×
Ad

ಕುಟಿಲ ರಾಜಕಾರಣಿಗಳಿಂದ ಮರೀಚಿಕೆಯಾಗಿದೆ ಭಾವೈಕ್ಯ

Update: 2016-05-30 23:44 IST

ತ್ತೀಚೆಗೆ ರೈಲಿನಲ್ಲಿ ಬೆಂಗಳೂರಿನಿಂದ ಹೊಸದಿಲ್ಲಿಗೆ ಪ್ರಯಾಣಿಸುತ್ತಿದ್ದೆ. ನನ್ನ ಬೋಗಿಯಲ್ಲಿ ಉತ್ತರದ ಹಿಂದಿ ರಾಜ್ಯದಿಂದ ದಕ್ಷಿಣ ಭಾರತದ ಪ್ರವಾಸಕ್ಕೆ ಬಂದ 50 ಜನರ ಗುಂಪು ಇತ್ತು. ಅವರು ಎರಡು ವಾರಗಳ ಕಾಲದ ದಕ್ಷಿಣ ಭಾರತದ ಪ್ರವಾಸ ಮುಗಿಸಿ ಹಿಂದಿರುಗುತ್ತಿದ್ದರು. ಅವರಲ್ಲಿ ಹಿರಿಯ ನಾಗರಿಕರು, ಹೊಸತಾಗಿ ಮದುವೆಯಾದವರು, ಮಧ್ಯವಯಸ್ಸಿನವರು, ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಸಣ್ಣ ಮಕ್ಕಳು ಹೀಗೆ ಎಲ್ಲರೂ ಇದ್ದರು. ರೈಲು ಬೆಂಗಳೂರು ಬಿಡುತ್ತಿದ್ದಂತೆ ಒಬ್ಬೊಬ್ಬರೇ ದಕ್ಷಿಣದವರ ಬಗೆಗೆ, ಅವರ ಉಡುಗೆ-ತೊಡುಗೆ, ಭಾಷೆ, ಚಲನಚಿತ್ರ, ಹವಾಮಾನ, ಟಿವಿ ಚಾನೆಲ್‌ಗಳು, ಮಠ ಮಂದಿರಗಳ ಪದ್ಧತಿ ಬಗೆಗೆ ಮಾತನಾಡತೊಡಗಿದರು. ಅವರ ಮಾತಿನಲ್ಲಿ ಉತ್ತಮವಾದ ಅನುಭವಗಳನ್ನು ಹಂಚಿಕೊಳ್ಳುವುದಕ್ಕಿಂತ, ಟೀಕೆ, ತಮಾಷೆಯೇ ಎದ್ದು ಕಾಣುತ್ತಿತ್ತು. ಅವರು ಯಾವುದೋ ನಾಗರಿಕತೆ ಕಾಣದ ಆಫ್ರಿಕನ್ ಅಥವಾ ಲ್ಯಾಟಿನ ಅಮೆರಿಕನ್ ದೇಶಗಳನ್ನು ಸುತ್ತಿ ಬಂದಂತಿತ್ತು. ಒಬ್ಬನಂತೂ ‘‘ಬೆಂಗಳೂರು ಇಂಗ್ಲೆಂಡ್ ಮೆ ಹೈ ಕ್ಯಾ’’ ಎಂದು ಬೆಂಗಳೂರಿನಲ್ಲಿ ಹೆಚ್ಚು ಕೇಳುವ ಇಂಗ್ಲಿಷ್ ಭಾಷೆಯ ಬಗೆಗೆ ಪರೋಕ್ಷವಾಗಿ ಟೀಕಿಸುತ್ತಿದ್ದ.

  ರೈಲು ವಿಂದ್ಯ ಪರ್ವತವನ್ನು ದಾಟಿ ಭೋಪಾಲ್ ನಿಲ್ದಾಣವನ್ನು ಪ್ರವೇಶಿಸುತ್ತಿದ್ದಂತೆ, ಸಮೋಸಾ ಮಾರಾಟ ಮಾಡುವವರು ತಮ್ಮ ಬೋಗಿಯನ್ನು ಪ್ರವೇಶಿಸುವುದನ್ನು ನೋಡಿದ, ಅವರಲ್ಲಿಯ ಹಿರಿಯನೊಬ್ಬನು ಎದ್ದುನಿಂತು ‘‘ಈಗ ನಾವು ಮದರಾಸ್‌ನಿಂದ ಹಿಂದುಸ್ತಾನಕ್ಕೆ ಬಂದಿದ್ದೇವೆ’’ ಎಂದು ಜೋರಾಗಿ ಹೇಳಲು, ಎಲ್ಲರೂ ಕರಡತಾನದಿಂದ ಸಂಭ್ರಮಿಸಿದರು. ಅವರಲ್ಲಿ ವರ್ಷಗಳ ನಂತರ ತಾಯ್ನೆಡಿಗೆ ಮರಳಿದ, ಏನನ್ನೋ ಮರಳಿ ಪಡೆದ ಭಾವನೆ ಮತ್ತು ತೃಪ್ತಿ ಕಾಣುತ್ತಿತ್ತು.
   ಇಲ್ಲಿಯವರೆಗೂ ಈ ತಮಾಷೆ ಮತ್ತು ಟೀಕೆಗಳ ಸುರಿಮಳೆಯನ್ನು ನೋಡುತ್ತಾ ತನ್ನಷ್ಟಕ್ಕೆ ತಾನು ಪುಸ್ತಕ ಓದುತ್ತ ಮೇಲಿನ ಸೀಟಿನಲ್ಲಿ ಮಲಗಿದ್ದ ಉನ್ನತ ದರ್ಜೆಯ ಮಾಜಿ ಸೈನಿಕನೊಬ್ಬ ಕೆಳಗಿಳಿದು ಬಂದು, ಧ್ವನಿ ಏರಿಸಿ ‘‘...ನಿಮ್ಮ ಹುಚ್ಚಾಟವನ್ನು ನಿಲ್ಲಿಸಿ... ಭಾರತವೆಂದರೆ ಕೇವಲ ಹಿಂದಿ ಮಾತನಾಡುವ ರಾಜ್ಯಗಳಲ್ಲ... ದೇಶದಲ್ಲಿ 22 ಅಧಿಕೃತ ಭಾಷೆ, 25 ರಾಜ್ಯಗಳು ಇವೆ. ಪ್ರತಿಯೊಂದು ರಾಜ್ಯದವರಿಗೂ, ಪ್ರತಿ ಭಾಷೆಯವರಿಗೂ ಅವರದೇ ಅದ ಆಹಾರ ಪದ್ಧತಿ, ಹವಾಮಾನ, ಸಂಸ್ಕೃತಿ ಇದೆ ನಾನು ನಿಮ್ಮಂತೆ ಹಿಂದಿ ರಾಜ್ಯದವನು. ನಮಗೆ ಹಿಂದಿ ಭಾಷೆ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ...ಕೂಪ ಮಂಡೂಕಗಳಂತೆ ಜಗತ್ತನ್ನೇ ನೋಡಿಲ್ಲ...ಇಂಗ್ಲಿಷರನ್ನು ಮತ್ತು ಇಂಗ್ಲಿಷನ್ನು ಟೀಕಿಸುವದರಲ್ಲಿಯೇ ನಮ್ಮ ಕಾಲವನ್ನು ಕಳೆಯುತ್ತೇವೆ. ದಕ್ಷಿಣದವರಿಗೆ ತಮ್ಮ ಮಾತೃಭಾಷೆ ಬಿಟ್ಟು ಕನಿಷ್ಠ ಇನ್ನೆರಡು ಭಾಷೆಗಳು ಬರುತ್ತವೆ. ಅಭಿವೃದ್ದಿಯಲ್ಲಿ ಅವರು ನಮಗಿಂತ ನೂರಾರು ಕಿ.ಮೀ. ಮುಂದೆ ಇದ್ದಾರೆ. ಚಲನಚಿತ್ರ, ಟಿವಿ ಮತ್ತು ಸಾಫ್‌ಟ್ವೇರ್, ಅಟೊಮೊಬೈಲ್ ಕ್ಷೇತ್ರಗಳಲ್ಲಿ ಅವರನ್ನು ಮೀರಿಸಿದವರು ಯಾರೂ ಇಲ್ಲ. ವಿದೇಶಿ ಉದ್ಯೋಗಗಳನ್ನೆಲ್ಲಾ ಗುತ್ತಿಗೆ ಪಡೆದವರಂತೆ ವಿದೇಶಗಳಲ್ಲಿ ಕಾಣುತ್ತಾರೆ.... ತಪ್ಪುನಿಮ್ಮದಲ್ಲ, ನಿಮ್ಮ ಧುರೀಣರದ್ದು..ತಮ್ಮ ಸಂಕುಚಿತ ರಾಜಕೀಯ ಉದ್ದೇಶಗಳಿಗಾಗಿ ನಿಮಗೆ ಹೊರಜಗತ್ತನ್ನು ತೋರಿಸುವ ಪ್ರಯತ್ನ ಮಾಡಿಲ್ಲ...ನೀವು ಇಂಗ್ಲಿಷನ್ನು ಯಾವುದೋ ‘‘ಇಸಂ’’ ಹೆಸರಿನಲ್ಲಿ ಟೀಕಿಸುತ್ತಾ ನಿಮ್ಮ ಕಾಲವನ್ನು ನಿಮ್ಮ ಊರಲ್ಲಿ- ಪಟ್ಟಣದಲ್ಲಿ ತಳ್ಳುತ್ತಿದ್ದೀರಿ...ದಕ್ಷಿಣದವರು ಅದನ್ನು ಕಲಿತು ತಮ್ಮ ರಾಜ್ಯದಿಂದ ಹೊರಗಲ್ಲದೆ ಸಮದ್ರದಾಚೆಗೂ ಹೋಗಿ ಸಮೃದ್ಧರಾಗಿದ್ದಾರೆ. ನಮಗಿಂತ ಅವರು ವಿದ್ಯಾವಂತರಾಗಿದ್ದಾರೆ, ಸುಸಂಸ್ಕೃತರಾಗಿದ್ದಾರೆ, ಉದ್ಯಮಶೀಲರಾಗಿದ್ದಾರೆ..’’ಎಂದು ಮುಂದುವರಿಸುತ್ತಿದ್ದಂತೆ, ದಕ್ಷಿಣದ ಬಗೆಗೆ ಟೀಕೆ ಮಾಡಿದ ವ್ಯಕ್ತಿ ಎದ್ದು ನಿಂತು ತನ್ನ ಪರವಾಗಿ ಮತ್ತು ಅವರೆಲ್ಲರ ಪರವಾಗಿ ವಿಷಾದ ವ್ಯಕ್ತ ಮಾಡಿದ ಹಾಗೂ ‘‘ಕೂಪ ಮಂಡೂಕ’’ ದ ಅರ್ಥ ತಿಳಿಸಿದ್ದಕ್ಕಾಗಿ ಆ ಮಾಜಿ ಸೈನ್ಯಾಧಿಕಾರಿಗೆ ಕೃತಜ್ಞತೆಯನ್ನು ಅರ್ಪಿಸಿದ. ಭವಿಷ್ಯದಲ್ಲಿ ಮಾತನಾಡುವಾಗ ಎಚ್ಚರಿಕೆ ವಹಿಸುವುದಾಗಿ ಮತ್ತು ಜಾಗರೂಕನಾಗಿರುವುದಾಗಿ ಹೇಳಿದ. ಸಮಸ್ಯೆ ಅಲ್ಲಿಗೇ ತಣ್ಣಗಾಗಿ ಮುಂದಿನ ಪ್ರವಾಸ ಪ್ರಶಾಂತ ವಾತಾವರಣದಲ್ಲಿ ಮುಂದುವರಿಯಿತು.
‘‘ಭಾರತೀಯರು ನಾವು ಎಂದೆಂದೂ ಒಂದೇ...ಭಾವೈಕ್ಯದಲ್ಲಿ ನಾವು ಎಂದೆಂದೂ ಮುಂದೆ’’ ಎನ್ನುವುದು ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ನಡೆಯುವಾಗ, ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಸಮಾರಂಭ ನಡೆಯುವಾಗ, ಲತಾ ಮಂಗೇಶ್ಕರ್ ಹಾಡಿದ ಸುಮಧುರ ‘‘ಸಾರೇ ಜಹಾಂಸೆ..ಅಚ್ಚಾ.. ಹಿಂದುಸ್ಥಾನ್ ಹಮಾರ’’ ಹಾಡು ಕೇಳುವಾಗ ಮಾತ್ರ. ವಾಸ್ತವವಾಗಿ ನಮ್ಮದು ಹಲವು ಹತ್ತು ರೀತಿಯಲ್ಲಿ ಹಲವಾರು ಚೂರು ಆದ ದೇಶವಾದರೂ ಹೊರಗೆ ಪೋಸು ಕೊಡುವಾಗ ನಾವು ಎಂದೆಂದಿಗೂ ಒಂದೇ!
  ವೈಯಕ್ತಿಕವಾಗಿ ನಾವು ಚಿಂತಿಸುವಾಗ, ನಾವು ದಕ್ಷಿಣದವರು, ಉತ್ತರದವರು, ಪೂರ್ವ- ಪಶ್ಚಿಮದವರು, ಆ ಧರ್ಮದವರು ಈ ಜಾತಿಯವರು ಎಂದೆಲ್ಲಾ ದೃಷ್ಟಿಯಲ್ಲಿ ನೋಡುತ್ತೇವೆ. ನಾವು, ನಮ್ಮವರು, ನಾವೆಲ್ಲಾ ಒಂದೇ ಎಂಬ ಭಾವನೆ ಬರದಂತೆ ನಮ್ಮ ರಾಜಕಾರಣಿಗಳು ತಮ್ಮ ಮತಬ್ಯಾಂಕ್ ಭದ್ರತೆಗಾಗಿ ಇವುಗಳನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ಆದರೆ ಅವಕಾಶ ಸಿಕ್ಕಿದಾಗಲೆಲ್ಲ, ಪ್ರತಿಯೊಂದು ವೇದಿಕೆಯಲ್ಲೂ ‘ಭಾವೈಕ್ಯ’ದ ಬಗೆಗೆ ಕೊರೆಯುತ್ತಾರೆ.
 ಇಂತಹ ರಾಜಕಾರಣಿಗಳಿಂದ ದೇಶಕ್ಕೆ ಮುಕ್ತಿ ದೊರಕುವತನಕ ನಮ್ಮ ದೇಶದಲ್ಲಿ ‘ಭಾವೈಕ್ಯ’ ಮರೀಚಿಕೆ ಎನ್ನಬೇಕು.

Writer - ರಮಾನಂದ ಶರ್ಮಾ

contributor

Editor - ರಮಾನಂದ ಶರ್ಮಾ

contributor

Similar News