×
Ad

ಮತದಾರರಿಗೂ ಒಂದು ಬಾಂಡ್ ಪೇಪರ್ ಬರೆದು ಕೊಡಿ!

Update: 2016-06-01 23:49 IST

ಪಶ್ಚಿಮ ಬಂಗಾಳದಲ್ಲೊಂದು ಅಭೂತಪೂರ್ವ ಘಟನೆ ಸಂಭವಿಸಿದೆ. ನೆಹರೂ ಕುಟುಂಬದ ಮುಂದೆ ದೇಹಬಾಗಿಸಿ ‘ಜೀ ಹುಜೂರ್’ ಎಂಬ ಸಂಸ್ಕೃತಿಯನ್ನು ಹಾಸಿ ಹೊದ್ದಿಕೊಂಡಿರುವ ಕಾಂಗ್ರೆಸ್‌ನಲ್ಲಿ ಈ ಘಟನೆ ಸಂಭವಿಸಿರುವುದರಿಂದ ಇದೇನು ತುಂಬಾ ಅಚ್ಚರಿಯ ಘಟನೆಯಲ್ಲ, ಗಾಬರಿಗೆ ಎದೆ ಹಿಡಿದುಕೊಂಡುಬಿಡುವಂತಹ ಆಘಾತದ ಘಟನೆಯೂ ಅಲ್ಲ! ಸೋನಿಯಾ ಗಾಂಧಿ ‘ಜೀ’ಗೆ, ರಾಹುಲ್ ಗಾಂಧಿ ‘ಜೀ’ಗೆ ಕೈಮುಗೀರಿ ಅಂದ್ರೆ ಕಾಲಿಗೆ ಬೀಳೋ ಜನರೇ ಹೆಚ್ಚಿರುವ ಕಾಂಗ್ರೆಸ್‌ನಲ್ಲಿ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ‘ಬಾಂಡ್ ಪೇಪರ್’ ರಾಜಕಾರಣ ಶುರುವಾಗಿದೆ! ಇತ್ತೀಚೆಗಷ್ಟೇ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಉಸಿರೇ ನಿಂತು ಹೋಗಿದ್ದ ಕಾಂಗ್ರೆಸ್‌ಗೆ ಒಂದಷ್ಟು ಗಾಳಿ ಪಶ್ಚಿಮ ಬಂಗಾಳದಲ್ಲೂ ದಕ್ಕಿದೆ. ತೃಣಮೂಲ ಕಾಂಗ್ರೆಸ್ಸಿನ ಅಬ್ಬರದ ನಡುವೆಯೂ ನಲವತ್ತನಾಲ್ಕು ಸ್ಥಾನಗಳನ್ನು ಗಳಿಸಿಕೊಂಡು ಎಡಪಕ್ಷಗಳನ್ನು ಮೂರನೆ ಸ್ಥಾನಕ್ಕೆ ತಳ್ಳಿ ಅಧಿಕೃತ ವಿರೋಧ ಪಕ್ಷವಾಗಿದೆ. ಬಹುಶಃ ಈ ಸಾಧನೆ ಕಾಂಗ್ರೆಸ್ಸಿಗೇ ಆಶ್ಚರ್ಯ ಮೂಡಿಸಿರಬೇಕು. 2011ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದ ಶಾಸಕರು ಚುನಾವಣೆ ಮುಗಿಯುತ್ತಿದ್ದಂತೆಯೇ ಗಂಟು ಮೂಟೆ ಕಟ್ಟಿಕೊಂಡು ತೃಣಮೂಲ ಕಾಂಗ್ರೆಸ್‌ನ ತೆಕ್ಕೆಗೆ ಬಿದ್ದುಬಿಟ್ಟಿದ್ದರು. ಈ ಸಲವೂ ಅಂತಹುದೇನಾದರೂ ನಡೆದು ಬಿಟ್ಟೀತೆಂದು ಹೆದರಿ ಬಂಗಾಳದ ಕಾಂಗ್ರೆಸ್ ಘಟಕ ಬಾಂಡ್ ಪೇಪರ್ ರಾಜಕಾರಣವನ್ನು ಪರಿಚಯಿಸಿದೆ. ಬಾಂಡ್ ಪೇಪರ್ ಕಾಂಗ್ರೆಸ್‌ನ ಅಧ್ಯಕ್ಷೆ ಸೋನಿಯಾ ಗಾಂಧಿ ‘ಜೀ’ಯವರಿಗೆ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ‘ಜೀ’ಯವರಿಗೆ. ‘‘ನಾನು ಯಾವುದೇ ಪಕ್ಷವಿರೋಧಿ ಚಟುವಟಿಕೆ ನಡೆಸುವುದಿಲ್ಲ, ಪಕ್ಷದ ರೀತಿ ನೀತಿಗಳು, ಪಕ್ಷದ ನಿರ್ಧಾರಗಳು ನನಗೆ ಒಪ್ಪಿತವಾಗದೇ ಹೋದರೂ ಅವುಗಳ ವಿರುದ್ಧ ನಾನು ಮಾತನಾಡುವುದಿಲ್ಲ. ಒಂದು ವೇಳೆ ಅಂತಹದ್ದೇನನ್ನಾದರೂ ಮಾಡಬೇಕೆಂದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನ ಸಂಪೂರ್ಣ ನಿಷ್ಠೆ ಅಧ್ಯಕ್ಷೆ ಸೋನಿಯಾ ಗಾಂಧಿ ‘ಜೀ’ಯವರಿಗೆ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ‘ಜೀ’ಯವರಿಗೆ’’ ಎಂಬ ಗುಲಾಮತ್ವದ ಸಾಲುಗಳು ಎರಡು ಪುಟದ ಬಾಂಡ್ ಪೇಪರಿನುದ್ದಕ್ಕೂ ತುಂಬಿದೆ. ಕಾಂಗ್ರೆಸ್‌ನೊಳಗಿನ ಗುಲಾಮತ್ವ ಮನಸ್ಥಿತಿ ಮತ್ತೊಂದು ಮಜಲನ್ನೇ ತಲುಪಿದೆ ಎಂದು ಹೇಳಬಹುದು.
ಪಕ್ಷದಲ್ಲಿ ಸ್ಥಾನ ಕೊಟ್ಟಿದ್ದಕ್ಕೆ, ಚುನಾವಣೆಗೆ ನಿಲ್ಲಲು ಟಿಕೆಟು ಕೊಟ್ಟಿದ್ದಕ್ಕೆ ಮತ್ತು ಅಲ್ಲಿ ಇಲ್ಲಿ ಪಕ್ಷದ ಹೆಸರಿನಿಂದಲೇ ಗೆದ್ದಿದ್ದಕ್ಕೆ ಶಾಸಕರು ತಮ್ಮ ಪಕ್ಷದ ಮುಖಂಡರ ಆಣತಿಯಂತೆ ಇಂತಹುದೊಂದು ಬಾಂಡ್ ಪೇಪರ್‌ಗೆ ಸಹಿ ಹಾಕುತ್ತಾರೆಂದ ಮೇಲೆ ಅವರಿಗೆ ಮತ ಹಾಕಿ ಗೆಲ್ಲಿಸಿದ ಮತದಾರರಿಗೂ ಒಂದು ಬಾಂಡ್ ಪೇಪರ್ ಬರೆದುಕೊಡುವುದು ನ್ಯಾಯಯುತವಾದುದಲ್ಲವೇ?
‘‘ನನಗೆ ನೀವೆಲ್ಲರೂ ಮತ ಹಾಕಿದ್ದಕ್ಕೆ ಧನ್ಯವಾದ. ನಾನು ಯಾವುದೇ ಜನವಿರೋಧಿ ಚಟುವಟಿಕೆ ನಡೆಸುವುದಿಲ್ಲ, ಭ್ರಷ್ಟನಾಗುವುದಿಲ್ಲ, ನಿಮ್ಮ ಜನಪರ ಸಲಹೆಗಳು ನನಗೆ ಒಪ್ಪಿತವಾಗದೇ ಹೋದರೂ ಅವುಗಳ ವಿರುದ್ಧ ನಾನು ಮಾತನಾಡುವುದಿಲ್ಲ. ಒಂದು ವೇಳೆ ಅಂತಹದ್ದೇನನ್ನಾದರೂ ಮಾಡಬೇಕೆಂದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನ ಸಂಪೂರ್ಣ ನಿಷ್ಠೆ ಮತದಾರರಿಗೆ’’ ಎಂಬ ಬಾಂಡು ಪೇಪರನ್ನು ಏಕೆ ಶಾಸಕ - ಸಂಸದರು ಆಯ್ಕೆಯಾದ ತಕ್ಷಣ ಕೊಡುವಂತಾಗಬಾರದು?

Writer - ಡಾ. ಅಶೋಕ್ ಕೆ. ಆರ್.

contributor

Editor - ಡಾ. ಅಶೋಕ್ ಕೆ. ಆರ್.

contributor

Similar News