ವಾಶಿಂಗ್ಟನ್: ಟ್ರಂಪ್ ಜಯಭೇರಿ
ಒಲಿಂಪಿಯಾ, ಮೇ 25: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯ ಆಯ್ಕೆಗಾಗಿ ನಡೆದ ವಾಶಿಂಗ್ಟನ್ ಪ್ರೈಮರಿ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಜಯಭೇರಿ ಬಾರಿಸಿದ್ದಾರೆ. ಇದರೊಂದಿಗೆ ಟ್ರಂಪ್, ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.
ವಾಶಿಂಗ್ಟನ್ ಪ್ರಾಂತ್ಯದ ಪ್ರೈಮರಿ ಚುನಾವಣೆಯಲ್ಲಿ ಟ್ರಂಪ್ ಶೇ.76ರಷ್ಟು ಮತಗಳಿಸಿದ್ದು, ಅವರ ಎದುರಾಳಿಗಳಾದ ಟೆಕ್ಸಾಸ್ ಸೆನೆಟರ್ ಟೆಡ್ ಕ್ರೂಝ್ ಹಾಗೂ ಓಹಿಯೊ ಗವರ್ನರ್ ಜಾನ್ ಕ್ಯಾಸಿಚ್ ಶೇ.10ರಷ್ಟು ಮತಗಳಿಸಿ ಕಳಪೆ ಸಾಧನೆ ಮಾಡಿದ್ದಾರೆ. ಇನ್ನೋರ್ವ ಅಭ್ಯರ್ಥಿ, ನಿವೃತ್ತ ನರರೋಗತಜ್ಞ ಬೆನ್‌ಕಾರ್ಸನ್ ಕೇವಲ 4 ಶೇ. ಮತಗಳಿಸಿದ್ದಾರೆ.ಚಲಾವಣೆಯಾದ ಶೇ.76.2 ಮತಗಳು ಟ್ರಂಪ್ ಪಾಲಾಗಿದ್ದು, ಇದರಿಂದಾಗಿ ಅವರಿಗೆ ರಿಪಬ್ಲಿಕನ್ ಅಭ್ಯರ್ಥಿಯಾಗಲು ಇನ್ನು ಕೇವಲ 10 ಪ್ರತಿನಿಧಿಗಳ ಅನುಮೋದನೆಯಷ್ಟೇ ಬೇಕಾಗಿದೆ.
69 ವರ್ಷ ವಯಸ್ಸಿನ ಟ್ರಂಪ್‌ಗೆ ಈವರೆಗೆ ನಡೆದ ಪ್ರೈಮರಿ ಚುನಾವಣೆಗಳಲ್ಲಿ ಒಟ್ಟು 1229 ಪ್ರತಿನಿಧಿಗಳ ಬೆಂಬಲ ದೊರೆತಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಅಭ್ಯರ್ಥಿಯಾಗಲು, 1237 ಪ್ರತಿನಿಧಿಗಳ ಬೆಂಬಲದ ಅಗತ್ಯವಿದೆ.
ವಾಶಿಂಗ್ಟನ್ ಪ್ರೈಮರಿ ಚುನಾವಣೆಯಲ್ಲಿ ತನ್ನ ಗೆಲುವನ್ನು ಪ್ರಮುಖ ಚಾನೆಲ್‌ಗಳು ಪ್ರಕಟಿಸಿದ ಬೆನ್ನಲ್ಲೇ ಟ್ರಂಪ್ ಅವರು ‘ಥ್ಯಾಂಕ್ಯೂ ವಾಶಿಂಗ್ಟನ್’ ಎಂದು ಟ್ವೀಟ್ ಮಾಡಿ ಬೆಂಬಲಿಗರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.