ಹೆಲ್ಸಂಕಿ ಘೋಷಣೆಯ ಸುತ್ತಮುತ್ತ...
ದೇಶ ಅಸಹಿಷ್ಣುತೆ-ಅಭಿವ್ಯಕ್ತಿ ಸ್ವಾತಂತ್ರ್ಯಗಳ ವಿವಾದ, ವಾಗ್ವಾದಗಳ ಸುಳಿಯಲ್ಲಿ ಗಿರಕಿಹೊಡೆಯುತ್ತಿದ್ದಾಗಲೇ, ಮೇ 3ರಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ಸದ್ದುಗದ್ದಲಮಾಡದೆ ಬಂದು ಹೋಯಿತು. ಆದರೆ ಅಂದು ಪ್ರಪಂಚದ ವಿವಿಧೆಡೆಗಳಲ್ಲಿ ಪತ್ರಕರ್ತರು ಮತ್ತು ಪತ್ರಿಕೋದ್ಯಮಿಗಳು ಹೆಮ್ಮೆಯಿಂದ ಹಾಗೂ ಅಭದ್ರತೆಯ ಅಳುಕಿನಿಂದ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸಿದರು. ಹೆಲ್ಸಂಕಿಯಲ್ಲಿ ಯುನೆಸ್ಕೊ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಪತ್ರಕರ್ತರು, ಮಾಧ್ಯಮದವರು, ಸರಕಾರದ ಪ್ರತಿನಿಧಿಗಳು ಭಾಗವಹಿಸಿದ್ದರೆಂದು ವರದಿಯಾಗಿದೆ. ಈ ಸಭೆ, ಮಾನವ ಹಕ್ಕುಗಳ ಮುನ್ನಡೆಗೆ ಮತ್ತು ದೀರ್ಘಾವಧಿ ತಾಳಿಕೆ-ಬಾಳಿಕೆಯ ಅಭಿವೃದ್ಧಿಗೆ ಅತ್ಯಾವಶ್ಯಕವಾದ ಪತ್ರಿಕಾ ಸ್ವಾತಂತ್ರ್ಯ ಮತ್ತು ಮುಕ್ತ ಮಾಹಿತಿ ಹಕ್ಕುಗಳನ್ನೊಳಗೊಂಡ ಮಾಧ್ಯಮಗಳ ಸ್ವಾತಂತ್ರ್ಯವನ್ನು ಪುನರ್ ದೃಢೀಕರಿಸುವಂತೆ ಯುನೆಸ್ಕೋದ 195 ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ.
ಪತ್ರಿಕಾ ಸ್ವಾತಂತ್ರ್ಯ ಹಿಂದೆಂದಿಗಿಂತ ಹೆಚ್ಚು ಅಡ್ಡಿ-ಆತಂಕಗಳನ್ನು ಎದುರಿಸುತ್ತಿರುವ ಈ ದಿನಗಳಲ್ಲಿ ಈ ಕರೆ ಯೋಗ್ಯವಾದುದೇ ಆಗಿದೆ. ಇದೇ ಸಂದರ್ಭದಲ್ಲಿ ಬಿಡುಗಡೆಮಾಡಲಾಗಿರುವ ಪತ್ರಕರ್ತರ ಅಂತಾರಾಷ್ಟ್ರೀಯ ಒಕ್ಕೂಟದ ಸಮೀಕ್ಷೆ ಪತ್ರಿಕೋದ್ಯಮದಲ್ಲಿನ ಅಭದ್ರತೆ ಮತ್ತು ಆಪತ್ತು-ಆತಂಕಗಳಿಗೆ ಹಿಡಿದ ಕನ್ನಡಿಯಾಗಿದೆ. ಸಮೀಕ್ಷೆಯ ಸಾರಾಂಶ ಹೀಗಿದೆ:
ಪತ್ರಕರ್ತರನ್ನು ಹೆದರಿಸಲಾಗುತ್ತಿದೆ; ಅವರ ಮೇಲೆ ದಾಳಿ ಮಾಡಲಾಗುತ್ತಿದೆ; ಸೆರೆಮನೆಗಳಿಗೆ ತಳ್ಳಲಾಗುತ್ತಿದೆ ಮತ್ತು ಅವರನ್ನು ವಧೆ ಮಾಡಲಾಗುತ್ತಿದೆ. ಸರಕಾರಗಳು ಸುದ್ದಿಗಳನ್ನು ಸೆನ್ಸಾರ್ ಮಾಡುತ್ತಿವೆ ಅಥವಾ ಸುದ್ದಿ ಸಿಗದಂತೆ ಮಾಡುತ್ತಿವೆ; ಅರೆಮಿಲಿಟರಿ ಶಕ್ತಿಗಳು ಮತ್ತು ಭಯೋತ್ಪಾದಕ ಸಂಸ್ಥೆಗಳು ಸುದ್ದಿ ಸಂವಾಹಕರಾದ ಪತ್ರಕರ್ತರನ್ನು ನಿಗ್ರಹಿಸುತ್ತಿವೆ, ಅವರ ಮೇಲೆ ಆಕ್ರಮಣವೆಸಗುತ್ತಿವೆ. ಸಂವಹನ ತಂತ್ರಜ್ಞಾನವು ಅಧಿಕ ಅಭಿವ್ಯಕ್ತಿ ಸ್ವಾತಂತ್ರ್ಯ ಕಲ್ಪಿಸಬೇಕಾದ ಈ ದಿನಗಳಲ್ಲಿ ಜಗತ್ತಿನಾದ್ಯಂತ ಪತ್ರಕರ್ತರ ವಿರುದ್ಧ ಹಲ್ಲೆ ಮೊದಲಾದ ವಿವಿಧ ರೀತಿಯ ಅಪರಾಧಗಳನ್ನು ಎಸಗುತ್ತಿರುವವರಿಗೆ ರಕ್ಷಣೆ ನೀಡಲಾಗುತ್ತಿದೆ
ಇದು ಆತಂಕದ ಒಂದು ಮುಖ. ಇನ್ನೂ ಹೆಚ್ಚು ಭೀತಿ-ಕಳವಳಗಳನ್ನುಂಟು ಮಾಡುವುದು ದಕ್ಷಿಣ ಏಷ್ಯಾ ಕುರಿತ ವರದಿ. ಒಕ್ಕೂಟ ವರದಿ ಮಾಡಿರುವಂತೆ, 2015 ಮೇ-2016 ಎಪ್ರಿಲ್ ನಡುವಣ ಅವಧಿಯಲ್ಲಿ ಈ ಭೂಭಾಗದಲ್ಲಿ ಮೂವತ್ತೊಂದು ಮಂದಿ ಪತ್ರಕರ್ತರ ಕೊಲೆಯಾಗಿದೆ; ಬಾಂಗ್ಲಾದೇಶದಂತೆ ಭಾರತವೂ ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿ ರಾಷ್ಟ್ರವಾಗಿ ಬೆಳೆಯುತ್ತಿದೆ. ಬಾಂಗ್ಲಾದೇಶದಲ್ಲಿ ಪತ್ರಕರ್ತರು ಮತ್ತು ಬ್ಲಾಗರುಗಳ ಮೇಲೆ ಮಾರಕ ಹಲ್ಲೆ ಅವ್ಯಾಹತವಾಗಿ ನಡೆದಿದೆ. ಇಂಥ ಹಲ್ಲೆಗಳ ವಿರುದ್ಧ ರಕ್ಷಣೆಗಾಗಿ ನಡೆಸುವ ಹೋರಾಟದಲ್ಲೂ ಹೆಚ್ಚು ಬೆಲೆ ತೆರಬೇಕಾಗಿದೆ. ರಕ್ಷಣೆ ಕೇಳಿದವರ ವಿರುದ್ಧ ಹುಸಿ ಮೊಕದ್ದಮೆಗಳನ್ನು ಸೃಷ್ಟಿಸುವುದು ಮೊದಲಾದ ಕಿರುಕುಳಗಳನ್ನು ನೀಡಲಾಗುತ್ತಿದೆ ಎಂದಿರುವ ವರದಿ ಇದಕ್ಕೆ ದೃಷ್ಟಾಂತವಾಗಿ ಪಾಕಿಸ್ತಾನ, ಶ್ರೀಲಂಕಾಗಳನ್ನು ಹೆಸರಿಸಿದೆ.
ಎಲ್ಲ ವೃತ್ತಿಗಳಲ್ಲಿರುವಂತೆ ಪತ್ರಿಕೋದ್ಯಮದಲ್ಲೂ ಪತ್ರಿಕಾಧರ್ಮ, ನೀತಿಗಳು ಇರಬೇಕಲ್ಲವೇ? ಇದರ ಕಣ್ಗಾವಲಾಗಿ ‘ಎಥಿಕ್ಸ್ ಜರ್ನಲಿಸಂ ನೆಟ್ವರ್ಕ್’ಎನ್ನುವ ಸಂಘಟನೆಯೊಂದಿದೆ. ಪತ್ರಿಕೋದ್ಯಮ ಇವತ್ತು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೂ ಸರಕಾರದ ಬೇಹುಗಾರಿಕೆ ಮತ್ತು ಹಸ್ತಕ್ಷೇಪವೇ ಕಾರಣ. ಖಾಸಗಿ ಜೀವನದಲ್ಲಿ ಬೇಹುಗಾರಿಕೆ ನಡೆಸುವ ಹಾಗೂ ಖಾಸಗಿ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಕಾರ್ಪೊರೇಟ್ ಸಂಸ್ಕೃತಿ ಹಾಗೂ, ಆನ್‌ಲೈನ್ ಸಂಭಾಷಣೆಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿ ಇವೇ ಇಂದಿನ ಆತಂಕಗಳಿಗೆ ಮುಖ್ಯಕಾರಣವೆನ್ನುತ್ತದೆ ಈ ಸಂಘಟನೆ. ಈ ಹಿನ್ನೆಲೆಯಲ್ಲಿ ಮೇ 3ರಂದು ನಡೆದ ಸಮಾವೇಶದಲ್ಲಿ ‘ಯುನೆಸ್ಕೊ ಫಿನ್ಲೆಂಡ್ ಘೋಷಣೆಯನ್ನು’ ಅಂಗೀಕರಿಸಲಾಗಿದೆ. ಮಾಹಿತಿ ಮತ್ತು ಮೂಲಭೂತ ಸ್ವಾತಂತ್ರ್ಯಗಳಿಗೆ ಗಮ್ಯತೆ (ಆಕ್ಸೆಸಿಬಿಲಿಟಿ) ಮಾನವ ಹಕ್ಕು ಆಗಿದ್ದು, ಪತ್ರಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಅವಿಭಾಜ್ಯ ಅಂಗವಾಗಿದೆ ಎಂದು ಈ ಘೋಷಣೆಯಲ್ಲಿ ಪ್ರತಿಪಾದಿಸಲಾಗಿದೆ. ಈ ಘೋಷಣೆಗೆ ವಿಶ್ವಸಂಸ್ಥೆಯ 2030ರ ಕಾರ್ಯಸೂಚಿ ಸ್ಫೂರ್ತಿಮೂಲವಾಗಿದೆ. ಎಲ್ಲ ಸಮಾಜ-ಸಮುದಾಯಗಳನ್ನೂ ಒಳಗೊಂಡಂತೆ ನ್ಯಾಯಯುತವಾದ, ಶಾಂತಿಯುತವಾದ ಜೀವನಮಾರ್ಗಕ್ಕೆ ಬದ್ಧವಾದಂಥ ಶಾಶ್ವತ ಅಭಿವೃದ್ಧ್ಧಿಯನ್ನು ಪ್ರೋತ್ಸಾಹಿಸುವುದು ಮತ್ತು ಪ್ರಾಯೋಜಿಸುವುದೇ ಈ ಕಾರ್ಯಸೂಚಿಯ ಮುಖ್ಯ ಧ್ಯೇಯ ಮತ್ತು ಗುರಿ. ಪತ್ರಿಕಾ ಸ್ವಾತಂತ್ರ್ಯ, ಮಾಹಿತಿ ಹಕ್ಕು, ಪತ್ರಕರ್ತರ ಸುರಕ್ಷತೆ ಮತ್ತು ಕಾನೂನುಬದ್ಧ ಆಡಳಿತ, ಶಾಶ್ವತ ಅಭಿವೃದ್ಧಿಯ ಹೆಗ್ಗುರುತುಗಳಾಗಿರಬೇಕು ಎಂದು ವಿಶ್ವಸಂಸ್ಥೆ ಹೇಳುತ್ತದೆ.
ಯುನೆಸ್ಕೊ ಫಿನ್ಲೆಂಡ್ ಘೋಷಣೆ ಸರ್ವವ್ಯಾಪಿಯಾಗಿದ್ದು ಯಾವ ದೇಶಕ್ಕೂ ಇದರಿಂದ ವಿನಾಯಿತಿ ಇಲ್ಲ. ಜನತೆ ಸಾರ್ವತ್ರಿಕವಾದ ಮಾಹಿತಿಯನ್ನು ಪಡೆಯಲು ಅನುಕೂಲವಾಗುವಂಥ ನೀತಿ-ನಿಯಮ, ಕಾನೂನುಗಳನ್ನು ರಚಿಸಲು ಅದು ವಿಶ್ವವ್ಯಾಪಿ ಸರಕಾರಗಳಿಗೆ ಕರೆ ನೀಡಿದೆ. ಅಂತೆಯೇ ಪತ್ರಕರ್ತರ ಸುದ್ದಿಮೂಲದ ಗುರುತು-ಗೋಪ್ಯತೆಗಳನ್ನು ರಕ್ಷಿಸುವಂಥ, ಅಕ್ರಮ-ಅವ್ಯವಹಾರಗಳ ಸುಳಿವು ನೀಡುವ ಎಚ್ಚರಿಕೆ ಸೀಟಿಗಾರರನ್ನು ರಕ್ಷಿಸುವಂಥ ಕಾನೂನುಗಳನ್ನು ರಚಿಸುವಂತೆಯೂ ಅದು ವಿಶ್ವ ರಾಷ್ಟ್ರಗಳಿಗೆ ಆದೇಶಿಸಿದೆ. ಸುರಕ್ಷತಾ ಕ್ರಮಗಳನ್ನು ಜಾರಿಗೆ ತರುವಂತೆಯೂ ಆಗ್ರಹಪಡಿಸಲಾಗಿದೆ.
ಪತ್ರಿಕಾ ಸ್ವಾತಂತ್ರ್ಯದ ಮಹತ್ವವನ್ನು ಮನಗಾಣಿಸಲು, ಜನಜಾಗೃತಿಯುಂಟುಮಾಡಲು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಗೌರವಿಸುವ ಮತ್ತು ಎತ್ತಿಹಿಡಿಯಬೇಕಾದ ಹೊಣೆಗಾರಿಕೆಯನ್ನು ಸರಕಾರಗಳಿಗೆ ಮನವರಿಕೆ ಮಾಡಿಕೊಡಲು ವಿಶ್ವ ಸಂಸ್ಥೆ ಪ್ರತೀ ವರ್ಷ ಮೇ 3ರಂದು ವಿಶ್ವ ಪತ್ರಿಕಾ ದಿನ ಆಚರಿಸಲು ನಿರ್ಧರಿಸಿತು. 1993ರಿಂದ ಇದು ಆಚರಣೆಗೆ ಬಂತು. ಸಾರ್ವಜನಿಕ ಹಿತರಕ್ಷಣೆ ಮತ್ತು ಶಿಕ್ಷಣ, ಜ್ಞಾನಪ್ರಸಾರಗಳನ್ನೇ ಪರಮ ಆದರ್ಶ, ಗುರಿಯಾಗುಳ್ಳ ಪವಿತ್ರ ವೃತ್ತಿಯಾದ ಪತ್ರಿಕೋದ್ಯಮ ಹಾಗೂ ಪತ್ರಕರ್ತರು ಸ್ವಾತಂತ್ರ್ಯ, ರಕ್ಷಣೆಗಳನ್ನು ಬಯಸುವುದರಲ್ಲಿ ತಪ್ಪೇನಿಲ್ಲ. ಆದರೆ ಪತ್ರಿಕಾ ಸ್ವಾತಂತ್ರ್ಯವೆನ್ನುವುದು ಒಂದು ಮಿಥ್ಯ ಕಲ್ಪನೆ. ಅಮೆರಿಕ, ಬ್ರಿಟನ್‌ಗಳಂಥ ಮುಂದುವರಿದ ಪ್ರಜಾಪ್ರಭುತ್ವಗಳೂ ಸೇರಿದಂತೆ ಯಾವ ದೇಶದಲ್ಲೂ ಪತ್ರಕರ್ತರಿಗೆ ಅಬಾಧಿತ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ. ಸಕಲ ಪ್ರಜೆಗಳಿಗಿರುವಷ್ಟೇ ಮೂಲಭೂತ ಸ್ವಾತಂತ್ರ್ಯವಿದೆ. ಇದು ಮೂಲಭೂತ ಹಕ್ಕುಗಳಲ್ಲಿ ಪ್ರಾಪ್ತವಾಗಿರುವ ಸ್ವಾತಂತ್ರ್ಯ. ನಮ್ಮ ದೇಶದಲ್ಲೂ ಸಂವಿಧಾನದತ್ತವಾಗಿ ಎಲ್ಲ ಪ್ರಜೆಗಳಿಗಿರುವುದಕ್ಕಿಂತ ಹೆಚ್ಚಿನ ಸ್ವಾತಂತ್ರ್ಯವಾಗಲಿ ವಿಶೇಷ ಹಕ್ಕುಗಳಾಗಲಿ ಪತ್ರಕರ್ತರಿಗಿಲ್ಲ. ಇನ್ನು ಪತ್ರಕರ್ತರನ್ನು, ಪತ್ರಿಕೆಗಳನ್ನು ‘ಸಾಮ ದಾನ ಭೇದ ದಂಡ’ ಈ ಯಾವುದೇ ಚತುರೋಪಾಯದಿಂದ ನಿಯಂತ್ರಿಸುವ, ಹದ್ದುಬಸ್ತಿನಲ್ಲಿಡುವ ಪ್ರವೃತ್ತಿಗಳ ಎಲ್ಲ ದೇಶಗಳಲ್ಲೂ ಇದೆ. ಪತ್ರಕರ್ತರ ಮೇಲೆ ಹಲ್ಲೆ, ಆಕ್ರಮಣ, ಪತ್ರಕರ್ತರ ಅಪಹರಣ, ವಧೆ ಇತ್ಯಾದಿ ನಾವು ದಿನ ನಿತ್ಯ ಕಾಣುತ್ತಿರುವ ಸಂಗತಿಗಳಾಗಿವೆ. ದಕ್ಷಿಣ ಏಷ್ಯಾ ಅಂತೂ ಇತ್ತೀಚಿನ ವರ್ಷಗಳಲ್ಲಿ ಇದಕ್ಕೆ ಕುಖ್ಯಾತವಾಗಿದೆ. ನಮ್ಮ ದೇಶದಲ್ಲೇ ಜಾರ್ಖಂಡ್, ಛತ್ತೀಸ್‌ಗಡ ರಾಜ್ಯಗಳಲ್ಲಿ ಪತ್ರಕರ್ತರು ನಿರ್ಭೀತಿಯಿಂದ ತಮ್ಮ ಕೆಲಸ-ಜವಾಬ್ದಾರಿಗಳನ್ನು ನಿರ್ವಹಿಸುವುದು ದುಸ್ತರವಾಗಿಬಿಟ್ಟಿದೆ. ಸರಕಾರಗಳು ಪತ್ರಕರ್ತರನ್ನು ನಕ್ಸಲೀಯರೆಂಬ ಹಣೆಪಟ್ಟಿ ಅಂಟಿಸಿ ಅಥವಾ ಇನ್ನಾವುದೋ ತಂಟೆತಕರಾರುಗಳಲ್ಲಿ ಸುಳ್ಳುಸುಳ್ಳೇ ಸಿಕ್ಕಿಸಿ ಜೈಲಿಗೆ ದೂಡಿರುವ ನಿದರ್ಶನಗಳಿವೆ. ನಮ್ಮ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಮಂಗಳೂರು ಮೊದಲಾದೆಡೆಗಳಲ್ಲೂ ಪತ್ರಕರ್ತರನ್ನು ಇಂಥ ‘ಮರ್ಯಾದೆ’ಗೆ’ ಗುರಿಪಡಿಸಿರುವುದುಂಟು. ಇನ್ನು ಸಂಘಪರಿವಾರದ ಕೃಪಾಪೋಷಿತರ ಹೆದರಿಕೆ-ಬೆದರಿಕೆ-ಬಯ್ಗಳಗಳ ಬಗ್ಗೆ ಹೇಳಲೇ ಬೇಕಿಲ್ಲ. ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುವ ವ್ಯವಸ್ಥೆಯ ಹಲವಾರು ಮಾರ್ಗೋಪಾಯಗಳಲ್ಲಿ, ಕ್ರೌರ್ಯದಂತೆ ನಯವಾದ ರೀತಿನೀತಿಗಳೂ ಇವೆ. ಪತ್ರಕರ್ತರಿಗೆ ಗಮ್ಯತೆಯನ್ನು ನಿರಾಕರಿಸುವುದು, ಪತ್ರಿಕೆಗಳನ್ನು ನಿರ್ಲಕ್ಷಿಸುವುದು ನಯವಾದ ಮಾರ್ಗಗಳಲ್ಲೊಂದು. ಇದಕ್ಕೆ ನಮ್ಮ ಪ್ರಧಾನ ಮಂತ್ರಿ ಮೋದಿಯವರ ಸರಕಾರಕ್ಕಿಂತ ಉತ್ತಮ ಉದಾಹರಣೆ ಇನ್ನೊಂದು ಬೇಕಿಲ್ಲ. ಮೋದಿಯವರಿಗೆ ಪತ್ರಿಕೆಗಳ ಮೂಲಕ ಜನರನ್ನು ತಲುಪುವ ಇರಾದೆ ಇದ್ದಂತಿಲ್ಲ. ಪತ್ರಿಕೆಗಳ ಹಂಗೇಕೆ? ನೇರವಾಗಿ ಜನರ ಜೊತೆ ಮಾತಾಡುತ್ತೇನೆ ಎಂಬುದು ಅವರ ಮನೋಗತವಿದ್ದಂತಿದೆ. ಅದಕ್ಕಾಗಿಯೇ ಅವರು ಪತ್ರಕರ್ತರನ್ನು ಭೇಟಿಯಾಗುವುದಿಲ್ಲ, ಪತ್ರಿಕಾಗೋಷ್ಠಿಗಳನ್ನು ಮಾಡುವುದಿಲ್ಲ. ಸರಕಾರಿ ಮಾಧ್ಯಮ ಆಕಾಶವಾಣಿ ಮೂಲಕ ‘ಮನ್ ಕಿ ಬಾತ್’ನಲ್ಲಿ ನೇರವಾಗಿ ಜನರ ಜೊತೆ ಮಾತಾಡುತ್ತಾರೆ. ಪ್ರಧಾನ ಮಂತ್ರಿಯಾದವರು ವರ್ಷದಲ್ಲಿ ಮೂರುನಾಲ್ಕು ಬಾರಿಯಾದರೂ ಪತ್ರಿಕಾಗೋಷ್ಠಿ ನಡೆಸುವುದು ನಡೆದುಬಂದಿರುವ ಸಂಪ್ರದಾಯ. ಇಂಥ ಪತ್ರಿಕಾಗೋಷ್ಠಿಗಳು ಪ್ರಧಾನಿಯೊಂದಿಗೆ ಪ್ರತ್ಯಕ್ಷ ಸಂವಾದ ನಡೆಸಲು ಪತ್ರಕರ್ತರಿಗೊಂದು ಸುವರ್ಣಾವಕಾಶ. ಪ್ರಧಾನಿಯವರ ಆದ್ಯತೆಗಳೇನು, ಅವರ ಸರಕಾರದ ಯೋಜನೆಗಳೇನು, ಆರ್ಥಿಕ ಪರಿಸ್ಥಿತಿ, ವಿದೇಶಾಂಗ ನೀತಿ, ನೆರೆಹೊರೆಯೊಂದಿಗೆ ಬಾಂಧವ್ಯ ಇತ್ಯಾದಿ ಅನೇಕ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳಲು, ಸಂವಾದ ಮಾಡಲು ಪತ್ರಕರ್ತರಿಗೆ ಇದು ಒಂದು ವೇದಿಕೆಯಾಗುತ್ತಿತ್ತು. ಆದರೆ ಮೋದಿಯವರು ಪ್ರಧಾನಿಯಾಗಿ ಎರಡು ವರ್ಷ ಕಳೆದರೂ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿಲ್ಲ. ಅವರ ಸಂಪುಟದ ಸಚಿವರೂ ನಾಯಕನ ಹೆಜ್ಜೆಪಾಡನ್ನೇ ಅನುಸರಿಸುತ್ತಿರುವಂತಿದೆ. ಪತ್ರಕರ್ತರನ್ನು ವಿಶೇಷ ಸಂದರ್ಶನ ಇತ್ಯಾದಿಯಾಗಿ ಹತ್ತಿರ ಸೇರಿಸಿಕೊಳ್ಳಬೇಡಿ ಎಂದು ಸಚಿವರಿಗೆ ಕಿವಿಮಾತು ಹೇಳಿದ್ದಾರೆ ಎನ್ನುವ ವದಂತಿಯೂ ಇದೆ. ಪ್ರಧಾನ ಮಂತ್ರಿಯವರು ವಿದೇಶ ಪ್ರವಾಸ ಹೋದಾಗ ತಮ್ಮ ಜೊತೆಗೆ ಪತ್ರಕರ್ತರನ್ನು ಕರೆದೊಯ್ಯುವುದು ಹಿಂದಿನಿಂದ ನಡೆದು ಬಂದಿರುವ ಇನ್ನೊಂದು ಸಂಪ್ರದಾಯ. ಇದರಿಂದ ಪತ್ರಕರ್ತರಿಗೆ ಪ್ರಧಾನಿಯವರ ಪ್ರವಾಸ ಕಾರ್ಯಕಲಾಪಗಳನ್ನು, ಪ್ರವಾಸದ ಫಲಾಫಲಗಳನ್ನು ಪ್ರತ್ಯಕ್ಷದರ್ಶಿಯಾಗಿ ವರದಿ ಮಾಡುವ ಅವಕಾಶ ಲಭಿಸುತ್ತಿತ್ತು. ಮಿಗಿಲಾಗಿ, ಪ್ರವಾಸ ಕಾಲದಲ್ಲಿ ಪ್ರಧಾನಿಯವರ ಜೊತೆಗಿನ ಸಾಮೀಪ್ಯದಿಂದಾಗಿ ದೇಶದ ಮುಖ್ಯ ವಿಷಯಗಳ ಬಗ್ಗೆ ಸತ್ಯ ಸಂಗತಿಗಳು, ಹಲವು ಒಳನೋಟಗಳು ಲಭ್ಯವಾಗುತ್ತಿದ್ದವು. ವಿಮಾನದಲ್ಲಿ ಸಂದರ್ಶನ, ಪತ್ರಿಕಾ ಗೋಷ್ಠಿಗಳು ನಡೆಯುತ್ತಿದ್ದವು. ಮೋದಿಯವರು ಈ ಸಂಪ್ರದಾಯವನ್ನೂ ಮುರಿದಿದ್ದಾರೆ.
ಸುದ್ದಿ ಮೂಲಗಳು ಗಮ್ಯತೆಯನ್ನೇ ನಿರಾಕರಿಸಿದಾಗ, ಹತ್ತಿರ ಸೇರಿಸದಿದ್ದಾಗ ಪತ್ರಕರ್ತರು ಏನು ಮಾಡಬೇಕು? ಪತ್ರಕರ್ತರಾದ ನಾವು ಹಕ್ಕುಗಳಿಗಾಗಿ ಒತ್ತಾಯಪಡಿಸುವುದರ ಜೊತೆಗೆ ಸ್ವಲ್ಪಆತ್ಮಾವಲೋಕನವನ್ನೂ ಮಾಡಿಕೊಳ್ಳಬೇಕು.ಸುದ್ದಿಯ ವಿವಿಧ ಮೂಲಗಳಿಗಾಗಿ ತಡಕಾಡಬೇಕು. ಆಗ, ನೇರವಾಗಿ ಶಂಖದಿಂದ ಬಾರದ ಸುದ್ದಿಗಂಗೆಯನ್ನು ಅನ್ಯಮಾರ್ಗಗಳಿಂದ ಜನತೆಯ ಬಾಗಿಲಿಗೆ ಹರಿಸುವ ಆಧುನಿಕ ‘ಭಗೀರಥ’ರು ನಾವಾಗಬಹುದು. ಇದಕ್ಕೆ ತನಿಖಾ ವರದಿ ಒಂದು ಮುಖ್ಯ ಸಾಧನ. ಮೋದಿಯವರು ಪ್ರಧಾನಿಯಾದ ಮೇಲೆ ಜನೋಪಯೋಗಿ ಎನ್ನಲಾದ ಹಲವಾರು ಯೋಜನೆಗಳನ್ನು ಪ್ರಕಟಿಸಿದ್ದಾರೆ. ಜನಧನ್, ಸ್ವಚ್ಛತಾ, ಅಟಲ್ ಪಿಂಚಣಿ, ಸುಕನ್ಯಾ, ಬೆಳೆ ವಿಮೆ ಇತ್ಯಾದಿ. ಇವುಗಳಲ್ಲಿ ಎಷ್ಟು ಹೊಸ ಯೋಜನೆಗಳು, ಎಷ್ಟು ಹೊಸ ಶೀಸೆಯಲ್ಲಿನ ಹಳೆಯ ಮದ್ಯಗಳು? ಇದರಲ್ಲಿ ಸರಕಾರದ ಬೊಕ್ಕಸದ ಪಾಲೆಷ್ಟು, ಜನರ ಪಾಲೆಷ್ಟು? ಜನಧನ್‌ದಲ್ಲಿ ಬಡಬಗ್ಗರ ಕುಡಿಕೆ ಹಣ ಕೋಟಿ ರೂ.ಗಳಲ್ಲಿ ಬ್ಯಾಂಕುಗಳಿಗೆ ಹರಿದು ಬಂದಿದೆ. ಪ್ರತಿಯಾಗಿ ವಿಮೆ ಇತ್ಯಾದಿ ರೂಪದಲ್ಲಿ ಅವರಿಗೆ ಎಷ್ಟು ಸಿಕ್ಕಿದೆ? ಜನರಿಂದ ವಿಮೆ ಕಂತು, ಠೇವಣಿ ರೂಪದಲ್ಲಿ ಹಣ ಕಟ್ಟಿಸಿಕೊಂಡು 15-20 ವರ್ಷಗಳ ನಂತರ ಮಾಸಿಕ ಪಿಂಚಣಿಯೋ ಮತ್ತೊಂದೋ ಕೊಡುವುದರಲ್ಲಿ ಈ ಸರಕಾರದ ವಿಶೇಷವೇನು? ವಿಮಾ ಕಂಪೆನಿಗಳು ಈ ಕೆಲಸವನ್ನು ಮೊದಲಿನಿಂದ ಮಾಡುತ್ತಿವೆಯಲ್ಲ? ಇವೆಲ್ಲ ಜನರ ಕಣ್ಣಿಗೆ ಮಣ್ಣೆರಚುವ ಹಗಲು ವಂಚನೆಗಳಲ್ಲವೇ? ಉಳ್ಳವರು ಬಿಟ್ಟುಕೊಟ್ಟ ಎಲ್‌ಪಿಜಿ ಸಬ್ಸಿಡಿಯಲ್ಲಿ ಸರಕಾರದ ಕೊಡುಗೆ, ಮೆಹರ್ಬಾನಿಗಳೇನಿದೆ? ಜನಾರೋಗ್ಯ, ಶಿಕ್ಷಣ, ಕೃಷಿ ಇಂಥ ಬಾಬ್ತುಗಳಿಗೆ ಹೆಚ್ಚು ಹಣ ಏಕಿಲ್ಲ? ಜನರಲ್ಲಿ ಅರಿವು ಮೂಡಿಸುವ ಇಂಥ ತನಿಖಾ ವರದಿಗಳನ್ನು ನಾವು ಏಕೆ ಮಾಡುತ್ತಿಲ್ಲ? ನನಗೆ ತಿಳಿದ ಮಟ್ಟಿಗೆ ರಾಷ್ಟ್ರೀಯ ಎನ್ನಲಾದ ಆಂಗ್ಲ ಪತ್ರಿಕೆಗಳೂ ಈ ಕೆಲಸವನ್ನು ಮಾಡಿಲ್ಲ. ಇವು ಕೆಲವು ಉದಾಹರಣೆಗಳಷ್ಟೆ. ರಾಜ್ಯ ಸರಕಾರಗಳ ಬಗ್ಗೆಯೂ ಈ ಮಾತು ಅನ್ವಯಿಸುತ್ತದೆ. ಪತ್ರಿಕಾ ಸ್ವಾತಂತ್ರ್ಯವನ್ನು ಮತ್ತು ಸುದ್ದಿಗೆ ಗಮ್ಯತೆಗಳನ್ನು ನಿರಾಕರಿಸಿದಾಗ ನಾವು ಇಂಥ ಒಳದಾರಿಗಳನ್ನು ಹುಡುಕಿಕೊಳ್ಳಬಾರದೇಕೇ? ಭರತ ವಾಕ್ಯ:
ಪತ್ರಕರ್ತನ ಸ್ವಾತಂತ್ರ್ಯವು ನಿಜವಾಗಿ ಪ್ರಜಾಜನರಿಗೆಲ್ಲರಿಗೂ ಸೇರಿದ ಒಂದು ಅಧಿಕಾರವೇ ಹೊರತು,ಅದು ಅವನೊಬ್ಬನಿಗೆ ಮಾತ್ರ ಸಂಬಂಧಪಟ್ಟ ಹಕ್ಕೇನೂ ಅಲ್ಲವೆಂಬುದನ್ನು ಯಾರೂ ಮರೆಯಲಾಗದು. ಅವನು ಪರಾಧೀನನಾಗದೆ ಇದ್ದರೆ ಅದರ ಪ್ರಯೋಜನವು ಎಲ್ಲ ಪ್ರಜೆಗಳಿಗೂ ಇರುವುದು. ಅವನಿಗೆ ಹಿಂಗಟ್ಟುಮುರಿ ಕಟ್ಟಿಸಿದರೆ ಅದರ ಬಾಧೆಯು ಎಲ್ಲರ ಪಾಲಿಗೂ ತಗಲುವುದು.
-ಡಿವಿಜಿ