×
Ad

ಕೇಜ್ರಿ ಕಾಲೆಳೆಯಲು ಹೋಗಿ ಮಂಗಳಾರತಿ ಮಾಡಿಸಿಕೊಂಡ ಮೋದಿ ಆಪ್ತ, ನೀತಿ ಆಯೋಗದ ಸಿ ಇ ಒ

Update: 2016-05-02 10:52 IST

ಹೊಸದಿಲ್ಲಿ, ಮೇ 2: ದೆಹಲಿ ಮುಖ್ಯಮಂತ್ರಿಯವರ ಅವಹೇಳನಗೈದು ಮಾಡಲಾದ ಟ್ವೀಟ್ ಒಂದನ್ನು ಶೇರ್ ಮಾಡಿ ಅದು ‘ಇಂಟರೆಸ್ಟಿಂಗ್’ ಆಗಿದೆ ಎಂದು ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಹಾಗೂ ನೀತಿ ಆಯೋಗದ ಸಿ ಇ ಒ ಅಮಿತಾಭ್ ಕಾಂತ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳನ್ನೆದುರಿಸಿದ್ದಾರೆ.

ಇಂತಹ ಒಂದು ಟ್ವೀಟನ್ನು ಬೆಂಬಲಿಸಿ ಕೇಜ್ರಿವಾಲ್ ಅವರ ರಾಜಕೀಯ ಎದುರಾಳಿಗಳು ಟ್ವೀಟ್ ಮಾಡಿದ್ದರೆ ಅಷ್ಟೊಂದು ಸುದ್ದಿಯಾಗುತ್ತಿರಲಿಲ್ಲವೇನೋ. ಆದರೆ ನೀತಿ ಆಯೋಗದಂತಹ ಸಂಸ್ಥೆಯಲ್ಲಿ ಜವಾಬ್ದಾರಿಯುತ ಹುದ್ದೆ ಹೊಂದಿದ ವ್ಯಕ್ತಿಯೊಬ್ಬರಿಂದ ಬಂದ ಟ್ವೀಟ್ ಸುತರಾಂ ಹಲವರಿಗೆ ಇಷ್ಟವಾಗಿಲ್ಲ.

ಕಾಂತ್ ಅವರು ಶೇರ್ ಮಾಡಿದ ಟ್ವೀಟ್ ಮೂಲತಃ ಅಲದೀನ್ ಇನ್ ಎಂಬ ವ್ಯಕ್ತಿಯಿಂದ ಮಾಡಲ್ಪಟ್ಟಿತ್ತು. ಅದರ ಕನ್ನಡ ಸಾರಾಂಶ ಹೀಗಿದೆ -‘‘ಅರವಿಂದ್ ಕೇಜ್ರಿವಾಲ್ ಅವರಿಂದ ಜಾರಿಗೊಳಿಸಲ್ಪಟ್ಟ ಸಮ ಬೆಸ ಯೋಜನೆಯು ಅರವಿಂದ್ ಕೇಜ್ರಿವಾಲ್ ನಡೆಸಿದ ಸಮೀಕ್ಷೆಯೊಂದು ಯಶಸ್ವಿಯಾಗಿದೆ ಎಂದು ಬಣ್ಣಿಸಿದೆಯೆಂದು ಅರವಿಂದ್ ಕೇಜ್ರಿವಾಲ್ ಕಂಡುಕೊಂಡಿದ್ದಾರೆ ಹಾಗೂ ಈ ಬಗ್ಗೆ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಈ ಬಗ್ಗೆ ಅರವಿಂದ್ ಕೇಜ್ರಿವಾಲ್ ಅವರಿಗೆ ಧನ್ಯವಾದ ಹೇಳಿದ್ದು ಈ ಯೋಜನೆಯನ್ನು ಖಾಯಂಗೊಳಿಸುವಂತೆ ಅರವಿಂದ್ ಕೇಜ್ರಿವಾಲ್ ಅವರನ್ನು ವಿನಂತಿಸಿದ್ದಾರೆ.’’ ಈ ಪೋಸ್ಟ್ ‘ಇಂಡಿಯ ಅಗೇನನ್ಸ್ಟ್ ಪ್ರೆಸ್ಟಿಟ್ಯೂಟ್ಸ್’ ಎಂದೂ ಹೇಳಿದೆ.

ಇದನ್ನು ಶೇರ್ ಮಾಡಿ ಅಮಿತಾಭ್ ಕಾಂತ್ ‘ಇಂಟರೆಸ್ಟಿಂಗ್ !’ ಎಂದು ಪ್ರತಿಕ್ರಿಯಿಸಿದ್ದಾರೆ.

ಇದು ಸಾಮಾಜಿಕ ಜಾಲತಾಣ ಪ್ರಿಯರು, ಕೆಲವು ಪತ್ರಕರ್ತರು ಹಾಗೂ ಎಎಪಿ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿದ್ದು. ಅವರು ಕಾಂತ್ ಅವರನ್ನು ಟೀಕಿಸಿ ಸರಕಾರಿ ಅಧಿಕಾರಿಗಳಿಗಿರುವ ನೀತಿ ಸಂಹಿತೆಯನ್ನು ಅವರಿಗೆ ನೆನಪಿಸಿದ್ದಾರೆ. ಒಬ್ಬ ಹಿರಿಯ ಅಧಿಕಾರಿಯಾಗಿ ಕಾಂತ್ ಅವರು ‘ಪ್ರೆಸ್ಟಿಟ್ಯೂಟ್’ ಪದ ಬಳಕೆಯನ್ನು ಒಪ್ಪುತ್ತಾರೆಯೇ ಎಂದು ಹಲವರು ಪ್ರಶ್ನಿಸಿದ್ದಾರೆ.

ಕಾಂತ್ ಅವರಂತೂ ತಮ್ಮ ಟ್ವೀಟನ್ನು ಸಮರ್ಥಿಸಿಕೊಂಡಿದ್ದು ತಾನೇನೂ ಜೀತದಾಳಲ್ಲವೆಂದೂ ತನಗೆ ಕೂಡ ಜೀವನದಲ್ಲಿ ಕೆಲವೊಂದು ವಿಷಯಗಳು ಆಸಕ್ತಿದಾಯಕವಾಗುತ್ತವೆ ಎಂದು ಹೇಳಿಕೊಂಡಿದ್ದಾರೆ.

ಆದರೆ ಅವರಂತಹ ಪ್ರಮುಖ ಹುದ್ದೆ ಹೊಂದಿದವರು ಮುಖ್ಯಮಂತ್ರಿಯೊಬ್ಬರನ್ನು ಅವಹೇಳನಗೈದ ಟ್ವೀಟೊಂದು ಆಸಕ್ತಿದಾಯಕವಾಗಿದೆಯೆಂದರೆ ಅದು ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News