ಮುಸ್ಲಿಮರಿಗೆ ನಿಷೇಧ : ಪುನರುಚ್ಛರಿಸಿದ ಟ್ರಂಪ್

Update: 2016-05-05 18:25 GMT

ವಾಶಿಂಗ್ಟನ್, ಮೇ 5: ಮುಸ್ಲಿಮರ ಅಮೆರಿಕ ಪ್ರವೇಶಕ್ಕೆ ನಿಷೇಧ ಹೇರುವ ಹಾಗೂ ಅಕ್ರಮ ವಲಸಿಗರನ್ನು ದೇಶದಿಂದ ಗಡಿಪಾರು ಮಾಡುವ ತನ್ನ ನಿಲುವುಗಳನ್ನು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.

 

ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾದ ಒಂದು ದಿನದ ತರುವಾಯ ತನ್ನ ಹಿಂದಿನ ಹೇಳಿಕೆಯಿಂದ ಹಿಂದೆ ಸರಿಯಲು ಟ್ರಂಪ್ ನಿರಾಕರಿಸಿದ್ದಾರೆ.
ಸಿಎನ್‌ಎನ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್, ತಾನು ಅಧ್ಯಕ್ಷನಾಗಿ ಆಯ್ಕೆಯಾದಲ್ಲಿ ಮುಸ್ಲಿಂ ದೇಶಗಳ ಜೊತೆಯಲ್ಲಿ ಉಗ್ರವಾದದ ವಿರುದ್ಧ ಹೋರಾಡುವುದಾಗಿ ಹೇಳಿದರು.
 
ಎಂಎಸ್‌ಎನ್‌ಬಿಸಿಗೆ ನೀಡಿದ ಇನ್ನೊಂದು ಸಂದರ್ಶನದಲ್ಲಿ, ‘‘ನಾನು ಸರಿಯಾದುದನ್ನೇ ಮಾಡುತ್ತಿದ್ದೇನೆ. ಅವರು ಮುಸ್ಲಿಮರು ಅಥವಾ ಬೇರ್ಯಾರೇ ಆಗಿರಲಿ, ನಾನು ಸರಿಯಾದುದನ್ನೇ ಮಾಡಬೇಕಿದೆ. ನಾವು ಜಾಗರೂಕತೆಯಿಂದಿರಬೇಕಿದೆ. ನಮ್ಮ ದೇಶಕ್ಕೆ ಬರಲು ಸಾವಿರಾರು ಮಂದಿಗೆ ಅನುಮತಿ ನೀಡುತ್ತಿದ್ದೇವೆ. ಆದರೆ, ಅವರ್ಯಾರೆಂದು ಯಾರಿಗೂ ಗೊತ್ತಿಲ್ಲ. ಹಲವಾರು ಪ್ರಕರಣಗಳಲ್ಲಿ ಅವರಲ್ಲಿ ಸರಿಯಾದ ದಾಖಲೆಗಳೇ ಇರುವುದಿಲ್ಲ’’ ಎಂದು ಟ್ರಂಪ್ ಹೇಳಿದರು.
ಅವರ ಹೇಳಿಕೆಗೆ ತಿರುಗೇಟು ನೀಡಿರುವ ಹಿಲರಿ ಕ್ಲಿಂನ್ ಬಣ, ಇಂತಹ ವಿಭಜನಾತ್ಮಕ ನೀತಿಯನ್ನು ಸಹಿಸಲು ಸಾಧ್ಯವಿಲ್ಲವೆಂದಿದೆ.
 ‘‘ಅವರ ಆಡಳಿತದ ಅವಧಿಯಲ್ಲಿ ಯಾವ ರೀತಿಯ ಅಮೆರಿಕವನ್ನು ನಾವು ನಿರೀಕ್ಷಿಸಬಹುದೆಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಈ ನೀತಿಯಲ್ಲಿ ಲ್ಯಾಟಿನೋಗಳು, ಮುಸ್ಲಿಮರು ಮತ್ತಿತರ ಸಮುದಾಯದವರು ಅಸುರಕ್ಷತೆಯ ವಾತಾವರಣದಲ್ಲಿ ಬದುಕಬೇಕಾಗುತ್ತದೆ’’ ಎಂದು ಲ್ಯಾಟಿನೋ ಓಟ್ ರೀಚ್‌ನ ರಾಷ್ಟ್ರೀಯ ನಿರ್ದೇಶಕಿ ಲೊರೆಲ್ಲಾ ಪ್ರೇಲಿ ಹೇಳಿದ್ದಾರೆ.

ಅಮೆರಿಕಕ್ಕೆ ಗೌರವ ಸಿಗುತ್ತಿಲ್ಲ! ದುಃಖಿಸಿದ ಟ್ರಂಪ್


ಅಮೆರಿಕ ಜಗತ್ತಿಗೆ ಪೊಲೀಸ್ ಆಗಿದೆ ಹಾಗೂ ಇತರ ದೇಶಗಳನ್ನು ‘‘ರಕ್ಷಿಸುತ್ತದೆ’’, ಆದರೆ ಅದಕ್ಕೆ ಸಿಗಬೇಕಾದ ಗೌರವ ಸಿಗುತ್ತಿಲ್ಲ ಹಾಗೂ ಅದನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬುದಾಗಿ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ದುಃಖಿಸಿದ್ದಾರೆ. ಇತರ ದೇಶಗಳು ಅಮೆರಿಕಕ್ಕೆ ಗೌರವ ಕೊಡಬೇಕು ಹಾಗೂ ಅದನ್ನು ಚೆನ್ನಾಗಿ ನಡೆಸಿಕೊಳ್ಳಬೇಕು ಎಂದು ಟ್ರಂಪ್ ಮನವಿ ಮಾಡಿಕೊಂಡರು. ಅದೇ ವೇಳೆ, ಅಮೆರಿಕದಿಂದ ಪ್ರಯೋಜನ ಪಡೆದುಕೊಳ್ಳಲು ತಾನು ಇತರ ದೇಶಗಳಿಗೆ ಬಿಡುವುದಿಲ್ಲ ಎಂಬುದಾಗಿ ಧಮ್ಕಿಯನ್ನೂ ಹಾಕಿದರು!
ಬುಧವಾರ ಇಂಡಿಯಾನ ಪ್ರೈಮರಿಯಲ್ಲಿ ವಿಜಯಿಯಾದ ಬಳಿಕ ವಿಜಯೋತ್ಸವ ಭಾಷಣದಲ್ಲಿ ಅವರು ಮಾತನಾಡುತ್ತಿದ್ದರು.


ಉದ್ಯೋಗಗಳನ್ನು ವಿದೇಶಗಳಿಗೆ ನೀಡಿದರೆ ಗಂಭೀರ ಪರಿಣಾಮ: ಕಂಪೆನಿಗಳಿಗೆಟ್ರಂಪ್ ಎಚ್ಚರಿಕೆ
ತಮ್ಮ ಕಾರ್ಯನಿರ್ವಹಣೆಯನ್ನು ವಿದೇಶಗಳಿಗೆ ವರ್ಗಾಯಿಸಿದರೆ ‘‘ಅತ್ಯಂತ ಗಂಭೀರ ಪರಿಣಾಮಗಳನ್ನು’’ ಎದುರಿಸಬೇಕಾಗುತ್ತದೆ ಎಂದು ಡೊನಾಲ್ಡ್ ಟ್ರಂಪ್ ಅಮೆರಿಕನ್ ಕಂಪೆನಿಗಳಿಗೆ ಬುಧವಾರ ಎಚ್ಚರಿಕೆ ನೀಡಿದ್ದಾರೆ.

‘‘ನಾವು ನಮ್ಮ ಉದ್ಯೋಗಗಳನ್ನು ಮರಳಿ ತರುತ್ತೇವೆ ಹಾಗೂ ಅದನ್ನು ಉಳಿಸಿಕೊಳ್ಳುತ್ತೇವೆ. ಕಂಪೆನಿಗಳು ವಿದೇಶಗಳಿಗೆ ಹೋಗಲು ನಾವು ಅವಕಾಶ ನೀಡುವುದಿಲ್ಲ’’ ಎಂದು ಇಂಡಿಯಾನದಲ್ಲಿ ನಡೆದ ಪ್ರೈಮರಿ ಚುನಾವಣೆಯನ್ನು ಗೆದ್ದ ಬಳಿಕ ಮಾತನಾಡಿದ ಟ್ರಂಪ್ ಹೇಳಿದರು.

ಅಧ್ಯಕ್ಷೀಯ ಸ್ಪರ್ಧೆಯಿಂದ ಹಿಂದೆ ಸರಿದ ಕ್ಯಾಸಿಚ್ ಇನ್ನು ಟ್ರಂಪ್ ಏಕೈಕ ರಿಪಬ್ಲಿಕನ್ ಅಭ್ಯರ್ಥಿ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸುವ ತನ್ನ ಅಭಿಯಾನವನ್ನು ನಿಲ್ಲಿಸಿದ್ದೇನೆ ಎಂದು ಓಹಿಯೊ ಗವರ್ನರ್ ಜಾನ್ ಕ್ಯಾಸಿಚ್ ಬುಧವಾರ ಘೋಷಿಸಿದ್ದಾರೆ.
ಹಾಗಾಗಿ, ಈಗ ರಿಪಬ್ಲಿಕನ್ ಕಣದಲ್ಲಿ ಡೊನಾಲ್ಡ್ ಟ್ರಂಪ್ ಮಾತ್ರ ಉಳಿದಿದ್ದು, ನವೆಂಬರ್‌ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.
‘‘ನನ್ನ ಚುನಾವಣಾ ಅಭಿಯಾನವನ್ನು ಇಂದು ನಿಲ್ಲಿಸಿದ್ದೇನೆ. ನನ್ನ ಮುಂದಿನ ದಾರಿಯನ್ನು ದೇವರು ತೋರಿಸುತ್ತಾನೆ ಎಂಬ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ’’ ಎಂದು ಓಹಿಯೊದಲ್ಲಿ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಕ್ಯಾಸಿಚ್ ಹೇಳಿದರು.
ಪ್ರೈಮರಿ ಚುನಾವಣೆಯಲ್ಲಿ ಅವರಿಗೆ ಸಾಕಷ್ಟು ಬೆಂಬಲ ಸಿಕ್ಕಿಲ್ಲ. ಇನ್ನೋರ್ವ ಅಭ್ಯರ್ಥಿ ಟೆಡ್ ಕ್ರೂಝ್ ಇಂಡಿಯಾನ ಪ್ರೈಮರಿಯಲ್ಲಿ ಸೋಲನುಭವಿಸಿದ ಬಳಿಕ ಮಂಗಳವಾರವೇ ಕಣದಿಂದ ನಿವೃತ್ತಿ ಘೋಷಿಸಿದ್ದರು.


ಟ್ರಂಪ್ ಅಪಾಯಕಾರಿ ಸಡಿಲ ಫಿರಂಗಿ
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್‌ರನ್ನು ತರಾಟೆಗೆ ತೆಗೆದುಕೊಂಡಿರುವ ಡೆಮಾಕ್ರಟಿಕ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಹಿಲರಿ ಕ್ಲಿಂಟನ್, ವಿಶ್ವಾಸಾರ್ಹತೆ ಹೊಂದಿರದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಅಮೆರಿಕ ಅಪಾಯವನ್ನು ಆಹ್ವಾನಿಸಿಕೊಳ್ಳುವುದು ಸಾಧ್ಯವಿಲ್ಲ ಎಂದಿದ್ದಾರೆ. ‘‘ಅವರೊಬ್ಬ ಸಡಿಲ ಫಿರಂಗಿ ಹಾಗೂ ಸಡಿಲ ಫಿರಂಗಿಗಳ ಗುರಿ ತಪ್ಪುವ ಸಾಧ್ಯತೆಗಳು ಅಧಿಕ’’ ಎಂದು ಸಿಎನ್‌ಎನ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಹಿಲರಿ ಹೇಳಿದರು. ಹವಾಮಾನ ಬದಲಾವಣೆ ಎನ್ನುವುದು ಚೀನಾದ ಹುಸಿ ಬೆದರಿಕೆ ಎನ್ನುವುದೂ ಸೇರಿದಂತೆ ಟ್ರಂಪ್‌ರ ಹಲವಾರು ಹೇಳಿಕೆಗಳನ್ನು ಅವರು ಉಲ್ಲೇಖಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News