ಪೋರ್ಚುಗಲ್‌ಗೆ ಭಾರತೀಯ ರಾಯಭಾರಿಯಾಗಿ ಕರ್ನಾಟಕದ ನಂದಿನಿ ಸಿಂಗ್ಲಾ ನಿಯೋಜನೆ
ಹುಬ್ಬಳ್ಳಿ,ಜೂ.8: ಎಸ್‌ಎಸ್‌ಎಲ್‌ಸಿಯ ಬಳಿಕ ಹೆಚ್ಚಿನ ವಿದ್ಯಾರ್ಥಿಗಳು ಪಿಯುಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಸೇರ್ಪಡೆಗೊಳ್ಳಲು ಹಾತೊರೆಯುತ್ತಾರೆ. ಆದರೆ ಪುಟ್ಟ ಪಟ್ಟಣವೊಂದರ ಕಲಾ ವಿಭಾಗದ ವಿದ್ಯಾರ್ಥಿನಿ ಸಹ ಉನ್ನತ ಸಾಧನೆಯನ್ನು ಮಾಡಬಲ್ಲಳು ಎನ್ನುವುದಕ್ಕೆ ಪೋರ್ಚುಗಲ್‌ಗೆ ಭಾರತೀಯ ರಾಯಭಾರಿಯಾಗಿ ನಿಯೋಜನೆಗೊಂಡಿರುವ ನಂದಿನಿ ಸಿಂಗ್ಲಾ ಉತ್ತಮ ಉದಾಹರಣೆಯಾಗಿದ್ದಾರೆ.
‘‘ನಾನು ಎಸ್‌ಎಸ್‌ಎಲ್‌ಸಿಯಲ್ಲಿ ಶೇ.88ರಷ್ಟು ಅಂಕ ಗಳಿಸಿದ್ದೆ. ಇಷ್ಟೊಂದು ಅಂಕ ಗಳಿಸಿದವರು ಸಾಮಾನ್ಯವಾಗಿ ವಿಜ್ಞಾನ ವಿಭಾಗವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಬಾಗಲಕೋಟದ ಬಸವೇಶ್ವರ ಕಾಲೇಜಿನಲ್ಲಿ ಆರಂಭದಲ್ಲಿ ಕಲಾ ವಿಭಾಗಕ್ಕೆ ನನಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು. ನನ್ನ ಹೆತ್ತವರ ಮಧ್ಯಪ್ರವೇಶದ ಬಳಿಕವಷ್ಟೇ ನನಗೆ ಪ್ರವೇಶ ಸಿಕ್ಕಿದ್ದು ಎಂದು ನೆನಪಿಸಿಕೊಂಡರು ನಂದಿನಿ. ಅವರು ತಂದೆ,ನಿವೃತ್ತ ಎಲ್‌ಐಸಿ ಅಧಿಕಾರಿ ಕೆ.ಗುರುರಾಜ ರಾವ್ ಮತ್ತು ತಾಯಿ ಕೆ.ಪ್ರೇಮಲತಾ ಅವರನ್ನು ಭೇಟಿಯಾಗಲು ಹುಬ್ಬಳ್ಳಿಗೆ ಬಂದಿದ್ದಾರೆ.
ದಿಲ್ಲಿಯಲ್ಲಿ ಗಣ ರಾಜ್ಯೋತ್ಸವ ಪರೇಡ್‌ನಲ್ಲಿ ಭಾಗಿಯಾಗಲು ಆಯ್ಕೆಯಾಗಿದ್ದು ಮತ್ತು ಹುಬ್ಬಳ್ಳಿಯಲ್ಲಿ ಬಿ.ಎ.ಓದುತ್ತಿದ್ದಾಗ ಕೆನಡಾದಲ್ಲಿ ಆರು ತಿಂಗಳ ಯುವ ವಿನಿಮಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನಂದಿನಿಯವರಲ್ಲಿ ಐಎಫ್‌ಎಸ್ (ಭಾರತೀಯ ವಿದೇಶ ಸೇವೆ) ಮಾಡಬೇಕೆಂಬ ಕನಸನ್ನು ಬಿತ್ತಿದ್ದವು.
ಬಿಎ ಪರೀಕ್ಷೆಯಲ್ಲಿ ಕರ್ನಾಟಕ ವಿವಿಗೆ ಮೊದಲ ರ್ಯಾಂಕ್ ಪಡೆದಿದ್ದ ನಂದಿನಿ ಮುಂಬೈ ವಿವಿಯಲ್ಲಿ ಎಂಎ(ರಾಜಕೀಯ ವಿಜ್ಞಾನ) ಮಾಡಿದ್ದು,ಅಲ್ಲಿಯೂ ಮೊದಲ ರ್ಯಾಂಕನ್ನು ತನ್ನದಾಗಿಸಿಕೊಂಡಿದ್ದರು. ದಿಲ್ಲಿಯ ಜೆಎನ್‌ಯುದಲ್ಲಿ ಎಂ.ಫಿಲ್ ಮುಗಿಸಿದ ಅವರು ಮೊದಲ ಪ್ರಯತ್ನದಲ್ಲಿಯೇ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು.
ಪ್ರಧಾನಿ ನರೇಂದ್ರ ಮೋದಿಯವರ ಖಾಸಗಿ ಕಾರ್ಯದರ್ಶಿಯಾಗಿರುವ ಸಂಜೀವ ಸಿಂಗ್ಲಾ ಅವರೊಂದಿಗೆ ಬಾಳು ಹಂಚಿಕೊಂಡಿರುವ ನಂದಿನಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿ(ಯುರೋಪ್ ಪಶ್ಚಿಮ)ಯಾಗುವ ಮುನ್ನ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಇದೀಗ ತನಗೆ ನೀಡಲಾಗಿರುವ ನೂತನ ಹೊಣೆಗಾರಿಕೆಯಲ್ಲಿ ಭಾರತ-ಪೋರ್ಚುಗಲ್ ಸಂಬಂಧವನ್ನು ಹೊಸ ಎತ್ತರಕ್ಕೊಯ್ಯುವ ಕನಸು ಅವರದು.
ಕೃಪೆ: The Hindu