ಕಾಡ್ಗಿಚ್ಚು: ಉತ್ತರಾಖಂಡ, ಹಿ.ಪ್ರದೇಶಗಳಿಗೆ ಎನ್‌ಜಿಟಿಯ ಶೋಕಾಸ್ ನೋಟಿಸ್

Update: 2016-05-03 18:15 GMT

ಹೊಸದಿಲ್ಲಿ,ಮೇ 3: ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಉಂಟಾಗಿರುವ ಕಾಡ್ಗಿಚ್ಚಿನ ಬಗ್ಗೆ ಮಂಗಳವಾರ ತೀವ್ರ ಕಳವಳ ವ್ಯಕ್ತಪಡಿಸಿದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ವು, ಪ್ರತಿಯೊಬ್ಬರೂ ಈ ಬಗ್ಗೆ ಉದಾಸೀನ ಪ್ರದರ್ಶಿಸುತ್ತಿರುವುದು ತನಗೆ ಆಘಾತವನ್ನುಂಟು ಮಾಡಿದೆ ಎಂದು ಹೇಳಿದೆ. ಉಭಯ ರಾಜ್ಯಗಳಿಗೆ ಶೋಕಾಸ್ ನೋಟಿಸ್‌ಗಳನ್ನು ಹೊರಡಿಸಿದ ಅದು, ಮುಂದಿನ ವಿಚಾರಣಾ ದಿನಾಂಕವಾದ ಮೇ 10ರಂದು ಈ ಸಂಬಂಧ ಅಫಿದಾವಿತ್‌ಗಳನ್ನು ಸಲ್ಲಿಸುವಂತೆ ನಿರ್ದೇಶ ನೀಡಿದೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಏನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎನ್‌ಜಿಟಿ ಅಧ್ಯಕ್ಷ ನ್ಯಾ.ಸ್ವತಂತ್ರ ಕುಮಾರ್ ನೇತೃತ್ವದ ಪೀಠವು ಪರಿಸರ ಮತ್ತು ಅರಣ್ಯ ಸಚಿವಾಲಯವನ್ನು ಪ್ರಶ್ನಿಸಿತು.
ಇದಕ್ಕೆ ಉತ್ತರಿಸಿದ ಸಚಿವಾಲಯದ ಪರ ವಕೀಲರು, ಸಂಬಂಧಿತ ಅಧಿಕಾರಿಗಳ ಪೂರ್ಣ ತಂಡವೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ, ಕಾಡ್ಗಿಚ್ಚು ನಿಯಂತ್ರಣ ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳನ್ನೂ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಹಂತದಲ್ಲಿ ಕಾಡ್ಗಿಚ್ಚು ತಡೆಯಲು ನಿಮ್ಮ ಸನ್ನದ್ಧತೆ ಏನು ಎಂದು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ಸರಕಾರಗಳನ್ನು ಪ್ರಶ್ನಿಸಿದ ಪೀಠವು,ಈ ಬಗ್ಗೆ ಈ ರಾಜ್ಯಗಳಿಂದ ಸೂಚನೆಗಳನ್ನು ಪಡೆದುಕೊಳ್ಳುವಂತೆ ಅವುಗಳ ಪರ ವಕೀಲರಿಗೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News