×
Ad

ಜೀವ ಪಣಕ್ಕಿಟ್ಟು ಸ್ಫೋಟಕ ವಿಮಾನದಿಂದ ತಂದೆಯನ್ನು ರಕ್ಷಿಸಿದ ಯುವತಿ

Update: 2016-05-27 11:22 IST

ಹೊಸದಿಲ್ಲಿ: ತನ್ನ ಜೀವ ಪಣಕ್ಕಿಟ್ಟು ಸಾಹಸಿ ಯುವತಿಯೊಬ್ಬಳು ಸ್ಫೋಟಿಸುತ್ತಿದ್ದ ವಿಮಾನದಿಂದ ತಂದೆಯನ್ನು ರಕ್ಷಿಸಿದ ಘಟನೆ ಮಂಗಳವಾರ ನಡೆದಿದೆ.

ನೋಯ್ಡ ಮೂಲದ 23 ವಯಸ್ಸಿನ ಜೂಹಿ ರಾಯ್ ಈ ಸಾಹಸಿ ಯುವತಿ. ಈ ವಿಮಾನ ಆಂಬ್ಯುಲೆನ್ಸ್ ಏರುವ ಮುನ್ನ, ಪ್ರಜ್ಞಾಹೀನರಾಗಿರುವ ತಂದೆಯ ಜತೆ ಕುಳಿತು ತಾನು ಕೂಡಾ ಸಾವಿನ ಮನೆಯ ಕದ ತಟ್ಟಬೇಕಾಗುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. ತೀವ್ರ ಅಸ್ವಸ್ಥರಾಗಿದ್ದ ಈಕೆಯ ತಂದೆಯನ್ನು ಬೀಚ್‌ಕ್ರಾಫ್ಟ್ ಕಿಂಗ್ ಏರ್ ಸಿ-90 ಅವಳಿ ಎಂಜಿನ್ ವಿಮಾನ ಆಂಬ್ಯುಲೆನ್ಸ್ ಮೂಲಕ ಪಾಟ್ನಾದಿಂದ ದೆಹಲಿಗೆ ಕರೆ ತರಲಾಗುತ್ತಿತ್ತು. ಇಬ್ಬರು ಪೈಲಟ್‌ಗಳು ಸೇರಿದಂತೆ ಇತರ ಆರು ಮಂದಿ ವಿಮಾನದಲ್ಲಿದ್ದರು. ಗುರಗಾಂವ್‌ನ ಖಾಸಗಿ ಆಸ್ಪತ್ರೆಯೊಂದಕ್ಕೆ ಜೂಹಿಯ ತಂದೆಯನ್ನು ಸಾಗಿಸುತ್ತಿದ್ದ ವಿಮಾನ ನಜಾಫ್‌ಗಢ ಬಳಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು.

ವಿಮಾನ ದೆಹಲಿಗೆ ಸಮೀಪಿಸುತ್ತಿದ್ದಂತೆ ಪೈಲಟ್ ದಿಢೀರನೇ, ವಿಮಾನದಲ್ಲಿದ್ದ ವೈದ್ಯರಿಗೆ, ವಿಮಾನದ ಒಂದು ಎಂಜಿನ್ ಹಾಳಾಗಿದೆ ಎಂದು ಮಾಹಿತಿ ನೀಡಿದರು. ಆಗ ಒಂದು ಕ್ಷಣ ಏನು ಮಾಡಬೇಕು ಎಂದೇ ತೋಚಲಿಲ್ಲ ಎಂದು ಜೂಹಿ ಘಟನೆಯ ಬಳಿಕ ವಿವರಿಸಿದರು.

ಒರಟು ನೆಲದಲ್ಲಿ ದಿಢೀರನೇ ವಿಮಾನ ಇಳಿದ ಕಾರಣ ಸೀಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದವು ಹಾಗೂ ವಿಮಾನ ಭೀಕರ ಸದ್ದಿನೊಂದಿಗೆ ದಿಢೀರನೇ ನಿಂತಿತು. ಏನಾಗುತ್ತಿದೆ ಎಂದು ಕಣ್ಣು ಬಿಡುವಷ್ಟರಲ್ಲಿ, ಎಲ್ಲರೂ ತಕ್ಷಣ ವಿಮಾನದಿಂದ ಕೆಳಕ್ಕೆ ಇಳಿಯುವಂತೆ ಪೈಲಟ್ ಕೂಗಿ ಹೇಳಿದ. ಪೈಲಟ್ ಬಾಗಿಲು ತೆರೆದಾಗ, ಜೂಹಿ ಹಾಗೂ ಆಕೆಯ ತಂದೆ ಬಿಟ್ಟು ಉಳಿದ ಎಲ್ಲರೂ ಹೊರಬಂದರು.

"ವಿಮಾನ ಭೂಸ್ಪರ್ಶವಾಗುವ ವೇಳೆ, ಅಸ್ವಸ್ಥ ತಂದೆ ಸ್ಟ್ರೆಚರ್‌ನಿಂದ ಕೆಳಕ್ಕೆ ಬಿದ್ದಿದ್ದರು. ಅವರನ್ನು ಆ ಸ್ಥಿತಿಯಲ್ಲಿ ಬಿಟ್ಟು ನಾನು ತಪ್ಪಿಸಿಕೊಳ್ಳುವಂತಿರಲಿಲ್ಲ. ಇಂಧನ ಸೋರಿಕೆಯಿಂದ ಸ್ಫೋಟ ಸಂಭವಿಸಬಹುದು ಎಂದು ಪೈಲಟ್ ಮತ್ತೆ ಎಚ್ಚರಿಕೆ ನೀಡಿದ. ಆದರೂ ತಂದೆಯ ಜತೆಗೇ ಜೂಹಿ ಕುಳಿತೇ ಇದ್ದಳು. ಕೊನೆಗೆ ಒಬ್ಬ ಪೈಲಟ್ ಇವರ ರಕ್ಷಣೆಗೆ ಧಾವಿಸಿದ. ಆತನ ಸಹಾಯದಿಂದ ತಂದೆಯನ್ನು ಸ್ಟ್ರೆಚರ್‌ನಲ್ಲಿ ವಿಮಾನದಿಂದ ಹೊರತಂದಳು. ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ, ಯುವತಿ ಮತ್ತೆ ವಿಮಾನದ ಒಳಕ್ಕೆ ಹೋಗಿ ತಂದೆಯ ಜೀವರಕ್ಷಕ ಆಮ್ಲಜನಕ ಸಿಲಿಂಡರ್ ತರುವ ಸಾಹಸ ಮೆರೆದಳು. ಇಷ್ಟು ಸಾಲದೆಂಬಂತೆ ತಂದೆಯ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಹಾಗೂ ಹಣವನ್ನು ವಾಪಾಸು ತರುವಲ್ಲಿ ಯುವತಿ ಯಶಸ್ವಿಯಾದಳು. ಯುವತಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News