×
Ad

ಮಾರ್ಜಾಲ ಸನ್ಯಾಸಿಯ ಅಂಬೇಡ್ಕರ್ ಪ್ರೀತಿ

Update: 2016-05-27 23:30 IST

ಆರ್ಥಿಕ ಅಸಮಾನತೆ ಅಳಿದಾಗ ಜಾತಿ ಅಸಮಾನತೆಯೂ ಅಳಿಯುತ್ತದೆ ಎನ್ನುವಂತಹ ಮಾತುಗಳನ್ನು ಆಗಾಗ ಕಮ್ಯುನಿಸ್ಟ್ ನಾಯಕರು ಆಡಿಕೊಳ್ಳುತ್ತಾರೆ. ಆದುದರಿಂದಲೇ ಎಡಪಂಥೀಯ ನಾಯಕರು ಜಾತಿಯನ್ನು ಒಂದು ಸಮಸ್ಯೆಯಾಗಿ ನೋಡಲೇ ಇಲ್ಲ. ಆದರೆ ಇದೇ ಸಂದರ್ಭದಲ್ಲಿ, ಕಮ್ಯುನಿಸ್ಟ್ ಪಕ್ಷದೊಳಗೆ ಮೇಲ್ಜಾತಿಗಳ ನಾಯಕರೇ ಪ್ರಬಲಸ್ಥಾನಗಳನ್ನು ತಮ್ಮದಾಗಿಸಿಕೊಂಡು ಬಂದಿರುವುದು ಕಾಕತಾಳೀಯವಂತೂ ಅಲ್ಲ. ಈ ದೇಶದಲ್ಲಿ ದಲಿತ ಎಷ್ಟೇ ಎತ್ತರಕ್ಕೆ ಏರಲಿ, ಜಾತಿ ಅವನನ್ನು ಬೆಂಬಿಡುವುದಿಲ್ಲ ಎನ್ನುವುದಕ್ಕೆ ಹಲವು ಉದಾಹರಣೆಗಳು ಸಂಭವಿಸುತ್ತಲೇ ಇರುತ್ತವೆ. ಈ ಹಿಂದೆ, ಇಂದಿರಾಗಾಂಧಿಗೆ ದೇವಸ್ಥಾನದಲ್ಲಿ ಪ್ರವೇಶ ಸಿಕ್ಕದೇ ಇದ್ದಿರುವುದನ್ನು ನಾವು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಬಿಹಾರದ ಮಾಜಿ ಮುಖ್ಯಮಂತ್ರಿ ಮಾಂಝಿ ಅವರು ಈ ವಿಷಯವನ್ನು ಆಗಾಗ ಪ್ರಸ್ತಾಪಿಸುತ್ತಲೇ ಇದ್ದರು. ದೇವಸ್ಥಾನವೊಂದಕ್ಕೆ ಇವರು ಪ್ರವೇಶ ಮಾಡಿದ ಕೆಲವೇ ಗಂಟೆಗಳಲ್ಲಿ ಆ ದೇವಸ್ಥಾನವನ್ನು ಶುದ್ಧೀಕರಿಸಿದ ಸುದ್ದಿ ಮಾಧ್ಯಮಗಳ ಮೂಲಕ ಹೊರಬಿತ್ತು. ಜಾತೀಯತೆಯ ಕರಾಳ ಮುಖದ ಅರಿವಿದ್ದೂ ಇದೇ ಮಾಂಝಿ, ಮುಂದೆ ಆರೆಸ್ಸೆಸ್ ಬೆಂಬಲಿತ ಬಿಜೆಪಿಯ ಜೊತೆ ಕೈ ಜೋಡಿಸಿದರು ಎನ್ನೋದು ಇನ್ನೊಂದು ವಿಪರ್ಯಾಸ.

 ಕರ್ನಾಟಕದಲ್ಲೇ ಬಿಜೆಪಿಯ ದಲಿತ ಸಂಸದರೊಬ್ಬರು ದೇವಸ್ಥಾನ ಪ್ರವೇಶಿಸಲು ಹಿಂಜರಿಕೆ ವ್ಯಕ್ತಪಡಿಸಿದ್ದು, ಹೊರಗಡೆಯೇ ನಿಂತು ಪ್ರಸಾದ ಸ್ವೀಕರಿಸಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಇಷ್ಟೇ ಏಕೆ? ಇತ್ತೀಚೆಗೆ ಹಾಸನದಲ್ಲಿ ಒಕ್ಕಲಿಗರ ದೇವಸ್ಥಾನದಲ್ಲೂ ದಲಿತರಿಗೆ ಪ್ರವೇಶ ಕಷ್ಟವಾಯಿತು ಮತ್ತು ಮಾಜಿ ಪ್ರಧಾನಿ ದೇವೇಗೌಡರೇ ಇದನ್ನು ಸಮರ್ಥಿಸಿಕೊಂಡರು ‘‘ಬೇರೆ ದೇವಸ್ಥಾನಗಳಲ್ಲಿ ಒಕ್ಕಲಿಗರಿಗೆ ಪ್ರವೇಶ ನೀಡುತ್ತಾರೆಯೆ? ಹಾಗೆಯೇ ಇದು...’’ ಎಂಬ ಬಾಲಿಶ ಹೇಳಿಕೆಯನ್ನು ನೀಡಿ, ತಮ್ಮ ಘನತೆಯನ್ನು ಕುಗ್ಗಿಸಿಕೊಂಡರು. ಆದರೆ ಜನರ ಪ್ರತಿಭಟನೆ ತೀವ್ರವಾದಾಗ ದೇವಸ್ಥಾನದೊಳಗೆ ಪ್ರವೇಶ ಕಲ್ಪಿಸಲಾಯಿತು. ಆದರೆ ಇದರಿಂದ ಹಾಸನದಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಕೆಲ ದಿನಗಳ ಹಿಂದೆ ಡೆಹ್ರಾಡೂನ್‌ನಲ್ಲಿ ದಲಿತರೊಂದಿಗೆ ದೇವಸ್ಥಾನ ಪ್ರವೇಶಿಸಿದ ಸಂಸದನಿಗೆ ಮೇಲ್ಜಾತಿಯ ಜನರು ಹಲ್ಲೆ ನಡೆಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. 
ವಿಪರ್ಯಾಸವೆಂದರೆ ಹಲ್ಲೆಗೊಳಗಾದ ಸಂಸದ ಬಿಜೆಪಿಗೆ ಸೇರಿದಾತ. ರಾಜಧಾನಿ ಡೆಹ್ರಾಡೂನ್‌ನಿಂದ 180 ಕಿ. ಮೀ. ದೂರದ ಪುನ್ಹಾದಲ್ಲಿರುವ ಸಿಲ್ಗುರ್ ದೇವಳಕ್ಕೆ ಬಿಜೆಪಿ ಸಂಸದರು ದಲಿತರ ಜೊತೆಗೆ ಪ್ರವೇಶ ಮಾಡಿದರು. ಇದನ್ನು ಪ್ರತಿಭಟಿಸಿದ ಮೇಲ್ಜಾತಿಯ ಜನರು ಸಂಸದರಿಗೆ ತೀವ್ರ ಹಲ್ಲೆ ನಡೆಸಿದ್ದಾರೆ. ದಲಿತರ ಮೇಲೂ ಕಲ್ಲುತೂರಾಟ ನಡೆಸಿದ್ದು, ಅವರಿಗೂ ಗಾಯಗಳಾಗಿವೆ. ಇಷ್ಟೇ ಅಲ್ಲ, ಇವರೆಲ್ಲ ದೇವಸ್ಥಾನದೊಳಗೆ ಪ್ರವೇಶ ಮಾಡಿರುವುದರಿಂದ ದೇವಸ್ಥಾನ ಅಪವಿತ್ರಗೊಂಡಿತು ಎಂದು ಆಡಳಿತ ಮಂಡಳಿ ಒಂಬತ್ತು ದಿನಗಳ ಶುದ್ಧೀಕರಣ ಕಾರ್ಯವನ್ನೂ ಹಮ್ಮಿಕೊಂಡಿತು. ಭಾಗಶಃ ಒಂದು ಜಿಲ್ಲೆಯನ್ನು ಪ್ರತಿನಿಧಿಸುವ ಸಂಸದ. ಅದರಲ್ಲೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಸೇರಿದ ಸಂಸದನಿಗೇ ಇಂತಹ ಸ್ಥಿತಿಯಾದರೆ, ಈ ದೇಶದಲ್ಲಿ ಉಳಿದ ಕೆಳಜಾತಿಗಳ ಜನರ ಸ್ಥಿತಿ ಎಷ್ಟು ಭಯಾನಕವಾಗಿರಬಹುದು? ಅಂದರೆ ಒಬ್ಬ ಕೆಳಜಾತಿಯ ವ್ಯಕ್ತಿ ಶ್ರೀಮಂತನಾದಾಕ್ಷಣ ಅಥವಾ ಉನ್ನತ ಅಧಿಕಾರವನ್ನು ಪಡೆದಾಕ್ಷಣ ಅವರನ್ನು ಮೇಲ್‌ಜಾತಿಯ ಜನರು ಗೌರವದಿಂದ, ಸಮಾನತಾ ಭಾವದಿಂದ ನೋಡುತ್ತಾರೆ ಎನ್ನುವುದು ಭಾರತದ ಮಟ್ಟಿಗೆ ಹುಸಿಯಾಯಿತಲ್ಲವೇ?

ಅತ್ಯಂತ ವಿಷಾದನೀಯ ಸಂಗತಿಯೆಂದರೆ ತನ್ನದೇ ಸಂಸದನ ಮೇಲೆ ಜಾತಿಯ ಕಾರಣಕ್ಕಾಗಿ ಹಲ್ಲೆ ನಡೆದಿದ್ದರೂ, ಈ ಬಗ್ಗೆ ಹಿಂದುತ್ವದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಯಾವುದೇ ಬಿಜೆಪಿ ನಾಯಕರೂ ಹೇಳಿಕೆಯನ್ನು ನೀಡಿಲ್ಲ. ಉತ್ತರಾಖಂಡದ ಮುಖ್ಯಮಂತ್ರಿ ಸಂಸದರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ್ದಾರಾದರೂ ಬಿಜೆಪಿಯ ಯಾವ ನಾಯಕರೂ ಅವರನ್ನು ಭೇಟಿ ಮಾಡುವ ಸಾಹಸಕ್ಕೆ ಇಳಿದಿಲ್ಲ. ಬಿಜೆಪಿ ಮತ್ತು ಸಂಘಪರಿವಾರದ ಹಿಂದುತ್ವ ಘೋಷಣೆಯ ಹಿಂದಿರುವ ಸೋಗಲಾಡಿತನವನ್ನು ಇದು ಬಹಿರಂಗಪಡಿಸಿದೆ. ‘ಹಿಂದೂಗಳೆಲ್ಲ ಒಂದು’ ಎಂದಾಗಿದ್ದರೆ ತಮ್ಮದೇ ಸಂಸದನ ಮೇಲೆ, ದೇವಸ್ಥಾನ ಪ್ರವೇಶಿಸಿದ ದಲಿತರ ಮೇಲೆ ಯಾಕೆ ಹಲ್ಲೆ ನಡೆಯಿತು? ಹಿಂದೂ ಸಂಸದನ ಮೇಲೆ ನಡೆದ ಹಲ್ಲೆಯನ್ನು ಯಾಕೆ ಸಂಘಪರಿವಾರದ ನಾಯಕರೂ ಖಂಡಿಸಲಿಲ್ಲ? ಕೇರಳದಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಹಿಂಸೆ ನಡೆಯುತ್ತಿದೆ ಎಂದು ಆರೋಪಿಸುವ ಮುಖಂಡರು ಈ ಜಾತೀಯ ಹಿಂಸೆಯ ಕುರಿತಂತೆ ಯಾಕೆ ವೌನವಾಗಿದ್ದಾರೆ? ಹೀಗಿರುತ್ತಾ ಬಿಜೆಪಿ ಅಂಬೇಡ್ಕರ್ ಕುರಿತಂತೆ ತೋರಿಸುತ್ತಿರುವ ಅಕ್ಕರೆಯನ್ನು ಈ ದೇಶದ ಜನರು ನಂಬುವುದು ಹೇಗೆ?

ಬಿಜೆಪಿ ಮತ್ತು ಸಂಘಪರಿವಾರ ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ಕುರಿತಂತೆ ಮಾತನಾಡಲು ಶುರು ಹಚ್ಚಿ,. ಜೊತೆಗೆ ಬುದ್ಧನ ಬಗ್ಗೆಯೂ ಕಪಟ ಪ್ರೀತಿಯನ್ನು ವ್ಯಕ್ತಪಡಿಸುತ್ತಿದೆ. ಅಂಬೇಡ್ಕರ್ ಶ್ರೇಷ್ಠ ಹಿಂದೂವಾಗಿದ್ದರು ಎಂದೆಲ್ಲ ಮಾತನಾಡುತ್ತಿದೆ. ಅವರಾಡುತ್ತಿರುವ ಮಾತುಗಳಲ್ಲೇ ವಿರೋಧಾಭಾಸಗಳು ಎದ್ದು ಕಾಣುತ್ತಿವೆ. ನಿಜಕ್ಕೂ ಬಿಜೆಪಿಗೆ, ಸಂಘಪರಿವಾರಕ್ಕೆ ಅಂಬೇಡ್ಕರ್ ಕುರಿತಂತೆ ಪ್ರೀತಿ ಇರುವುದು ನಿಜವೇ ಆಗಿದ್ದರೆ, ಅವರು ಜಾತೀಯ ಕಾರಣಕ್ಕಾಗಿ ದಲಿತರ ಮೇಲಿನ ಹಲ್ಲೆಯನ್ನು ಖಂಡಿಸುತ್ತಿದ್ದರು. ಒಂದೆಡೆ ದೇಶದಲ್ಲಿ ಜಾತೀಯತೆ ಮಿತಿ ಮೀರುತ್ತಿರುವಾಗಲೇ, ಸಂಘಪರಿವಾರ ಅಂಬೇಡ್ಕರ್ ಭಾವಚಿತ್ರವನ್ನು ಬಳಸಿ, ದಲಿತರನ್ನು ಓಲೈಸಲು ಯತ್ನಿಸುತ್ತಿದೆ. ನಿಜಕ್ಕೂ ಅಂಬೇಡ್ಕರ್ ಮೇಲೆ ಸಂಘಪರಿವಾರ ಮತ್ತು ಬಿಜೆಪಿಗೆ ಪ್ರೀತಿ ಇರುವುದಾದರೆ, ದಲಿತರನ್ನೂ ಹಿಂದೂಧರ್ಮದ ಭಾಗ ಎಂದು ತಿಳಿಯುವುದಾದರೆ, ಎಲ್ಲಿ ದೇವಸ್ಥಾನಗಳಲ್ಲಿ ದಲಿತರಿಗೆ ಕಡ್ಡಾಯ ಪ್ರವೇಶ ನೀಡಬೇಕು ಎನ್ನುವ ಕಾನೂನೊಂದನ್ನು ಜಾರಿಗೆ ತರಲಿ. ಅಂಬೇಡ್ಕರ್ ಅಸ್ಪಶ್ಯತೆಯನ್ನು ಕಟುವಾಗಿ ವಿರೋಧಿಸಿದ್ದರು. ತನ್ನ ಇಡೀ ಜೀವನವನ್ನು ಅಸ್ಪಶ್ಯತೆಯ ಹೋರಾಟಕ್ಕೆ ಮೀಸಲಿಟ್ಟರು. ಅವರ ಕನಸನ್ನು ನನಸು ಮಾಡುವುದೇ ಬಿಜೆಪಿ ಅಂಬೇಡ್ಕರ್‌ಗೆ ತೋರಬಹುದಾದ ಅತಿ ದೊಡ್ಡ ಗೌರವ. ಇದೇ ಸಂದರ್ಭದಲ್ಲಿ ಅಂತರ್ಜಾತೀಯ ವಿವಾಹದ ಕುರಿತಂತೆ ಸಂಘಪರಿವಾರ ಮತ್ತು ಬಿಜೆಪಿಯವರು ಯಾವ ನಿಲುವನ್ನು ತಾಳುತ್ತಾರೆ ಎನ್ನುವುದನ್ನು ಸ್ಪಷ್ಟ ಪಡಿಸಬೇಕು. ದಲಿತರ ಜೊತೆಗೆ ಮೇಲ್ಜಾತಿಯ ಜನರು ವಿವಾಹ ಸಂಬಂಧ ಏರ್ಪಡಿಸುವುದಕ್ಕೆ ಸಂಘಪರಿವಾರ ಪ್ರೋತ್ಸಾಹವನ್ನು ನೀಡಬೇಕು. ಇಂತಹ ಕ್ರಾಂತಿಕಾರಿ ನಿಲುವನ್ನು ಜಾರಿಗೆ ತಂದಾಗ, ಬಿಜೆಪಿ ಮತ್ತು ಸಂಘಪರಿವಾರ ಅಂಬೇಡ್ಕರ್‌ರನ್ನು ಒಪ್ಪಿಕೊಂಡಿದೆ ಎಂದು ಅರ್ಥ. ಒಂದೆಡೆ ದಲಿತ ವಿರೋಧಿ ನೀತಿಯನ್ನು ಜಾರಿಗೊಳಿಸುತ್ತ, ದಲಿತರನ್ನು ನಿಕೃಷ್ಟರನ್ನಾಗಿ ಕಾಣುತ್ತ ಅಂಬೇಡ್ಕರ್ ಅಥವಾ ಬುದ್ಧನ ಸಮೀಪಕ್ಕೆ ಸಾಗುವುದಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಸಂಘಪರಿವಾರ ಮತ್ತು ಬಿಜೆಪಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಇದೇ ಸಂದರ್ಭದಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಕಪಟ ಅಂಬೇಡ್ಕರ್ ಪ್ರೀತಿಯನ್ನು ದಲಿತರು ಅರ್ಥ ಮಾಡಿಕೊಂಡು, ಅದನ್ನು ಎದುರಿಸಬೇಕಾಗಿದೆ. ಇಲ್ಲವಾದರೆ, ಮಾರ್ಜಾಲ ಸನ್ಯಾಸಿಗೆ ಬಲಿಯಾದ ಇಲಿಯ ಕತೆಯಂತಾದೀತು ದಲಿತರ ಸ್ಥಿತಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News