷಗಳಿಂದ ಮಾಡುತ್ತಾ ಇರುವ ಪ್ರಯತ್ನದ ಹಾಗೆಯೇ ಆಗುತ್ತದೆ. ಈ ಮಾನಪಲಿ ಮಾರುಕಟ್ಟೆಯ ಶಕ್ತಿಗಳು ನಮ್ಮ ಕನ್ನಡದ ಜನರನ್ನೇ ಒಡೆದು ಎದುರಾಬದುರಾ ನಿಲ್ಲಿಸಿವೆ. ಎರಡೂ ಬಣಗಳೂ ಕನ್ನಡದ ಉಳಿವಿಗಾಗಿ ಎನ್ನುತ್ತಾ ತಮ್ಮ ತಮ್ಮ ವಾದ ಮಂಡಿಸುತ್ತಿವೆ. ಇದರಿಂದ ನಾವು ನಾವು ಕಿತ್ತಾಡುತ್ತಾ ಇದ್ದೇವೆ. ನಮ್ಮಲ್ಲಿನ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಾ ಇವೆ. ಒಂದು ಬಣ ಮತ್ತೊಂದನ್ನು ವೈರಿ ಎಂಬಂತೆ ನೋಡುತ್ತಾ ಇದೆ. ಈ ಒಡಕು ಸೃಷ್ಟಿಸಿದ ಶಕ್ತಿಗಳು ಮಾತ್ರ ಈ ಜಗಳದಲ್ಲಿ ತಮಗೆ ಸಿಗಬಹುದಾದ ಲಾಭವೇನು ಎಂದು ನೋಡುತ್ತಾ ಇವೆ.

ಇಂತಹ ಸಂದರ್ಭದಲ್ಲಿ ಡಬ್ಬಿಂಗ್ ಪರ ಅಥವಾ ವಿರುದ್ಧದ ನಿಲುವಿಗೆ ಕಾನೂನಿನ ಮೂಲಕ ಬೇಲಿ ಸೃಷ್ಟಿಸುವುದು ಸಹ ಬೃಹತ್ ಹಳವಂಡವೇ ಆಗಿದೆ. ಹೀಗಾಗಿ ನಾವು ಈ ಸಮಸ್ಯೆಗೆ ಕಾನೂನು ಏನು ಹೇಳುತ್ತದೆ ಎಂದು ನೋಡುವುದಕ್ಕಿಂತ 2001ರ ವಿಶ್ವಸಂಸ್ಥೆಯ ಪ್ರಾದೇಶಿಕ ಭಾಷಾ ರಕ್ಷಣೆಯ ಘೋಷಣೆಯ ಅಡಿಯಲ್ಲಿ ಯೋಚಿಸಬೇಕಾಗುತ್ತದೆ. (ಡಬ್ಬಿಂಗ್ ಪರವಾಗಿ ನಿಂತ ಬಣದವರು 1996ರ ವಿಶ್ವಸಂಸ್ಥೆಯ ಯೂನಿವರ್ಸಲ್ ಲ್ಯಾಂಗ್ವೇಜ್ ಡಿಕ್ಲರೇಷನ್ ಹಿಡಿದು ಮಾತಾಡುತ್ತಾ ಇದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.) 2001ರ ಪ್ರಾದೇಶಿಕ ಭಾಷಾ ಘೋಷಣೆಯು ತೀರಾ ಸ್ಪಷ್ಟ ಮಾತುಗಳಲ್ಲಿ ‘‘ಡಬ್ಬಿಂಗ್’’ ತಂತ್ರಜ್ಞಾನಕ್ಕೆ ಬದಲಾಗಿ ಅನುವಾದ, ಸಬ್ ಟೈಟಲಿಂಗ್ ತರಹದ ಇತರ ತಂತ್ರಜ್ಞಾನ ಬಳಸಬೇಕೆಂದು ತಿಳಿಸುತ್ತದೆ. ಈ ವಾದಕ್ಕೆ ಅದು ಫ್ರಾನ್ಸ್ ದೇಶದ ತಜ್ಞರ ಅನುಭವಾಧಾರಿತ ವಿಶ್ಲೇಷಣೆಯನ್ನು ಬಳಸಿಕೊಳ್ಳುತ್ತದೆ. ಈ ವಾದದ ಅಡಿಯಲ್ಲಿ ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿಕೊಂಡು ಸಮಸ್ಯೆಗೆ ಪರಿಹಾರ ಹುಡುಕಬೇಕಾಗಿದೆ. ಈ ವಿಷಯವಾಗಿ ಮತ್ತಷ್ಟು ಮಾತಾಡಬಹುದು. ಆದರೆ ಸಮಯದ ದೃಷ್ಟಿಯಿಂದ ಅದು ಸಾಧುವಲ್ಲ. ನಿಮ್ಮಿಂದಿಗಿನ ಸಂವಾದದಲ್ಲಿ ನನ್ನ ಮಾತನ್ನು ಮತ್ತಷ್ಟು ವಿಸ್ತರಿಸುವ ಅವಕಾಶ ಸಿಗಬಹುದೆಂದು ಭಾವಿಸಿ, ನನ್ನನ್ನು ಇಲ್ಲಿಗೆ ಬರಮಾಡಿಕೊಂಡ ಗುರುಗಳಿಗೆ ನಮಿಸಿ, ಇವೆಲ್ಲಾ ಹೋರಾಟ? ಸಂಕಟಗಳ ನಡುವೆ ಕನ್ನಡಕ್ಕೆ ಜಯವಾಗಲಿ, ಕನ್ನಡಿಗರಿಗೆ ಹಿತವಾಗಲಿ. ದೇಶ ಭಕ್ತಿಗಿಂತ ನನಗೆ ಭಾಷಾ ಭಕ್ತಿಯೇ ದೊಡ್ಡದು.

Writer - ಬಿ.ಸುರೇಶ

contributor

Editor - ಬಿ.ಸುರೇಶ

contributor

Similar News