ಎಫ್‌ಟಿಐಐ ನಿರ್ದೇಶಕರಿಗೆ ಪಾರ್ಸೆಲ್ ಬಾಂಬ್
ಪುಣೆ,ಮೇ 7: ಇಲ್ಲಿನ ಭಾರತೀಯ ಚಲನಚಿತ್ರ ಹಾಗೂ ಟಿವಿ ತರಬೇತಿ ಇನ್ಸ್‌ಟಿಟ್ಯೂಟ್(ಎಫ್‌ಟಿಐಐ)ನ ನಿರ್ದೇಶಕ ಭೂಪೇಂದ್ರ ಕೈಂದೋಲಾ ಅವರಿಗೆ ಶನಿವಾರ ಸಂಜೆ ಪಾರ್ಸೆಲ್ ಮೂಲಕ ಬಾಂಬ್ ರವಾನೆಯಾಗಿರುವುದಾಗಿ ತಿಳಿದುಬಂದಿದೆ.
ಎಫ್‌ಟಿಐಐಗೆ ಭೇಟಿ ನೀಡುವಂತೆ ಕನ್ಹಯ್ಯ ಕುಮಾರ್‌ಗೆ ಆಹ್ವಾನ ನೀಡಿರುವುದಕ್ಕೆ ಬೆದರಿಕೆಯಾಗಿ ಈ ಪಾರ್ಸೆಲ್ ಬಾಂಬ್ ರವಾನಿಸಲಾಗಿದೆಯೆನ್ನಲಾಗಿದೆ.
ಎಫ್‌ಟಿಐಐ ಅಧ್ಯಕ್ಷರಾಗಿ ಗಜೇಂದ್ರ ಚೌಹಾಣ್ ನೇಮಕವನ್ನು ಪ್ರತಿಭಟಿಸಿ ಮುಷ್ಕರಕ್ಕಿಳಿದ ವಿದ್ಯಾರ್ಥಿಗಳಿಗೆ ಹಲವಾರು ಬೆದರಿಕೆ ಕರೆಗಳು ಬಂದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ನಿರ್ದೇಶಕ ಭೂಪೇಂದ್ರರಿಗೆ ಬಾಂಬ್ ಬೆದರಿಕೆಯೊಡ್ಡಿರುವುದನ್ನು ಎಫ್‌ಟಿಐಐ ವಿದ್ಯಾರ್ಥಿಗಳ ಒಕ್ಕೂಟವು ತೀವ್ರವಾಗಿ ಖಂಡಿಸಿದೆ. ದೇಶದಲ್ಲಿ ಭಿನ್ನಮತವನ್ನು ಹತ್ತಿಕ್ಕಲು ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿರುವ ವ್ಯಕ್ತಿಗಳ ಅಸಹಿಷ್ಣುತೆ, ಅಸಂವೇದನೆ ಹಾಗೂ ಕ್ರಿಮಿನಲ್ ಪ್ರವೃತ್ತಿಯನ್ನು ಇದು ತೋರಿಸಿಕೊಟ್ಟಿದೆಯೆಂದು ಅದು ಆಪಾದಿಸಿದೆ.
ಪ್ರಕರಣದ ಬಗ್ಗೆ ಸರಕಾರವು ತಕ್ಷಣವೇ ತನಿಖೆ ನಡೆಸುವಂತೆ ಅದು ಆಗ್ರಹಿಸಿದೆ.