ಆಗಸಕ್ಕೆ ಏಣಿ ಹಾಕಿದ ಇಸ್ರೊ

Update: 2016-05-23 03:15 GMT

ಶ್ರೀಹರಿಕೋಟಾ, ಮೇ 23: ಮೊದಲ ಪ್ರಯತ್ನದಲ್ಲೇ ಯಶಸ್ವಿ ಮಂಗಳಯಾನ ಮೂಲಕ ವಿಶ್ವವಿಡೀ ಬೆರಗುಗಣ್ಣಿನಿಂದ ಭಾರತದ ಸಾಧನೆ ನೋಡುವಂತೆ ಮಾಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇದೀಗ ಮತ್ತೊಂದು ಐತಿಹಾಸಿಕ ವಿಕ್ರಮ ಮೆರೆದಿದೆ.

ಸೋಮವಾರ ಇಲ್ಲಿನ ಬಾಹ್ಯಾಕಾಶ ಕೇಂದ್ರದಿಂದ ಮೊಟ್ಟಮೊದಲ "ಬಾಹ್ಯಾಕಾಶ ನೌಕೆ"ಯ ಕಿರು ಅವತರಣಿಕೆಯನ್ನು ಯಶಸ್ವಿಯಾಗಿ ಹಾರಿ ಬಿಡುವ ಮೂಲಕ ಇತಿಹಾಸ ಸೃಷ್ಟಿಸಿದೆ.

 ಈ ಪ್ರಯೋಗದ ಉದ್ದೇಶ ಅದು ಯಶಸ್ವಿಯಾಗಿ ಹಾರುತ್ತದೆಯೇ ಎಂದು ನೋಡುವುದಲ್ಲ. ಬದಲಾಗಿ, ಶಬ್ದದ ವೇಗಕ್ಕಿಂತ ಐದು ಪಟ್ಟು ವೇಗೋತ್ಕರ್ಷದಲ್ಲಿ ಹಾರುವುದು ಹಾಗೂ ಪಥದರ್ಶಕ ಸೌಲಭ್ಯವನ್ನು ನೀಡುವುದಾಗಿದೆ. ಬಂಗಾಳಕೊಲ್ಲಿಯ ಕಡಲತೀರದಿಂದ ಸುಮಾರು 500 ಕಿಲೋಮೀಟರ್ ದೂರದ ವಾಸ್ತವ ರನ್‌ವೇಗೆ ಕಳುಹಿಸುವಾಗಿತ್ತು.

ಅಮೆರಿಕದ ಬಾಹ್ಯಾಕಾಶ ನೌಕೆಯನ್ನೇ ಹೋಲುವ ಎರಡು ಡೆಲ್ಟಾ ರೆಕ್ಕೆಗಳನ್ನು ಹೊಂದಿರುವ ಆರ್‌ಎಲ್‌ಡಿ-ಟಿಡಿ, ಅಂತಿಮ ಅವತರಣಿಕೆಯ ಆರುಪಟ್ಟು ಸಣ್ಣದಾಗಿದೆ. 6.5 ಮೀಟರ್ ಉದ್ದದ ವಿಮಾನದಂಥ ಈ ಬಾಹ್ಯಾಕಾಶ ನೌಕೆ 1.75 ಟನ್ ತೂಕವಿದೆ. ವಿಶೇಷ ರಾಕೆಟ್ ಬೂಸ್ಟರ್ ಮೂಲಕ ವಾತಾವರಣಕ್ಕೆ ಸೇರಿಸಲಾಯಿತು. ಇದು ಮರುಬಳಕೆಯ ರಾಕೆಟ್ ನಿರ್ಮಾಣದ ನಿಟ್ಟಿನಲ್ಲಿ ಪ್ರಾಥಮಿಕ ಹೆಜ್ಜೆಯಾಗಿದ್ದು, ಮುಂದಿನ 10-15 ವರ್ಷಗಳಲ್ಲಿ ಪೂರ್ಣ ಪ್ರಮಾಣದ ಅಂತಿಮ ಅವತರಣಿಕೆ ಸಿದ್ಧವಾಗುವ ನಿರೀಕ್ಷೆ ಇದೆ.

 ಸೋಮವಾರದ ಪ್ರಾಥಮಿಕ ಮಿಷನ್‌ನಲ್ಲಿ, ವಿಮಾನವನ್ನೇ ಹೋಲುವ ಈ ನೌಕೆಯನ್ನು ಹಾರಿಬಿಡಲಾಯಿತು. ಸುಮಾರು 70 ಕಿಲೋಮೀಟರ್ ಎತ್ತರಕ್ಕೆ ಹಾರಬಲ್ಲ ಈ ಬಾಹ್ಯಾಕಾಶ ನೌಕೆ ಸಮುದ್ರದ ನಿರ್ದಿಷ್ಟ ಭಾಗದಲ್ಲಿ ಇಳಿಯುವ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News