ದಿಲ್ಲಿ ಸರಕಾರದ ಜತೆ ಜಂಗಿ ಕುಸ್ತಿ: ಕೇಂದ್ರಕ್ಕೆ ಸಮನ್ಸ್
ಹೊಸದಿಲ್ಲಿ, ಮೇ 15: ಕೇಂದ್ರ ಹಾಗೂ ದೆಹಲಿ ರಾಜ್ಯ ಸರ್ಕಾರಗಳ ನಡುವಿನ ಅಧಿಕಾರ ವ್ಯಾಪ್ತಿ ಸಂಬಂಧದ ಜಂಗಿ ಕುಸ್ತಿ ಸಂಬಂಧ ದೆಹಲಿ ಸರ್ಕಾರ ಸಂವಿಧಾನದ 131ನೇ ವಿಧಿ ಅನ್ವಯ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ಸುಪ್ರೀಂ ಕೋರ್ಟ್ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಸಮನ್ಸ್ ಜಾರಿಗೊಳಿಸಿದೆ.
ಕೇಂದ್ರ ಹಾಗೂ ಎಎಪಿ ಸರ್ಕಾರ ನಡುವಿನ ಅಧಿಕಾರ ವ್ಯಾಪ್ತಿ ಕುರಿತ ವಿವಾದದಲ್ಲಿ ಮಧ್ಯಪ್ರವೇಶಿಸಬೇಕು. ಏಕೆಂದರೆ ಇದರಿಂದಾಗಿ ದೆಹಲಿ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ಆಕ್ಷೇಪಿಸಿ, ದೆಹಲಿ ಸರ್ಕಾರ ಏಪ್ರಿಲ್ 27ರಂದು ಅರ್ಜಿ ಸಲ್ಲಿಸಿತ್ತು. ಈ ವಿವಾದವು ಸಂವಿಧಾನದ ಒಕ್ಕೂಟ ವ್ಯವಸ್ಥೆಯ ಮೂಲಸಂರಚನೆ ಮೇಲೆ ಪರಿಣಾಮ ಬೀರುವ ವಿಚಾರವಾಗಿರುವುದರಿಂದ ಇದನ್ನು ಇತ್ಯರ್ಥಪಡಿಸುವ ಅಧಿಕಾರ ವ್ಯಾಪ್ತಿ ಸುಪ್ರೀಂಕೋರ್ಟ್‌ಗೆ ಮಾತ್ರ ಇದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.
ಈ ಸಂಬಂಧ ಸುಪ್ರೀಂಕೋರ್ಟ್ ಮೇ 11ರಂದು ಕೇಂದ್ರಕ್ಕೆ ಸಮನ್ಸ್ ಜಾರಿಗೊಳಿಸಿ, ದೆಹಲಿ ಸರ್ಕಾರದ ಹಕ್ಕು ಪ್ರತಿಪಾದನೆ ಬಗ್ಗೆ ಅಭಿಪ್ರಾಯ ಮಂಡಿಸುವಂತೆ ಸೂಚನೆ ನೀಡಿದೆ. ಬೇಸಿಗೆ ರಜೆ ಮುಗಿದ ಬಳಿಕ ಸಮನ್ಸ್ ಮರು ಜಾರಿಯಾಗಲಿದೆ.
"ಇತ್ತೀಚಿನ ದಿನಗಳಲ್ಲಿ ಕೇಂದ್ರ ಹಾಗೂ ದೆಹಲಿ ಸರ್ಕಾರದ ನಡುವೆ ವಿವಿಧ ಆಡಳಿತಾತ್ಮಕ ವಿಚಾರಗಳಲ್ಲಿ ವಿವಾದಗಳು ಉದ್ಭವಿಸಿವೆ. ಸರ್ಕಾರಿ ಅಭಿಯೋಜಕರ ನೇಮಕದಿಂದ ಹಿಡಿದು, ಭ್ರಷ್ಟಾಚಾರದ ವಿರುದ್ಧ ವಿಚಾರಣಾ ಆಯೋಗ ನೇಮಿಸುವವರೆಗೆ ಕೇಂದ್ರ ಸರ್ಕಾರ ಲೆಫ್ಟಿನೆಂಟ್ ಜನರಲ್ ಮೂಲಕ ಅಧಿಕಾರ ಚಲಾಯಿಸುತ್ತಿದ್ದು, ಇವೆಲ್ಲವೂ ದೆಹಲಿ ಸರ್ಕಾರದ ನಿರ್ಧಾರಗಳಿಗೆ ವಿರುದ್ದವಾಗಿವೆ" ಎಂದು ದೆಹಲಿ ಸರ್ಕಾರ ಅರ್ಜಿಯಲ್ಲಿ ವಿವರಿಸಿದೆ.