ಫ್ಲಾಟ್‌ನಲ್ಲೇ ಕಾಗೆ, ಗುಬ್ಬಚ್ಚಿ, ಗಿಳಿ, ಪಾರಿವಾಳಗಳಿಗೆ ಆಸರೆ

Update: 2016-06-07 12:26 GMT

 ಮುಂಬೈ, ಜೂ.7: ಮುಂಬೈ ಮಹಾನಗರದಲ್ಲಿ ವಿಪರೀತ ಸೆಖೆಗೆ ಮನುಷ್ಯರಿಗಿಂತಲೂ ಪ್ರಾಣಿಪಕ್ಷಿಗಳು ತತ್ತರಿಸುತ್ತಿದ್ದು, ಪ್ರಾಣಿಪಕ್ಷಿಗಳು ತಮ್ಮ ಜೀವವನ್ನೇ ಕಳೆದುಕೊಳ್ಳುವುದು ಕಳವಳಕಾರಿ ಸಂಗತಿಯಾಗಿದೆ.

ಪಕ್ಷಿಗಳು ತಮ್ಮ ಜೀವವನ್ನುಳಿಸಿಕೊಳ್ಳಲು ಮರಗಿಡ, ನೀರು ಗಾಳಿಯ ಆಸರೆಗಾಗಿ ಚಡಬಡಿಸುತ್ತಿದ್ದು ಅವುಗಳ ರಕ್ಷಣೆಗಾಗಿ ಕೆಲ ಪ್ರಾಣಿ ಪಕ್ಷಿ ಪ್ರಿಯರು ಅವುಗಳತ್ತ ಕರುಣೆ ತೋರಿಸುತ್ತಿದ್ದಾರೆ. ಆ ಪೈಕಿ ಮಹಾನಗರದ ಯುವ ಪತ್ರಕರ್ತ, ಪರಿಸರ ಪ್ರೇಮಿ ರೋನ್ಸ್ ಬಂಟ್ವಾಳ್ ಪಕ್ಷಿಗಳ ಬಳಲುವಿಕೆಗೆ ಮೊರೆ ಹೋಗಿ ತನ್ನ ನಿವಾಸದ ಗ್ಯಾಲರಿಯಲ್ಲಿ ಹೂದೋಟದ ಸೃಷ್ಟಿಸಿ ಅವುಗಳ ರಕ್ಷಣೆಗೆ ಶ್ರಮಿಸುತ್ತಿದ್ದಾರೆ.

ತನ್ನ ಅಂಧೇರಿ ಪೂರ್ವದ ಚಕಾಲದಲ್ಲಿನ ಲವ್‌ವ್ಯೆವ್ ನಿವಾಸದ ಗ್ಯಾಲರಿಯಲ್ಲಿ ಹತ್ತಾರು ಹೂಗಿಡಗಳಿಂದ ಕಿರು ಪುಷ್ಪಉದ್ಯಾನ ರೂಪಿಸಿ ಕಾಗೆಗಳು, ಗುಬ್ಬಚ್ಚಿ, ಪಾರಿವಾಳ, ಗಿಳಿ, ಮತ್ತಿತರ ಅನೇಕಾನೇಕ ಪಕ್ಷಿಗಳಿಗೆ ಆಸರೆಯನ್ನು ನೀಡಿದ್ದಾರೆ. ಪಕ್ಷಿಗಳ ಆರೈಕೆಗಾಗಿ ಜೋಕಾಲಿಗಳನ್ನು ನೇತಾಡಿಸಿ ಅವುಗಳದ್ದೇ ಕ್ಯಾಲ್ಸಿಯಂಭರಿತ ಆಹಾರ, ನೀರು ಇನ್ನಿತರ ಆಹಾರವನ್ನು ಇಟ್ಟು ಸ್ವತಂತ್ರವಾಗಿ ಓಡಾಡಿಕೊಂಡಿರುವ ನೂರಾರು ಪಕ್ಷಿಗಳ ಜೀವರಕ್ಷಣೆ ಮಾಡುತ್ತಿದ್ದಾರೆ.

ಮುಂಜಾನೆ ಸೂರ್ಯೋದಯದಿಂದ ಸಂಜೆಯವರೆಗೆ ಇಲ್ಲಿ ಪಕ್ಷಿಗಳು ಮುದ್ದಾಗಿ ಅಡ್ಡಾಡಿ ನರ್ತಿಸುತ್ತಿವೆ. ಅತೀವ ಸೆಖೆಯಿಂದ ಒದ್ದಾಡುವ ಪಕ್ಷಿಗಳಿಗೆ ಸ್ನಾನದ ವ್ಯವಸ್ಥೆಯೂ ಇದ್ದು ಪಕ್ಷಿಗಳು ಕ್ಷಣಕ್ಷಣಕ್ಕೂ ಮೈನವಿರೇಳಿಸಿ ಸ್ವಿಮ್ಮಿಂಗ್ ಮಾಡುತ್ತಾ ತಮ್ಮ ದೇಹವನ್ನು ತಂಪಾಗಿಸಿ ಕಾಲ ಕಳೆಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News