ಅಂತರ್ಜಾಲದ ಸಮಾನ ಅವಕಾಶ ಮತ್ತು ನೆಟ್ ನ್ಯೂಟ್ರಾಲಿಟಿ ನಡುವೆ ಇಕ್ಕಟ್ಟಿಗೆ ಸಿಲುಕಿದ ಟ್ರಾಯ್
ನೆಟ್ ನ್ಯೂಟ್ರಾಲಿಟಿಯು ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ ಅಥವಾ ಟ್ರಾಯ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 2015 ಮಾರ್ಚ್‌ನಿಂದ ನೆಟ್ ನ್ಯೂಟ್ರಾಲಿಟಿ ವಿಷಯದಲ್ಲಿ ಟ್ರಾಯ್ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯುತ್ತಿದೆ. ವ್ಯಾಪಕವಾಗಿ ಚರ್ಚೆಯಾದ ಮತ್ತು ಭಾರತೀಯ ಸಾರ್ವಜನಿಕ ವಲಯದಲ್ಲಿ ಆಸಕ್ತಿ ಮೂಡಿಸಿದ ವಿಷಯವಿದು.
2016 ಫೆಬ್ರವರಿಯಲ್ಲಿ ಟ್ರಾಯ್ ನೀತಿ ನಿರ್ದೇಶನವೊಂದನ್ನು ತಂದು ಡಾಟಾ ಸೇವೆ ನೀಡುವವರ ತಾರತಮ್ಯದ ಬೆಲೆಗಳ ಬಗ್ಗೆ ನಿಯಂತ್ರಣ ಹೇರಿದೆ. ವಿಷಯಾಧರಿತವಾಗಿ ತಾರತಮ್ಯದ ವಿಚಾರಗಳು ಇರಬಾರದು ಎಂದು ಈ ನಿಯಂತ್ರಣ ಹೇಳಿದೆ. ಆದರೆ ಈಗ ಮೇನಲ್ಲಿ ಮತ್ತೆ ಟ್ರಾಯ್ ಮತ್ತೊಂದು ಪ್ರಶ್ನೆ ಇಟ್ಟಿದೆ. ಡಾಟಾ ಬಳಕೆಯಲ್ಲಿ ವಿಭಿನ್ನ ವೆಬ್ ತಾಣ, ಅಪ್ಲಿಕೇಶನ್ ಅಥವಾ ವೇದಿಕೆಗೆ ಟೆಲಿಕಾಂ ಸೇವೆ ಒದಗಿಸುವವರು ವಿಭಿನ್ನ ಬೆಲೆ ಇಡಬಹುದೆ ಎನ್ನುವ ಪ್ರಶ್ನೆಯನ್ನು ಮತ್ತೆ ಜನರ ಮುಂದಿಟ್ಟಿದೆ. ಈಗಾಗಲೇ ಉತ್ತರಿಸಿರುವ ಪ್ರಶ್ನೆಯನ್ನು ಮತ್ತೆ ಟ್ರಾಯ್ ಮೂರೇ ತಿಂಗಳಲ್ಲಿ ಮುಂದಿಟ್ಟದ್ದೇಕೆ?
ಇಲ್ಲಿದೆ ವಿವರಣೆ
ಪರಿಷ್ಕೃತ ವಿನ್ಯಾಸ
ಹಿಂದಿನ ಪ್ರಶ್ನೆ ಮತ್ತು ಈಗಿನ ಪ್ರಶ್ನೆಯಲ್ಲಿ ವ್ಯತ್ಯಾಸವಿದೆ. ಈಗಿನ ಪ್ರಶ್ನೆ ಜೀರೋ ರೇಟಿಂಗಿಗೆ ಸಂಬಂಧಿಸಿದೆ. ಬಳಕೆದಾರರಿಗೆ ಉಚಿತ ಡಾಟಾ ಕೊಡುವ ವಿಷಯ ಇನ್ನೂ ಪರಿಹಾರವಾಗಿಲ್ಲ. ಟೆಲಿಕಾಂ ಸೇವೆ ಒದಗಿಸುವವರು ಭಿನ್ನವಾದ ದರ ವಿಧಿಸುವಂತಿಲ್ಲ ಎನ್ನುವ ಪ್ರಶ್ನೆ ಪರಿಹಾರವಾಗಿದೆ. ಆದರೆ ಪರ್ಯಾಯ ವಿಧಾನ/ ತಂತ್ರಜ್ಞಾನ/ ಉದ್ಯಮ ಮಾದರಿ ಅಥವಾ ವಿಭಿನ್ನ ದರ ಯೋಜನೆಯು ಬಳಕೆದಾರರಿಗೆ ಉಚಿತ ಇಂಟರ್ನೆಟನ್ನು ಕೊಡಬಹುದೆ? ಎನ್ನುವುದು ಈಗಿನ ಪ್ರಶ್ನೆ. ಹೌದು ಎಂದಾದಲ್ಲಿ ಪರ್ಯಾಯ ವಿಧಾನ/ ತಂತ್ರಜ್ಞಾನ/ ಉದ್ಯಮ ಮಾದರಿಯ ಸಲಹೆ ಕೊಡಬೇಕು. ಅದರ ಲಾಭ ಮತ್ತು ಲೋಪಗಳನ್ನು ಚರ್ಚಿಸಬೇಕು.
ಈಗಿನ ಪ್ರಶ್ನೆಯು ಭಾರತದಲ್ಲಿ ಅಂತರ್ಜಾಲವನ್ನು ವ್ಯಾಪಕವಾಗಿ ಜನರು ಬಳಸುವ ಮಾಧ್ಯಮವನ್ನಾಗಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನವಾಗಿದೆ. ಹೀಗೆ ಎರಡು ಪ್ರಶ್ನೆಗಳನ್ನು ವಿಭಿನ್ನವಾಗಿ ಜನರ ಮುಂದಿಟ್ಟಿರುವುದು ಟ್ರಾಯ್ ಕಡೆಯಿಂದ ಬಂದಿರುವ ಮಹಾತ್ವಾಕಾಂಕ್ಷೆಯ ನಡೆ. ನೆಟ್ ನ್ಯೂಟ್ರಾಲಿಟಿಯ ಚರ್ಚೆಯಲ್ಲಿ ಜಾಗತಿಕವಾಗಿ ಹಲವು ವಿಭಿನ್ನ ವಿಷಯಗಳು, ಬಳಕೆದಾರರ ಹಕ್ಕು, ಆಸಕ್ತಿಯ ಕಡೆಗೆ ಹೆಚ್ಚು ಗಮನಕ್ಕೆ ಬಂದಿದೆ. ಹೀಗಾಗಿ ಸ್ಪಷ್ಟವಾದ ಒಂದು ಉತ್ತರವಿಲ್ಲ. ನಿಯಮಗಳ ಆದ್ಯತೆ
ನಿಯಂತ್ರಣ ಮಾದರಿಯನ್ನು ರೂಪಿಸುವಾಗ ಉತ್ತಮ ನಿಯಮಗಳನ್ನು ರೂಪಿಸಬೇಕಾಗುತ್ತದೆ. ಭಾರತದ ಬಡ ಜನರಿಗೂ ಅಂತರ್ಜಾಲ ಲಭಿಸುವಂತಹ ಸಮಾನ ಅವಕಾಶವೇ ಇಲ್ಲಿ ಮುಖ್ಯವಾಗಬೇಕು. ಆದರೆ ಇದನ್ನು ಕಾರ್ಯರೂಪಕ್ಕೆ ತರುವಾಗ ಎರಡು ಗೊಂದಲಗಳಿವೆ. ಭಿನ್ನ ದರಗಳ ಮೇಲೆ ಈಗಾಗಲೇ ನಿಯಂತ್ರಣವಾಗಿದೆ. ಆದರೆ ಈಗ ಅಂತರ್ಜಾಲವನ್ನು ಬಳಸುವ ಅವಕಾಶದಲ್ಲಿ ಸಮಾನತೆ ಸಾಧಿಸುವ ಬಗ್ಗೆ ಸ್ಪಷ್ಟತೆ ಪಡೆಯಲು ಪ್ರಯತ್ನಿಸಲಾಗುತ್ತಿದೆ.