×
Ad

ಆಗ್ನೇಯ ದಿಲ್ಲಿಯ ಆಸ್ಪತ್ರೆಯಲ್ಲಿ ಕಿಡ್ನಿ ಮಾರಾಟ ಜಾಲ ಬಯಲಿಗೆ

Update: 2016-06-03 22:35 IST

ಹೊಸದಿಲ್ಲಿ, ಜೂ.3: ದಿಲ್ಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯ ವೈದ್ಯರ ವೈದ್ಯಕ ಖಾಸಗಿ ಸಿಬ್ಬಂದಿ ಸಹಿತ 6 ಮಂದಿಯನ್ನು ಬಂಧಿಸುವ ಮೂಲಕ ತಾವು ಕಿಡ್ನಿ ಮಾರಾಟ ಜಾಲವೊಂದನ್ನು ಭೇದಿಸಿದ್ದೇವೆಂದು ಆಗ್ನೇಯ ಜಿಲ್ಲಾ ಪೊಲೀಸರು ಪ್ರತಿಪಾದಿಸಿದ್ದಾರೆ.

ಅಪೊಲೊ ಆಸ್ಪತ್ರೆ ಜಾಲದಿಂದ ದೂರವುಳಿದಿದೆ. ಪೊಲೀಸರಿಗೆ ಸಂಪೂರ್ಣ ಸಹಕಾರದ ಭರವಸೆಯನ್ನು ಅದು ನೀಡಿದೆ. ತಾವು ರೋಗಿಗಳು ಹಾಗೂ ಆಸ್ಪತ್ರೆಯನ್ನು ವಂಚಿಸುವ ಸುಯೋಜಿತ ಕಾರ್ಯಾಚರಣೆಯೊಂದರ ಬಲಿಪಶುಗಳಾಗಿದ್ದೇವೆಂದು ಆಸ್ಪತ್ರೆಯ ಹೇಳಿಕೆಯೊಂದು ತಿಳಿಸಿದೆ.
ಜಾಲದ ಸದಸ್ಯರು ಮೂತ್ರಪಿಂಡ ಬೇಕಾಗಿರುವ ರೋಗಿಗಳ ವಿವರವನ್ನು ಪಡೆಯುತ್ತಾರೆ ಬಳಿಕ ಅವರು ಮಧ್ಯವರ್ತಿಗಳ ಮೂಲಕ ದಿಲ್ಲಿಯ ಹೊರಗಿನ ಬಡ ದಾನಿಗಳಿಗೆ ಆಮಿಷ ತೋರಿಸುತ್ತಾರೆಂದು ಪೊಲೀಸರು ವಿವರಿಸಿದ್ದಾರೆ.
ಆಗ್ನೇಯ ದಿಲ್ಲಿಯ ಅಪೊಲೊ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ 9:30ರ ಸುಮಾರಿಗೆ ಆರೋಪಿಗಳನ್ನು ಬಂಧಿಸಲಾಗಿದೆ. ಅವರಲ್ಲಿರುವ ಕುರಿತು ಪೊಲೀಸರಿಗೆ ಮಾಹಿತಿ ಬಂದಿತ್ತೆಂದು ಹಿರಿಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳಲ್ಲಿ ಮೂವರು ಮಧ್ಯವರ್ತಿಗಳು ಸೇರಿದ್ದಾರೆ. ಅವರು ದಿಲ್ಲಿಯಲ್ಲಿ ಇದುವರೆಗೆ ಕನಿಷ್ಠ 4 ಕಿಡ್ನಿಗಳನ್ನು ಮಾರಾಟ ಮಾಡಿದ್ದಾರೆಂದು ನಂಬಲಾಗಿದೆ. ಬಂಧಿಸಲಾಗಿರುವ ಇಬ್ಬರು ಮಹಿಳೆಯರ ಸಹಿತ ಮೂವರು ಸಂಭಾವ್ಯ ಕಿಡ್ನಿ ದಾನಿಗಳು ಉತ್ತರ ಭಾರತದ ಒಂದು ಹಳ್ಳಿಯವರಾಗಿದ್ದಾರೆಂದು ಅವರು ಹೇಳಿದ್ದಾರೆ.
ಈ ಸಂಬಂಧ ಸರಿತಾವಿಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿಚಾರಣೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News