ನೀರಿಗಾಗಿ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಾಗಿದೆ

Update: 2016-05-11 18:58 GMT

ಮಾನ್ಯರೆ,
ತೀವ್ರ ಗತಿಯಲ್ಲಿ ಬೆಳೆಯುತ್ತಿರುವ ನಗರ, ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಕೈಗಾರಿಕೆಗಳು ಇವೆಲ್ಲವೂ ಒಂದೇ ಒಂದು ಜಲಮೂಲವನ್ನು ಅವಲಂಬಿಸಿದರೆ ಪರಿಣಾಮ ಎಷ್ಟು ಭೀಕರವಾಗಿರಬಹುದು ಎನ್ನುವುದು ಈ ಬಾರಿ ಅರಿವಾಗಿದೆ. ಮಳೆಗಾಲ ಆರಂಭಕ್ಕೆ ಇನ್ನೂ ತಿಂಗಳಿದ್ದು, ಒಂದೆಡೆಯಲ್ಲಿ ನಗರದ ಜನತೆಗೆ ಕುಡಿಯಲೂ ನೀರಿಲ್ಲವಾದರೆ, ಇನ್ನೊಂದೆಡೆಯಲ್ಲಿ ಕೈಗಾರಿಕೆಗಳೂ ನೀರಿನ ಕೊರತೆಯ ಕಾರಣಕ್ಕೆ ಉತ್ಪಾದನೆಯನ್ನು ಕಡಿಮೆಗೊಳಿಸುವ ಸ್ಥಗಿತಗೊಳಿಸುವ ಅನಿವಾರ್ಯತೆ ಎದುರಾಗಿದೆ. ಕುಡಿಯುವ ನೀರಿಗಾಗಿ ಮಹಾನಗರದ ಜನತೆ ನೇತ್ರಾವತಿಯ ನೀರನ್ನು ಅವಲಂಬಿಸುವುದು ಅನಿವಾರ್ಯವಾಗಿರಬಹುದು. ಆದರೆ ಕೈಗಾರಿಕೆಗಳು ನದಿ ನೀರನ್ನೇ ಅವಲಂಬಿಸಬೇಕೆಂದೇನೂ ಇಲ್ಲವಲ್ಲ. ಸಮುದ್ರದ ನೀರನ್ನು ಸಂಸ್ಕರಿಸಿ ಬಳಸುವ ತಂತ್ರಜ್ಞಾನ ಲಭ್ಯವಿದ್ದು (ಈಗಾಗಲೇ ಕೊಲ್ಲಿ ದೇಶಗಳಲ್ಲಿ ಯಶಸ್ವಿಯಾಗಿ ಬಳಸಿಕೊಳ್ಳಲಾಗುತ್ತಿದೆ) ಕೈಗಾರಿಕೆಗಳು ಅದನ್ನು ಬಳಸಿಕೊಂಡರೆ ನಿರಂತರ ಉತ್ಪಾದನೆಗೆ ಅನುಕೂಲವಾಗುತ್ತದೆ ಮಾತ್ರವಲ್ಲ, ನದಿ ನೀರಿನ ಮೇಲಣ ಒತ್ತಡ ಕಡಿಮೆಯಾಗಿ ಮಹಾನಗರದ ಜನತೆಯ ನೀರಿನ ಸಮಸ್ಯೆಯ ಪರಿಹಾರವೂ ಸುಲಭವಾದೀತು (ಈ ಬಾರಿ ಅಧಿಕಾರಿಗಳು ಸಮಸ್ಯೆಯನ್ನು ಸಕಾಲದಲ್ಲಿ ಊಹಿಸಿ ನೀರು ಬಳಕೆ ನಿಲ್ಲಿಸುವಂತೆ ಕೈಗಾರಿಕೆಗಳಿಗೆ ಆದೇಶಿಸದಿರುವುದೂ ನೀರಿನ ಸಮಸ್ಯೆ ಉಲ್ಬಣವಾಗಲು ಒಂದು ಕಾರಣ ಎನ್ನುವುದನ್ನು ಮರೆಯದಿರೋಣ). ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಇನ್ನಷ್ಟು ಜಟಿಲವಾಗಲಿರುವ ಹಿನ್ನೆಲೆಯಲ್ಲಿ ಸರಕಾರವೇಕೆ ನೀರಿಗಾಗಿ ಪರ್ಯಾಯ ಮಾರ್ಗ ಕಂಡುಕೊಳ್ಳುವಂತೆ ಕೈಗಾರಿಕೆಗಳಿಗೆ ಆದೇಶ ನೀಡಬಾರದು?
                                                                            -ಶ್ರೀನಿವಾಸ ಕಾರ್ಕಳ, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News