ಗೂಗಲ್ ನ ಹೊಸ ಆಪರೇಟಿಂಗ್ ಸಿಸ್ಟಮ್ ಅಂಡ್ರಾಯ್ದ್ ' ನೈಯಪ್ಪಂ' ?

Update: 2016-05-26 11:16 GMT

ಕೇರಳದ ' ನೈಯಪ್ಪಂ ' ಶೀಘ್ರ ಅಂತಾರಾಷ್ಟ್ರೀಯ ಖ್ಯಾತಿ ಪಡೆಯಲಿದೆಯೇ ? ಗೂಗಲ್ ಮನಸ್ಸು ಮಾಡಿದರೆ ಈ ಪ್ರಶ್ನೆಗೆ ಉತ್ತರ  ' ಹೌದು '.

ಗೂಗಲ್ ನ ಖ್ಯಾತ ಆಪರೇಟಿಂಗ್ ಸಿಸ್ಟಮ್ ( ಒಎಸ್ )ನ ಹೊಸ ವರ್ಶನ್ ಶೀಘ್ರವೇ ಬರಲಿದೆ. ಇದು ತಂತ್ರಜ್ಞಾನ ರಂಗದಲ್ಲಿ ತಮ್ಮ ನಾಡಿನ ವಿಶೇಷತೆ ಗಳಿಗೆ ಮಾನ್ಯತೆ ಹಾಗು ಖ್ಯಾತಿ ತಂದು ಕೊಡಲು ಬಯಸುವವರಿಗೆ ಹೊಸ ಅವಕಾಶವೊಂದನ್ನು ಸೃಷ್ಟಿಸಿದೆ. 
ಗೂಗಲ್ ತನ್ನ ಹೊಸ ಒಎಸ್ ಗೆ ಜನರಿಂದ ಹೆಸರು ಸೂಚಿಸಲು ಕೇಳಿದೆ. 2009 ರಲ್ಲಿ ಅದರ ಮೂರನೇ ವರ್ಶನ್ ಬಿಡುಗಡೆ ಸಂದರ್ಭದಲ್ಲಿ ಗೂಗಲ್ ಹೊಸ ಸಂಪ್ರದಾಯವೊಂದನ್ನು ಆರಂಭಿಸಿತು. ಅದರ ಪ್ರಕಾರ ಪ್ರತಿ ಹೊಸ ವರ್ಶನ್ ಗೆ ಇಂಗ್ಲೀಷ್ ವರ್ಣಮಾಲೆಯ ಅಕ್ಷರಗಳ ಅನುಕ್ರಮದಲ್ಲಿ ಮಿಠಾಯಿ ಅಥವ ಸಿಹಿತಿಂಡಿಯ ಹೆಸರನ್ನು ಇಡುತ್ತಾ ಬರಲಾಗಿದೆ. ಅದರ ಪ್ರಕಾರ ಈವರೆಗಿನ ವರ್ಶನ್ ಗಳಿಗೆ  ಕಪ್ ಕೇಕ್ , ಡೋನಟ್ , ಎಕ್ಲೆರ್ , ಫ್ರೋಯೋ , ಜಿಂಜರ್ ಬ್ರೆಡ್ , ಹನಿಕೊಂಬ್ , ಐಸ್ ಕ್ರೀಮ್ ಸ್ಯಾಂಡ್ ವಿಚ್, ಜೆಲ್ಲಿ ಬೀನ್ , ಕಿಟ್ ಕ್ಯಾಟ್ , ಲಾಲಿ ಪಾಪ್ ಹಾಗು ಮಾರ್ಷ್ ಮೇಲೋ ಎಂದು ಹೆಸರಿಡಲಾಗಿದೆ.  ಈಗ ಇಂಗ್ಲೀಷ್ ಅಕ್ಷರ ' ಎನ್ ' ಸರದಿ. 
ಅದಕ್ಕೆ ಮಲಯಾಳಿಗಳು ಬಾಯಲ್ಲಿ ನೀರೂರಿಸುತ್ತಾ ನಿಂತಿದ್ದಾರೆ ! ಸಾಮಾನ್ಯವಾಗಿ ಗೂಗಲ್ ಜನರು ಸೂಚಿಸಿ ಬಳಿಕ ಅತಿ ಹೆಚ್ಚು ಮತ ಪಡೆದ ಹೆಸರನ್ನು ಆಯ್ಕೆ ಮಾಡುತ್ತದೆ. ಆರಂಭದಲ್ಲಿ ಇದಕ್ಕೆ ಬೆಂಗಾಳಿ ಸಿಹಿ ತಿಂಡಿ ' ನಾರ್ಕೊಲ್ ನಾರು' , ಮಹಾರಾಷ್ಟ್ರದ ' ನಾನ್ ಕಟಾಯಿ ' ಇತ್ಯಾದಿಗಳ ಹೆಸರು ಸೂಚಿಸಲಾಯಿತಾದರೂ ಅವು ಹೆಚ್ಚು ದಿನ ಜನರ ಆಸಕ್ತಿ ಕೆರಳಿಸಲಿಲ್ಲ. ಆದ್ದರಿಂದ ಬಹಳ ಬೇಗ ರೇಸಿನಿಂದ ಹಿಂದೆ ಸರಿದುಬಿಟ್ಟವು . 
ಆದರೆ ಮಲಯಾಳಿಗಳು ಅಷ್ಟು ಸುಲಭದಲ್ಲಿ ಕೈ ಬಿಡುವವರಲ್ಲ. ಅವರ ಶ್ರಮ ಹಾಗು ನಿರಂತರ ಪ್ರಯತ್ನದ ಫಲವಾಗಿ ಈಗ ಕೇರಳದ ಅತ್ಯಂತ ಪ್ರಸಿದ್ಧ ಸಿಹಿ ಖಾದ್ಯ ' ನೈಯಪ್ಪಂ ' ರೇಸಿನ ಮುಂಚೂಣಿಗೆ ಬಂದು ನಿಂತಿದೆ. ಈ ಬಗ್ಗೆ ಗೂಗಲ್ ಅಧಿಕೃತವಾಗಿ ಏನನ್ನೂ ಹೇಳಿಲ್ಲವಾದರೂ ' ನೈಯಪ್ಪಂ' ರೇಸಿನಲ್ಲಿ ಮುಂದಿದೆ ಎಂಬುದಕ್ಕೆ  ಗೂಗಲ್ ಸೈಟಿನಲ್ಲಿ ಅದು ಕಾಣುತ್ತಿರುವುದು ಸಾಕ್ಷಿ. ಜೊತೆಗೆ ಗೂಗಲ್ ಸಿಎಒ ಸುಂದರ್ ಪಿಚೈ ಅವರು 'ನೈಯಪ್ಪಂ ' ಬಗ್ಗೆ ತಿಳಿದಿರುವುದು ಮಲಯಾಳಿಗಳ ಭರವಸೆಗೆ ಕಾರಣ. 
ಅಂದ ಹಾಗೆ ನಿಮಗೆ ನೈಯಪ್ಪಂ ಅಂದರೆ ಏನೆಂದು ಗೊತ್ತಿಲ್ಲವೇ ? ಅದು ಅಕ್ಕಿ, ಬೆಲ್ಲ ಹಾಗು ತುಪ್ಪ ಬಳಸಿ ತಯಾರಿಸುವ ಕೇರಳಿಗರು ಹಾಗು ಕರಾವಳಿ ಕರ್ನಾಟಕದಲ್ಲೂ ಬ್ಯಾರಿ ಮತ್ತಿತರ ಸಮುದಾಯಗಳ ಅಚ್ಚುಮೆಚ್ಚಿನ ಕರಿದ ಖಾದ್ಯ . 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News