ಜೈಲಿನಲ್ಲಿ ‘ಅಧ್ಯಕ್ಷರ’ ರಮಝಾನ್ ಉಪವಾಸ!

Update: 2016-06-07 09:21 GMT

ಕೈರೋ, ಜೂ. 7: ಜೈಲಿನಲ್ಲಿರುವ ಈಜಿಪ್ಟ್‌ನ ಪದಚ್ಯುತ ಅಧ್ಯಕ್ಷ ಮುಹಮ್ಮದ್ ಮುರ್ಸಿಯನ್ನು ಭೇಟಿಯಾಗಲು ಕುಟುಂಬ ಸದಸ್ಯರಿಗೆ ಅವಕಾಶ ನೀಡಲಾಗುತ್ತಿಲ್ಲ ಎಂಬುದಾಗಿ ಸದಸ್ಯರು ಆರೋಪಿಸಿದ್ದಾರೆ.

ಈ ಸಂಬಂಧ ಹೇಳಿಕೆಯೊಂದನ್ನು ನೀಡಿರುವ ಕುಟುಂಬವು, ಪ್ರಕರಣದ ಬಗ್ಗೆ ಗಮನ ಹರಿಸುವಂತೆ ಈಜಿಪ್ಟ್ ಹಾಗೂ ಅಂತಾರಾಷ್ಟ್ರೀಯ ಮಾನವಹಕ್ಕು ಸಂಘಟನೆಗಳಿಗೆ ಮನವಿ ಮಾಡಿದೆ.

ಕುಟುಂಬ ಸದಸ್ಯರು ನೀಡಿದ ಹೇಳಿಕೆ ಇಂತಿದೆ:

ಈಜಿಪ್ಟ್‌ನ ಪದಚ್ಯುತ ಅಧ್ಯಕ್ಷ ಮುಹಮ್ಮದ್ ಮುರ್ಸಿ ಜೈಲಿನಲ್ಲಿ ಏಕಾಂಗಿಯಾಗಿ ಕಳೆಯುತ್ತಿರುವ ನಾಲ್ಕನೆ ರಮಝಾನ್ ಇದು. ಅವರ ಪರಿಸ್ಥಿತಿಯ ಬಗ್ಗೆ ಜನರಿಗೆ ತಿಳಿಸುವುದು ಅಗತ್ಯ ಎಂದು ನಾವು ಭಾವಿಸಿದ್ದೇವೆ.

ನಮಗೆ ಗೊತ್ತಿರುವ ಮಟ್ಟಿಗೆ, ಕುಟುಂಬ ಸದಸ್ಯರ ಭೇಟಿಗೆ ಅವಕಾಶ ಇಲ್ಲದ ಏಕೈಕ ರಾಜಕೀಯ ಕೈದಿ ಡಾ. ಮುರ್ಸಿ. 2013 ಜುಲೈ 3ರಂದು ಸೇನಾ ಕ್ಷಿಪ್ರಕ್ರಾಂತಿ ನಡೆದ ಬಳಿಕ ಅವರು ಕುಟುಂಬ ಸದಸ್ಯರನ್ನು 2013 ನವೆಂಬರ್ 7ರಂದು ಒಮ್ಮೆ ಮಾತ್ರ ನೋಡಿದ್ದಾರೆ. ಆ ಬಳಿಕ, ತನ್ನ ಮಗ ಉಸಾಮರನ್ನು ಕೆಲವು ನಿಮಿಷಗಳ ಅವಧಿಗೆ ನಾಲ್ಕು ಬಾರಿ ಭೇಟಿಯಾಗಿದ್ದಾರೆ. ಅವರು ಕೊನೆಯದಾಗಿ ತನ್ನ ಮಗನನ್ನು ನೋಡಿದ್ದು 2015 ಜನವರಿಯಲ್ಲಿ.

ಪತ್ನಿ ಹಾಗೂ ಇತರ ಕುಟುಂಬ ಸದಸ್ಯರು ಅವರನ್ನು ಭೇಟಿಯಾಗದಂತೆ 2013 ನವೆಂಬರ್ 13ರಂದು ನಿಷೇಧ ಹೇರಲಾಗಿತ್ತು.

ಅವರ ಆರೋಗ್ಯ, ಆಹಾರ, ಧರಿಸುವ ಬಟ್ಟೆಗಳು ಹಾಗೂ ಅವರನ್ನು ಎಲ್ಲಿ ಇರಿಸಲಾಗಿದೆ ಎಂಬ ಬಗ್ಗೆ ಅವರ ಕುಟುಂಬಕ್ಕೆ ಏನೂ ತಿಳಿದಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ, ಬಟ್ಟೆಗಳು ಅಥವಾ ಆಹಾರ ಸೇರಿದಂತೆ ಅವರ ವೈಯಕ್ತಿಕ ವಸ್ತುಗಳನ್ನು ಕುಟುಂಬ ಸದಸ್ಯರು ನೀಡುವುದನ್ನು ನಿಷೇಧಿಸಲಾಗಿದೆ.

ಅವರನ್ನು ಭೇಟಿಯಾಗಲು ಅವಕಾಶ ಕೋರಿ ಕುಟುಂಬ ಸದಸ್ಯರು ಹಲವಾರು ಮನವಿಗಳನ್ನು ಸಲ್ಲಿಸಿದ್ದಾರೆ. ಅವುಗಳಿಗೆ ಯಾವುದೇ ಉತ್ತರ ಬಂದಿಲ್ಲ. ಕಟುಂಬ ಸದಸ್ಯರನ್ನು ಭೇಟಿಯಾಗುವುದು ಡಾ. ಮುರ್ಸಿ ಸೇರಿದಂತೆ ಎಲ್ಲ ಬಂಧಿತರ ಸಾಂವಿಧಾನಿಕ ಹಕ್ಕಾಗಿದೆ.

ಈ ಅನ್ಯಾಯವನ್ನು ಕೊನೆಗಾಣಿಸಲು ಸಹಾಯ ನೀಡುವಂತೆ ಈಜಿಪ್ಟ್‌ನ ಹಾಗೂ ಅಂತಾರಾಷ್ಟ್ರೀಯ ಮಾನವಹಕ್ಕುಗಳ ಸಂಘಟನೆಗೆ ನಾವು ಮನವಿ ಮಾಡುತ್ತೇವೆ.

ಡಾ. ಮುರ್ಸಿಯ ಸ್ವಾತಂತ್ರಕ್ಕಾಗಿ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News