×
Ad

ಅಂಬೇಡ್ಕರ್ ಚಿಂತನೆಯ ಬೆಳಕಿನಲ್ಲಿ ಮರು ಪರಿಶೀಲನೆ

Update: 2016-05-15 22:45 IST


ನಮ್ಮ ದೇಶದಲ್ಲಿ ಸ್ವಾತಂತ್ರ್ಯಾ ಚಳವಳಿಯ ಭಾಗವಾಗಿ ರಾಷ್ಟ್ರೀಯತೆಯ ಪರಿಕಲ್ಪನೆ ಹುಟ್ಟಿದೆ. ಇದನ್ನು ಎರಡು ಭಾಗವಾಗಿ ನೋಡಬಹುದು.
1.ಬೇರೊಂದು ರಾಷ್ಟ್ರದಿಂದ ತುಳಿತಕ್ಕೆ ಒಳಗಾದ ಜನ ಸಮುದಾಯ ಅದರಿಂದ ಮುಕ್ತಗೊಂಡು ತಮ್ಮನ್ನು ತಾವೇ ಆಳಿಕೊಳ್ಳುವ ಶಕ್ತಿಯನ್ನು ಪಡೆಯುವುದು ಮೊದಲನೆಯ ಭಾಗ.
2. ಸ್ವಾತಂತ್ರ್ಯ ಪಡೆದ ನಂತರ ರೂಪುಗೊಳ್ಳುವ ರಾಷ್ಟ್ರದ ಸ್ವರೂಪ ಹೇಗಿರಬೇಕು. ಸ್ವಾತಂತ್ರ ಯಾರಿಗಾಗಿ ಎಂಬ ಪ್ರಶ್ನೆ ಎರಡನೆಯ ಭಾಗ.
    ಈ ಎರಡು ಸೇರಿ ನಮ್ಮ ದೇಶದ ರಾಷ್ಟ್ರೀಯ ಪರಿಕಲ್ಪನೆ ಮೂಡಿ ಬಂತು.

ಕಾಂಗ್ರೆಸ್‌ ಸ್ವಾತಂತ್ರ್ಯ ಮತ್ತು ರಾಷ್ಟ್ರೀಯತೆಯ ಕಲ್ಪನೆ ಬ್ರಿಟಿಷರನ್ನು ಓಡಿಸಿ ನಮ್ಮನ್ನು ನಾವೇ ಆಳಿಕೊಂಡರೆ ಸಾಕೆಂಬ ಮೊದಲನೆಯ ಭಾಗಕ್ಕೆ ಸೀಮಿತಗೊಂಡಿತ್ತು.ಅಂದರೆ ಈ ನಮ್ಮ ದೇಶ ಹೇಗಿದೆಯೋ ಹಾಗೆಯೇ ಮುಂದುವರಿಯುವುದು. ಬ್ರಿಟಿಷರಿಂದ ಶೋಷಣೆ ತಪ್ಪಿದರೆ ಸಾಕು. ನಮ್ಮ ದೇಶದ ಪಟ್ಟಭದ್ರರಿಗೆ ಅಧಿಕಾರ ಬಂದರೆ ಸಾಕೆಂಬುದು ಕಾಂಗ್ರೆಸ್‌ನ ಮತೀತಾರ್ಥ. ಅಂದರೆ ಈ ದೇಶದಲ್ಲಿ ಆಗ ಪ್ರಬಲವಾಗಿದ್ದವರು ಅಧಿಕಾರ ಪಡೆಯಬೇಕೆಂಬುದಾಗಿತ್ತು. ಹೀಗಾಗಿ ಇಡೀ ರಾಷ್ಟ್ರದ ಎಲ್ಲರನ್ನು ಒಳಗೊಳ್ಳುವ ರಾಷ್ಟ್ರೀಯತೆಯ ಹೋರಾಟ ಕಾಂಗ್ರೆಸ್‌ನವರದ್ದು ಆಗಿರಲಿಲ್ಲ. ಇವರು ಬ್ರಿಟಿಷರನ್ನು ಓಡಿಸಲು ಮಾತ್ರ ಜನರ ಬೆಂಬಲ ತೆಗೆದುಕೊಂಡರು. ಕ್ವಿಟ್ ಇಂಡಿಯಾ ಎಂದು ಕರೆ ಕೊಟ್ಟರು. ಯಾಕೆ ಕ್ವಿಟ್ ಇಂಡಿಯಾ ಎಂದರೆ ಏನು? ಎಂದು ಎಲ್ಲ್ಲರ ಜನರ ಮುಕ್ತಿಗೆ ಎಂದು ಹೇಳಲಿಲ್ಲ. ಉದಾ: ಜಾತಿ ವ್ಯವಸ್ಥೆ ಕಿತ್ತು ಹಾಕುವಂತಹ ಆರ್ಥಿಕ ಸಮಾನತೆಯ ಅಜೆಂಡಾ ಅವರ ಮುಂದೆ ಇರಲಿಲ್ಲ.

 ಇದು ಕಾಂಗ್ರೆಸ್ ಕಲ್ಪನೆಯಾದರೆ, ಬೇರೆ ಬೇರೆ ಕಲ್ಪನೆಗಳೂ ಇದ್ದವು. ಅದರಲ್ಲಿ ಹಿಂದೂ ರಾಷ್ಟ್ರದ ಪರಿಕಲ್ಪನೆ. ಹಿಂದೂಗಳಲ್ಲಿ ಹಿಂದೂ ರಾಷ್ಟ್ರೀಯತೆ. ಉದಾ: ಧರ್ಮಾಧಾರಿತವಾಗಿ ವಿಭಜನೆಯಾಗುವುದು. ಅಂದರೆ ಧರ್ಮಾಧಾರಿತವಾಗಿ ರಾಷ್ಟ್ರ ವಿಭಜನೆ ಮಾಡುವುದು. ಇಂತಹ ಕಲ್ಪನೆಯನ್ನು ಹಿಂದೂ ಮೂಲವಾದಿಗಳು ಮುಂದಿಟ್ಟರು. ಸಾರ್ವಕರ್‌ನ ಹಿಂದೂ ಮಹಾಸಭಾ, ಹೆಗ್ಡೆವಾರ್‌ನ ಆರೆಸ್ಸೆಸ್(1925ರಲ್ಲಿ ಆರೆಸ್ಸೆಸ್ ಸ್ಥಾಪಿತವಾಯಿತು) ಆರ್ಯ ಸಮಾಜದ ದಯಾನಂದ ಸರಸ್ವತಿಯವರು, ಹೀಗೆ ಉದಾಹರಣೆ ಕೊಡಬಹುದು. ಇವರೆಲ್ಲಾ ಹಿಂದೂ ರಾಷ್ಟ್ರದ ಪರಿಕಲ್ಪನೆ ಹೊಂದಿದ್ದರು. ಇವರು ಸ್ವಾತಂತ್ರ್ಯಾ ಚಳವಳಿಯಲ್ಲಿ ಭಾಗವಹಿಸದವರು. ಯಾರಾದರೂ ಬ್ರಿಟಿಷರನ್ನು ಓಡಿಸಲಿ ಆದರೆ ಮುಂದೆ ನಮ್ಮ ರಾಷ್ಟ್ರ ಹಿಂದೂ ರಾಷ್ಟ್ರವಾಗಿರಬೇಕೆಂಬುದು ಇವರ ರಾಷ್ಟ್ರೀಯತೆಯ ಪರಿಕಲ್ಪನೆಯಾಗಿತ್ತು.
ಸದಾಶಿವರಾವ್ ಗೋಳ್ವಾಕರ್ 1939ರಲ್ಲಿ ಪ್ರಕಟಿಸಿದ್ದ ನಾವು ಅಥವಾ ನಮ್ಮ ರಾಷ್ಟ್ರೀಯತೆಯ ನಿರ್ವಚನೆ (ಉ ಣ್ಕ ಖ್ಕಿ ಘೆಅಐಘೆಏಈ ಈಉಊಐಘೆಉಈ)     

ಎಂಬ ಗ್ರಂಥದಲ್ಲಿರುವ ಉಲ್ಲೇಖವನ್ನು ನೋಡಬಹುದು. ಹಿಂದೂಸ್ತಾನದಲ್ಲಿರುವ ವಿದೇಶಿಯರು ಹಿಂದೂ ಸಂಸ್ಕೃತಿ ಭಾಷೆಯನ್ನು ಅಂಗೀಕರಿಸಬೇಕು. ಹಿಂದೂ ಧರ್ಮವನ್ನು ಗೌರವ ಭಾವದಿಂದ ಕಾಣಲು ಕಲಿಯಬೇಕು. ಹಿಂದೂ ಜನಾಂಗ ಮತ್ತು ಸಂಸ್ಕೃತಿಯ ಅಂದರೆ ಹಿಂದೂ ರಾಷ್ಟ್ರದ ವೈಭವೀಕರಣವನ್ನು ಬಿಟ್ಟು ಬೇರೆ ಯಾವುದೇ ಯೋಚನೆ ಮಾಡಬಾರದು. ತಮ್ಮ ಪ್ರತ್ಯೇಕ ಅಸ್ತಿತ್ವವನ್ನು ಕಳೆದುಕೊಂಡು ಹಿಂದೂ ಜನಾಂಗದೊಳಗೆ ವಿಲೀನಗೊಳ್ಳಬೇಕು ಅಥವಾ ಹಿಂದೂ ರಾಷ್ಟ್ರಕ್ಕೆ ಅಡಿಯಾಳಾಗಿ, ಏನನ್ನು ಕೇಳದೆ, ಯಾವುದೇ ಆದ್ಯತೆಗಳಿಗಾಗಲೀ, ವಿಶೇಷ ಸೌಲಭ್ಯಗಳಿಗಾಗಲೀ ಅರ್ಹರಾಗದೇ, ನಾಗರಿಕ ಹಕ್ಕುಗಳಿಗೆ ಅನರ್ಹರಾಗಿ ಇರಬೇಕು. ಅವರಿಗೆ ಬೇರೆ ಯಾವ ದಾರಿಯೂ ಇಲ್ಲ. ಕನಿಷ್ಠ ಯಾವ ದಾರಿಯೂ ಇರಬಾರದು...
   ಹಿಂದೂ ಜನಾಂಗ ಹಾಗೂ ರಾಷ್ಟ್ರವನ್ನು ತಮ್ಮ ಹೃದಯದ ಅತಿ ಸನಿಹಕ್ಕೆ ತಂದು ವೈಭವೀಕರಿಸುವ ಆಂಕಾಕ್ಷೆಯುಳ್ಳವರು, ಆ ಗುರಿ ಸಾಧನೆಗೆ ಪ್ರಯತ್ನಿಸಿ ಕಾರ್ಯತತ್ಪರರಾಗಿರುವವರು ಮಾತ್ರವೇ ರಾಷ್ಟ್ರೀಯ ದೇಶ ಪ್ರೇಮಿಗಳು. ಉಳಿದವರೆಲ್ಲಾ ಒಂದೋ ದೇಶ ದ್ರೋಹಿಗಳು ಮತ್ತು ರಾಷ್ಟ್ರೀಯ ಗುರಿ ಸಾಧನೆಯ ಶತ್ರುಗಳು ಅಥವಾ ಉದಾರ ದೃಷ್ಟಿಯಿಂದ ಹೇಳುವುದಾದರೆ ಅವಿವೇಕಿಗಳು ಇಂತಹ ಹಿಂದೂ ರಾಷ್ಟ್ರವಾದವು ಗೋಳ್ವಾಕರ್‌ಗೆ ಹಿಟ್ಲರ್ ನಾಝಿ ವಾದದ ಕಲ್ಪನೆಯಿಂದ ಬಂದದ್ದು. ಈ ಬಗ್ಗೆ ನೇರವಾಗಿ ಗೋಳ್ವಾಕರ್ ಹೇಳಿಕೊಂಡಿದ್ದಾರೆ.

ಅದೇ ರೀತಿಯಲ್ಲಿ ಮುಸ್ಲಿಂ ಮೂಲಭೂತವಾದಿಗಳು, ಹಿಂದೂಗಳು ಬಹು ಸಂಖ್ಯಾತರಾಗಿದ್ದಾರೆ. ಹೀಗಾಗಿ ನಾವು ಹಿಂದೂಗಳ ಜೊತೆಯಲ್ಲಿ ಇರಲು ಸಾಧ್ಯವಿಲ್ಲವೆಂದು, ಮುಸ್ಲಿಮರನ್ನು ಒಂದಾಗಿಸಲು ಮುಸ್ಲಿಂ ಲೀಗ್ ಸ್ಥಾಪಿಸಲಾಯಿತು. ಹೀಗೆ ಹಿಂದೂಗಳಿಗೆ ಹಿಂದೂ ರಾಷ್ಟ್ರದಲ್ಲಿ ಹಿಂದೂಗಳ ಅಧಿಪತ್ಯವಿರಬೇಕು. ನಮ್ಮ ಹೆಮ್ಮೆ ಗುಪ್ತರ ಕಾಲದ ಸುವರ್ಣಯುಗ ಎಂದು ಹೇಳುವುದು. ಹಾಗೆಯೇ ಮುಸ್ಲಿಂ ಲೀಗ್ ಮೊಘಲರ ಆಳ್ವಿಕೆಯೇ ನಮ್ಮ ಹೆಮ್ಮೆ ಎಂದು ಹೇಳುವುದು. ಹಿಂದೂ ಧರ್ಮೀಯರಿಗೆ ಬೇರೆಯವರು ಅಡಿಯಾಳುಗಳಾಗಿರಬೇಕು. ಮುಸ್ಲಿಮರಿಗೆ ಹಿಂದೂಗಳು ಅಡಿಯಾಳುಗಳಾಗಿರಬೇಕು. ಹೀಗೆ ಹಿಂದೂ ಮೂಲಭೂತವಾದಿಗಳು ಮತ್ತು ಮುಸ್ಲಿಂ ಮೂಲಭೂತವಾದಿಗಳು ನಮ್ಮ ರಾಷ್ಟ್ರವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದ್ದರು. ಈ ಎರಡು ಶಕ್ತಿಗಳು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದೆ, ಬ್ರಿಟಿಷರಿಗೆ ಸಹಕಾರಿಗಳಾಗಿದ್ದರು. ಇವರು ನಮ್ಮ ದೇಶವನ್ನು ಜಾತ್ಯತೀತ ಪ್ರಜಾಪ್ರಭುತ್ವದ ರಾಷ್ಟ್ರ ಮಾಡಬೇಕೆನ್ನುವುದನ್ನು ಸಹಿಸುತ್ತಿರಲಿಲ್ಲ. ಹೀಗೆ ರಾಷ್ಟ್ರದ ಕಲ್ಪನೆಯನ್ನು ಶತಮಾನಗಳ ಹಿಂದಕ್ಕೆ ಕೊಂಡೊಯ್ಯುವುದೇ ಈ ಎರಡು ಮೂಲಭೂತವಾದಿಗಳ ರಾಷ್ಟ್ರೀಯತೆಯ ಕಲ್ಪನೆಯಾಗಿತ್ತು. ಮೂರನೆಯದು ಎಡ ಪಂಥೀಯರದ್ದು. ಬ್ರಿಟಿಷರನ್ನು ಓಡಿಸಲು ಚಳವಳಿಯಾಗಬೇಕು. ಮುಂದೆ ಬ್ರಿಟಿಷರು ಹೋದ ನಂತರದ ರಾಷ್ಟ್ರ ಎಲ್ಲರಿಗಾಗಿ, ಎಲ್ಲರೂ ಸಮಾನತೆಯಿಂದ ಜೀವನ ಮಾಡುವಂತಾಗಬೇಕೆಂಬ ಸ್ಪಷ್ಟ ಗುರಿ ಹೊಂದಿದ್ದರು. ಇಂತಹ ಗುರಿಯನ್ನು ಸಾಧಿಸಲು ಸ್ವಾತಂತ್ರ್ಯಕ್ಕಾಗಿ ಹೋರಾಟ ಮತ್ತು ಸಮಾನತೆಗಾಗಿ ಹೋರಾಟ ಎಂದು ನಂಬಿದ್ದರು.

ಈ ಎರಡನ್ನು ಗುರಿಗಳಿಗಾಗಿ ಹೋರಾಟ ಮಾಡಬೇಕೆಂಬ ಆಶಯವನ್ನು ಕಮ್ಯೂನಿಸ್ಟರು ದೇಶದ ಜನತೆಯ ಮುಂದೆ ಇಟ್ಟರು. ಕಾಂಗ್ರೆಸ್ ಇದನ್ನು ಮಾಡುವುದಿಲ್ಲವೆಂಬುದನ್ನು ಕಮ್ಯೂನಿಸ್ಟರು ಮನಗಂಡಿದ್ದರು. ಹೀಗಾಗಿಯೇ ಕಾಂಗ್ರೆಸ್‌ನ ವಂಚನೆಯನ್ನು 1922ರಲ್ಲೇ ಕಮ್ಯೂನಿಸ್ಟರು ಟೀಕಿಸುತ್ತಿದ್ದರು. ವಸಾಹತುಶಾಹಿ ಮತ್ತು ಭೂಮಾಲಕ ಮತ್ತು ಪಾಳೆಗಾರಿಕೆಯ ವ್ಯವಸ್ಥೆಯ ವಿರುದ್ಧ ಜನತೆಯನ್ನು ಸ್ವಾತಂತ್ರ್ಯಾ ಹೋರಾಟಕ್ಕಿಳಿಸಿದರು. ರೈತ-ಕಾರ್ಮಿಕ, ವಿದ್ಯಾರ್ಥಿ ಮುಂತಾದ ಎಲ್ಲ್ಲ ಜನ ಸಮುದಾಯವನ್ನು ಈ ಹೋರಾಟಕ್ಕಿಳಿಸಲು ಕಮ್ಯೂನಿಸ್ಟರು ಮುಂದಾದರು. ಹೀಗಾಗಿ ಜನ ಮಾನಸದಲ್ಲಿ ನೈಜ ಸ್ವಾತಂತ್ರದ ಕಿಚ್ಚು ದೇಶಾದ್ಯಂತ ಹೆಚ್ಚಿತ್ತು.ಹೀಗೆ, ಕಮ್ಯೂನಿಸ್ಟ್ ಚಿಂತನೆಗಳು, ಕಮ್ಯೂನಿಸ್ಟ್ ತತ್ವಗಳು ರಾಷ್ಟ್ರ ಕವಿ ಕುವೆಂಪು ರವರ ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬ ಈ ಮಾತುಗಳಿಂದಲೂ ಕೂಡ ಕಮ್ಯೂನಿಸ್ಟ್‌ರರಾಷ್ಟ್ರೀಯತೆ ಪರಿಕಲ್ಪನೆಯನ್ನು ಸುಂದರವಾಗಿ ಪ್ರತಿಬಿಂಬಿಸುತ್ತಿರುವುದನ್ನು ನೋಡಬಹುದು. ಇದೇ ರೀತಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ರವರೂ ಕೂಡ ಬ್ರಿಟಿಷ್ ಮುಕ್ತ ರಾಷಟ್ರೆ ಸಮಾನತೆಯ ಆಧಾರದಲ್ಲಿ ರೂಪುಗೊಳ್ಳಬೇಕೆಂಬ ಕನಸು ಕಂಡಿದ್ದರು.

ಚೌಡರ ಕೆರೆ ಪ್ರವೇಶ, ದೇವಸ್ಥಾನಗಳ ಪ್ರವೇಶ ಇಂತಹ ಕ್ರಾಂತಿಕಾರಕ ಚಳವಳಿಗಳನ್ನು ರೂಪಿಸುವುದರ ಹಿಂದೆ ಇಡೀ ದೇಶದ ಐದಾರು ಲಕ್ಷ ಹಳ್ಳಿಗಳಲ್ಲೂ ಎಲ್ಲ ದಲಿತರಿಗೆ ನಿಷೇಧವಾಗಿರುವ ಎಲ್ಲವೂ ಮುಕ್ತವಾಗಬೇಕೆಂಬ ಗುರಿಯಾಗಿತ್ತು. ಭಾರತ ಎಲ್ಲರದ್ದು, ಹೀಗಾಗಿ ಎಲ್ಲ್ಲವೂ ಎಲ್ಲ್ಲರಿಗೂ ಸಿಗಬೇಕೆಂಬುದೇ ಅಂಬೇಡ್ಕರ್‌ರವರ ಸ್ವಾತಂತ್ರ್ಯಾ ನಂತರದ ರಾಷ್ಟ್ರೀಯತೆಯ ಪರಿಕಲ್ಪನೆಯ ಗುರಿಯಾಗಿತ್ತು. ಅಂದರೆ ದಲಿತರು, ಹಿಂದುಳಿದವರು, ಮಹಿಳೆಯರು ಹೀಗೆ ಎಲ್ಲ್ಲರಿಗೂ ನ್ಯಾಯ ಬದ್ಧ್ದವಾದ ಪಾಲು ಸಿಗಬೇಕೆಂಬುದು ಅಂಬೇಡ್ಕರ್‌ರವರ ಪರಿಕಲ್ಪನೆಯಾಗಿತ್ತು. ಹೀಗೆ ಕಮ್ಯೂನಿಸ್ಟ್‌ರು ಮತ್ತು ಅಂಬೇಡ್ಕರ್ ಒಂದೇ ಗುರಿಯನ್ನು ಬೇರೆ ಬೇರೆ ಪರಿಭಾಷೆಯಲ್ಲಿ ಹೇಳುತ್ತಿದ್ದರು. ಅಂಬೇಡ್ಕರ್ ಜಾತಿ ಪರಿಭಾಷೆ. ಕಮ್ಯೂನಿಸ್ಟ್‌ರು ವರ್ಗ ಪರಿಭಾಷೆಯಷ್ಟೆ. ಕಮ್ಯೂನಿಸ್ಟ್‌ರು 1922ರಲ್ಲೇ ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ್ದರು.
 ಈ ದಿಸೆಯಲ್ಲಿ ನೋಡಿದಾಗ, ನಮ್ಮ ದೇಶವನ್ನು ಬ್ರಿಟಿಷರು ಆಳುತ್ತಿದ್ದರು. ಅಂದರೆ ಭಾರತದ ರಾಷ್ಟ್ರೀಯತೆಯು ಬ್ರಿಟಿಷ್ ರಾಷ್ಟ್ರೀಯತೆಯ ಅಧೀನತೆಯಲ್ಲಿತ್ತು. ಇದರಿಂದ ಮುಕ್ತಿ ಹೊಂದಿದ ಮುಂದಿನ ಭಾರತ ರಾಷ್ಟ್ರೀಯತೆಯು ಹೇಗಿರಬೇಕೆಂಬ ಕಮ್ಯೂನಿಸ್ಟ್ ಕಲ್ಪನೆ ಮತ್ತು ಅಂಬೇಡ್ಕರ್ ಕಲ್ಪನೆ ಸಮೀಪದಲ್ಲಿದ್ದವು ಎಂಬುದನ್ನು ಮರೆಯಬಾರದು. ಬ್ರಿಟಿಷರ ವಿರುದ್ಧ ಹೋರಾಟ ಮಾಡುವ ಜೊತೆಗೆ ಮುಂದಿನ ರಾಷ್ಟ್ರೀಯತೆಯ ಬಗ್ಗೆ ಸ್ಪಷ್ಟವಾದ ಪರಿಕಲ್ಪನೆ ಕಮ್ಯೂನಿಸ್ಟರು ಹೊಂದಿದ್ದರು.

ಕಮ್ಯೂನಿಸ್ಟ್‌ರ ರಾಷ್ಟ್ರೀಯತೆಯ ಕಲ್ಪನೆಯಂತೆಯೇ ಅಂಬೇಡ್ಕರ್ ಸಹ ರಾಷ್ಟ್ರೀಯತೆಯ ಪರಿಕಲ್ಪನೆಯಲ್ಲಿ ಸಮೀಪದಲ್ಲಿದ್ದವು. ಸ್ವಾತಂತ್ರ್ಯಾ ಚಳವಳಿಯ ಸಂದರ್ಭದಲ್ಲಿ ಹಲವಾರು ಹೋರಾಟವನ್ನು ಅಂಬೇಡ್ಕರ್ ಮಾಡಿದರು. ಸ್ವಾತಂತ್ರ್ಯಾ, ಸಮಾನತೆ, ಸೋದರತ್ವ ಅಂಬೇಡ್ಕರ್‌ರವರ ರಾಷ್ಟ್ರೀಯತೆಯ ಪರಿಕಲ್ಪನೆಯ ಹೃದಯವಾಗಿತ್ತು. ಕಮ್ಯೂನಿಸ್ಟ್‌ರದ್ದು ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾನತೆ, ಸಮಾಜವಾದ.
 
 
   
ಹೀಗೆ ಸ್ವಾತಂತ್ರ್ಯ ಹೋರಾಟ ಮಾಡುವಾಗಲೇ ಮುಂದಿನ ರಾಷ್ಟ್ರೀಯತೆಯ ಪರಿಕಲ್ಪನೆ ಕಮ್ಯೂನಿಸ್ಟ್, ಅಂಬೇಡ್ಕರ್ ಮತ್ತು ನೇತಾಜಿಯವರಿಗೆ ಒಂದೇ ಸಮೀಪದಲ್ಲಿದ್ದವು. ಕಾಂಗ್ರೆಸ್, ಹಿಂದೂ ರಾಷ್ಟ್ರವಾದಿ ಹಾಗೂ ಮುಸ್ಲಿಂ ರಾಷ್ಟ್ರವಾದಿಗಳಿಗಿಂದ ಮಾತ್ರ ಭಿನ್ನವಾಗಿದ್ದವು. ಇದನ್ನರಿತು, ಪ್ರಸ್ತುತ ಸಂದಭರ್ದಲ್ಲಿ ಅಂಬೇಡ್ಕರ್‌ವಾದಿಗಳು, ಎಡಪಂಥೀಯವಾದಿಗಳು ಪರಸ್ಪರ ಅನಗತ್ಯ ವಾಗ್ವಾದಗಳಿಗೆ ಇಳಿಯದೆ ಇನ್ನಷ್ಟು ವಾಸ್ತವ ನೆಲೆಗಟ್ಟಿನಲ್ಲಿ ಅಂಬೇಡ್ಕರ್ ಮತ್ತು ಕಮ್ಯೂನಿಸ್ಟ್ ಚಳವಳಿಯನ್ನು ಅಧ್ಯಯನ ಮಾಡಬೇಕಿದೆ. ಈ ಅಧ್ಯಯನದ ಮುಖ್ಯ ಗುರಿಯು ಅಂಬೇಡ್ಕರ್ ಆಶಯಗಳನ್ನು ಮುನ್ನಡೆಸುವುದು ಎಂದಾದರೆ, ಪಟ್ಟಭದ್ರ ಶಕ್ತಿಗಳ ವಿರುದ್ಧ ಐಕ್ಯ ಹೋರಾಟ ರೂಪಿಸುವುದೇ ಆಗಿರುತ್ತದೆ. ರಾಷ್ಟ್ರದಲ್ಲಿ ಇಂದು ಹಿಂದೂ ರಾಷ್ಟ್ರವಾದಿಗಳು ಅಧಿಕಾರದಲ್ಲಿದ್ದಾರೆ. ಕೋಮುವಾದದ ಮುಖಾಂತರ ದಾಳಿ ಮಾಡಲು ಹೊರಟಿದ್ದಾರೆ. ಉದಾ: ದನ ಮಾಂಸ ತಿನ್ನಬಾರದು, ಜೈ ಭಾರತ ಎನ್ನಬೇಕು, ನೈತಿಕ ಪೊಲೀಸ್‌ಗಿರಿಯನ್ನು ದೇಶದೆಲ್ಲೆಡೆ ಸ್ಥಾಪಿಸಲು ಹೊರಟಿದ್ದಾರೆ. ಹೀಗೆ ಹಿಂದೂ ರಾಷ್ಟ್ರವಾದಿ ರಾಷ್ಟ್ರೀಯ ಪರಿಕಲ್ಪನೆಯನ್ನು ಜನರ ನಡುವೆ ಆದೇಶಿಸಿ, ಜಾರಿಗೊಳಿಸುತ್ತಿದ್ದಾರೆ. ಇವರ ಇಂತಹ ಹಿಂದೂ ರಾಷ್ಟ್ರವಾದವನ್ನು ಸ್ವಾತಂತ್ರ್ಯ ಚಳವಳಿಯಲ್ಲೇ ತಿರಸ್ಕರಿಸಲಾಗಿತ್ತು. ಆಗ ಸ್ವಾತಂತ್ರ್ಯಾ ನಂತರ ದೇಶದಲ್ಲಿ ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆ ಬಂತು. ಇದನ್ನು ಸಹಿಸದೆ ಷಡ್ಯಂತ್ರ ರೂಪಿಸುತ್ತಾ ಬಂದ ಹಿಂದೂ ರಾಷ್ಟ್ರವಾದಿಗಳು, ಈಗ ದೇಶಾದ್ಯಂತ ವ್ಯಾಪಿಸಿಕೊಂಡಿದ್ದಾರೆ. ಈ ಹಿಂದೂ ರಾಷ್ಟ್ರವಾದಿಗಳಿಂದ ಏಕ ಕಾಲದಲ್ಲಿ ದಲಿತರು, ಅಲ್ಪಸಂಖ್ಯಾತರು, ಪ್ರಗತಿಪರ ಚಿಂತಕರು, ಮಹಿಳೆಯರು ಹೀಗೆ ಹಿಂದೂವಾದಿಗಳಲ್ಲದವರ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಯುತ್ತಿದೆ. ಇದನ್ನು ವಿರೋಧಿಸುವವರಿಗೆ ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ. ಇಂತಹ ಸಂದಭರ್ದಲ್ಲಿ ಅಂಬೇಡ್ಕರ್‌ರವರ ನೈಜ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಬಿಟ್ಟು ಕೇವಲ ಅಂಬೇಡ್ಕರ್ ಮಠವನ್ನು ಕಟ್ಟಿಕೊಳ್ಳುವಂತಹ ವಾದ ಕೆಲವರಲ್ಲಿ ಇದೆ. ಇಂತಹವುಗಳಿಗೆ ಮಾತ್ರ ಮಹತ್ವ ಕೊಡಲಾಗುತ್ತಿದೆ. ಮುಖ್ಯವಾಗಿ ಅಂಬೇಡ್ಕರ್ ಆಶಯಗಳಿಗೆ ಬದ್ಧವಾಗಿರುವುದು ಎಂದರೆ, ಪ್ರಸ್ತುತ ಸಂದರ್ಭದಲ್ಲಿ ಕಮ್ಯೂನಿಸ್ಟ್ ಮತ್ತು ಅಂಬೇಡ್ಕರ್ ಮತ್ತು ನೇತಾಜಿಯವರ ರಾಷ್ಟ್ರೀಯತೆಯ ಪರಿಕಲ್ಪನೆಯ ಹಾದಿಯತ್ತ ಜೊತೆಗೂಡಿ ಜನಾಂದೋಲನವನ್ನು ರೂಪಿಸಬೇಕಿದೆ. ಹೀಗೆ ಇನ್ನಾದರೂ ಅಂಬೇಡ್ಕರ್ ಮತ್ತು ಕಮ್ಯೂನಿಸ್ಟ್ ಚಳವಳಿಗಳನ್ನು ಇನ್ನಾದರೂ ಬೆಸೆಯುವಂತಾಗಬೇಕು.

Writer - ಬಿ.ರಾಜಶೇಖರಮೂರ್ತಿ

contributor

Editor - ಬಿ.ರಾಜಶೇಖರಮೂರ್ತಿ

contributor

Similar News