‘ಬೇಟಿ ಬಚಾವೊ’ ಎಷ್ಟು ಹೆಣ್ಣುಮಕ್ಕಳನ್ನು ರಕ್ಷಿಸಿದೆ?
ಮೋದಿ ಸರಕಾರ ಕೇಂದ್ರದಲ್ಲಿ ಎರಡು ವರ್ಷ ಪೂರೈಸಿದೆ. ಈ ಅವಧಿಯಲ್ಲಿ ದೇಶದಲ್ಲಿ ಸಾಕ್ಷರತೆ, ಹೆಣ್ಣುಮಕ್ಕಳು ಹಾಗೂ ಮಹಿಳಾ ಸಬಲೀಕರಣ ಕ್ಷೇತ್ರದ ಮೇಲೆ ಏನು ಪರಿಣಾಮವಾಗಿದೆ ಎಂದು ತಿಳಿಯಲು ಪ್ರತಿಕ್ರಿಯೆ ಆಹ್ವಾನಿಸಲಾಗಿತ್ತು. ಇದರಲ್ಲಿ ಕಂಡುಬಂದ ಅಂಶಗಳ ಸಂಕ್ಷಿಪ್ತ ವಿವರ ಇಲ್ಲಿದೆ.
ಭಾರತದಲ್ಲಿ ಪ್ರತಿ 1000 ಪುರುಷರಿಗೆ ಇರುವ ಮಹಿಳೆಯರ ಸಂಖ್ಯೆ ಹಾಲಿ ಇರುವ ಪ್ರಮಾಣಕ್ಕಿಂತ 1961ರಲ್ಲಿ 58ರಷ್ಟು ಹೆಚ್ಚಾಗಿತ್ತು ಎನ್ನುವುದು ನಿಮಗೆ ತಿಳಿದಿದೆಯೇ?
ದೇಶದಲ್ಲಿ ಮಕ್ಕಳ ಲಿಂಗಾನುಪಾತ ಗಣನೀಯವಾಗಿ ಕಡಿಮೆಯಾಗುತ್ತಿರುವ ಆತಂಕಕಾರಿ ಅಂಕಿ ಅಂಶವನ್ನು 2011ರ ಜನಗಣತಿ ಹೊರಹಾಕಿದೆ. 0-6 ವರ್ಷ ವಯೋಮಿತಿಯಲ್ಲಿ, 1961ರಲ್ಲಿ ಪ್ರತಿ 1000 ಗಂಡುಮಕ್ಕಳಿಗೆ 976 ಹೆಣ್ಣುಮಕ್ಕಳಿದ್ದರು. ಆದರೆ ಇಂದು ಈ ಪ್ರಮಾಣ 918ಕ್ಕೆ ಇಳಿದಿದೆ.
ಪ್ರಧಾನಿ ನರೇಂದ್ರ ಮೋದಿಯವರು, 2015ರಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಮೂಲಕ ದೇಶದಲ್ಲಿ ಕಡಿಮೆಯಾಗುತ್ತಿರುವ ಲಿಂಗಾನುಪಾತವನ್ನು ಹೆಚ್ಚು ಮಾಡುವ ಉದ್ದೇಶದಿಂದ ‘ಬೇಟಿ ಬಚಾವೊ- ಬೇಟಿ ಪಡಾವೊ’ ಎಂಬ ಯೋಜನೆಗೆ ಚಾಲನೆ ನೀಡಿದರು. ಈ ಮಹತ್ವಾಕಾಂಕ್ಷಿ ಯೋಜನೆ ಕಳೆದ ಒಂದೂವರೆ ವರ್ಷಗಳಲ್ಲಿ ಪ್ರಮುಖವಾಗಿ ಎರಡು ಪರಿಣಾಮ ಬೀರಿದೆ.
ಒಂದು ಸಮೂಹ ಮಾಧ್ಯಮ ಆಂದೋಲನವನ್ನು ಛೂಬಿಟ್ಟಿರುವುದು ಹಾಗೂ ಇನ್ನೊಂದು ಶೋಚನೀಯ ಲಿಂಗಾನುಪಾತ ಇರುವ ದೇಶದ 100 ಜಿಲ್ಲೆಗಳಲ್ಲಿ ಯೋಜನೆ ಹಸ್ತಕ್ಷೇಪ ಮಾಡಿರುವುದು. ಯೋಜನೆ ಹಸ್ತಕ್ಷೇಪದಲ್ಲಿ ಮುಖ್ಯವಾಗಿ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ಗರ್ಭಧಾರಣೆಯ ದಾಖಲೀಕರಣವನ್ನು ಉತ್ತೇಜಿಸುವುದು, ಸಮುದಾಯದ ಕ್ರೋಡೀಕರಣ ಮತ್ತು ಭಾವಸೂಕ್ಷ್ಮಗೊಳಿಸುವುದು, ಹುಡುಗಿಯರ ಸಾರ್ವತ್ರಿಕ ದಾಖಲಾತಿ, ಅರ್ಧದಿಂದ ಶಾಲೆ ಬಿಡುವ ಹೆಣ್ಣುಮಕ್ಕಳ ಪ್ರಮಾಣವನ್ನು ಕಡಿಮೆ ಮಾಡುವುದು, ಗರ್ಭಧಾರಣೆ ಪೂರ್ವ ಹಾಗೂ ಪ್ರಸವಪೂರ್ವ ಚಿಕಿತ್ಸಾ ತಂತ್ರಗಳ ಕಾಯ್ದೆ- 1994ನ್ನು ಬಲಗೊಳಿಸುವುದು ಹಾಗೂ ಮೇಲ್ವಿಚಾರಣೆಯನ್ನು ಹೆಚ್ಚಿಸುವುದು ಸೇರಿವೆ.
‘‘ಬೇಟಿ ಬಚಾವೊ, ಬೇಟಿ ಪಡಾವೋ ಯೋಜನೆ ದೇಶದಲ್ಲಿ ಲಿಂಗಾನು ಪಾತ ಹೆಚ್ಚಿಸುವ ಎಲ್ಲ ಸಾಮರ್ಥ್ಯ ಹೊಂದಿದೆ. ಖಂಡಿತವಾಗಿಯೂ ಇದು ಯೋಚನಾ ಲಹರಿಯಲ್ಲಿ ಬದಲಾವಣೆಗೆ ಕಾರಣವಾಗಲಿದೆ. ಸಮರ್ಪಕ ಸಂದೇಶವನ್ನು ರವಾನಿಸುವಲ್ಲಿ ಪ್ರಚಾರಾಂದೋಲನ ಯಶಸ್ವಿಯಾಗಿದೆ. ಗಂಡುಮಕ್ಕಳು ಹಾಗೂ ಹೆಣ್ಣುಮಕ್ಕಳ ನಡುವೆ ತಾರತಮ್ಯ ಎಸಗದಂತೆ ಜನ ಪದೇ ಪದೇ ಯೋಚಿಸಲು ಆರಂಭಿಸಿದ್ದಾರೆ. ಆದರೆ ಈ ಬದಲಾವಣೆ ಕಂಡುಬಂದಿರುವುದು ಮಾಧ್ಯಮದ ಸಂಪರ್ಕದಲ್ಲಿರುವವರಲ್ಲಿ ಮಾತ್ರ. ಅದರಲ್ಲೂ ಟೆಲಿವಿಷನ್ ಪ್ರೇಕ್ಷಕರಲ್ಲಿ. ಭಾರತದ ದೊಡ್ಡ ಭಾಗ ಇಂದಿಗೂ ಕಗ್ಗತ್ತಲಲ್ಲಿ ಬಾಳ್ವೆ ನಡೆಸುತ್ತಿದೆ. ಯಾವ ಸುದ್ದಿ ವಾಹಿನಿಗಳ ಸಂಪರ್ಕವೂ ಇಲ್ಲದ ಪ್ರದೇಶಗಳಿವೆ. ಈ ಪ್ರಚಾರಾಂದೋಲನ ಇಂಥ ಜನರಿಗೂ ತಲುಪಬೇಕು’’ ಎಂದು ಬುಂಡೇಲ್‌ಖಂಡದ ಬಂದಾ ಜಿಲ್ಲೆಯ ವಿದ್ಯಾ ಧಾಮ ಸಮಿತಿ ಅಧ್ಯಕ್ಷ ರಾಜಾ ಭಯ್ಯಾ ಅಭಿಪ್ರಾಯಪಡುತ್ತಾರೆ.
ದೇಶದಲ್ಲೇ ಅತ್ಯಂತ ಶೋಚನೀಯ ಲಿಂಗಾನುಪಾತ ಇರುವ ಹರ್ಯಾಣದಲ್ಲಿ ಕೂಡಾ ಪರಿಸ್ಥಿತಿ ಸುಧಾರಿಸಿದೆ.
‘ಸೆಲ್ಫಿ ವಿದ್ ಡಾಟರ್’ ಎಂಬ ಖ್ಯಾತ ಘೋಷಣೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಆಂದೋಲನದ ಕಿಡಿ ಹೊತ್ತಿಸಿದ ಬಿಬಿಪುರ ಸರಪಂಚ ಸುನಿಲ್ ಜಗಲನ್ ಹೇಳುವಂತೆ, ಒಟ್ಟಾರೆಯಾಗಿ ಲಿಂಗಾನುಪಾತ ಒಂದೂವರೆ ವರ್ಷದಲ್ಲೇ ಸುಧಾರಣೆ ಕಂಡಿದೆ. ಪ್ರಧಾನಿ ನರೇಂದ್ರ ಮೋದಿ ಕೂಡಾ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸೆಲ್ಫಿ ವಿದ್ ಡಾಟರ್ ಬಗ್ಗೆ ಉಲ್ಲೇಖಿಸಿದ್ದರು.
‘‘ಶಿಶು ಲಿಂಗಾನುಪಾತ ಕಳೆದ ಕೆಲ ವರ್ಷಗಳ ಹಿಂದಿನವರೆಗೂ ಹರ್ಯಾಣದಲ್ಲಿ 880ರಷ್ಟಿತ್ತು. ಆದರೆ ಇಂದು 1000 ಗಂಡುಮಕ್ಕಳಿಗೆ 906 ಹೆಣ್ಣುಮಕ್ಕಳು ಹುಟ್ಟುತ್ತಿದ್ದಾರೆ. ಇದು 2015ರ ಅಂಕಿ ಅಂಶಗಳು. ಈ ಅಂಶಕ್ಕೆ ಇನ್ನು ಹತ್ತು ವರ್ಷ ಕಾಲ ಒತ್ತು ನೀಡಿದರೆ, ಯಾವ ಬದಲಾವಣೆ ಬರುತ್ತದೆ ನೋಡಿ’’ ಎಂದು ಜಗಲಾನ್ ಹೇಳುತ್ತಾರೆ.
‘‘ಅನಕ್ಷರಸ್ಥರನ್ನು ಶಾಲೆಗೆ, ಶಾಲಾ ಪಠ್ಯಕ್ರಮಕ್ಕೆ ತರುವುದಕ್ಕೆ ಸಮರ್ಪಣಾ ಮನೋಭಾವ ಬೇಕು. ಪದೇ ಪದೇ ಹೀಗೆ ಮಾಡಿ, ಅವರಲ್ಲಿ ಅದು ಛಾಪು ಮೂಡಿಸುವಂತಾಗಬೇಕು. ‘ಬೇಟಿ ಬಚಾವೊ, ಬೇಟಿ ಪಡಾವೊ’ ಯೋಜನೆಯ ಅಂಗವಾಗಿ ಕೇವಲ ಒಂದು ಹೆಣ್ಣುಮಕ್ಕಳ ದಿನವನ್ನು ಆಚರಿಸುವುದರಿಂದ ಯಾವ ಪ್ರಯೋಜನವೂ ಆಗದು. ಲಿಂಗ ಸಮಾನತೆ ತರಲು ಸಮರ್ಪಣಾ ಮನೋಭಾವ ಹೊಂದಿದ ಪ್ರತ್ಯೇಕ ತಂಡವೇ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು’’ ಎನ್ನುವುದು ಅವರ ಅಭಿಮತ.
‘‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಪಿತೃಪ್ರಧಾನ ಅಂಶಗಳ ಬಗ್ಗೆ ಹೋರಾಡಲು ಸಾಧ್ಯವಾಗದಷ್ಟು ಬೇರೆಯೇ ಕೆಲಸಗಳಿವೆ. ಮಹಿಳೆಯರ ಸಬಲೀಕರಣಕ್ಕೆ ಇಂಥ ಹೋರಾಟ ನಾಂದಿಯಾಗಬೇಕು. ಇದಕ್ಕೆ ಪ್ರತ್ಯೇಕ ಕಾರ್ಯಪಡೆಯೇ ಬೇಕು. ಮೊದಲ ಮಗುವಾಗಿ ಹೆಣ್ಣುಮಗುವನ್ನು ಪಡೆದ ಮಹಿಳೆಯರು ಎರಡನೇ ಬಾರಿ ಗರ್ಭ ಧರಿಸಿದಾಗ, ಅವರ ಮೇಲೆ ಹೆಚ್ಚಿನ ನಿಗಾ ಇಡುವುದು ಅಗತ್ಯ’’ ಎನ್ನುವುದು ಜಗಲನ್ ಅವರ ಸಲಹೆ.
ಬಗೆಹರಿಯದ ಜಾತಿ ಸಮಸ್ಯೆ
ತಳಮಟ್ಟದ ಕಾರ್ಯಕರ್ತರ ನಂಬಿಕೆ ಎಂದರೆ, ಮಹಿಳೆಯರ ಸಬಲೀಕರಣಕ್ಕೆ ತಡೆಯಾಗಿರುವ ಜಾತಿಯ ಅಂಶವನ್ನು ಹೋಗಲಾಡಿಸಲು ಸಾಕಷ್ಟು ಪ್ರಯತ್ನಗಳು ನಡೆದಿಲ್ಲ. ಇದಕ್ಕಾಗಿ ಇರುವ ಯೋಜನೆಗಳ ಬಗ್ಗೆ ತಳಮಟ್ಟದಲ್ಲಿ ಇನ್ನೂ ಜಾಗೃತಿ ಮೂಡಿಲ್ಲ ಎನ್ನುವುದು ಅವರ ಅಭಿಪ್ರಾಯ. ಮೋದಿ ಸರಕಾರ, ಹಿಂದುಳಿದ ವರ್ಗಗಳ ಮಹಿಳೆಯರ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಉದಾಹರಣೆಗೆ ‘ಸ್ಟ್ಯಾಂಡ್ ಅಪ್ ಇಂಡಿಯಾ’ ಯೋಜನೆಯಡಿ, ದಲಿತ ಹಾಗೂ ಮಹಿಳಾ ಉದ್ಯಮಶೀಲರಿಗೆ ಸುಲಭವಾದ ಹಣಸಹಾಯವನ್ನು ಒದಗಿಸುತ್ತದೆ.
ಇತ್ತೀಚಿನ ಕೆಲ ಯೋಜನೆಗಳಲ್ಲಿ ಅಲ್ಪಸಂಖ್ಯಾತ ಮಹಿಳೆಯರ ಕೌಶಲ ಅಭಿವೃದ್ಧಿಗಾಗಿ ಇರುವ ನಯಿ ಮಂಝಿಲ್, ಮಹಿಳಾ ಉದ್ಯಮಶೀಲರನ್ನು ಉತ್ತೇಜಿಸುವ ಉದ್ದೇಶದ ‘ಮಹಿಳಾ- ಇ-ಹಾತ್’ ಯೋಜನೆ ಹಾಗೂ ಕಳೆದ ವಾರ ಚಾಲನೆ ನೀಡಲಾದ ರಾಷ್ಟ್ರೀಯ ಮಹಿಳಾ ನೀತಿಯ ಕರಡು ಇವುಗಳಲ್ಲಿ ಪ್ರಮುಖವಾದವು. ಈ ರಾಷ್ಟ್ರೀಯ ಮಹಿಳಾ ನೀತಿಯಡಿ, ಫಲವತ್ತತೆ ಹಕ್ಕಿನ ಬಗ್ಗೆ ಗಮನ ಹರಿಸಿರುವುದು ಮಾತ್ರವಲ್ಲದೇ ಒಂಟಿ ಮಹಿಳೆಯರ ಹಕ್ಕುಗಳನ್ನು ಗುರುತಿಸುವ ಪ್ರಯತ್ನ ನಡೆಸಿದೆ.
‘‘ಇಂತಹ ಯೋಜನೆಗಳನ್ನು ರೂಪಿಸಲು ಮತ್ತು ಅವುಗಳನ್ನು ಪ್ರಚಾರ ಮಾಡಲು ಸಾಕಷ್ಟು ಹಣ ಹೂಡಿಕೆ ಮಾಡಲಾಗುತ್ತಿದೆ. ಆದರೆ ಅಶಕ್ತ ಮಹಿಳೆಯರಿಗೆ ಅದರಲ್ಲಿ ಒಂದು ಹನಿ ಕೂಡಾ ತಲುಪುವುದಿಲ್ಲ’’ ಎನ್ನುವುದು ಸಾಮಾಜಿಕ ಕಾರ್ಯಕರ್ತೆ ಹರ್ಯಾಣದ ಜಗಮತಿ ಸಂಗವಾನ್ ಅವರ ಅನಿಸಿಕೆ.
‘‘ಬಂದಾ ಪ್ರದೇಶದಲ್ಲಿ ಯಾರೂ ಈ ಯೋಜನೆಗಳನ್ನು ಕೇಳಿಯೂ ಇಲ್ಲ. ಇಂಥ ಯೋಜನೆ ಜಾರಿಯಲ್ಲಿದೆ ಎಂಬ ಬಗ್ಗೆಯೇ ಅರಿವು ಇಲ್ಲದಿದ್ದ ಮೇಲೆ ಅವುಗಳ ಪ್ರಯೋಜನ ಪಡೆಯಲು ಹೇಗೆ ಸಾಧ್ಯ?’’ ಎನ್ನುವುದು ರಾಜಾ ಭಯ್ಯೆ ಅವರ ಪ್ರಶ್ನೆ.
ಮಹಿಳೆಯರ ಸಬಲೀಕರಣಕ್ಕೆ ಕೈಗೊಳ್ಳುವ ಕೆಲ ಪ್ರಯತ್ನಗಳು ಅವರ ಅಭಿವೃದ್ಧಿಗೆ ಮಾರಕವಾಗುತ್ತವೆ ಎಂಬ ಆತಂಕಕಾರಿ ವಿಚಾರವೊಂದನ್ನು ಸಂಗವಾನ್ ಪ್ರತಿಪಾದಿಸುತ್ತಾರೆ. ‘‘ಉದಾಹರಣೆಗೆ ಪಂಚಾಯತ್ ಚುನಾವಣೆಯಲ್ಲಿ ಸಾಮಾನ್ಯ ವರ್ಗದ ಮಹಿಳೆಯರು ಸ್ಪರ್ಧಿಸಲು ಕನಿಷ್ಠ 10ನೆ ತರಗತಿ ಉತ್ತೀರ್ಣರಾಗಿರಬೇಕು ಹಾಗೂ ದಲಿತ ಮಹಿಳೆಯರು ಐದನೆ ತರಗತಿ ಪಾಸಾಗಿರಬೇಕು ಎಂಬ ನಿರ್ಧಾರವನ್ನೇ ತೆಗೆದುಕೊಳ್ಳಿ. ಇಲ್ಲವೇ ಪಂಚಾಯತ್ ಚುನಾವಣೆ ಸ್ಪರ್ಧಿಸಬೇಕಾದರೆ, ಮನೆಗಳಲ್ಲಿ ಶೌಚಾಲಯಗಳನ್ನು ಹೊಂದಿರಲೇಬೇಕು ಎಂಬ ನಿಯಮವನ್ನಾದರೂ ಉದಾಹರಣೆಗೆ ತೆಗೆದುಕೊಳ್ಳಿ. ನೇರವಾಗಿ ಹೇಳಬೇಕೆಂದರೆ ಇದರಿಂದ ಶೇಕಡ 83ರಷ್ಟು ಮಹಿಳೆಯರು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆ ಕಳೆದುಕೊಳ್ಳುತ್ತಾರೆ. ಇದು ಯಾವ ಬಗೆಯ ಸಬಲೀಕರಣ?’’ ಎಂದು ಅವರು ಪ್ರಶ್ನೆ ಹಾಕುತ್ತಾರೆ.
‘‘ಪ್ರಧಾನಿ ನರೇಂದ್ರ ಮೋದಿಯವರಿಗೆ ನಿಜವಾಗಿಯೂ ಬೇಟಿ ಬಚಾವೊ, ಬೇಟಿ ಪಡಾವೋ ಯೋಜನೆ ಬಗ್ಗೆ ಗಂಭೀರತೆ ಇದ್ದರೆ, ಹರ್ಯಾಣದ ಖಾಪ್ ಪಂಚಾಯತ್ ವಿರುದ್ಧ ಸೆಟೆದು ನಿಲ್ಲುವ ಧೈರ್ಯ ತೋರಬೇಕು. ಆದರೆ ಅವರು ಖಾಪ್ ಭೂಮಿಗೆ ನಮಸ್ಕರಿಸುತ್ತೇನೆ ಎಂದು ಹೇಳುತ್ತಾರೆ’’ ಎಂದು ಅವರು ಲೇವಡಿ ಮಾಡುತ್ತಾರೆ.
‘ಬೇಟಿ ಬಚಾವೊ, ಬೇಟಿ ಪಡಾವೊ ಯೋಜನೆ’ ಒಳ್ಳೆಯ ಆರಂಭ ಮಾಡಿದೆ ಎಂಬ ಸಂದೇಶ ರವಾನೆಯಾಗಿದೆ. ಆದರೆ ಇದು ಪಿತೃಪ್ರಧಾನ ವ್ಯವಸ್ಥೆಯ ಪುರುಷರ ವಿರುದ್ಧ ಸೆಟೆದು ನಿಲ್ಲುವಷ್ಟು ಉತ್ತೇಜನ ಸಿಕ್ಕೀತೇ?
ಕೃಪೆ: catchnews