×
Ad

ಅಮೆರಿಕದ ಜೊತೆ ಮಾನವಹಕ್ಕು ಬಗ್ಗೆ ಮಾತನಾಡಲು ಸಿದ್ಧ: ಭಾರತ

Update: 2016-06-02 23:41 IST

ವಾಶಿಂಗ್ಟನ್, ಜೂ. 2: ಪ್ರಧಾನಿ ನರೇಂದ್ರ ಮೋದಿಯ ಮುಂದಿನ ವಾರ ಅಮೆರಿಕ ಭೇಟಿಗೆ ಮುನ್ನ, ಆ ದೇಶದೊಂದಿಗೆ ‘‘ಸಮಾನತೆ ಮತ್ತು ಭಾಗೀದಾರಿಕೆ’’ಯ ನೆಲೆಯಲ್ಲಿ ಮಾನವಹಕ್ಕುಗಳ ಬಗ್ಗೆ ಚರ್ಚಿಸಲು ಭಾರತ ಸಿದ್ಧವಿದೆ; ಆದರೆ, ಈ ವಿಷಯದಲ್ಲಿ ಯಾವುದೇ ರೀತಿಯ ‘‘ನಿರ್ಣಯಾತ್ಮಕ ಘೋಷಣೆ’’ಗಳನ್ನು ಸ್ವೀಕರಿಸಲು ಸಿದ್ಧವಿಲ್ಲ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.

ಮೋದಿಯ ಅಮೆರಿಕ ಪ್ರವಾಸದ ಮುನ್ನ ಅಮೆರಿಕದ ಕೆಲವು ಸೆನೆಟರ್‌ಗಳು ಈ ವಿಷಯದಲ್ಲಿ ಧ್ವನಿ ಎತ್ತಿದ್ದು, ಭಾರತದ ನಿಲುವನ್ನು ಅಮೆರಿಕಕ್ಕೆ ತಿಳಿಸಲಾಗಿದೆ.

ಯಾವುದೇ ಸಮಾಜದಂತೆ ಭಾರತದಲ್ಲೂ ಎಲ್ಲವೂ ಸರಿಯಾಗಿಲ್ಲ ಹಾಗೂ ದೇಶದಲ್ಲಿ ಸಾಮಾಜಿಕ ನ್ಯಾಯ ಮತ್ತು ಮಾನವಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಿವೆ ಎಂಬುದನ್ನು ಒಬಾಮ ಆಡಳಿತದ ಅಧಿಕಾರಿಗಳು ಮತ್ತು ಸಂಸದರೊಂದಿಗೆ ಇತ್ತೀಚೆಗೆ ನಡೆದ ಮಾತುಕತೆಗಳ ವೇಳೆ ಭಾರತದ ಹಿರಿಯ ಅಧಿಕಾರಿಗಳು ಒಪ್ಪಿಕೊಂಡಿದ್ದರು.

‘‘ಖಂಡಿತವಾಗಿಯೂ, ಭಾರತದಲ್ಲಿ ಸಮಸ್ಯೆಗಳಿವೆ’’ ಎಂದು ಅಮೆರಿಕದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದ ಅಧಿಕಾರಿಯೋರ್ವರು ಹೇಳಿದರು. ಆದಾಗ್ಯೂ, ಮಾನವಹಕ್ಕುಗಳ ಉಲ್ಲಂಘನೆಯಾಗಲಿ, ಧಾರ್ಮಿಕ ಸ್ವಾತಂತ್ರದ ಉಲ್ಲಂಘನೆಯಾಗಲಿ ಅಥವಾ ಅಭಿವ್ಯಕ್ತಿ ಸ್ವಾತಂತ್ರದ ಉಲ್ಲಂಘನೆಯಾಗಲಿ- ಇಂಥ ಯಾವುದೇ ಅನ್ಯಾಯದ ವಿರುದ್ಧ ಪ್ರಬಲ ಧ್ವನಿಯೂ ಭಾರತದಲ್ಲಿ ಇದೆ ಎಂಬುದನ್ನು ಹೇಳಲು ಅವರು ಮರೆಯಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News