ಇನ್ನು ಐ ಪಾಡ್, ಸ್ಮಾರ್ಟ್ ಫೋನ್ ಜತೆ ಹೈ ಫೈ ಅಂಚೆಯಣ್ಣ!

Update: 2016-06-02 04:27 GMT

ಹೊಸದಿಲ್ಲಿ, ಜೂ.2: ನಿಮ್ಮ ಪೋಸ್ಟ್‌ಮನ್ ನಿಮ್ಮ ಬ್ಯಾಂಕರ್ ಆಗುವ ದಿನ ದೂರವಿಲ್ಲ. ಪೋಸ್ಟಲ್ ಬ್ಯಾಂಕ್ ಸ್ಥಾಪನೆ ಪ್ರಸ್ತಾವವನ್ನು ಕೇಂದ್ರ ಸಚಿವ ಸಂಪುಟ ಒಪ್ಪಿಕೊಂಡಿದ್ದು, ಇದರಿಂದಾಗಿ ಸದ್ಯದಲ್ಲೇ ನಿಮ್ಮ ಮನೆಬಾಗಿಲಲ್ಲಿ ಅಂಚೆಯವ ಹಣಕಾಸು ಸೌಲಭ್ಯ ಒದಗಿಸಲಿದ್ದಾನೆ. ಈತನಿಗೆ ಅನುಕೂಲವಾಗುವಂತೆ ಐಪಾಡ್ ಹಾಗೂ ಸ್ಮಾರ್ಟ್‌ಫೋನ್ ನೀಡಲಾಗುತ್ತದೆ.
ಇದರಲ್ಲಿ ಚಾಲ್ತಿ ಅಥವಾ ಉಳಿತಾಯ ಖಾತೆ ಆರಂಭಿಸುವಲ್ಲಿಂದ ಹಿಡಿದು, ಎಲ್ಲ ಬಗೆಯ ಪಾವತಿ, ಸಾಮಾಜಿಕ ಭದ್ರತಾ ಪಾವತಿ, ವ್ಯಕ್ತಿಯಿಂದ ವ್ಯಕ್ತಿಗೆ ಹಣ ವರ್ಗಾವಣೆ, ವಿಮೆ ಹಾಗೂ ಮ್ಯೂಚ್‌ವಲ್ ಫಂಡ್ ಸೇವೆ ಒದಗಿಸುವ ಸೇವೆಗಳು ಕೂಡಾ ಇದರಲ್ಲಿ ಸೇರಿವೆ.
"ದೇಶದಲ್ಲಿ ಒಟ್ಟು 1.54 ಲಕ್ಷ ಅಂಚೆ ಕಚೇರಿಗಳಿದ್ದು, ಈ ಪೈಕಿ 1.39 ಲಕ್ಷ ಗ್ರಾಮೀಣ ಅಂಚೆ ಕಚೇರಿಗಳು. ತಕ್ಷಣಕ್ಕೆ 650 ಪೋಸ್ಟಲ್ ಬ್ಯಾಂಕ್ ಶಾಖೆಗಳನ್ನು ತೆರೆಯಲಾಗುವುದು. ಇವುಗಳನ್ನು ಗ್ರಾಮೀಣ ಅಂಚೆ ಕಚೇರಿಗಳಿಗೆ ಸಂಪರ್ಕಿಸಲಾಗುವುದು" ಎಂದು ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಪ್ರಕಟಿಸಿದ್ದಾರೆ.

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ಗಳಿಗೆ 800 ಕೋಟಿ ರೂಪಾಯಿ ಆರ್ತ ನಿಧಿ ನೀಡಲಾಗಿದೆ. ಇದಕ್ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇದ್ದು, ವೃತ್ತಿಪರವಾಗಿ ಇದನ್ನು ನಿರ್ವಹಿಸಲಾಗುವುದು ಎಂದು ಸಚಿವರು ವಿವರಿಸಿದ್ದಾರೆ.
ಇದರಲ್ಲಿ ಅಂಚೆ ಇಲಾಖೆ, ವೆಚ್ಚ ಇಲಾಖೆ ಹಾಗೂ ಹಣಕಾಸು ಸೇವೆಗಳ ಇಲಾಖೆಗೂ ಸೇರಿ ಇತರ ಇಲಾಖೆಗಳ ಪ್ರತಿನಿಧಿಗಳೂ ಇರುತ್ತಾರೆ. ದೇಶದ ಮೂಲೆ ಮೂಲೆಗೂ ಖಾಸಗಿ ಬ್ಯಾಂಕ್‌ಗಳು ವ್ಯಾಪಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಅಂಚೆ ಬ್ಯಾಂಕಿಂಗ್ ವಿಶೇಷ ಗಮನ ಸೆಳೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News