×
Ad

ಪಂಜಾಬ್‌ನಲ್ಲಿ ಆಪ್‌ಗೆ ಶಾಕ್: ಇಬ್ಬರು ಸಂಸದರು ಗುಡ್‌ಬೈ

Update: 2016-05-21 20:15 IST

ಹೊಸದಿಲ್ಲಿ: ಪಂಜಾಬ್ ವಿಧಾನಸಭಾ ಚುನಾವಣೆಗೆ ಕೇವಲ ಎಂಟು ತಿಂಗಳು ಬಾರಿ ಇರುವಂತೆ, ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿ ವಿಭಜನೆಯ ಹಾದಿ ಹಿಡಿದಿದೆ. ಒಟ್ಟು ನಾಲ್ಕು ಮಂದಿ ಸಂಸದರ ಪೈಕಿ ಪಕ್ಷದ ಇಬ್ಬರು ಸಂಸದರು ಪಕ್ಷಕ್ಕೆ ಗುಡ್‌ಬೈ ಹೇಳಿ ಹೊಸ ಪಕ್ಷ ಕಟ್ಟಲು ನಿರ್ಧರಿಸಿರುವುದು ಮುಖಂಡ ಕೇಜ್ರಿವಾಲ್ ಅವರಿಗೆ ತಲೆನೋವು ತಂದಿದೆ.

ಸಂಸದರಾದ ಹರೀಂದರ್ ಸಿಂಗ್ ಖಾಲ್ಸಾ ಹಾಗೂ ಧರ್ಮವೀರ ಗಾಂಧಿಯವರು ಪಕ್ಷ ತ್ಯಜಿಸಲು ನಿರ್ಧರಿಸಿದ್ದು, 2014ರ ಚುನಾವಣೆಯಲ್ಲಿ ಇಬ್ಬರೂ ಸ್ಟಾರ್ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದರು. ಇವರ ಜತೆಗೆ ಹರ್ವೀಂದರ್ ಸಿಂಗ್ ಪೂಲ್ಕಾ, ದಲಜೀತ್ ಸಿಂಗ್ ಹಾಗೂ ಜಸ್‌ರಾಜ್ ಲೋಂಗಿಯಾ ಅವರು ಕೂಡಾ ಇನ್ನೂ ಹುಟ್ಟದ ಪಕ್ಷಕ್ಕೆ ಸೇರಲು ನಿರ್ಧರಿಸಿದ್ದಾರೆ.
ಎಎಪಿ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಸರ್ವಾಧಿಕಾರಿ ಎಂದು ಬಣ್ಣಿಸಿದ ಖಾಲ್ಸಾ, ನನ್ನ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನನಗೆ ಬೇಸರ ಎನಿಸುವುದಿಲ್ಲ. ಕಾರ್ಯಕರ್ತರು ಆರಂಭಿಸುವ ಹೊಸ ಪಕ್ಷಕ್ಕೆ ಹೋಗಲು ಸಂತೋಷವಾಗುತ್ತಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ದೆಹಲಿ ನಾಯಕತ್ವ ಪಕ್ಷದ ಕಾರ್ಯಕರ್ತರನ್ನು ಕಾಲಕಸವಾಗಿ ಕಾಣುತ್ತಿದೆ. ಇದರ ಬದಲಾಗಿ ತಮ್ಮ ಸಾಂಪ್ರದಾಯಿಕ ಪಕ್ಷವನ್ನು ತೊರೆದು ದುರುದ್ದೇಶದಿಂದ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಧನವಂತರಿಗಷ್ಟೇ ಮಣೆಹಾಕುತ್ತಿದೆ ಎಂದು ದೂರಿದ್ದಾರೆ.
ಪಕ್ಷದ ಹುಟ್ಟು ಒಂದು ದೊಡ್ಡ ಕ್ರಾಂತಿ. ಆದರೆ ಇಂದಿನ ಆಮ್ ಆದ್ಮಿ ಪಕ್ಷ, ಅಧಿಕಾರ ದಾಹ ಹಾಗೂ ಹಗರಣಗಳ, ವಂಚಕರ ಕೂಟ ಎಂದು ಖಾಲ್ಸಾ ಕಿಡಿ ಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News