ಭಾರತದ ನಗರೀಕರಣ ಮತ್ತು ಅಸಮಾನತೆ
ಸಾಮಾನ್ಯವಾಗಿ ನಗರ ಎಂದ ಕೂಡಲೇ ಬರುವಂತಹ ಭಾವನೆ, ಕಠಿಣವಾದ ಸಾಮಾಜಿಕ ವ್ಯವಸ್ಥೆಯನ್ನು ಬದಿಗಿಟ್ಟು ಜಾತ್ಯತೀತವಾಗಿ ಪರಿವರ್ತನೆ ಹೊಂದುವಂತಹ ಒಂದು ಸ್ವಾತಂತ್ರವಾದಂತಹ ತಾಣ. ಪ್ರಮುಖವಾಗಿ ದಕ್ಷಿಣದ ಜಗತ್ತಿನಲ್ಲಿ ಸಾಮಾಜಿಕ ಚಲನ ಮತ್ತು ವಿಮೋಚನೆಗೆ ನಗರ ಎಂಬುದು ಅನ್ವರ್ಥವಾಗಿದೆ. ನಗರ ಮತ್ತು ಪಟ್ಟಣಗಳಲ್ಲಿರುವ ಪರಿವರ್ತನಾತ್ಮಕ ಸಾಮರ್ಥ್ಯವನ್ನು ಮನಗಂಡ ಸಂವಿಧಾನ ಶಿಲ್ಪಿ, ದಲಿತರ ಆದರ್ಶ ಬಾಬಾಸಾಹೇಬ್ ಅಂಬೇಡ್ಕರ್ ಅವರು ತುಳಿತಕ್ಕೊಳಗಾದ ಸಮುದಾಯದವರಲ್ಲಿ ತಾವು ಸಂಕುಚಿತ ಮನೋಭಾವ ಹೊಂದಿರುವ ಹಳ್ಳಿಗಳನ್ನು ತೊರೆದು ನಗರದತ್ತ ಆಗಮಿಸಲು ಕರೆ ನೀಡಿದ್ದರು.
ದಲಿತ ಮತ್ತು ಸೀಮಿತಗೊಳಿಸಲ್ಪಟ್ಟ ಸಮುದಾಯದ ಜನರು ಅಂಬೇಡ್ಕರ್ ಅವರನ್ನು ನಿರಾಶೆಗೊಳಿಸಲಿಲ್ಲ. ಕಳೆದ ದಶಕದಲ್ಲಿ ನಗರ ಜೀವನವನ್ನು ತಮ್ಮದಾಗಿಸಿಕೊಂಡ ದಲಿತರ ಸಂಖ್ಯೆಯಲ್ಲಿ ಶೇ. 40 ಏರಿಕೆಯಾಗಿದೆ. ನಗರಗಳು ಭಾರತದ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರು ಮತ್ತು ಕ್ರೈಸ್ತರಿಗೆ ಹಿಂದಿನಿಂದಲೂ ಒಂದು ಪ್ರಮುಖ ತಾಣವಾಗಿ ಉಳಿದಿದೆ. ಶೇ. 20 ಹಿಂದೂಗಳಿಗೆ ಹೋಲಿಸಿದರೆ ಶೇ. 40 ಮುಸ್ಲಿಮರು ಮತ್ತು ಕ್ರೈಸ್ತರು ನಗರ ಪ್ರದೇಶದಲ್ಲಿ ವಾಸಿಸುತ್ತಾರೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಸಾಮಾಜಿಕವಾಗಿ ತುಳಿತಕ್ಕೊಳಗಾದ ಮತ್ತು ಪ್ರಾದೇಶಿಕವಾಗಿ ಅನನುಕೂಲತೆ ಹೊಂದಿರುವ ಜನರು ಪ್ರತ್ಯೇಕತೆ ಮತ್ತು ಅಸಮಾನತೆಯಂತಹ ಸಾಮಾಜಿಕ ಪದ್ಧತಿಗಳಿಂದ ಮತ್ತು ಸಾಮಾಜಿಕ ಚಲನೆಯ ಏಣಿಯಲ್ಲಿ ಮೇಲೆ ಸಾಗಲು ನಗರ ಪ್ರದೇಶಗಳತ್ತ ಆಗಮಿಸುತ್ತಾರೆ.
ತಮ್ಮ ಕೋಸ್ಮೊಪೊಲಿಟನ್ ಗುಣ ಮತ್ತು ಸ್ವಾತಂತ್ರ್ಯದ ಸಾಮರ್ಥ್ಯದ ಆಧಾರದ ಮೇಲೆ ಇಂದು ಭಾರತೀಯ ನಗರಗಳನ್ನು ಯಾವ ರೀತಿ ವಿಂಗಡಿಸಲಾಗಿದೆ?
ಭಾರತೀಯ ನಗರಗಳು, ಅಸಮಾನತೆಯ ತಾಣಗಳುಪ್ರಸಕ್ತ ನಗರೀಕರಣದ ರೂಪವನ್ನು ಕಂಡರೆ ಅಂಬೇಡ್ಕರ್ ಅವರಿಗೂ ನಿರಾಶೆ ಉಂಟಾಗಬಹುದು. ಭಾರತೀಯ ನಗರಗಳ ಬಗ್ಗೆ ಇತ್ತೀಚಿನ ಅಧ್ಯಯನಗಳು ಕಂಡುಕೊಂಡಂತೆ, ಮಿಲಿಯನ್‌ಗಟ್ಟಲೆ ತುಳಿತಕ್ಕೊಳಗಾದ ಮತ್ತು ಸೀಮಿತಗೊಳಿಸಲ್ಪಟ್ಟ ಸಮುದಾಯಗಳ ಸಾಮಾಜಿಕ ಚಲನಶೀಲತೆಗೆ ನಗರಗಳು ಈಗಲೂ ಉತ್ತಮ ಭರವಸೆಯಾಗಿದ್ದರೂ ಅವುಗಳು ಭಾರತದ ಗ್ರಾಮೀಣ ಸಾಮಾಜಿಕ ಮತ್ತು ಸಾಂಸ್ಕೃತಿಕ ಸತ್ಯಕ್ಕೆ, ಅದರ ಕಂದಕದಂತಿರುವ ಜಾತಿ ವ್ಯವಸ್ಥೆ ಮತ್ತು ಸಾಮಾಜಿಕ ಪದ್ಧತಿಗಳಿಗೆ ಕನ್ನಡಿ ಹಿಡಿಯುತ್ತವೆ. ನಗರ ಪ್ರದೇಶಗಳಲ್ಲಿ ವಾಸ್ತವ್ಯ ಪ್ರತ್ಯೇಕೀಕರಣ ಮತ್ತು ಗುರುತು ಆಧಾರಿತ ಅಸಮಾನತೆ ಸ್ಥಿರವಾಗಿ ಹೆಚ್ಚಾಗುತ್ತಲೇ ಸಾಗಿದೆ. ಪ್ರಾದೇಶಿಕ ಅಸಮಾನತೆಯ ಬಗ್ಗೆ 10 ಜನಸಂಖ್ಯೆ ಹೆಚ್ಚು ಹೊಂದಿರುವ ನಗರಗಳಲ್ಲಿ ನಡೆಸಿದ ಇತ್ತೀಚಿನ ಅಧ್ಯಯನದ ಪ್ರಕಾರ, (ವಾರ್ಡ್ ಮಟ್ಟದ ಜನಗಣತಿ ಅಂಕಿಅಂಶಗಳನ್ನು ಆಧರಿಸಿ) ನಗರಗಳ ವೇಗದ ಬೆಳವಣಿಗೆ ಕೂಡಾ ಜಾತಿ ಮತ್ತು ಧರ್ಮಾಧಾರಿತ ಪ್ರಾದೇಶಿಕ ಪ್ರತ್ಯೇಕೀಕರಣವನ್ನು ಕಡಿಮೆ ಮಾಡಿಲ್ಲ. ದಲಿತರು ಮತ್ತು ಆದಿವಾಸಿಗಳು ಈಗಲೂ ನಗರದ ಕೆಲವೊಂದು ಭೌಗೋಳಿಕ ಪ್ರದೇಶಗಳಲ್ಲಿ ಮಾತ್ರ ಜಮಾವಣೆಯಾಗಿದ್ದಾರೆ, ಮುಖ್ಯವಾಗಿ ಅನಧಿಕೃತ ನಿರ್ಮಾಣಗಳು ಮತ್ತು ಬಡ ವಾತಾವರಣದಲ್ಲಿ.
ಮೂರು ನಗರಗಳಲ್ಲಿ ನಡೆಸಿದ ನಮ್ಮದೇ ಸ್ವಂತ ಅಧ್ಯಯನವು ಸದ್ಯ ನಡೆಯುತ್ತಿರುವ ನಗರೀಕರಣದ ವಿನ್ಯಾಸದ ಬಗ್ಗೆ ಕೂಲಂಕುಷವಾಗಿ ಗಮನಿಸಿದ್ದು ಕೆಲವೊಂದು ಪ್ರಮುಖ ನಿರ್ಧಾರಕ್ಕೆ ಬರಲಾಗಿದೆ. ನಗರೀಕರಣ, ಪ್ರತ್ಯೇಕತೆ ಮತ್ತು ವಾತಾವರಣದ ಸವಾಲು ಇದು ಭಾರತ ಮತ್ತು ನಾರ್ವೆಯ ಎರಡು ಸಹಯೋಗಿ ಸಂಸ್ಥೆಗಳು, ಒಸ್ಲೊದ ಪೀಸ್ ರಿಸರ್ಚ್ ಇನ್ಸ್‌ಟಿಟ್ಯೂಟ್ ಮತ್ತು ಭಾರತದ ಅಬ್ಸರ್ವರ್ ರಿಸರ್ಚ್ ಫೌಂಡೇಶನ್‌ನ ತಜ್ಞರು ಜೊತೆಯಾಗಿ ನಡೆಸಿದ ಅಧ್ಯಯನವಾಗಿದೆ. ಇದು ಸದ್ಯ ವಾತಾವರಣದಲ್ಲಿ ನಡೆಯುತ್ತಿರುವ ಘಟನಾವಳಿಗಳ ಜೊತೆ ಭಾರತದ ವೇಗವಾಗಿ ನಡೆಯುತ್ತಿರುವ ನಗರಗಳ ಬೆಳವಣಿಗೆಗೆ ಇರುವ ಸಂಬಂಧವನ್ನು ಅಭ್ಯಸಿಸುತ್ತದೆ. ಕಗ್ಗಂಟನ್ನು ಬಿಚ್ಚಲು ತಜ್ಞರು ತೀವ್ರವಾದ ಕ್ಷೇತ್ರ ಅಧ್ಯಯನ ಮತ್ತು ಗುಣಾತ್ಮಕ ಸಮೀಕ್ಷೆಗಳನ್ನು ಸತತ ಮೂರು ವರ್ಷಗಳ ಕಾಲ ನಡೆಸಿದರು. ಇವರು ಸಮಾಜದ ವಿವಿಧ ಆಯಾಮಗಳಾದ ಆದಾಯ, ಸಾಮಾಜಿಕ-ಧಾರ್ಮಿಕ ಗುರುತು ಮತ್ತು ವಲಸೆಯ ಇತಿಹಾಸ ಹಾಗೂ ನಾಗರಿಕ ಚಟುವಟಿಕೆಗಳಲ್ಲಿ ಮತ್ತು ನಗರದ ಆಡಳಿತ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆಯ ಮಧ್ಯೆ ಇರುವ ಕೊಂಡಿಯನ್ನು ಸೂಕ್ಷ್ಮವಾಗಿ ಅಭ್ಯಸಿಸಿದರು. ನಗರ ಯೋಜನೆಯ ಕಪ್ಪುಚುಕ್ಕೆಗಳು
ಈ ಅಧ್ಯಯನದಿಂದ ಹೊರಬಂದ ಫಲಿತಾಂಶವನ್ನು ಭಾರತದ ಪ್ರತಿ ನಗರಕ್ಕೂ ಅನ್ವಯಿಸಲು ಸಾಧ್ಯವಾಗುವುದಿಲ್ಲವಾದರೂ ಇದು ರಾಷ್ಟ್ರದ ನಗರ ಯೋಜನೆ ರೂಪಿಸುವವರಿಗೆ ಕೆಲವೊಂದು ಪಾಠವನ್ನು ಕಲಿಸುವುದರಲ್ಲಿ ಸಂಶಯವಿಲ್ಲ.
ಈ ಅಧ್ಯಯನದಿಂದ ತಿಳಿಯುವ ಮೊದಲ ಪಾಠವೆಂದರೆ, ಈ ನಗರಗಳಲ್ಲಿ ಕಡುಬಡತನದ ಪ್ರದೇಶಗಳು ಅಥವಾ ಕೊಳೆಗೇರಿಗಳು ದಲಿತರು, ಆದಿವಾಸಿಗಳು, ಮುಸ್ಲಿಮರು ಮತ್ತು ವಲಸಿಗರಿಂದ ತುಂಬಿ ಹೋಗಿದೆ. ಇತರ ನಗರಗಳಿಗಿಂತ ಹೆಚ್ಚು ಯೋಜನಾತ್ಮಕವಾಗಿ ನಿರ್ಮಿಸಲ್ಪಟ್ಟ ಪುಣೆಯಂತಹ ನಗರಗಳು ಕೂಡಾ ಈ ರೀತಿಯ ವಾಸ್ತವ್ಯ ಪ್ರತ್ಯೇಕೀಕರಣದಿಂದ ಹೊರಬಂದಿಲ್ಲ.
ಎರಡನೆಯದಾಗಿ, ಒಂದು ಪ್ರದೇಶದ ಇರುವಿಕೆಯು ಅದು ಪಡೆದುಕೊಳ್ಳುವ ಸೇವೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಪ್ರತೀ ಸಮೀಕ್ಷೆಯಲ್ಲೂ ಕಂಡುಬಂದಿದ್ದೇನೆಂದರೆ ನಗರದ ಆಸುಪಾಸಿನಲ್ಲಿ ಇರುವ ಕೊಳೆಗೇರಿಗಳು ಮತ್ತು ಅನೌಪಚಾರಿಕ ವಸತಿಗಳು ಮೂಲಭೂತ ಸೇವೆಗಳಾದ ಕುಡಿಯುವ ನೀರು, ನೈರ್ಮಲೀಕರಣ, ಆರೋಗ್ಯ ಮತ್ತು ಆಹಾರವನ್ನು ಪಡೆಯುತ್ತಿಲ್ಲ. ಸಮೀಕ್ಷೆ ನಡೆಸಿದ ನಗರಗಳಲ್ಲಿ, ನಗರ ಯೋಜನಾ ಪ್ರಕ್ರಿಯೆಯ ಸಮಯದಲ್ಲಿ ಅನೌಪಚಾರಿಕ ವಸತಿಗಳಲ್ಲಿ ಜೀವಿಸುತ್ತಿರುವ ಜನರನ್ನು ಗಣನೆಗೇ ತೆಗೆದುಕೊಂಡಿಲ್ಲ ಎಂಬುದು ಕಂಡುಬರುತ್ತದೆ-ಈ ವಿದ್ಯಮಾನವನ್ನು ನಾವು ಯೋಜನಾ ಕಪ್ಪುಚುಕ್ಕೆ ಎಂದು ಕರೆಯುತ್ತೇವೆ.
ಮೂರನೆಯದಾಗಿ, ಕೇವಲ ಪ್ರಾದೇಶಿಕ ಇರುವಿಕೆ ಮಾತ್ರ ಸೇವೆಯ ಸೌಲಭ್ಯವನ್ನು ನಿರ್ಧರಿಸುವ ಅಂಶವಲ್ಲ. ವಾಸ್ತವದಲ್ಲಿ ವಾರಣಾಸಿ ಮತ್ತು ಅಹ್ಮ್ಮದಾಬಾದ್ ಮುಂತಾದ ನಗರಗಳ ಮಧ್ಯಭಾಗದಲ್ಲಿ ಇರುವ ಪ್ರದೇಶಗಳು ಕೂಡಾ ಈ ನಗರಗಳ ಆಸುಪಾಸಿನಲ್ಲಿರುವಂತಹ ಪ್ರದೇಶಗಳಿಗಿಂತ ಭಿನ್ನವಾಗೇನೂ ಇಲ್ಲ. ಈ ಬಗ್ಗೆ ಆಳವಾಗಿ ಅಧ್ಯಯನ ಮಾಡಿದಾಗ ಕಂಡುಬರುವುದೇನೆಂದರೆ ಈ ಪ್ರದೇಶಗಳ ಸಾಮಾಜಿಕ ಧಾರ್ಮಿಕ ಹಿನ್ನೆಲೆ ಕೂಡಾ ಮೂಲಭೂತ ಸೌಲಭ್ಯಗಳನ್ನು ಪೂರೈಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಉದಾಹರಣೆಗೆ, ಮುಸ್ಲಿಮರು ಮತ್ತು ಇತ್ತೀಚಿನ ವಲಸಿಗರು ಇರುವಂತಹ ಪ್ರದೇಶಗಳಲ್ಲಿ ಇಂಥಾ ಅಸಮಾನತೆ ಹೆಚ್ಚಾಗಿದ್ದು ಮೂಲಭೂತ ಸೌಕರ್ಯಗಳನ್ನು ತಲುಪಿಸುವಲ್ಲಿ ಸಂಬಂಧಪಟ್ಟ ಇಲಾಖೆಗಳು ಉದಾಸೀನತೆಯನ್ನು ಪ್ರದರ್ಶಿಸುತ್ತವೆ ಎಂಬುದು ಈ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಅಲಹಾಬಾದ್‌ನ ಜುಹಾಪುರ ಮತ್ತು ಯೋಗೇಶ್ವರ ನಗರಗಳ ಹೋಲಿಕೆ ಈ ಮಾತಿಗೆ ಪುಷ್ಟಿ ನೀಡುತ್ತವೆ. ಜುಹಾಪುರ ಒಂದು ಮುಸ್ಲಿಂ ಬಾಹುಳ್ಯವಿರುವ ಪ್ರದೇಶ ಮತ್ತು ಯೋಗೇಶ್ವರ್ ನಗರ ಹಿಂದೂಗಳು ಹೆಚ್ಚಾಗಿರುವ ಕೊಳೆಗೇರಿ. ನಾವು ಕಂಡುಕೊಂಡಿದ್ದೇನೆಂದರೆ ಜುಹಾಪುರ ಮೂಲಭೂತ ಸೌಕರ್ಯಗಳಾದ ಅಗಲವಾದ ಉತ್ತಮ ರಸ್ತೆ, ಉತ್ತಮ ಚರಂಡಿ ಮತ್ತು ನೈರ್ಮಲೀಕರಣ ವ್ಯವಸ್ಥೆ ಮತ್ತು ಕುಡಿಯುವ ನೀರಿನ ಸೌಲಭ್ಯಗಳಿಂದ ವಂಚಿತವಾಗಿದೆ. ಇಂಥದ್ದೇ ಮಾದರಿಯನ್ನು ಮಧ್ಯ ವಾರಣಾಸಿಯಲ್ಲಿರುವ ಮುಸ್ಲಿಂ ಬಾಹುಳ್ಯ ಪ್ರದೇಶ ಬಜರ್ದಿಹದಲ್ಲೂ ಕಾಣಬಹುದಾಗಿದೆ.
ಖಂಡಿತವಾಗಿಯೂ, ಅಹ್ಮದಾಬಾದ್ ಮತ್ತು ವಾರಣಾಸಿ ನಗರಗಳು ಕೋಮು ಸಂಘರ್ಷ ಇತಿಹಾಸವನ್ನು ಹೊಂದಿದ್ದು ಈ ನಗರಗಳ ಮೇಲಿನ ಅಧ್ಯಯನವನ್ನು ಎಲ್ಲ ನಗರಗಳಿಗೂ ಅನ್ವಯಿಸಲಾಗದು. ಆದರೂ, ಸದ್ಯ ಕಾಣುತ್ತಿರುವ ವಿದ್ಯಾಮಾನ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅನಿರೀಕ್ಷಿತ ಮಟ್ಟದ ಧ್ರುವೀಕರಣ ಮತ್ತು ಕೋಮುವಾದ ಅನುಭವಿಸುತ್ತಿರುವ ಭಾರತದಂಥ ದೇಶಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ನಾಲ್ಕನೆ ಪಾಠವೆಂದರೆ, ಪ್ರತ್ಯೇಕೀಕರಣ ಸಂಕೀರ್ಣ ರೀತಿಯಲ್ಲಿ ನಡೆಯುತ್ತಿವೆ. ಇತ್ತೀಚಿನ ವಲಸಿಗರು, ಅವರ ಸಾಮಾಜಿಕ ಧಾರ್ಮಿಕ ಹಿನ್ನೆಲೆ ಯಾವುದೇ ಆಗಿರಲಿ, ಅತ್ಯಂತ ಹೆಚ್ಚು ಭೇದಭಾವಕ್ಕೆ ಒಳಗಾಗುತ್ತಿದ್ದಾರೆ. ಇದು, ನಂಬಲರ್ಹ ಆಡಳಿತಯಂತ್ರದ ಗೈರು ಮತ್ತು ಈ ಹೊಸ ಗುಂಪುಗಳನ್ನು ಅಸ್ತಿತ್ವದಲ್ಲಿರುವಂತಹ ಸೇವಾ ಹಂಚಿಕಾ ವ್ಯವಸ್ಥೆಗೆ ಸೇರಿಸುವಲ್ಲಿ ಬೇಕಾದ ಸಾಂಸ್ಥಿಕ ಪ್ರಕ್ರಿಯೆ ನಡೆಯದೆ ಇರುವುದನ್ನು ಸೂಚಿಸುತ್ತದೆ.
ಇದನ್ನೇ ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಭಾರತದ ಪ್ರಸ್ತುತ ನಗರೀಕರಣದ ಯಂತ್ರವು ಅನನುಕೂಲದಿಂದ ಕೂಡಿರುವ ನಾಗರಿಕರಿಗೆ ಕೆಲವೇ ಅವಕಾಶಗಳನ್ನು ನೀಡಲು ಶಕ್ತವಾಗಿದೆ, ಮುಖ್ಯವಾಗಿ ಅದರ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಹೊಸ ವಲಸಿಗರು ಮತ್ತು ಬಡವರಿಗೆ. ನಗರಗಳು ಕೇವಲ ಹಳ್ಳಿಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಸಮಾನತೆ ಮತ್ತು ಭೇದಭಾವದ ರಚನೆಯನ್ನು ಅನುರೂಪಿಸುವುದು ಮಾತ್ರವಲ್ಲ ಅದು ಭವಿಷ್ಯದ ಘರ್ಷಣೆಗೆ ಈಗಾಗಲೇ ಹುಳುಕುಗಳನ್ನು ಸೃಷ್ಟಿಸುತ್ತಿದೆ. ನಗರ ಗೆದ್ದವರು ಮತ್ತು ನಗರ ಸೋತವರು ಎಂಬ ಗುಂಪುಗಳನ್ನು ಸೃಷ್ಟಿಸುತ್ತಿರುವ ಪ್ರಸ್ತುತ ನಗರೀಕರಣದ ರೂಪವು ನಗರವನ್ನು ಯೋಜಿಸುವ ಮತ್ತು ಕಾನೂನು ಸೃಷ್ಟಿಕರ್ತರಿಗೆ ಅಗತ್ಯ ಸುಧಾರಣೆಗಳನ್ನು ಮಾಡಲು ಎಚ್ಚರಿಕೆಯಾಗಿದೆ.
ಅಭಿವೃದ್ಧಿಯ ಹಾದಿಯಲ್ಲಿ ಸಂಪನ್ಮೂಲಗಳನ್ನು ಪಡೆಯುವಲ್ಲಿ ಇರುವ ಇಂತಹ ಅಸಮಾನತೆಗಳು, ಮುಖ್ಯವಾಗಿ ಭಾರತದಂತಹ ದೇಶದಲ್ಲಿ ಮಾನವನ ಬೆಳವಣಿಗೆಯ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ, ಜೀವನದ ಗುಣಮಟ್ಟವನ್ನು ಕಡಿಮೆಗೊಳಿಸುತ್ತದೆ, ಕೋಮು ರಾಜಕೀಯಕ್ಕೆ ಎಡೆಮಾಡಿಕೊಡುತ್ತದೆ ಮತ್ತು ಧಾರ್ಮಿಕ ಮತ್ತು ಜನಾಂಗೀಯ ಆಧಾರದಲ್ಲಿ ಅಭಿವೃದ್ಧಿ ಕಂದಕವನ್ನು ಹೆಚ್ಚುಗೊಳಿಸುತ್ತದೆ.
ಜಾತಿ ಮತ್ತು ಧಾರ್ಮಿಕ ಅಸಮಾನತೆಗಳು ಪ್ರಮುಖವಾಗಿ ಸಾಮಾಜಿಕ ಮತ್ತು ರಾಜಕೀಯ ಸ್ಥಿತ್ಯಂತರದೊಂದಿಗೆ ತಾಳೆ ಹಾಕುತ್ತದೆ ಮತ್ತು ನಾಗರಿಕ ಸಂಘರ್ಷ ಮತ್ತು ಸಾಮಾಜಿಕ ಉದ್ವಿಗ್ನತೆಯನ್ನು ಉಂಟುಮಾಡುತ್ತದೆ. ಸಂಕ್ಷಿಪ್ತವಾಗಿ, ಭಾರತದ ನಗರಗಳು ನಿಧಾನವಾಗಿ ಆದರೆ ಖಂಡಿತವಾಗಿಯೂ ಹಲವು ವಿಧಗಳ ಸಮಸ್ಯೆಯ ಹಾದಿಯಲ್ಲಿ ಸಾಗುತ್ತಿದೆ ಮತ್ತು ಪ್ರತ್ಯೇಕತೆ ಮತ್ತು ಅಸಮಾನತೆಯ ಪ್ರಸಕ್ತ ವಿದ್ಯಮಾನವನ್ನು ಬದಲಾಯಿಸುವುದು ಅತ್ಯಂತ ಅಗತ್ಯವಾಗಿದೆ.
ಕೃಪೆ: ದಿ. ವೈರ್