×
Ad

ಮೋದಿ ಸರಕಾರದ ಎರಡು ವರ್ಷಗಳು

Update: 2016-05-26 23:42 IST

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ತನ್ನ ಎರಡು ವರ್ಷಗಳ ಆಡಳಿತದ ಬಗ್ಗೆ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವ ರೀತಿಯಲ್ಲಿ ಪ್ರಚಾರ ತಂತ್ರ ಆರಂಭಿಸಿದೆ. ಇದಕ್ಕಾಗಿ ಮಾಧ್ಯಮಗಳಿಗೆ ನೂರಾರು ಕೋಟಿ ರೂಪಾಯಿ ಜಾಹೀರಾತುಗಳನ್ನು ನೀಡಲಾಗಿದೆ. ಕಳೆದ 60 ವರ್ಷಗಳಲ್ಲಿ ಸಾಧಿಸಲಾಗದ್ದನ್ನು ಎರಡೇ ವರ್ಷಗಳಲ್ಲಿ ಸಾಧಿಸಿದ್ದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಮೊದಲ ವರ್ಷದಲ್ಲಿ ಕೆಲ ಮಹತ್ವಾಕಾಂಕ್ಷಿ ಯೋಜನೆಗಳನ್ನು ಪ್ರಕಟಿಸಿದಂತೆ ಈ ಬಾರಿಯೂ ಪ್ರಕಟಿಸಲಾಗಿದೆ. ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ ಯೋಜನೆಗಳಿಂದ ನಮ್ಮ ಜನರಿಗೆ ಎಷ್ಟು ಉದ್ಯೋಗಾವಕಾಶ ದೊರಕಿದೆ ಎಂಬುದನ್ನು ಅಂಕಿಅಂಶಗಳೇ ಹೇಳುತ್ತವೆ. ದೇಶದ ಚಿತ್ರಣವನ್ನೇ ಬದಲಾವಣೆ ಮಾಡುವುದಾಗಿ ಮೋದಿ ಸರಕಾರ ಆರಂಭದಲ್ಲಿ ಜಾರಿಗೆ ತಂದ ಅನೇಕ ಯೋಜನೆಗಳು ಸುದ್ದಿ ಮಾಡಿದವು. ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಹಿಂದೆ ಯಾರೂ ಮಾಡದ ಸ್ವಚ್ಛ ಭಾರತ ಅಭಿಯಾನದಿಂದ ಭಾರತದಲ್ಲಿನ ಕೊಳೆಯೆಲ್ಲಾ ಹೋಗಿ ಫಲಫಲ ಉಜ್ವಲ ಹೊಳೆಯುತ್ತಿದೆ ಎಂದು ಪ್ರಚಾರ ಮಾಡಲಾಗುತ್ತಿದೆ. 

ಎರಡು ವರ್ಷಗಳಲ್ಲಿ ಅಚ್ಛೇ ದಿನ್ ಗುರಿ ಸಾಧಿಸಲಾಗುತ್ತಿದೆ ಎಂದು ಹೇಳಿಕೊಳ್ಳಲಾಗುತ್ತಿದೆ. ಈ ಎಲ್ಲ ಪ್ರಚಾರದಲ್ಲಿ ಆತ್ಮಾವಲೋಕನದ ಕೊರತೆ ಎದ್ದುಕಾಣುತ್ತಿದೆ. ತಾನು ಮಾಡಿದ ತಪ್ಪುಗಳ ಬಗ್ಗೆ ವಿಮರ್ಶೆ ಮಾಡಿಕೊಳ್ಳುವ ಮನಸ್ಸು ಸರಕಾರಕ್ಕೆ ಇಲ್ಲ. ಅದು ತನ್ನ ಲೋಪದೋಷಗಳನ್ನು ಮುಚ್ಚಿಕೊಳ್ಳಲು ಪ್ರಚಾರದ ಮೊರೆ ಹೋಗಿದೆ. ತಮ್ಮ ಸರಕಾರದ ಸಾಧನೆಗಳ ಬಗ್ಗೆ ಮೋದಿಯವರು ಏನನ್ನೇ ಹೇಳಿಕೊಳ್ಳಲಿ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗಿಲ್ಲ. ಸರಕಾರವೊಂದರ ಸಾಧನೆ ಎಂದರೆ ಅದರ ಫಲ ಜನರಿಗೆ ತಲುಪಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮೋದಿ ಸರಕಾರ ಸಂಪೂರ್ಣ ವಿಫಲಗೊಂಡಿದೆ. ಅತ್ಯಂತ ಮುಖ್ಯವಾಗಿ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿದೆ. ಅದನ್ನು ನಿಯಂತ್ರಿಸಲು ಈ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ಹಾಗೂ 1 ಕೋಟಿ ಜನ ಎಲ್‌ಪಿಜಿ ಸಬ್ಸಿಡಿಯನ್ನು ಬಿಟ್ಟುಕೊಟ್ಟಿದ್ದಾರೆ. ಆದರೂ ಸರಕಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 20 ರೂಪಾಯಿಗೆ ಲಭ್ಯವಾಗುವ ಪೆಟ್ರೋಲ್‌ಗೆ 70 ರೂ. ನಿಗದಿ ಪಡಿಸಿದೆ. ಇನ್ನೊಂದೆಡೆ ರೈತರು ಬೆಳೆದ ಫಸಲಿಗೆ ನ್ಯಾಯವಾದ ಬೆಲೆ ಸಿಗುತ್ತಿಲ್ಲ. ಗ್ರಾಹಕರಿಗೆ ಅಗ್ಗದ ಬೆಲೆಗೆ ಪದಾರ್ಥಗಳು ಲಭ್ಯವಾಗುತ್ತಿಲ್ಲ. ಮಧ್ಯವರ್ತಿಗಳೇ ಎಲ್ಲವನ್ನೂ ದೋಚುತ್ತಿದ್ದಾರೆ. 

ಲೋಕಸಭೆಯ ಚುನಾವಣೆಗೆ ಮುನ್ನ ಮೋದಿ ಅವರು ತಾನು ಅಧಿಕಾರಕ್ಕೆ ಬಂದರೆ ಒಂದೇ ತಿಂಗಳಲ್ಲಿ ವಿದೇಶದಲ್ಲಿರುವ ಕಪ್ಪು ಹಣವನ್ನು ಸ್ವದೇಶಕ್ಕೆ ತರುವುದಾಗಿ ಹೇಳಿದ್ದರು. ತಂದ ಕಪ್ಪು ಹಣದಲ್ಲಿ ಪ್ರತಿಯೊಬ್ಬ ನಾಗರಿಕನ ಬ್ಯಾಂಕ್ ಖಾತೆಗೆ ತಲಾ 15 ಲಕ್ಷ ರೂ. ಜಮಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಈ ಭರವಸೆಯನ್ನು ಈಡೇರಿಸುವಲ್ಲಿ ಸರಕಾರ ಸಂಪೂರ್ಣ ವಿಫಲಗೊಂಡಿದೆ. ಬದಲಾಗಿ ವಿಜಯ ಮಲ್ಯ ಅವರಂತಹ ಉದ್ಯಮಿಗಳು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಒಂಬತ್ತು ಸಾವಿರ ಕೋಟಿ ರೂ. ಟೋಪಿ ಹಾಕಿ ವಿದೇಶಕ್ಕೆ ಪಲಾಯನ ಮಾಡಲು ಸರಕಾರ ಅವಕಾಶ ಮಾಡಿಕೊಟ್ಟಿತು. ದೇಶದ ಒಳಗೆ ಗೌತಮ್ ಅದಾನಿಯಂತಹ ಮೋದಿಯವರ ಸ್ನೇಹಿತರಾಗಿರುವ ಉದ್ಯಮಿಪತಿಗಳು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಐದು ಸಾವಿರ ಕೋಟಿ ರೂ. ವಂಚನೆ ಮಾಡಿದ್ದಾರೆಂದು ವರದಿಗಳು ತಿಳಿಸಿವೆ. ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಆಸಕ್ತಿ ತೋರಿಸದ ಮೋದಿ ಸರಕಾರ, ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೋಗಿ ಅಪಹಾಸ್ಯಕ್ಕೀಡಾಗುತ್ತಿದೆ. ಒಂದೆಡೆ ಚುನಾಯಿತ ಸರಕಾರಗಳನ್ನು ಉರುಳಿಸಲು ಅದು ಹುನ್ನಾರ ನಡೆಸುತ್ತಿದೆ. ಅದಕ್ಕಾಗಿ ಸಂವಿಧಾನಕ್ಕೇ ಅಪಚಾರ ಬಗೆಯುತ್ತಿದೆ. ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಹೇರಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸರಕಾರ ಮುಖಭಂಗಕ್ಕೀಡಾಗಿದೆ. ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೋಮು ಉನ್ಮಾದ ಕೆರಳಿಸಲು ಸರಕಾರ ಯತ್ನಿಸುತ್ತಿದೆ. ಉತ್ತರಪ್ರದೇಶದಲ್ಲಿ ಬಂದೂಕು ತರಬೇತಿ ಶಿಬಿರ ನಡೆಸಲು ಬಜರಂಗ ದಳಕ್ಕೆ ಅವಕಾಶ ನೀಡಲಾಗಿದೆ. ಇನ್ನೊಂದೆಡೆ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಕೋಮುವಾದೀಕ ರಣಗೊಳಿಸಲು ಸರಕಾರ ಇನ್ನಿಲ್ಲದ ಆಸಕ್ತಿ ವಹಿಸಿದೆ.

 ವಿಶ್ವವಿದ್ಯಾನಿಲಯಗಳಂತಹ ಸ್ವಾಯತ್ತ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಇಂತಹ ಹಸ್ತಕ್ಷೇಪದ ಪರಿಣಾಮವಾಗಿ ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ರೋಹಿತ್ ವೇಮುಲಾ ಅವರಂತಹ ಪ್ರತಿಭಾವಂತ ವಿದ್ಯಾರ್ಥಿ ಸಾವಿನ ಮೊರೆ ಹೋಗಬೇಕಾಯಿತು. ಈ ತಪ್ಪನ್ನು ಮುಚ್ಚಿಹಾಕಲು ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ದೇಶದ್ರೋಹಿಗಳನ್ನು ಸೃಷ್ಟಿಸಲು ಸರಕಾರ ಯತ್ನಿಸಿ, ಕನ್ಹಯ್ಯಿ ಕುಮಾರ್ ಮತ್ತು ಉಮರ್ ಖಾಲಿದ್ ಅವರಂತಹ ದೇಶಪ್ರೇಮಿ ವಿದ್ಯಾರ್ಥಿ ನಾಯಕರನ್ನು ಬಂಧಿಸಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಯತ್ನಿಸಿತು. ಹೀಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಭಿನ್ನಮತವನ್ನು ಸಹಿಸಲು ಈ ಸರಕಾರಕ್ಕೆ ಇಷ್ಟವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಸದಾ ವಿದೇಶ ಪ್ರವಾಸದಲ್ಲಿರುತ್ತಾರೆ. ವಿದೇಶ ಪ್ರವಾಸ ಮಾಡಬೇಕಾದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವೌನ ತಾಳಿದ್ದಾರೆ. ಹಿರಿಯ ಸಚಿವ ಅರುಣ್ ಜೇಟ್ಲಿ ಅವರನ್ನು ಹತ್ತಿಕ್ಕಲು ಸುಬ್ರಮಣಿಯನ್‌ಸ್ವಾಮಿ ಅವರನ್ನು ರಾಜ್ಯಸಭೆಗೆ ತಂದು ಮೋದಿ ಸರಕಾರ ಇನ್ನೊಂದು ಪ್ರಮಾದವನ್ನು ಎಸಗಿತು. ಒಟ್ಟಾರೆ ಈ ಮೂರು ವರ್ಷಗಳಲ್ಲಿ ಈ ದೇಶದ ಸಂವಿಧಾನವನ್ನು ನಾಶ ಮಾಡಿ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಿ ಹಿಂದೂ ರಾಷ್ಟ್ರವನ್ನು ನಿರ್ಮಾಣಮಾಡುವ ಶಕ್ತಿಗಳಿಗೆ ಸರಕಾರ ಕುಮ್ಮಕ್ಕು ನೀಡುತ್ತದೆಯೇನೋ ಎಂಬ ಸಂದೇಹ ಬರುತ್ತದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡುವ ಹೊಣೆಗಾರಿಕೆ ಜನತೆಯ ಮೇಲಿದೆ. ಇನ್ನು ಮುಂದೆಯಾದರೂ ಮೋದಿ ಸರಕಾರ ಬರೀ ಅಬ್ಬರದ ಪ್ರಚಾರದಲ್ಲಿ ತೊಡಗದೆ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಶ್ರಮಿಸಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News