×
Ad

ಆಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ: ರಾಹುಲ್ ಸಹಾಯಕನ ಮೇಲೆ ಇ.ಡಿ. ಕಣ್ಣು

Update: 2016-05-04 23:53 IST

ಎಂಜಿಎಫ್ ಮುಖ್ಯಸ್ಥ ಶ್ರವಣ್ ಗುಪ್ತಾಗೆ ಸಮನ್ಸ್

ಹೊಸದಿಲ್ಲಿ, ಮೇ 4: ರೂ.3,600 ಕೋಟಿ ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಸಹಾಯಕ ಕನಿಷ್ಕ ಸಿಂಗ್‌ರ ಸಂಬಂಧದ ಕುರಿತು ತನಿಖೆಗೆ ಚಾಲನೆ ನೀಡಿರುವ ಜಾರಿ ನಿರ್ದೇಶನಾಲಯವು ಎಮಾರ್ ಎಂಜಿಎಫ್‌ನ ಜಂಟಿ ಉದ್ಯಮ ಪ್ರಾಯೋಜಕ ಶ್ರವಣ್ ಗುಪ್ತಾಗೆ ಮೂರು ದಿನಗಳೊಳಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.

ಆಗಸ್ಟಾ ವೆಸ್ಟ್‌ಲ್ಯಾಂಡ್‌ನ ಇಬ್ಬರು ಮಧ್ಯವರ್ತಿಗಳಾದ ಗಿಡೊ ಹಶ್ಕ್ ಹಾಗೂ ಗೌತಂ ಖೇತಾನ್ ಯಾವ ಪರಿಸ್ಥಿತಿಯಲ್ಲಿ 2009ರಲ್ಲಿ ಎಮಾರ್‌ಎಂಜಿಎಫ್‌ನ ನಿರ್ದೇಶಕರ ಮಂಡಳಿಯಲ್ಲಿದ್ದರೆಂಬುದನ್ನು ವಿವರಿಸಲು ತನಿಖೆಯಲ್ಲಿ ಸೇರಿಕೊಳ್ಳುವಂತೆ ಗುಪ್ತಾಗೆ ಸೂಚಿಸಲಾಗಿದೆಯೆಂದು ಜಾರಿ ನಿರ್ದೇಶನಾಲಯವು (ಇ.ಡಿ) ಟಿಒಐಗೆ ತಿಳಿಸಿದೆ.

ಸ್ಥಿರಾಸ್ತಿ ದೈತ್ಯನೊಂದಿಗೆ ಕನಿಷ್ಕ ಸಿಂಗ್‌ರಿಗಿರುವ ಸಂಬಂಧದ ಬಗ್ಗೆ ತನಿಖೆ ನಡೆಸುವಂತೆ ಕೋರಿ, ಸಿಬಿಐ ಹಾಗೂ ಇ.ಡಿಗೆ ಬಿಜೆಪಿ ಸಂಸದ ಕಿರೀಟ್ ಸೋಮಯ್ಯ ನೀಡಿದ್ದ ದೂರೊಂದರ ಹಣ ಚೆಲುವೆ ತಡೆ ತನಿಖೆ ಸಂಸ್ಥೆಯು ಕ್ರಮ ಕೈಗೊಂಡಿದೆ.

ಹಶ್ಕ್ ಹಾಗೂ ಖೇತಾನ್ 2009ರಲ್ಲಿ ಅತ್ಯಲ್ಪ ಕಾಲ ಎಮಾರ್ ಎಂಜಿಎಫ್‌ನ ನಿರ್ದೇಶಕರ ಮಂಡಳಿಯಲ್ಲಿದ್ದರು. ಈ ಕಿರು ಅವಧಿಯಲ್ಲಿ ಅವರು ವಹಿಸಿದ್ದ ಪಾತ್ರದ ಕುರಿತು ಶ್ರವಣ್ ಗುಪ್ತಾರಿಂದ ತಾವು ತಿಳಿಯ ಬಯಸಿದ್ದೇವೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವ್ಯವಹಾರದಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿರುವ ಐಎಎಫ್‌ನ ಮಾಜಿ ದಂಡನಾಯಕ ಎಸ್.ಪಿ.ತ್ಯಾಗಿ ಸಹ ಗುರುವಾರ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೊಳಗಾಗಲಿದ್ದಾರೆ.

ಮಂಗಳವಾರ ಸಿಬಿಐ ನಡೆಸಿದ್ದ ವಿಚಾರಣೆಯಲ್ಲಿ ತ್ಯಾಗಿ, 2005ರ ಫೆ.15ರಂದು ಫಿನ್‌ಮೆಕಾನಿಕಾದ ಸಿಒಒ ಜಾರ್ಜಿಯೊ ಝಾಪಾರನ್ನು ಭೇಟಿಯಾಗಿದ್ದುದನ್ನು ಒಪ್ಪಿಕೊಂಡಿದ್ದಾರೆನ್ನಲಾಗಿದೆ. ಸೋಮವಾರ ವಿಚಾರಣೆಯ ವೇಳೆ ತ್ಯಾಗಿ ನುಣಚಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಡೈರಿ ನಮೂದು ಹಾಗೂ ಸಂದರ್ಶಕರ ದಾಖಲೆ ಸಹಿತ ಹಲವು ದಾಖಲೆಗಳನ್ನು ತೋರಿಸಿದ ಬಳಿಕ, ಅವರು, ಫಿನ್‌ಮೆಕಾನಿಕಾದ ಅಧಿಕಾರಿಯನ್ನು ಭೇಟಿಯಾದ್ದುದನ್ನು ಒಪ್ಪಿಕೊಂಡಿರೆಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News