ಅಮೆರಿಕ: ಭಾರತದ ಮಾನವಹಕ್ಕುಗಳ ಸ್ಥಿತಿಗತಿ ಬಗ್ಗೆ ಕಾಂಗ್ರೆಸ್ ಆಯೋಗ ವಿಚಾರಣೆ
ವಾಶಿಂಗ್ಟನ್, ಜೂ. 1: ಭಾರತದಲ್ಲಿನ ಮಾನವಹಕ್ಕುಗಳ ಪ್ರಸಕ್ತ ಸ್ಥಿತಿಗತಿಯ ಬಗ್ಗೆ ತಿಳಿಯಲು ಅಮೆರಿಕದ ಸಂಸದೀಯ (ಕಾಂಗ್ರೆಸ್) ಆಯೋಗವೊಂದು ವಿಚಾರಣೆಯೊಂದನ್ನು ನಡೆಸಲಿದೆ. ಈ ವಿಚಾರಣೆಯು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರ ನಡುವೆ ಇಲ್ಲಿನ ಶ್ವೇತಭವನದಲ್ಲಿ ನಡೆಯಲಿರುವ ಸಭೆಯ ಸಂದರ್ಭದಲ್ಲೇ ನಡೆಯಲಿದೆ.
ಭಾರತದಲ್ಲಿ ಮೂಲಭೂತ ಹಕ್ಕುಗಳಿಗೆ ಎದುರಾಗಿರುವ ಸವಾಲುಗಳು ಮತ್ತು ಉನ್ನತಿಗೆ ಇರುವ ಅವಕಾಶಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಟಾಮ್ ಲಾಂಟೊಸ್ ಮಾನವಹಕ್ಕುಗಳ ಆಯೋಗ ಹೇಳಿದೆ.
ಭಾರತದ ಮಾನವಹಕ್ಕು ಪರಿಸ್ಥಿತಿಯ ಬಗ್ಗೆ ಯಾಕೆ ವಿಚಾರಣೆ ನಡೆಸಲಾಗುತ್ತಿದೆ ಎಂಬುದಕ್ಕೆ ಕಾರಣ ನೀಡಿರುವ ಆಯೋಗ, ‘‘ವಿವಿಧ ರೀತಿಯ ಗಂಭೀರ ಮಾನವಹಕ್ಕು ಉಲ್ಲಂಘನೆಗಳು ನಡೆಯುತ್ತಿರುವ ಬಗ್ಗೆ ಕಳವಳಗಳಿವೆ’’ ಎಂದು ಹೇಳಿದೆ.
ಅಸ್ಪಶ್ಯತೆ ಆಚರಣೆಯನ್ನು ಸಾಂವಿಧಾನಿಕ ವಿಧಿಗಳ ಮೂಲಕ ನಿಷೇಧಿಸಲಾಗಿದ್ದರೂ, ಭಾರತೀಯ ಸಮಾಜದಲ್ಲಿ ಜಾತಿವ್ಯವಸ್ಥೆ ಆಳವಾಗಿ ಬೇರೂರಿದೆ ಹಾಗೂ ಇದು ತಾರತಮ್ಯಕ್ಕೆ ಕಾರಣವಾಗಿದೆ ಎಂದಿದೆ.
‘‘ಭಾರತೀಯ ಜನಸಂಖ್ಯೆಯ ಕಾಲು ಭಾಗದಷ್ಟಿರುವ ದಲಿತರು ಇನ್ನೊಂದು ಪ್ರಮುಖ ಮಾನವಹಕ್ಕು ಉಲ್ಲಂಘನೆಯಾದ ಮಾನವ ಸಾಗಣೆಯ ಅಪಾಯಕ್ಕೆ ಗುರಿಯಾಗಿದ್ದಾರೆ’’ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
‘‘ವೇಶ್ಯಾವಾಟಿಕೆಗಾಗಿ ಅಥವಾ ಜೀತದಾಳುಗಳಾಗಿ ಕೆಲಸ ಮಾಡುವುದಕ್ಕಾಗಿ ಭಾರತದೊಳಗೆ ಪ್ರತೀ ವರ್ಷ ಮಕ್ಕಳು ಸೇರಿದಂತೆ ಲಕ್ಷಾಂತರ ಜನರನ್ನು ಸಾಗಾಟ ಮಾಡಲಾಗುತ್ತಿದೆ. ಧಾರ್ಮಿಕ ಅಲ್ಪಸಂಖ್ಯಾತರೂ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ’’ ಎಂದು ಆಯೋಗ ಹೇಳಿದೆ.
‘‘ಮಾನವಹಕ್ಕುಗಳ ರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಹೆಚ್ಚಿನ ಸಂಖ್ಯೆಯ ಅಂತಾರಾಷ್ಟ್ರೀಯ ಸರಕಾರೇತರ ಸಂಘಟನೆಗಳನ್ನು ಸರಕಾರದ ‘ನಿಗಾ ಪಟ್ಟಿ’ಗಳಿಗೆ ಸೇರ್ಪಡೆಗೊಳಿಸಲಾಗಿದೆ ಅಥವಾ ಅವುಗಳಿಗೆ ಬರುತ್ತಿರುವ ನಿಧಿಗಳನ್ನು ಅಧಿಕಾರಿಗಳು ತಡೆಹಿಡಿದಿದ್ದಾರೆ’’ ಎಂದು ಅದು ಆರೋಪಿಸಿದೆ.
‘‘ಇವುಗಳ ಜೊತೆಗೆ ಭಾರತ ಸರಕಾರವನ್ನು ಟೀಕಿಸುವ ಗುಂಪುಗಳು ಮತ್ತು ವ್ಯಕ್ತಿಗಳ ವಿರುದ್ಧ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳು ವಾಕ್ ಸ್ವಾತಂತ್ರ ಮತ್ತು ಸಂಘಟನಾ ಸ್ವಾತಂತ್ರಗಳನ್ನು ದಿನದಿಂದ ದಿನಕ್ಕೆ ಕಡಿತಗೊಳಿಸುತ್ತಿವೆ ಎಂಬ ಕಳವಳ ವ್ಯಾಪಕವಾಗಿದೆ’’ ಎಂದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಜೂನ್ 4ರಂದು ಅಫ್ಘಾನಿಸ್ತಾನ, ಕತಾರ್, ಸ್ವಿಝರ್‌ಲ್ಯಾಂಡ್, ಅಮೆರಿಕ ಮತ್ತು ಮೆಕ್ಸಿಕೊ- ಈ ಐದು ದೇಶಗಳ ಪ್ರವಾಸಕ್ಕಾಗಿ ತೆರಳಲಿದ್ದಾರೆ. ಬರಾಕ್ ಒಬಾಮರ ಆಹ್ವಾನದ ಮೇರೆಗೆ ಅವರು ಜೂನ್ 7ರಂದು ಅಮೆರಿಕದಲ್ಲಿ ಪ್ರವಾಸ ಮಾಡುತ್ತಾರೆ.