ಮಹಾರಾಷ್ಟ್ರದಿಂದ ಗೋಯಲ್,ಚಿದಂಬರಂ ಅವಿರೋಧ ಆಯ್ಕೆ
ಮುಂಬೈ,ಜೂ.3: ಕೇಂದ್ರ ವಿದ್ಯುತ್ ಸಚಿವ ಪಿಯೂಷ್ ಗೋಯಲ್ ಮತ್ತು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ವಿತ್ತಸಚಿವ ಪಿ.ಚಿದಂಬರಂ ಅವರು ಶುಕ್ರವಾರ ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಮಪತ್ರಗಳನ್ನು ಹಿಂದೆಗೆದುಕೊಳ್ಳಲು ಗಡುವು ಮಧ್ಯಾಹ್ನ ಮುಕ್ತಾಯಗೊಂಡಿದ್ದು, ಆರು ರಾಜ್ಯಸಭಾ ಸ್ಥಾನಗಳಿಗೆ ಆರು ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲ ಆರೂ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು. ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ,ಬಿಜೆಪಿಯ ವಿನಯ ಸಹಸ್ರಬುದ್ಧೆ ಮತ್ತು ವಿಕಾಸ ಮಹಾತ್ಮೆ ಹಾಗೂ ಶಿವಸೇನೆಯ ಸಂಜಯ್ ರೌತ್ ಅವರು ಆಯ್ಕೆಯಾದ ಇತರರಾಗಿದ್ದಾರೆ.
ಇದೇ ವೇಳೆ ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ 10 ಸ್ಥಾನಗಳಿಗೆ ನಾಮಪತ್ರಗಳನ್ನು ಸಲ್ಲಿಸಿದ್ದ 12 ಅಭ್ಯರ್ಥಿಗಳ ಪೈಕಿ ಇಬ್ಬರು ತಮ್ಮ ನಾಮಪತ್ರಗಳನ್ನು ಹಿಂದೆಗೆದುಕೊಂಡಿದ್ದರಿಂದ ರಾಜ್ಯದ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಸೇರಿದಂತೆ ಉಳಿದ ಎಲ್ಲ ಅಭ್ಯರ್ಥಿಗಳೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.