ನೀಟ್ ಒಂದು ವರ್ಷ ಮುಂದೂಡಿಕೆ: ಕೇಂದ್ರ ಸುಗ್ರೀವಾಜ್ಞೆ
ಹೊಸದಿಲ್ಲಿ, ಮೇ 20: ವೈದ್ಯಕೀಯ ಹಾಗೂ ದಂತವೈದ್ಯಕೀಯ ಕೋರ್ಸ್‌ಗಳ ಸಾಮಾನ್ಯ ಪ್ರವೇಶಕ್ಕಾಗಿನ ಏಕೀಕೃತ ರಾಷ್ಟ್ರೀಯ ಪ್ರವೇಶ ಪರೀಕ್ಷೆ(ನೀಟ್) ಯನ್ನು ಒಂದು ಶೈಕ್ಷಣಿಕ ವರ್ಷದ ಮಟ್ಟಿಗೆ ಮುಂದೂಡಲು ಕೇಂದ್ರ ಸರಕಾರ ಶುಕ್ರವಾರ ಸುಗ್ರೀವಾಜ್ಞೆ ಹೊರಡಿಸಿದೆ.
ನೀಟ್ ಪರೀಕ್ಷೆಯನ್ನು ನಡೆಸುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದೆಂದು ರಾಜ್ಯ ಸರಕಾರಗಳು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ತೀರ್ಮಾನ ಕೈಗೊಂಡಿದೆ.
ಎಲ್ಲ ಸರಕಾರಿ ಕಾಲೇಜುಗಳು, ಡೀಮ್ಡ್ ವಿಶ್ವವಿದ್ಯಾನಿಲಯಗಳು ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳು ನೀಟ್ ವ್ಯಾಪ್ತಿಗೆ ಬರುತ್ತವೆಂಬ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಭಾಗಶಃ ನಿರಾಕರಿಸುವ ಗುರಿಯನ್ನು ಈ ಕಾರ್ಯಕಾರಿ ಆದೇಶ ಹೊಂದಿದೆ.
ಮುಂದಿನ ಹಂತದ ನೀಟ್ ಪರೀಕ್ಷೆ ಜು.24ಕ್ಕೆ ನಿಗದಿಯಾಗಿದೆ. ಮೇ 1ರಂದು ನಡೆದಿದ್ದ ಮೊದಲ ಹಂತದ ಪರೀಕ್ಷೆಯನ್ನು ಸುಮಾರು 6.5 ಲಕ್ಷ ವಿದ್ಯಾರ್ಥಿಗಳು ಬರೆದಿದ್ದಾರೆ.
ಅಧ್ಯಾದೇಶ ಜಾರಿಯಾದಲ್ಲಿ ರಾಜ್ಯ ಸರಕಾರಗಳ ಮಂಡಳಿಗಳ ವಿದ್ಯಾರ್ಥಿಗಳು ಜು.24ರ ನೀಟ್ ಪರೀಕ್ಷೆಗೆ ಹಾಜರಾಗಬೇಕಿಲ್ಲ. ಆದಾಗ್ಯೂ ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಏಕರೀತಿಯ ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ಭಾಗವಹಿಸಲೇ ಬೇಕೆಂದು ಸರಕಾರಿ ಮೂಲಗಳು ಸ್ಪಷ್ಟಪಡಿಸಿವೆ. ಇದಕ್ಕೂ ಮುನ್ನ ಸೋಮವಾರ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹಾಗೂ 14 ರಾಜ್ಯಗಳ ಆರೋಗ್ಯ ಸಚಿವರು ಹಾಗೂ ಕಾಂಗ್ರೆಸ್ ಮತ್ತು ಪ್ರತಿಪಕ್ಷ ನಾಯಕರ ಜೊತೆ ನಡೆಸಿದ ಎರಡು ಮಹತ್ವದ ಸಭೆಗಳ ಬಳಿಕ ಈ ತೀರ್ಮಾನಕ್ಕೆ ಬರಲಾಯಿತು.
ಪರೀಕ್ಷೆಯು ಕೇಂದ್ರ ಸರಕಾರದ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಅರ್ಜಿ ಸಲ್ಲಿಸುವವರಿಗೆ ಅನ್ವಯವಾಗಲಿದೆ.
ವಿದ್ಯಾರ್ಥಿಗಳಿಗೆ ಭಾಷೆ ಹಾಗೂ ಸಿಲೆಬಸ್ ಸಂಬಂಧದ ಸಮಸ್ಯೆ ಸಹಿತ ಅನೇಕ ವಿಷಯಗಳನ್ನು ಇತ್ತೀಚೆಗೆ ನಡೆದಿದ್ದ ಆರೋಗ್ಯ ಸಚಿವರ ಸಮ್ಮೇಳನದಲ್ಲಿ ರಾಜ್ಯಗಳು ಎತ್ತಿದ್ದವು.
ರಾಜ್ಯ ಮಂಡಳಿಗಳಿಗೆ ಸಂಯೋಜಿತರಾಗಿರುವ ವಿದ್ಯಾರ್ಥಿಗಳಿಗೆ ಜುಲೈಯಲ್ಲಿ -ಇಷ್ಟೊಂದು ಕಡಿಮೆ ಅವಧಿಯಲ್ಲಿ ನೀಟ್ ಪರೀಕ್ಷೆ ಬರೆಯುವುದು ಕಷ್ಟವಾಗಬಹುದೆಂದು ಅವರು ಪ್ರತಿಪಾದಿಸಿದ್ದರು.
ಸುಗ್ರೀವಾಜ್ಞೆಯ ಅಗತ್ಯದ ಕುರಿತು ವಿವರಿಸಲು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ, ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಭೇಟಿಮಾಡುವ ನಿರೀಕ್ಷೆಯಿದೆ.
ನೀಟ್ ಅಧ್ಯಾದೇಶದ ವಿರುದ್ಧ ಎನ್‌ಜಿಒ ಕಾನೂನು ಸಮರ
ಹೊಸದಿಲ್ಲಿ,ಮೇ 20: ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್‌ಗಳಿಗೆ ನೀಟ್ ಜೊತೆಗೆ ತಮ್ಮ ಪ್ರತ್ಯೇಕ ಪ್ರವೇಶ ಪರೀಕ್ಷೆಗಳನ್ನು ಮುಂದುವರಿಸಲು ಅಧ್ಯಾದೇಶವೊಂದರ ಮೂಲಕ ರಾಜ್ಯಗಳಿಗೆ ಅವಕಾಶ ಕಲ್ಪಿಸುವ ಕೇಂದ್ರದ ಪ್ರಯತ್ನವನ್ನು ಎನ್‌ಜಿಒ ಸಂಕಲ್ಪ್ ಚಾರಿಟೇಬಲ್ ಟ್ರಸ್ಟ್ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆಯಿದೆ.
ಕೇಂದ್ರ ಸಂಪುಟವು ಅಂಗೀಕರಿಸಿರುವ ಅಧ್ಯಾದೇಶದ ಅಧಿಸೂಚನೆ ಪ್ರಕಟಗೊಂಡ ತಕ್ಷಣ ತಾನದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಈ ಮೊದಲು ನೀಟ್ ಅನ್ನು ಬೆಂಬಲಿಸಿ ನ್ಯಾಯಾಲಯದ ಮೆಟ್ಟಿಲನ್ನೇರಿದ್ದ ಸಂಕಲ್ಪ್ ಹೇಳಿದೆ. ಸರಕಾರವು ಅಧ್ಯಾದೇಶವನ್ನು ತರುವ ಮೂಲಕ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ತಪ್ಪಿಸಿಕೊಳ್ಳುವಂತಿಲ್ಲ ಎಂದು ಸಂಕಲ್ಪ್ ಪರ ನ್ಯಾಯಾಲಯದಲ್ಲಿ ಹಾಜರಾಗಿದ್ದ ನ್ಯಾಯವಾದಿ ಅಮಿತ್ ಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಒಂದು ಶೈಕ್ಷಣಿಕ ವರ್ಷದ ಅವಧಿಗೆ ರಾಜ್ಯ ಪರೀಕ್ಷಾ ಮಂಡಳಿಗಳನ್ನು ನೀಟ್‌ನ ವ್ಯಾಪ್ತಿಯಿಂದ ಹೊರಗಿಡಲು ಅಧ್ಯಾದೇಶ ಘೋಷಣೆಯನ್ನು ಕೇಂದ್ರ ಸಂಪುಟವು ಶುಕ್ರವಾರ ಒಪ್ಪಿಕೊಂಡಿದೆ.