×
Ad

ಸೈಕಲ್‌ ಕಳ್ಳ ಬಿಂದಿ ಕುಬೇರನಾದ ಕಥೆ

Update: 2016-05-15 22:35 IST

ಬಿಂದೇಶ್ವರ ಪ್ರಸಾದ್ ಯಾದವ್ ಅಲಿಯಾಸ್ ಬಿಂದಿ ಈಗ ಮಹಾಶ್ರೀಮಂತ. ಬಿಹಾರದಲ್ಲಿ ಬಲವಾದ ರಾಜಕೀಯ ನಂಟುಗಳನ್ನು ಹೊಂದಿರುವ ಈತ ಮಹಾ ಖತರ್‌ನಾಖ್ ವ್ಯಕ್ತಿಯೂ ಹೌದು. ಗಯಾದಲ್ಲಿ ಹಾಡಹಗಲೇ ಹದಿಹರೆಯದ ಯುವಕ ಆದಿತ್ಯ ಸಚ್‌ದೇವ್‌ನನ್ನು ಗುಂಡಿಕ್ಕಿ ಕೊಂದ ರಾಕಿ ಯಾದವ್‌ನ ತಂದೆಯಾದ ಬಿಂದೇಶ್ವರ ಪ್ರಸಾದ್ ಈಗ ದೇಶಾದ್ಯಂತ ಚರ್ಚೆಯ ವಿಷಯವಾಗಿದ್ದಾನೆ. ಆದರೆ ಕೇವಲ 25 ವರ್ಷಗಳ ಹಿಂದೆ , ಅಂದರೆ 1980ರ ದಶಕದಲ್ಲಿ ಬಿಂದೇಶ್ವರ್ ಗಯಾದಲ್ಲಿ ಸಣ್ಣ ಮಟ್ಟದ ಕ್ರಿಮಿನಲ್ ಆಗಿದ್ದ. ಸೈಕಲ್‌ಗಳನ್ನು ಕದ್ದುದಕ್ಕಾಗಿ ಅನೇಕ ಸಲ ಪೊಲೀಸರಿಗೆ ಸೆರೆಸಿಕ್ಕಿದ್ದನೆಂದು ಸ್ಥಳೀಯರು ಈಗಲೂ ನೆನಪಿಸಿಕೊಳ್ಳುತ್ತಾರೆ. ಬಿಹಾರದ ಈ ಪುಟ್ಟ ನಗರದ ಕ್ರಿಮಿನಲ್ ಲೋಕದಲ್ಲಿ ಈತ ಓರ್ವ ಪುಟಗೋಸಿ ರೌಡಿ ಎಂದೆನಿಸಿಕೊಂಡಿದ್ದ.
ಆದರೆ ಬಿಂದಿಗೆ ಗಯಾದ ಪಾತಕ ಜಗತ್ತಿನಲ್ಲಿ ದೊಡ್ಡದಾಗಿ ಬೆಳೆಯಬೇಕೆಂಬ ಮಹತ್ವಾಕಾಂಕ್ಷೆಯಿತ್ತು. ಹಾಗಾಗಿ, ಆತ 1980ರಲ್ಲಿ ಬಚ್ಚು ಎಂಬ ಸ್ಥಳೀಯ ರೌಡಿಯ ಜೊತೆ ಕೈಜೋಡಿಸಿ, ಗಯಾದಲ್ಲಿ ಸುಮಾರು ಮೂರು ವರ್ಷಗಳಲ್ಲಿ ವಿವಿಧ ಕ್ರಿಮಿನಲ್‌ಚಟುವಟಿಕೆಗಳಲ್ಲಿ ತೊಡಗಿದ್ದ. ಸ್ಥಳೀಯರಿಂದ ಬಿಂದಿಯಾ-ಬಚ್ಚಾಸ್ ಎಂದೇ ಗುರುತಿಸಲ್ಪಟ್ಟಿದ್ದ ಈ ಕ್ರಿಮಿನಲ್ ಜೋಡಿ, ತಮ್ಮ ದಾರಿಗೆ ಅಡ್ಡಬಂದ ಯಾರನ್ನೂ ಕೂಡಾ ಸುಮ್ಮನೆ ಬಿಡಲಿಲ್ಲ. ಗಯಾ ನಗರದ ಬೆಲೆಬಾಳುವ ಕಟ್ಟಡ ನಿವೇಶನಗಳನ್ನು ಹಾಗೂ ಜಮೀನುಗಳನ್ನು ತಾವೇ ಕಬಳಿಸಿಬಿಡುತ್ತಿದ್ದರು. ಅವರಿಗಿಂತ ಮೊದಲು ಅವರ ಬಂದೂಕುಗಳೇ ಮಾತನಾಡುತ್ತಿದ್ದವು. ಒಟ್ಟಾರೆ ಈ ಕ್ರಿಮಿನಲ್ ಜೋಡಿಯಿಂದಾಗಿ ಇಡೀ ಗಯಾ ನಗರದಲ್ಲಿ ಭೀತಿಯ ನೆರಳು ಆವರಿಸಿತ್ತು.

  ಆಗ ಬಿಹಾರದಲ್ಲಿ ಲಾಲೂ ಪ್ರಸಾದ್ ನೇತೃತ್ವದ ಸರಕಾರದ ಆಡಳಿತವಿತ್ತು. ಅಪರಾಧ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿದ್ದವು. ಸುರೇಂದ್ರ ಯಾದವ್, ರಾಜೇಂದರ್ ಯಾದವ್ ಹಾಗೂ ಮಹೇಶ್ ಯಾದವ್‌ರಂತಹ ಅಪಾಯಕಾರಿ ಕ್ರಿಮಿನಲ್‌ಗಳು ಆಡಿದ್ದೇ ಆಟವಾಗಿತ್ತು. ಇವರ ಸಾಲಿಗೆ ಬಿಂದಿ ಮತ್ತು ಬಚ್ಚು ಕೂಡಾ ಸೇರ್ಪಡೆಗೊಂಡರು.
 ಈ ಪಾತಕಿಗಳ ಬರ್ಬರ ಕೃತ್ಯಗಳಿಂದ ರೋಸಿ ಹೋದ ರಾಜ್ಯ ಸರಕಾರವು ಕೊನೆಗೂ ಅವರ ವಿರುದ್ಧ ಕ್ರಮಕ್ಕೆ ಮುಂದಾಯಿತು. ರೌಡಿಗಳನ್ನು ಮಟ್ಟಹಾಕಲು ಅತ್ಯಂತ ಕಟ್ಟುನಿಟ್ಟಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಎಸ್ಪಿಯನ್ನು ಗಯಾದಲ್ಲಿ ನಿಯೋಜಿಸಿತು. ಅವರು ಬಿಂದಿ ಹಾಗೂ ಬಚ್ಚುವಿನ ಪಾತಕಕೃತ್ಯಗಳಿಗೆ ಕಡಿವಾಣ ಹಾಕಲು ಕಠೋರವಾದ ಅಪರಾಧ ನಿಯಂತ್ರಣ ಕಾಯ್ದೆಯನ್ನು ಪ್ರಯೋಗಿಸಿದರು.
ಈಗ ಬಿಂದಿಗೆ, ಗಯಾದ ಪಾತಕ ಜಗತ್ತಿನಲ್ಲಿ ತಾನು ಉಳಿಯಬೇಕಾದರೆ ರಾಜಕೀಯ ಬೆಂಬಲದ ಅಗತ್ಯವಿದೆಯೆಂಬುದು ಮನದಟ್ಟಾಯಿತು. 1990ರ ದಶಕದ ಅಂತ್ಯದಲ್ಲಿ ಅವರು ಲಾಲುಪ್ರಸಾದ್ ನೇತೃತ್ವದ ಆರ್‌ಜೆಡಿಗೆ ಸೇರ್ಪಡೆಗೊಂಡ. ಇದರೊಂದಿಗೆ ಕ್ರಿಮಿನಲ್ ಜಗತ್ತಿನಿಂದ, ರಾಜಕೀಯ ಜಗತ್ತಿನೆಡೆಗೆ ಬಿಂದಿಯ ಪ್ರಯಾಣ ಆರಂಭಗೊಂಡಿತು.

ಆರ್‌ಜೆಡಿಯ ಬೆಂಬಲದೊಂದಿಗೆ, ಬಿಂದಿ 2001ರಲ್ಲಿ ಗಯಾ ಜಿಲ್ಲಾ ಮಂಡಳಿಯ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾದ. 2006ರವರೆಗೂ ಆತ ಆ ಹುದ್ದೆಯಲ್ಲಿ ಉಳಿದುಕೊಂಡಿದ್ದ. ಈ ನಡುವೆ, ಆತ 2005ರ ವಿಧಾನಸಭಾ ಚುನಾವಣೆಯಲ್ಲಿ ಗಯಾ ಗ್ರಾಮೀಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ತನ್ನ ಅದೃಷ್ಟವನ್ನು ಪರೀಕ್ಷಿಸಲು ಯತ್ನಿಸಿದ. ಆದರೆ ಚುನಾವಣೆಯಲ್ಲಿ ಸೋಲನ್ನಪ್ಪಿದ್ದರಿಂದ ವಿಧಾನಸಭೆ ಪ್ರವೇಶಿಸುವ ಆತನ ಕನಸು ಭಗ್ನಗೊಂಡಿತು.
  ಆದರೆ ಪಟ್ಟುಬಿಡದ ಆತ 2010ರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಅಭ್ಯರ್ಥಿಯಾಗಿ ಕಣಕ್ಕಿಳಿದ. ನಾಮಪತ್ರದೊಂದಿಗೆ ಸಲ್ಲಿಸಿದ ಅಫಿದಾವಿತ್‌ನಲ್ಲಿ ತನ್ನ ವಿರುದ್ಧ 18 ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದಾಗಿ ಘೋಷಿಸಿದ್ದ. ಆದರೆ ಲಾಲು ಪ್ರಸಾದ್, ಬಿಂದಿ ಓರ್ವ ಕ್ರಿಮಿನಲ್ ಪೂರ್ವಹಿನ್ನೆಲೆಯ ವ್ಯಕ್ತಿ ಎಂದೂ ಗೊತ್ತಿದ್ದರೂ ಅದನ್ನು ಕಡೆಗಣಿಸಿ ಆತ ರಾಜಕೀಯವಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದರು. ಆದರೆ ಬಿಂದಿಗೆ ಅದೃಷ್ಟ ಈ ಬಾರಿಯೂ ಕೈಕೊಟ್ಟಿತ್ತು. ಈ ಚುನಾವಣೆಯಲ್ಲಿಯೂ ಆತ ಸೋಲನ್ನಪ್ಪಿದ್ದ.

     2010ರಲ್ಲಿ ನಿತೀಶ್‌ಕುಮಾರ್ ಅಧಿಕಾರಕ್ಕೇರಿದಾಗ, ಬಿಂದಿ ತನ್ನ ನಿಷ್ಠೆಯನ್ನು ಸಂಯುಕ್ತ ಜನತಾದಳಕ್ಕೆ ಬದಲಾಯಿಸಿದ. ಆದರೆ ತನ್ನ ಇಮೇಜ್ ಬಗ್ಗೆ ಸಾಕಷ್ಟು ಜಾಗ್ರತೆ ವಹಿಸುವ ನಿತೀಶ್, ಕ್ರಿಮಿನಲ್ ಹಿನ್ನೆಲೆಯ ಬಿಂದಿಯನ್ನು ಪ್ರೋತ್ಸಾಹಿಸಲಿಲ್ಲ. 2011ರಲ್ಲಿ ಬಿಂದಿಯನ್ನು ಬಂಧಿಸಲಾಯಿತು. ಆತನಿಂದ ಎಕೆ-47 ರೈಫಲ್, ಸ್ವಯಂ ಲೋಡಿಂಗ್ ರೈಫಲ್ ಹಾಗೂ 4 ಸಾವಿರಕ್ಕೂ ಅಧಿಕ ಕಾಡತೂಸುಗಳನ್ನು ಪೊಲೀಸರು ವಶಪಡಿಸಿಕೊಂಡರು.
 ಈ ಘಟನೆಯ ಬಳಿಕ ಬಿಂದಿ, ತನ್ನ ಕಾರ್ಯಶೈಲಿಯನ್ನು ಬದಲಾಯಿಸಿದ. ಜೆಡಿಯು ಹಾಗೂ ಆರ್‌ಜೆಡಿ ನಾಯಕರ ಜೊತೆಗಿನ ಸಂಪರ್ಕದಿಂದಾಗಿ ಆತ ಹಲವಾರು ಸರಕಾರಿ ಕಾಮಗಾರಿ ಗುತ್ತಿಗೆಗಳನ್ನು ಪಡೆಯುವಲ್ಲಿ ಸಫಲನಾದ. ಇದರೊಂದಿಗೆ ಆತನ ಅದೃಷ್ಟವೂ ಖುಲಾಯಿಸಿತು. ಬಿಂದಿ ಕೆಲವು ಮಾವೋವಾದಿ ಬಂಡುಕೋರರ ಜೊತೆ ನಿಕಟ ಸಂಪರ್ಕ ಕೂಡಾ ಹೊಂದಿದ್ದನೆನ್ನಲಾಗಿದೆ. ಹೀಗಾಗಿ ಮಾವೋವಾದಿಗಳ ಉಪಟಳವಿರುವ ಪ್ರದೇಶಗಳ ಬಹುತೇಕ ಅಭಿವೃದ್ಧಿ ಕಾಮಗಾರಿಗಳ ಯೋಜನೆಗಳ ಗುತ್ತಿಗೆಗಳು ಬಿಂದಿಗೆ ಸುಲಭವಾಗಿ ದೊರೆಯುತ್ತಿತ್ತು. ಹೀಗೆ ಸಣ್ಣಪುಟ್ಟ ಕ್ರಿಮಿನಲ್ ಆಗಿದ್ದ ಬಿಂದಿ, ಗಯಾದ ಶ್ರೀಮಂತ ಉದ್ಯಮಿಗಳ ಸಾಲಲ್ಲಿ ಗುರುತಿಸಲ್ಪಟ್ಟ.
     ಬಿಹಾರದ ಹಿಂದಿನ ಎಲ್ಲಾ ಸರಕಾರಗಳು ಬಿಂದಿಯ ಪೂರ್ವ ಹಿನ್ನೆಲೆಯನ್ನು ನಿರ್ಲಕ್ಷಿಸಿದಂತೆ ಕಾಣುತ್ತಿದೆ. ಆತನ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣಗಳ ಸಂಖ್ಯೆ 19ಕ್ಕೇರುವ ತನಕವೂ ಆತನ ಶಸ್ತ್ರಾಸ್ತ್ರಗಳ ಲೈಸೆನ್ಸನ್ನು ನವೀಕರಿಸಿರಲಿಲ್ಲ. ಇತ್ತೀಚೆಗೆ ಪೊಲೀಸ್ ಇಲಾಖೆಯಿಂದ ಲಭ್ಯವಾದ ಅಂಕಿಅಂಶಗಳ ಪ್ರಕಾರ, ಬಿಂದಿ ವಿರುದ್ಧ ಅಪಹರಣ ಹಾಗೂ ಕೊಲೆ ಸೇರಿದಂತೆ ಕನಿಷ್ಠ 11 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

 ಇಂದು ಬಿಂದಿ ಯಾದವ್ ಗಯಾ, ದಿಲ್ಲಿ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಮಾಲ್‌ಗಳು, ಹೊಟೇಲ್‌ಗಳು ಹಾಗೂ 15 ಪೆಟ್ರೋಲ್ ಪಂಪ್‌ಗಳಿಗೆ ಒಡೆಯನಾಗಿದ್ದಾನೆ. ಆತ ತನ್ನ ಉದ್ಯಮವನ್ನು ಮದ್ಯ, ರಸ್ತೆ, ಕಟ್ಟಡ ನಿರ್ಮಾಣ ಕ್ಷೇತ್ರಗಳಿಗೂ ವಿಸ್ತರಿಸಿದ್ದಾನೆ.
 ಆತನ ಪುತ್ರ ರಾಕಿ, 1.5 ಕೋಟಿ ರೂ. ವೌಲ್ಯದ ಎಸ್‌ಯುವಿ ವಾಹನವನ್ನು ಚಲಾಯಿಸುತ್ತಾ, ಇಟಲಿ ನಿರ್ಮಿತ .32 ಬೋರ್ ಪಿಸ್ತೂಲ್‌ನಿಂದ ಹದಿಹರೆದಯದ ಆದಿತ್ಯನನ್ನು ಗುಂಡಿಕ್ಕಿ ಕೊಂದಿದ್ದ.
    2015ರಲ್ಲಿ ಬಿಂದಿಯ ಪತ್ನಿ ಮನೋರಮಾ, ಬಿಹಾರ ವಿಧಾನಪರಿಷತ್‌ಗೆ ಜೆಡಿಎಸ್ ಸದಸ್ಯೆಯಾಗಿ ನೇಮಕಗೊಂಡರು. ಬಿಂದಿ ರಾಜಕೀಯವಾಗಿ ಯಶಸ್ಸು ಕಾಣದಿದ್ದರೂ, ರಾಜಕಾರಣಿ ಪತ್ನಿಯ ಮರೆಯಲ್ಲಿ ನಿಂತು ಅಧಿಕಾರವನ್ನು ಚಲಾಯಿಸತೊಡಗಿದ. ಆದಾಗ್ಯೂ, ಕಡೆಗೂ ಬಿಂದಿಯ ಅದೃಷ್ಟ ಕೈಕೊಟ್ಟಿತು. ಹದಿಹರೆಯದ ಯುವಕನನ್ನು ಹತ್ಯೆಗೈದ ತನ್ನ ಪುತ್ರನ ಪಲಾಯನಕ್ಕೆ ನೆರವಾಗಿದ್ದನೆಂಬ ಆರೋಪದಲ್ಲಿ ಬಿಂದಿಯನ್ನು ಪೊಲೀಸರು ಬಂಧಿಸಿದರು. ರಾಜ್ಯದಲ್ಲಿ ಮದ್ಯಪಾನ ನಿಷೇಧ ಜಾರಿಯಲ್ಲಿದ್ದ ಹೊರತಾಗಿಯೂ ಮನೆಯಲ್ಲಿ ಮದ್ಯವನ್ನು ಸಂಗ್ರಹಿಸಿಟ್ಟಿದ್ದರೆಂಬ ಆರೋಪದಲ್ಲಿ ಆತನ ಎಂಎಲ್‌ಸಿ ಪತ್ನಿ ಮನೋರಮಾರನ್ನು ಜೆಡಿಯು ಪಕ್ಷವು ಅಮಾನತುಗೊಳಿಸಿತು. ಬಿಂದಿಯ ಪುತ್ರನ ಅಪರಾಧ ಕೃತ್ಯದ ವಿರುದ್ಧ ಬಿಹಾರದಲ್ಲಿ ಜನಾಕ್ರೋಶ ಭುಗಿಲೆದ್ದಿತಲ್ಲದೆ, ರಾಜಕೀಯವಾಗಿಯೂ ಕೋಲಾಹಲವನ್ನು ಸೃಷ್ಟಿಸಿತು.
  ಬಿಂದಿ ವಿರುದ್ಧ ಬಿಹಾರ ಸರಕಾರ ಯಾವ ಕ್ರಮವನ್ನು ಕೈಗೊಳ್ಳಲಿದೆ ಅಥವಾ ಆ ರಾಜ್ಯದಲ್ಲಿ ಜಂಗಲ್‌ರಾಜ್ ಮರಳುತ್ತಿದೆಯೇ ಎಂಬುದನ್ನು ಆ ರಾಜ್ಯದ ಜನತೆ ಆತಂಕದಿಂದ ಗಮನಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News