ಆತ್ಮರಕ್ಷಣೆಯ ಮುಖವಾಡದಲ್ಲಿ ಉಗ್ರವಾದಿಗಳಿಗೆ ತರಬೇತಿ!
ತೋಳ ತನ್ನ ಕೋರೆಹಲ್ಲುಗಳನ್ನು ಕಲ್ಲಿಗೆ ಉಜ್ಜಿ ಹರಿತ ಮಾಡಿಕೊಂಡರೆ ಅದು ‘ಆತ್ಮ ರಕ್ಷಣೆಗೆ’ ಎಂದು ಭಾವಿಸುವ ನೆಲದಲ್ಲಿ, ಕೊಂಬುಗಳನ್ನು ಹೊಂದಿರುವ ಜಿಂಕೆ, ಅಕ್ರಮ ಶಸ್ತ್ರ ಹೊಂದಿದ ಆರೋಪದಲ್ಲಿ ಬಂಧನಕ್ಕೊಳಗಾಗಬೇಕಾಗುತ್ತದೆ. ಸದ್ಯ, ಈ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಈ ಎರಡು ಸಾಲಿನ ಕತೆ ತೆರೆದಿಡುತ್ತದೆ. ಇತ್ತೀಚೆಗೆ ಕೇಸರಿ ಉಗ್ರರು ದೇಶಾದ್ಯಂತ ನಡೆಸಿದ ಸ್ಫೋಟಗಳು ಮತ್ತು ಅದರ ನಂತರ ನಡೆದಿರುವ ಬೆಳವಣಿಗೆಗಳನ್ನು ಗಮನಿಸೋಣ. ಕೇಸರಿ ಉಗ್ರರು ಮಾಲೆಗಾಂವ್ ಮತ್ತು ಅಜ್ಮೀರ್‌ಗಳಲ್ಲಿ, ಸಂಜೋತಾ ರೈಲಿನಲ್ಲಿ ನಡೆಸಿದ ಸ್ಫೋಟ, ಭಯೋತ್ಪಾದನೆಗಳಿಗೆ ನೀಡಿದ ಪ್ರತಿಕ್ರಿಯೆ ಎಂದು ಸಂಘಪರಿವಾರ ಸಮರ್ಥಿಸಲು ಆರಂಭಿಸಿತು. ಆದರೆ ಸ್ವಾತಂತ್ರೋತ್ತರ ಭಾರತದಲ್ಲಿ ಮೊತ್ತಮೊದಲು ಸ್ಫೋಟ ನಡೆದಿರುವುದು ಗಾಂಧಿಯ ಆಶ್ರಮದಲ್ಲಿ. ಆ ಭಯೋತ್ಪಾದನಾ ಸ್ಫೋಟದ ಹಿಂದಿದ್ದದ್ದು ಕೇಸರಿ ಪಡೆ. ಗಾಂಧೀಜಿಯನ್ನು ಕೊಂದಿದ್ದೂ ಕೇಸರಿ ಭಯೋತ್ಪಾದಕರೆ. ಆಗಲೂ ಅವರು ತಮ್ಮ ಭಯೋತ್ಪಾದನೆಯನ್ನು ಇನ್ನೊಂದು ಭಯೋತ್ಪಾದನೆಯನ್ನು ತೋರಿಸಿ ಸಮರ್ಥಿಸಿಕೊಂಡರು. ಈಗಲೂ ಗೋಡ್ಸೆಯನ್ನು ಸಮರ್ಥಿಸುವವರು, ಮಾಲೆಗಾಂವ್ ಸ್ಫೋಟವನ್ನು ಸಮರ್ಥಿಸುವವರು ಇದೇ ತಂತ್ರವನ್ನು ಅನುಸರಿಸುತ್ತಿದ್ದಾರೆ. ಈ ದೇಶದಲ್ಲಿ ನಡೆಯುವ ಎಲ್ಲ ಹಿಂಸಾಚಾರಗಳಿಗೂ ಮುಸ್ಲಿಮರನ್ನು ಹೊಣೆಯಾಗಿಸುತ್ತಾ, ಫ್ಯಾಶಿಸ್ಟ್ ಶಕ್ತಿಗಳು ದೇಶಾದ್ಯಂತ ಬಲಾಢ್ಯವಾಗುತ್ತಿವೆ. ಸರಕಾರ ಇದರತ್ತ ನೋಡಿಯೂ ನೋಡದಂತೆ ವರ್ತಿಸುತ್ತಿದೆ. ವಿರೋಧ ಪಕ್ಷಗಳ ಧ್ವನಿಗೆ ಬಲವೇ ಇಲ್ಲದಂತಾಗಿದೆ.
ಇತ್ತೀಚೆಗೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಜರಂಗದಳ ಶಸ್ತ್ರಾಸ್ತ್ರ ತರಬೇತಿ ನಡೆಸುತ್ತಿರುವ ದೃಶ್ಯಾವಳಿ ಸಾಮಾಜಿಕ ತಾಣದಲ್ಲಿ ಹರಿದಾಡಿತು. ಎರಡು ಧರ್ಮಗಳ ನಡುವೆ ವಿಷ ಬೀಜಗಳನ್ನು ಬಿತ್ತಿ, ಹಿಂಸೆಯನ್ನು ಹರಡುವ ಸ್ಪಷ್ಟ ಸಂದೇಶ ಈ ತರಬೇತಿ ದೃಶ್ಯಾವಳಿಯಲ್ಲಿ ಇತ್ತು. ವಿಪರ್ಯಾಸವೆಂದರೆ, ಉತ್ತರ ಪ್ರದೇಶದ ರಾಜ್ಯಪಾಲರು ಈ ಶಸ್ತ್ರಾಸ್ತ್ರ ತರಬೇತಿಯನ್ನು ಬಹಿರಂಗವಾಗಿ ಮಾಧ್ಯಮಗಳಲ್ಲಿ ಸಮರ್ಥಿಸಿಕೊಂಡರು. ಈ ಸಮರ್ಥನೆ, ಸಂಘಪರಿವಾರದ ಹಿಂಸಾಚಾರಕ್ಕಿಂತಲೂ ಹೆಚ್ಚು ಆಘಾತಕಾರಿಯಾದುದು. ಈ ರಾಜ್ಯಪಾಲರ ಪ್ರಕಾರ ‘‘ಕೇವಲ ಆತ್ಮ ರಕ್ಷಣೆಗಾಗಿ ಕೆಲವು ಯುವಕರು ಶಸ್ತ್ರಾಸ್ತ್ರ ತರಬೇತಿ ಪಡೆದರೆ ಅದರಲ್ಲಿ ತಪ್ಪೇನು ಇಲ್ಲ’’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಸಾಧಾರಣವಾಗಿ ಆತ್ಮರಕ್ಷಣೆಯ ಕಲೆಗಾಗಿ ಕರಾಟೆ ಮೊದಲಾದ ಕಲೆಗಳನ್ನು ಹೇಳಿಕೊಡುವ ಸಂಸ್ಥೆಗಳು ಅಸ್ತಿತ್ವದಲ್ಲಿರುತ್ತವೆ. ಅವುಗಳು ನಾಗರಿಕರಿಂದ ದೂರ, ಕದ್ದು ಮುಚ್ಚಿ ತರಬೇತಿ ಪಡೆದುಕೊಳ್ಳುವುದಿಲ್ಲ. ಆದರೆ ಇಲ್ಲಿ ಸಂಘಪರಿವಾರದ ಸಂಘಟನೆಯೊಂದು, ಗುಟ್ಟಾಗಿ ತನ್ನ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿಯನ್ನು ನೀಡುವುದರೊಂದಿಗೆ ಮತ್ತು ಅದನ್ನು ‘‘ಆತ್ಮರಕ್ಷಣೆಗೆ’’ ಎಂದು ಸಮರ್ಥಿಸಿಕೊಳ್ಳುತ್ತಿದೆ. ಸಂಘಪರಿವಾರವೇನೋ ಸಮರ್ಥಿಸಿಕೊಳ್ಳಲಿ. ರಾಜ್ಯಪಾಲರೊಬ್ಬರು ಅದೇ ದಾಟಿಯಲ್ಲಿ ಹೇಳಿಕೆ ನೀಡುತ್ತಾರೆ ಎಂದಾದರೆ, ಈ ದುಷ್ಕರ್ಮಿಗಳು ಯಾರಿಂದ ರಕ್ಷಣೆಯನ್ನು ಬಯಸುತ್ತಾರೆ? ಈ ದೇಶದಲ್ಲಿ ನಾಗರಿಕರಿಗೆ ರಕ್ಷಣೆಯನ್ನು ನೀಡಲು ತನ್ನ ಸರಕಾರ ವಿಫಲವಾಗಿದೆ ಎಂದು ರಾಜ್ಯಪಾಲರು ಹೇಳುತ್ತಿದ್ದಾರೆಯೇ? ‘‘ತಾವು ಮಹಿಳೆಯರನ್ನು ರಕ್ಷಿಸಲು ಹಾಗೂ ಅವರಿಗೆ ಸಹಾಯ ಮಾಡಲು ಯುವಕರಿಗೆ ತರಬೇತಿ ನೀಡುತ್ತಿದ್ದೇವೆ’’ ಎಂದು ವಿಎಚ್‌ಪಿ ನಾಯಕರೊಬ್ಬರು ಹೇಳಿಕೆ ನೀಡಿದ್ದಾರೆ. ಯಾರಿಂದ? ಎನ್ನುವುದನ್ನು ಅವರು ಸ್ಪಷ್ಟ ಪಡಿಸಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ದೇಶದ ಮಹಿಳೆಯರಿಗೆ ರಕ್ಷಣೆ ನೀಡುವ ಹೊಣೆಗಾರಿಕೆಯನ್ನು ವಿಎಚ್‌ಪಿಯಂತಹ ಸಂಸ್ಥೆಗೆ ನೀಡಿದವರು ಯಾರು? ನಾಗರಿಕರಿಗೆ ರಕ್ಷಣೆ ನೀಡುವುದು ಅವರ ಜವಾಬ್ದಾರಿಯೇ? ಇವುಗಳಿಗೆ ರಾಜ್ಯಪಾಲರು ಯಾವ ಸ್ಪಷ್ಟೀಕರಣವನ್ನೂ ನೀಡಿಲ್ಲ. ಆತ್ಮರಕ್ಷಣೆಗಾಗಿ ಸಂಘಪರಿವಾರ ಪ್ರತ್ಯೇಕ ಸೈನ್ಯವನ್ನು ನಿರ್ಮಾಣ ಮಾಡುವುದರ ಉದ್ದೇಶವೇ, ಅದು ಪ್ರಜಾಸತ್ತಾತ್ಮಕವಾದ ಸರಕಾರದೊಂದಿಗೆ, ಕಾನೂನು ವ್ಯವಸ್ಥೆಯೊಂದಿಗೆ ಸಹಮತವನ್ನು ಹೊಂದಿಲ್ಲ ಎನ್ನುವುದನ್ನು ಹೇಳುತ್ತದೆ. ಇಷ್ಟಕ್ಕೂ ಸಂಘಪರಿವಾರದ ಇತಿಹಾಸವನ್ನು ನಾವು ತೆರೆದು ನೋಡಿದರೆ, ಅದು ರಕ್ಷಣೆ ನೀಡಿರುವುದಕ್ಕಿಂತ, ಸರ್ವನಾಶವನ್ನು ಮಾಡಿರುವುದೇ ಹೆಚ್ಚು. ಗುಜರಾತ್ ಗಲಭೆ, ಮುಂಬೈ ಗಲಭೆ, ಮೀರತ್ ಗಲಭೆ, ಮುಝಫ್ಫರ್ ನಗರ ಹಿಂಸಾಚಾರ ಈ ಎಲ್ಲವುಗಳ ಹಿಂದೆ ಸಂಘಪರಿವಾರದ ದುಷ್ಕರ್ಮಿಗಳಿರುವುದು ಬಹಿರಂಗವಾಗಿದೆ. ಇಂದು ದೇಶದಲ್ಲಿ ಸಂಘಪರಿವಾರದ ದುಷ್ಕರ್ಮಿಗಳಿಂದ ಜನರಿಗೆ ರಕ್ಷಣೆ ಬೇಕಾಗಿದೆ. ಭದ್ರತೆ ಬೇಕಾಗಿದೆ. ಇಂತಹ ಹೊತ್ತಿನಲ್ಲಿ, ಕುರಿಗಳಿಗೆ, ಜಿಂಕೆಗಳಿಗೆ ಭದ್ರತೆಯನ್ನು ನೀಡುವ ಬದಲು, ತೋಳಗಳಿಗೆ, ಕತ್ತೆಕಿರುಬಗಳಿಗೆ ನಮ್ಮ ವ್ಯವಸ್ಥೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಲು ಹವಣಿಸುತ್ತಿದೆ. ಅದರ ಭಾಗವಾಗಿಯೇ ಬಜರಂಗದಳದ ಶಸ್ತ್ರಾಸ್ತ್ರ ತರಬೇತಿಯನ್ನು ಸಮರ್ಥಿಸುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ. ಇದು ಅಂತಿಮವಾಗಿ ದೇಶವನ್ನು ಎರಡಾಗಿ ಒಡೆಯಲಿದೆ. ಹೀಗೆ ಆದಲ್ಲಿ ದೇಶದಲ್ಲಿ ಸಂಘಪರಿವಾರದ ಅಘೋಷಿತ ಪೊಲೀಸರು ಮತ್ತು ಪ್ರಜಾತ್ತಾತ್ಮಕ ವ್ಯವಸ್ಥೆಯ ಅಧಿಕೃತ ಪೊಲೀಸರ ನಡುವೆ ಘರ್ಷನೆ ನಡೆಯುವುದಕ್ಕೆ ಹೆಚ್ಚು ದಿನ ಬೇಕಾಗಿಲ್ಲ. ಈಗಾಗಲೇ ಸೇನೆ, ಪೊಲೀಸ್ ವ್ಯವಸ್ಥೆಯೊಳಗೆ ಬಜರಂಗದಳದ ಕಾರ್ಯಕರ್ತರು ನುಸುಳಿಕೊಂಡಿದ್ದಾರೆ. ಖಾಕಿ ಪ್ಯಾಂಟಿನೊಳಗೆ ಯಾವ ಸಂಕೋಚವೂ ಇಲ್ಲದೆ ಕೇಸರಿ ಚಡ್ಡಿ ಧರಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ, ಪೊಲೀಸ್ ಇಲಾಖೆಯ ಹೊರಗಡೆಯೂ ಸಂಘಪರಿವಾರದ ಅಧಿಕೃತ ಪೊಲೀಸರು ಕೆಲಸ ಮಾಡತೊಡಗುವ ದಿನ ದೂರವಿಲ್ಲ.
ಅಯೋಧ್ಯೆಯಲ್ಲಿ ತರಬೇತಿ ನೀಡುತ್ತಿರುವ ಘಟನೆ ಹೊಸತೇನೂ ಅಲ್ಲ. ಈ ಹಿಂದೆ ಕರ್ನಾಟಕದಲ್ಲಿ ಪ್ರಮೋದ್ ಮುತಾಲಿಕ್ ಎಂಬ ಕೇಸರಿ ಪಡೆಯ ಅರೆ ಹುಚ್ಚನೊಬ್ಬ ‘‘ತಾನು ಆತ್ಮಹತ್ಯಾ ದಳವನ್ನು ಕಟ್ಟುತ್ತೇನೆ...ಶಸ್ತ್ರಾಸ್ತ್ರ ತರಬೇತಿ ನೀಡುತ್ತೇನೆ....’’ ಎಂದು ಮಾಧ್ಯಮಗಳ ಮುಂದೆಯೇ ಸವಾಲು ಹಾಕಿದ್ದ. ರಾಮಸೇನೆಯ ಮುಖಾಂತರ ಈತ ತರಬೇತಿ ನೀಡಿರುವ ಛಾಯಚಿತ್ರಗಳು ಮಾಧ್ಯಮಗಳಲ್ಲೂ ಪ್ರಕಟವಾಗಿದ್ದವು. ರಾಮಲೀಲಾದಲ್ಲಿ ರಾಮ್‌ದೇವ್ ಪ್ರಹಸವನ್ನು ಅಂದಿನ ಸರಕಾರ ಪೊಲೀಸರ ಮೂಲಕ ಮಟ್ಟ ಹಾಕಿದಾಗ ಅವರೂ ‘‘ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿ ಸೇನೆಯನ್ನು ಕಟ್ಟುವ’’ ಮಾತುಗಳನ್ನಾಡಿದ್ದರು.ಅದನ್ನೀಗ ಬೇರೆ ಬೇರೆ ರೀತಿಯಲ್ಲಿ ಬೇರೆ ಸಂಘಟನೆಗಳು ನಿಜ ಮಾಡಲು ಹೊರಟಿದೆ. ಮುಂದಿನ ದಿನಗಳಲ್ಲಿ ಈ ದೇಶದ ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ನ್ಯಾಯಕ್ಕಾಗಿ ಬಂಡೆದ್ದಾಗ ಅವರನ್ನು ಮಟ್ಟಹಾಕಲು, ದೇಶದಲ್ಲಿ ಕೋಮುಗಲಭೆಗಳನ್ನು ಎಬ್ಬಿಸಿ ಪ್ರಜಾಸತ್ತೆಯನ್ನು ಬುಡಮೇಲು ಮಾಡಲು ಈ ತರಬೇತಿ ಪಡೆದ ಉಗ್ರರನ್ನು ಬಳಸುವ ಎಲ್ಲ ಸಾಧ್ಯತೆಗಳಿವೆ. ಬಜರಂಗದಳದ ಮೂಲಕ ಈ ದೇಶದಲ್ಲಿ ಮನುವಾದಿ ಮನಸ್ಥಿತಿಗಳು ಸೇನೆಯನ್ನು ಕಟ್ಟಿಕೊಂಡು, ಹಳೆಯ ವ್ಯವಸ್ಥೆಯನ್ನು ಜಾರಿಗೊಳಿಸಲು ಯೋಜನೆ ರೂಪಿಸುತ್ತಿವೆ. ಇದರ ವಿರುದ್ಧ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳದೇ ಇದ್ದರೆ ಮುಂದೆ ದಲಿತರು, ಮುಸ್ಲಿಮರು, ಹಿಂದುಳಿದ ವರ್ಗಗಳು, ಬುಡಕಟ್ಟು, ಆದಿವಾಸಿ ಸಮುದಾಯಗಳು ತಮ್ಮ ತಮ್ಮ ರಕ್ಷಣೆಗೆ ತಾವೇ ಸೇನೆಯನ್ನು ಕಟ್ಟಿಕೊಳ್ಳುವುದಕ್ಕೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ಆದುದರಿಂದ, ಆತ್ಮರಕ್ಷಣೆಯ ನೆಪದಲ್ಲಿ ಉಗ್ರರನ್ನು ಸಿದ್ಧಗೊಳಿಸುತ್ತಿರುವ ಸಂಘಪರಿವಾರಕ್ಕೆ ದೇಶದಲ್ಲಿ ನಿಷೇಧ ಹೇರಬೇಕಾಗಿದೆ. ಮತ್ತು ಅವರು ಹುಟ್ಟು ಹಾಕಿರುವ ಇಂತಹ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ಗುರುತಿಸಿ, ಆರಂಭದಲ್ಲೇ ಬೇರು ಸಹಿತ ಕಿತ್ತು ಹಾಕಬೇಕಾಗಿದೆ.