ಕೊನೆಯ ನಮಸ್ಕಾರ
ಸ್ವಾತಂತ್ರ್ಯೋತ್ತರ ಕನ್ನಡ ಪತ್ರಿಕೋದ್ಯಮದ ವಿಕಾಸ ಪಥದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಹಿರಿಯ ಪತ್ರಕರ್ತ ಎಸ್.ವಿ.ಜಯಶೀಲ ರಾವ್ ಇನ್ನಿಲ್ಲ. ಪತ್ರಿಕೆಯ ರೂಪಣೆ ಮತ್ತು ಪತ್ರಿಕಾ ಸಾಹಿತ್ಯ ರಚನೆಯಲ್ಲಿ ಸಿದ್ಧ ಮಾದರಿಗಳಲ್ಲದಿದ್ದ, ಪತ್ರಿಕಾವೃತ್ತಿ ಒಂದು ಉದ್ಯಮವಾಗಿ ಪ್ರಯೋಗಶೀಲತೆಗೆ ತೆರೆದುಕೊಂಡಿದ್ದ ಆ ದಿನಗಳಲ್ಲಿ ವರದಿಗಾರರಾಗಿ ಜಯಶೀಲ ರಾಯರ ಕೊಡುಗೆ ಗಣನೀಯವಾದದ್ದು.
ಸ್ವಾತಂತ್ರ್ಯಪೂರ್ವ ಕನ್ನಡ ಪತ್ರಿಕಾ ವ್ಯವಸಾಯವನ್ನು ಅದರ ಮುಖ್ಯ ಗುರಿಗಮ್ಯತೆಗಳಾಗಿದ್ದ ಸ್ವಾತಂತ್ರ್ಯ ಸಾಧನೆಯತ್ತ ನಡೆಸಿದ ಧೀಮಂತ ಕನ್ನಡಿಗ ಪತ್ರಕರ್ತರ ಯಾದಿ ಮೈಸೂರಿನ ತಾತಯ್ಯನವರಿಂದ ತಿ.ತಾ. ಶರ್ಮರವರೆಗೆ ದೊಡ್ಡದೇ ಇದೆ. ಸ್ವಾತಂತ್ರ್ಯಾನಂತರ ಪತ್ರಿಕಾ ವ್ಯವಸಾಯ ಒಂದು ಉದ್ಯಮವಾಗಿ ರೂಪಾಂತರ ಹೊಂದಿದಾಗ ಕನ್ನಡ ಪತ್ರಿಕೋದ್ಯಮವನ್ನು ಬೆಳೆಸಿದವರಲ್ಲಿ ಟಿ.ಎಸ್.ರಾಮಚಂದ್ರ ರಾವ್, ಖಾದ್ರಿ ಶಾಮಣ್ಣ ಮತ್ತು ಎಸ್.ವಿ.ಜಯಶೀಲ ರಾವ್ ಪ್ರಮುಖರು. ಹಾಗೆ ನೋಡಿದರೆ ಈ ಪತ್ರಕರ್ತತ್ರಯರು ದೇಶದ ಸ್ವಾತಂತ್ರ್ಯದೊಂದಿಗೇ ಕನ್ನಡ ಪತ್ರಿಕೋದ್ಯಮದಲ್ಲಿ ಕಣ್ಣುಬಿಟ್ಟವರು. ಇವರಿಗೆ ಭೂಮಿಕೆಯಾಗಿ ಒದಗಿ ಬಂದದ್ದು ‘ಪ್ರಜಾವಾಣಿ’. ದಿಕ್ಕು-ದಿಶೆ, ಗೊತ್ತು-ಗುರಿಗಳ ಸ್ಪಷ್ಟ ಅರಿವುಳ್ಳ ದಕ್ಷ ನಾವಿಕನಂಥ ಸಂಪಾದಕ, ಚರಿತ್ರೆ-ಭೂಗೋಳ, ರಾಜಕೀಯ ಪ್ರಜ್ಞೆ ಮತ್ತು ಓದುಗರ ನಾಡಿಮಿಡಿತ ಬಲ್ಲ ಸುದ್ದಿ ಸಂಪಾದಕ, ಸುದ್ದಿಯ ವಾಸನೆಯನ್ನು ಥಟ್ಟನೆ ಗುರುತಿಸುವಂಥ ಚುರುಕಾದ ಪಂಚೇಂದ್ರಿಯಗಳನ್ನುಳ್ಳ ಸಂವೇದನಾಶೀಲ ಮುಖ್ಯ ವರದಿಗಾರ ಯಾವುದೇ ಪತ್ರಿಕೆಯ ನಿಜವಾದ ಆಸ್ತಿ. ಟಿಯೆಸ್ಸಾರ್ ಅಂಥ ಸಂಪಾದಕರಾಗಿದ್ದರು, ಖಾದ್ರಿ ಶಾಮಣ್ಣ ಅಂಥ ಸುದ್ದಿ ಸಂಪಾದಕರಾಗಿದ್ದರು ಮತ್ತು ಜಯಶೀಲ ರಾವ್ ಅಂಥ ಮುಖ್ಯ ವರದಿಗಾರರಾಗಿದ್ದರು.
ಏಳು ದಶಕಗಳ ಕಾಲ ಕನ್ನಡ ಪತ್ರಿಕೋದ್ಯಮದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಕೊನೆಯವರೆಗೂ ಕ್ರಿಯಾಶೀಲರಾಗಿದ್ದು, 87ರ ವೃದ್ಧಾಪ್ಯದಲ್ಲಿ, ಎಪ್ರಿಲ್ 28ರಂದು ಎಸ್.ವಿ.ಜಯಶೀಲ ರಾವ್ ನಿಧನ ಹೊಂದಿದಾಗ ಸ್ವಾತಂತ್ರ್ಯೋತ್ತರ ಭಾರತೀಯ ಪತ್ರಿಕೋದ್ಯಮದ ಸಾಹಸಪೂರ್ಣ ಪರ್ವವೊಂದು ಕೊನೆಗೊಂಡಂತಾಯಿತು. ಉದ್ಯಮಶೀಲತೆಯ ಧಾವಂತ, ಲಾಭ-ನಷ್ಟಗಳ ಲೆಕ್ಕಾಚಾರ, ತೀವ್ರ ಪೈಪೋಟಿ, ಅಧಿಕಾರಸ್ಥರನ್ನು ತುದಿಗಾಲಿನಲ್ಲಿ ನಿಲ್ಲಿಸುವ ಛಲ, ಓಲೈಸುವ ಪ್ರವೃತ್ತಿ, ಆಧುನೀಕರಣದ ಸವಾಲುಗಳು ಇವೆಲ್ಲದರ ಮೊತ್ತವಾಗಿದ್ದ ಭಾರತೀಯ ಪತ್ರಿಕೋದ್ಯಮದ ಈ ಕಾಲಘಟ್ಟ ಮಾಲಕರು ಮತ್ತು ಪತ್ರಕರ್ತರಿಬ್ಬರಿಗೂ ಪರ್ವಕಾಲವಾಗಿತ್ತು. ಪ್ರದೇಶ ಭಾಷಾ ಪತ್ರಿಕೋದ್ಯಮವೂ ಇದಕ್ಕೆ ಹೊರತಾಗಿರಲಿಲ್ಲ. ಭಾರತೀಯ ಪತ್ರಿಕೋದ್ಯಮದ ಇತಿಹಾಸದಲ್ಲಿ ಇದೊಂದು ಮಹತ್ವಪೂರ್ಣ ಅಧ್ಯಾಯ. ಈ ಕಾಲಘಟ್ಟದಲ್ಲಿ ಕಾರ್ಯನಿರತರಾಗಿದ್ದ ಪತ್ರಕರ್ತರ ಕೊಡುಗೆಯೂ ಘನವಾದದ್ದು. ಈ ಪರ್ವಕಾಲದಲ್ಲಿನ ರಾಷ್ಟ್ರದ ಹಾಗೂ ರಾಜ್ಯ ರಾಜಕಾರಣದ ವರದಿಗಾರಿಕೆಯಲ್ಲಿ ಜಯಶೀಲ ರಾಯರ ಹೆಜ್ಜೆಗುರುತುಗಳು ಸ್ಪಷ್ಟ. ಚಾಮರಾಜನಗರ ಜಿಲ್ಲೆಯ ಸರಗೂರು ಜಯಶೀಲ ರಾಯರ ಹುಟ್ಟೂರು. ತಂದೆ ವೆಂಕಟಸುಬ್ಬಯ್ಯ. ಪ್ರಾಥಮಿಕ ಶಿಕ್ಷಣ ಚಾಮರಾಜನಗರದಲ್ಲಿ. ಮುಂದೆ ಮೈಸೂರಿನ ಶಾರದಾ ವಿಲಾಸ ಪ್ರೌಢ ಶಾಲೆಯಲ್ಲಿ ವ್ಯಾಸಂಗ. ಓದು ಎಷ್ಟುಹತ್ತಿತೋ, ವಿದ್ಯಾಭ್ಯಾಸ ಎಲ್ಲಿಯ ವರೆಗೆ ಮುಂದುವರಿಯಿತೋ ತಿಳಿಯದು. ಸ್ವಾತಂತ್ರ್ಯ ಚಳವಳಿಯಂತೂ ಕೈಬೀಸಿ ಕರೆದದ್ದು ದಿಟ. 1947. ಹಳೆ ಮೈಸೂರು ಸೀಮೆಯಲ್ಲಿ ಜವಾಬ್ದಾರಿ ಸರಕಾರಕ್ಕಾಗಿ ‘ಮೈಸೂರು ಚಲೋ’ ಚಳವಳಿ ಭರದಿಂದ ನಡೆದಿತ್ತು. ಯುವಕ ಜಯಶೀಲ ರಾವ್ ಚಳವಳಿಯಲ್ಲಿ ಧುಮುಕಿ ಸೆರೆಮನೆ ಸೇರಿದರು. ಸೆರೆಮನೆಯಿಂದ ಹೊರ ಬಂದದ್ದೇ ನೇರವಾಗಿ ನಡೆದದ್ದು ಪತ್ರಿಕಾ ಕ್ಷೇತ್ರಕ್ಕೆ. ಬೆಂಗಳೂರಿನ ಎಸ್.ವೆಂಕಟರಾಂ ಸಂಪಾದಕತ್ವದ ‘ದೇಶಬಂಧು’ ಪತ್ರಿಕೆ ಸೇರಿದರು. 1948ರಲ್ಲಿ ‘ಪ್ರಜಾವಾಣಿ’ಗೆ ಪಯಣ.
ಮಹಾತ್ಮಗಾಂಧಿ ರಸ್ತೆಯ ಈ ಪತ್ರಿಕೆಯಲ್ಲಿ ಟಿಎಸ್ಸಾರ್ ಗರಡಿಯಾಳಾಗಿ ವರದಿಗಾರಿಕೆಯ ಕಾಯಕದಲ್ಲಿ ತೊಡಗಿ ಕೊಂಡರು. ಒಂದಲ್ಲ-ಎರಡಲ್ಲ ಇಪ್ಪತ್ತಾರು ವರ್ಷಗಳ ಕಾಲ ವರದಿಗಾರರಾಗಿ, ಪ್ರಧಾನ ವರದಿಗಾರರಾಗಿ ಪಾದರಸದಂತೆ ನಗರದ ಸುತ್ತ-ರಾಜ್ಯದ ಸುತ್ತ ಸುದ್ದಿಗಾಗಿ ಚಲನಶೀಲರಾಗಿದ್ದುಕೊಂಡು ಅವಿರತ ಸೇವೆ ಸಲ್ಲ್ಲಿಸಿದರು. ಸೇವೆಯಲ್ಲಿದ್ದಾಗಲೇ ಸಂಸ್ಥೆಯ ವತಿಯಿಂದ ಇಂಗ್ಲೆಂಡಿನ ಕಾರ್ಡಿಪ್ ಥಾಮ್ಸನ್ ಪ್ರತಿಷ್ಠಾನದಲ್ಲಿ ಪತ್ರಿಕಾವೃತ್ತಿಯ ವಿವಿಧ ವಿಭಾಗಗಳ ಕೆಲಸದಲ್ಲಿ ವಿಶೇಷ ತರಬೇತಿ ಪಡೆದರು. ಭಾರತ ಸರಕಾರದ ರಕ್ಷಣಾ ಸಚಿವಾಲಯದ ಡಿಫೆೆನ್ಸ್ ಅಕಾಡಮಿಯಲ್ಲಿ ರಣರಂಗ ವರದಿಗಾರಿಕೆಯ ಕಲೆಯನ್ನು ಕರಗತಮಾಡಿಕೊಂಡು ‘ಸಂಜಯ’ನಾದರು. ಹೀಗೆ ದೊರತ ಅವಕಾಶಗಳನ್ನೆಲ್ಲ ಸದುಪಯೋಗಮಾಡಿಕೊಂಡು ಶ್ರೇಷ್ಠ ವರದಿಗಾರರಾಗಿ ಬೆಳೆದರು. ತಾವಷ್ಟೆ ಬೆಳೆಯಲಿಲ್ಲ, ಸಹೋದ್ಯೋಗಿ ವರದಿಗಾರರನ್ನೂ ಬೆಳೆಸಿದರು. ಮುಂಜಾವಿನಿಂದ ಮಧ್ಯರಾತ್ರಿಯವರೆಗೂ ದಣಿವರಿ ಯದೆ ದುಡಿದ ಜಯಶೀಲ ರಾವ್ ವರದಿಗಾರಿಕೆಯಲ್ಲಿ ಅನೇಕ ಪ್ರಥಮಗಳನ್ನು ಸ್ಥಾಪಿಸಿದ ಕೀರ್ತಿಶಾಲಿಗಳು. ಶಾಸನ ಸಭೆ ಅವರ ಕಾಯಕದ ಕೊತ್ತಳವಾಗಿತ್ತು. ಶಾಸನ ಸಭೆಯ ವರದಿಗಾರಿಕೆಗೆ, ಅದರೆಲ್ಲ ಘನತೆ ಗೌರವಗಳೊಂದಿಗೆ ವಿಶಿಷ್ಟ ಶೈಲಿ ನೀಡಿದ ಯಶಸ್ಸಿನ ಕೀರ್ತಿ ಅವರದು. ವಿಧಾನ ಮಂಡಲದ ಉಭಯ ಸದನಗಳ ಸಮೀಕ್ಷೆ ಜಯಶೀಲರ ಇನ್ನೊಂದು ಸಾಧನೆ. ಇನ್ನು ಮುಂದೆ ನೀನು ವಿಧಾನ ಮಂಡಲದ ಕಲಾಪಗಳ ವಿಮರ್ಶೆ ಬರಿ. ಇದೊಂದು ‘ಸದನ ಸಮೀಕ್ಷೆ’, ಹೊಸ ಅಂಕಣ. ಇದನ್ನು ಬರೆಯುವವನು ಜಯಶೀಲನಲ್ಲ, ಸಮೀಪದರ್ಶಿ ಎಂದು ಸಂಪಾದಕರು ಫರ್ಮಾನು ಹೊರಡಿಸಿದ್ದೇ ಜಯಶೀಲರ ಶಾಸನಸಭೆ ವರದಿಗಾರಿಕೆಗೆ ಹೊಸ ಆಯಾಮವೊಂದು ಪ್ರಾಪ್ತವಾಗಿತ್ತು. ವಿಶೇಷ ಹಕ್ಕುಬಾಧ್ಯತೆಗಳುಳ್ಳ ಸದನದ ಕಲಾಪಗಳ ವಿಮರ್ಶೆ ಸವಾಲಿನ ಕೆಲಸವೇ ಸರಿ. ತಂತಿ ಮೇಲಿನ ನಡಿಗೆ. ಸಮೀಪದರ್ಶಿಯಾಗಿ ಜಯಶೀಲ ವಿಧಾನಸಭೆ-ವಿಧಾನ ಪರಿಷತ್ತುಗಳ ಕಲಾಪಗಳನ್ನು ವಸ್ತುನಿಷ್ಠವಾಗಿ ಪರಾಮರ್ಶಿಸಿ, ವಿಮರ್ಶಿಸಿ ಬರೆದರು. ಎಂದಿನ ವರದಿಗಾರಿಕೆಯಲ್ಲಿ ಸೇರಿಸಲಾಗದ ಮಾತುಗಳು, ಸದಸ್ಯರ ವೇಷಭೂಷಣ, ಮಾತಿನ ವೈಖರಿ, ಅಂಗಾಂಗ ವಿನ್ಯಾಸ, ಹಾವಭಾವ, ಮಾತಿನ ಧ್ವನಿ,ಲಯಗಾರಿಕೆಗಳನ್ನು ನಿಕಟವಾಗಿ ಗಮನಿಸಿ ‘ಸದನ ಸಮೀಕ್ಷೆಯಲ್ಲಿ’ ನಿರಾಡಂಬರ ಶೈಲಿಯಲ್ಲಿ ಸಾಕ್ಷಾತ್ಕಾರಗೊಳಿಸುತ್ತಿದ್ದರು. ಚುನಾವಣಾ ಕ್ಷೇತ್ರ ಸಮೀಕ್ಷೆ ಅವರ ಬತ್ತಳಿಕೆಯ ಇನ್ನೊಂದು ವಿಶೇಷ ಸಾಧನವಾಗಿತ್ತು. ಕೆಂಗಲ್, ನಿಜಲಿಂಗಪ್ಪ, ಕಾಮರಾಜ್, ಗೋಪಾಲ ಗೌಡ, ಎಸ್.ಶಿವಪ್ಪ ಅವರುಗಳಂಥ ಹಿರಿಯ ನೇತಾರರಿಂದ ಹಿಡಿದು ಕೋಣಂದೂರು ಲಿಂಗಪ್ಪನವರೆಗೆ, ವಿಧಾನ ಸೌಧದ ಲಿಫ್ಟ್ ಆಪರೇಟರುಗಳಿಂದ ಸಚಿವರ ಕಾರು ಚಾಲಕರವರೆಗೆ ಎಲ್ಲರೊಡನೆಯೂ ಸ್ನೇಹಸಂಪರ್ಕ ಹೊಂದಿದ್ದ ಜಯಶೀಲ, ರಾತ್ರಿ ಹನ್ನೆರಡು ಗಂಟೆಗೆ ಒಂದು ಸ್ಕೂಪ್ ಸ್ಟೋರಿ ಇದೆ ಎಂದು ಸುದ್ದಿಮೇಜಿನಲ್ಲಿದ್ದ ನನ್ನಂಥವರನ್ನು ಕಾಡದೇ ಇದ್ದ ದಿನಗಳೇ ವಿರಳ. ಮಾನವಾಸಕ್ತಿಯ ವರದಿಗಳು, ಮಾನವಾಸಕ್ತಿಯ ನುಡಿಚಿತ್ರಗಳು ಜಯಶೀಲರಾಯರು ಕನ್ನಡ ಪತ್ರಿಕೋದ್ಯಮದಲ್ಲಿ ಮೂಡಿಸಿರುವ ಮತ್ತೊಂದು ಮಹತ್ವದ ಛಾಪು. ಅವರ ಮಾನವಾಸಕ್ತಿಯ ವರದಿ ಗಳು, ನಿಜಕ್ಕೂ ಜನಸಾಮಾನ್ಯರ ಸಮಸ್ಯೆಗಳಿಗೆ, ಜನಜೀವನದ ಮಾನವಿಕ ನೋಟಗಳಿಗೆ ಹಿಡಿದ ಕನ್ನಡಿಯಾಗಿರುತ್ತಿದ್ದವು. ಅವರ ರವಿವಾರದ ‘ಯಾರಿವರು?’, ದನಿಯಿಲ್ಲದವರ, ಬಾಯಿಲ್ಲದವರ ದನಿಯಾದ ಅಂಕಣವಾಗಿತ್ತು. ಚಿಂದಿ ಆಯುವವರು, ಕಲಾಯಿ ಮಾಡುವವರು, ಚಪ್ಪಲಿ ಹೊಲೆಯುವವರು, ಸೈಕಲ್ ರಿಪೇರಿ ಮಾಡುವವರು, ಬಸ್ ಸ್ಟಾಂಡಿನ ಹಾಡುಗಾರ ಭಿಕ್ಷುಕರು -ಹೀಗೆ ತಳಸಮುದಾಯದವರ ದಾರುಣ ಜೀವನ ಚಿತ್ರಮಾಲೆ ಇದಾಗಿತ್ತು.
ಪತ್ರಕರ್ತರ ಸಂಘಟನೆಗಳಲ್ಲೂ ಕ್ರಿಯಾತ್ಮಕವಾಗಿ ತೊಡಗಿಕೊಳ್ಳುತ್ತಿದ್ದ ಜಯಶೀಲ ರಾವ್ ವೃತ್ತಿಜೀವನದ ಕೊನೆಯ ಘಟ್ಟದಲ್ಲಿ ಬೇರೆ ಕೆಲವು ಪತ್ರಿಕೆಗಳಿಗೆ ಸಂಪಾದಕರಾಗಿ ಕೆಲಸ ಮಾಡಿರುವುದೂ ಉಂಟು. ಎಚ್. ಡಿ.ದೇವೇಗೌಡರು ರಾಜ್ಯದ ಮುಖ್ಯ ಮಂತ್ರಿಯಾಗಿದ್ದಾಗ ಅವರ ಪತ್ರಿಕಾ ಕಾರ್ಯದರ್ಶಿಯಾಗಿದ್ದರು, ಪ್ರಧಾನ ಮಂತ್ರಿಯಾಗಿದ್ದಾಗ ಮಾಧ್ಯಮ ಸಲಹೆಗಾರರಾಗಿದ್ದರು.
ಇಪ್ಪತ್ತು ಇಪ್ಪತ್ತೊಂದನೆ ಶತಮಾನದ ಕನ್ನಡ ಪತ್ರಿಕೋದ್ಯಮದ ನಡುವಣ ಜೀವತಂತುವಿನಂತಿದ್ದ ಜಯಶೀಲ ರಾಯರು ಆ ದಿನಗಳ ವರದಿಗಾರರ ಒಂದು ಮಾದರಿಯಂತಿದ್ದರು ಎಂದರೆ ಉತ್ಪ್ರೇಕ್ಷೆಯಾಗದು. ರಾಜಕಾರಣಿಗಳು, ಉದ್ಯಮಿಗಳು, ಆಡಳಿತಾಧಿಕಾರಿ ಗಳಲ್ಲಿ ಪತ್ರಕರ್ತರನ್ನು ಒಂದಲ್ಲ ಒಂದು ರೀತಿ ಒಲಿಸಿ ಕೊಳ್ಳುವ ಪ್ರವೃತ್ತಿ ಯಾವತ್ತೂ ಇದ್ದದ್ದೇ. ಹೊಸದಿಲ್ಲಿಯ ಕಾರ್ಯನಿರತ ಪತ್ರಕರ್ತರ ಪೈಕಿ ಇಪ್ಪತ್ತು ಮಂದಿ ಲಂಚಕೋರ ಪತ್ರಕರ್ತರಿದ್ದು ಅವರ ಹೆಸರುಗಳ ಪಟ್ಟಿ ಕೇಂದ್ರರ ಸರಕಾರದ ಬಳಿ ಇದೆಯೆಂದು ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಬರೆಯುತ್ತಾರೆ. ಸರಕಾರ ರಾಜಕೀಯ ಅಥವಾ ವೈಯಕ್ತಿಕ ಕಾರಣಗಳಿಂದಾಗಿಯೋ ಇವರ ಹೆಸರುಗಳನ್ನು ಬಹಿರಂಗಪಡಿಸದೇ ಇರುವುದಕ್ಕೆ ನಯ್ಯರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆಗ ಈಗಿನಂತೆ ಹಾಡಹಗಲೇ ಹಣದ ಆಮಿಶ ಒಡ್ಡುವುದು ಇರಲಿಲ್ಲವಾದರೂ ವೈಭವೋಪೇತ ಹೋಟೆಲುಗಳಲ್ಲಿ ಮೇಜುವಾನಿ, ಉಡುಗೊರೆಗಳ ನೀಡಿಕೆ ರಾಜಾರೋಷವಾಗಿಯೇ ನಡೆಯುತ್ತಿತ್ತು. ವರದಿಗಾರರು ಗಿಫ್ಟ್ ಪ್ಯಾಕೆಟ್ ಹಿಡಿದುಕೊಂಡು ಕಛೇರಿಗೆ ಬಂದಾಗ ನಾವು ಕೆಲವು ಕಿರಿಯ ಪತ್ರಕರ್ತರು ಅವರನ್ನು ‘ಗಿಫ್ಟೆಡ್ ರಿಪೋರ್ಟರ್’ ಎಂದು ಛೇಡಿಸುತ್ತಿದ್ದೆವು. ಜಯಶೀಲ ರಾಯರೂ ಇದಕ್ಕೆ ಹೊರತಾಗಿರಲಿಲ್ಲ.
ಪತ್ರಿಕಾಧರ್ಮ, ನೀತಿ, ವೃತ್ತಿಪರತೆ ಕುರಿತು ಜಯಶೀಲ ರಾಯರ ಜೊತೆ ನಾವು ಕಿರಿಯರು ಸಂವಾದ, ಕೆಲವೊಮ್ಮೆ ಜಗಳಗಳನ್ನು ನಡೆಸುತ್ತಲೇ ಇದ್ದೆವು. ಸೌಜನ್ಯದ ಖನಿಯಾಗಿದ್ದ ಅವರು ಎಂದೂ ಕೋಪಿಸಿ ಕೊಂಡವರಲ್ಲ, ಮುಖ ಹುಳಿ ಮಾಡಿಕೊಂಡವರಲ್ಲ. ನೀತಿ, ನಿಯಮ, ವೌಲ್ಯಗಳ ತಕರಾರುಗಳು ಬಂದಾಗ ಲೆಲ್ಲ ನಮ್ಮೆಂದಿಗಿರುತ್ತಿದ್ದ ಜಯಶೀಲ ರಾಯರೇ, ನಿಮ್ಮ ವೌಲ್ಯಪರ ಕಾಳಜಿಗಳನ್ನು, ಪತ್ರಿಕೆಗಳು ‘ಜನದನಿ’ಯಾಗಬೇಕೆಂಬ ವೃತ್ತಿಪರ ಕಳಕಳಿಯನ್ನು, ನೀವು ಬಿಂಬಿಸಿದ ಝಾಡಮಾಲಿ, ರೈಲ್ವೆ ಸ್ಟೇಷನ್ನಿನ ಹಮಾಲಿ, ಬಸ್ ಕಂಡಕ್ಟರ್, ಬಾವಿಯಲ್ಲಿ ಬಿದ್ದ ಬಿಂದಿಗೆ ಎತ್ತಿಕೊಡುವವನು, ಕಲಾಯಿಗಾರರು, ಸೈಕಲ್ ರಿಪೇರಿಯವರು ಆದಿಯಾಗಿ ತಳಗಿನ ಆ ಮಂದಿಯ ಭಾವದೀಪ್ತ ಚಿತ್ರಗಳನ್ನು ಮರೆಯಲೆಂತು? ಇಂಥ ಮಾದರಿಯ ಸಂಗಾತಿಯಾಗಿದ್ದ ನಿಮಗಿದೋ ಕೊನೆಯ ನಮಸ್ಕಾರ. ಭರತ ವಾಕ್ಯ:
ಎ.28ರಂದು ದೂರದರ್ಶನದ ಚಂದನ ವಾಹಿನಿಯಲ್ಲಿ ಜಯಶೀಲರಾಯರ ನಿಧನವಾರ್ತೆಯೊಂದಿಗೆ ಇನ್ನೊಬ್ಬ ಪತ್ರಕರ್ತ ದಿ.ವಿ.ಎನ್.ಸುಬ್ಬ ರಾವ್ ಅವರ ಭಾವ ಚಿತ್ರ ತೋರಿಸಿದ್ದು ಅಕ್ಷಮ್ಯವಾದ ಪ್ರಮಾದ. ವೃತ್ತಿಪರತೆಯಲ್ಲಿ ಎಂಥ ವೈದೃಶ್ಯ!