ನೀಟ್: ತಡೆಯಾಜ್ಞೆ ನೀಡಲು ಸುಪ್ರೀಂ ನಕಾರ

Update: 2016-05-03 18:24 GMT

ಹೊಸದಿಲ್ಲಿ, ಮೇ 3: ದೇಶಾದ್ಯಂತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್‌ಗಳಿಗೆ ಒಂದೇ ಪ್ರವೇಶ ಪರೀಕ್ಷೆಯನ್ನು ನಡೆಸುವ ತನ್ನ ಆದೇಶದಲ್ಲಿ ಯಾವುದೇ ಬದಲಾವಣೆ ಯನ್ನು ಮಾಡಲು ಮಂಗಳವಾರ ಸರ್ವೋಚ್ಚ ನ್ಯಾಯಾಲಯವು ನಿರಾ ಕರಿಸಿತು. ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್) ತನ್ನ ಹಿಂದಿನ ಆದೇಶದಂತೆಯೇ ನಡೆಯಲಿದೆ ಎಂದು ಅದು ಸ್ಪಷ್ಟಪಡಿಸಿತು.

ಮೊದಲ ಹಂತದ ನೀಟ್ ಪರೀಕ್ಷೆಯು ರವಿವಾರ ನಡೆದಿದ್ದು, ಸುಮಾರು 6.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಎರಡನೆ ಹಂತದ ಪರೀಕ್ಷೆಯು ಜುಲೈ 24 ರಂದು ನಡೆಯಲಿದೆ.

ನೀಟ್ ವಿರುದ್ಧ ಹಲವಾರು ರಾಜ್ಯಗಳು ಮತ್ತು ಖಾಸಗಿ ಕಾಲೇಜುಗಳು ಮೇಲ್ಮನವಿ ಸಲ್ಲಿಸಿದ್ದವು. ಇಂಗಿಷ್‌ನಲ್ಲಿ ಮಾತ್ರ ಈ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು,ಇದರಿಂದ ಇಂಗ್ಲಿಷ್ ಭಾಷೆಯಲ್ಲಿ ಪ್ರವೀಣರಲ್ಲದ ವಿದ್ಯಾರ್ಥಿಗಳು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಕೆಲವರು ನ್ಯಾಯಾಲಯದಲ್ಲಿ ವಾದಿಸಿದರು. ಅವರ ವಾದಗಳನ್ನು ನ್ಯಾಯಾಲಯವು ಆಲಿಸಿತಾದರೂ ಪರೀಕ್ಷೆಯನ್ನು ರದ್ದುಗೊಳಿಸಲು ನಿರಾಕರಿಸಿತು. ಮೇ 1ರಂದು ಪರೀಕ್ಷೆ ಸುಗಮವಾಗಿ ನಡೆದಿದೆ ಎಂದು ಬೆಟ್ಟು ಮಾಡಿದ ಅದು, ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ನಿಗದಿಗೊಳಿಸಿತು.

ಮೇ 1ರ ಪರೀಕ್ಷೆಗಾಗಿ ಹೆಸರುಗಳನ್ನು ನೋಂದಾಯಿಸದಿದ್ದ ವಿದ್ಯಾರ್ಥಿಗಳು ಜು.24ರಂದು ನಡೆಯಲಿರುವ ಎರಡನೆ ಹಂತದ ನೀಟ್ ಪರೀಕ್ಷೆಗೆ ಹಾಜರಾಗಬಹುದು. ಎರಡೂ ಪರೀಕ್ಷೆಗಳ ಫಲಿತಾಂಶಗಳು ಆಗಸ್ಟ್ 17ರಂದು ಪ್ರಕಟಗೊಳ್ಳಲಿದ್ದು, ಸೆಪ್ಟಂಬರ್ 30ರೊಳಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News