ಪಕ್ಷದೊಳಗೆ ಪ್ರಶಾಂತ್ ಹಸ್ತಕ್ಷೇಪ ಬೇಡ: ಚುನಾವಣಾ ತಂತ್ರಜ್ಞನಿಗೆ ಅಮರಿಂದರ್ ಎಚ್ಚರಿಕೆ
ಅಮೃತಸರ, ಮೇ 15: ಚುನಾವಣಾ ತಂತ್ರ ರೂಪಿಸುವುದಷ್ಟೇ ಪ್ರಶಾಂತ್ ಕಿಶೋರ್ ಕೆಲಸ. ಪಕ್ಷ ನಡೆಸುವುದು ನನ್ನ ಜವಾಬ್ದಾರಿ. ಈ ವಿಚಾರದಲ್ಲಿ ಪ್ರಶಾಂತ್ ಯಾವುದೇ ಹಸ್ತಕ್ಷೇಪ ಮಾಡುವುದನ್ನು ನಾನು ಸಹಿಸುವುದಿಲ್ಲ. ಮತ್ತೊಬ್ಬರನ್ನು ಪಕ್ಷಕ್ಕೆ ವಾಪಾಸು ಸೇರಿಸಿಕೊಳ್ಳುವುದು ಅಥವಾ ಮತ್ತೊಬ್ಬರನ್ನು ಉಚ್ಚಾಟಿಸಲು ಶಿಫಾರಸ್ಸು ಮಾಡುವುದು ನನ್ನ ಕೆಲಸ. ಪಂಜಾಬ್ ರಾಜಕೀಯದ ಒಳಸುಳಿಗಳನ್ನು ಅವರು ಅರಿಯರು ಎಂದು ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಸಾಗರೋತ್ತರ ಪ್ರವಾಸದ ಫಲಶ್ರುತಿ, ಪ್ರಶಾಂತ್ ಕಿಶೋರ್ ಅವರ ತಂತ್ರಗಾರಿಕೆ, ಪಕ್ಷಕ್ಕೆ ಎದುರಾಗಿರುವ ಹಣದ ಮುಗ್ಗಟ್ಟು, ಮಾಜಿ ಸಹೋದ್ಯೋಗಿಗಳಾದ ಬೀರ್ ದೇವೇಂದರ್ ಹಾಗೂ ಜಗಮೀತ್ ಸಿಂಗ್ ಬ್ರಾರ್ ಬಗ್ಗೆಯೂ ವಿವರವಾಗಿ ಸಿಂಗ್ ಮಾತನಾಡಿದ್ದಾರೆ. "ನಾನು ಪಕ್ಷದಲ್ಲಿರುವವರೆಗೂ ಬ್ರಾರ್ ಹಾಗೂ ಬೀರ್ ದೇವೇಂದರ್ ಪಕ್ಷಕ್ಕೆ ಮರಳುವ ಪ್ರಶ್ನೆಯೇ ಇಲ್ಲ. ನನಗೆ ಜೀವನ ಎಂದರೆ ಶಿಸ್ತು. ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ಮಾತನಾಡುವವರನ್ನು ಹೇಗೆ ವಾಪಾಸು ಕರೆಸಿಕೊಳ್ಳಲು ಸಾಧ್ಯ" ಎಂದು ಮರುಪ್ರಶ್ನೆ ಹಾಕಿದ್ದಾರೆ.
ಆದರೆ ಪ್ರಶಾಂತ್ ಕಿಶೋರ್ ಅವರು, ಉಭಯ ಮುಖಂಡರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖಂಡ ಚರಣ್‌ಜಿತ್ ಸಿಂಗ್ ಚನ್ನಿ ಅವರ ನಿವಾಸದಲ್ಲಿ ಭೇಟಿ ಮಾಡಿದ ಬಗ್ಗೆ ಗಮನ ಸೆಳೆದಾಗ, ಚುನಾವಣಾ ತಂತ್ರ ರೂಪಿಸುವುದಷ್ಟೇ ಪ್ರಶಾಂತ್ ಕಿಶೋರ್ ಕೆಲಸ. ಪಕ್ಷ ನಡೆಸುವುದು ನನ್ನ ಜವಾಬ್ದಾರಿ. ಈ ವಿಚಾರದಲ್ಲಿ ಪ್ರಶಾಂತ್ ಯಾವುದೇ ಹಸ್ತಕ್ಷೇಪ ಮಾಡುವುದನ್ನು ನಾನು ಸಹಿಸುವುದಿಲ್ಲ. ಮತ್ತೊಬ್ಬರನ್ನು ಪಕ್ಷಕ್ಕೆ ವಾಪಾಸು ಸೇರಿಸಿಕೊಳ್ಳುವುದು ಅಥವಾ ಮತ್ತೊಬ್ಬರನ್ನು ಉಚ್ಚಾಟಿಸಲು ಶಿಫಾರಸ್ಸು ಮಾಡುವುದು ನನ್ನ ಕೆಲಸ" ಎಂದು ತೀಕ್ಷ್ಣವಾಗಿ ಪ್ರತಿಕ್ರಿಯುಸಿದರು.
ವಿದೇಶಗಳಲ್ಲಿರುವ ಸಿಕ್ಖ್ ಸಮುದಾಯವನ್ನು ಮನವೊಲಿಸಲು ಕೈಗೊಂಡ ಪ್ರಯತ್ನದ ಬಗ್ಗೆ ಕೇಳಿದಾಗ, "ಅದ್ಭುತ ಸ್ಪಂದನೆ ದೊರಕಿದೆ. ಎಎಪಿ ವಂಚಕರ ದಂಡು ಎನ್ನುವುದು ಸಿಕ್ಖ್ ಸಮುದಾಯದ ಒಟ್ಟಾಭಿಪ್ರಾಯ. ಚಿಕಾಗೊ, ಫ್ರೆಸ್ನೊ, ಲಾಸ್‌ಎಂಜಲೀಸ್, ಟೊರಂಟೊ, ವ್ಯಾಂಕೋವರ್‌ಗಳಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ. ಎಎಪಿಗೆ ವಾತಾವರಣ ಪೂರಕವಾಗಿದೆ ಎಂದೆನಿಸುವುದಿಲ್ಲ ಎಂದರು.