ಪ್ರಪಾತದಿಂದ ಉರುಳಿದ ಕಾರು: ಒಬ್ಬಳ ಸಾವು

Update: 2016-06-09 06:46 GMT

ವಾಷಿಂಗ್ಟನ್, ಜೂ.9: ಅವಳಿ ಸಹೋದರಿಯರ ನಡುವೆ ನಡೆದ ಜಗಳದ ಪರಿಣಾಮವಾಗಿ ಹವಾಯಿ ನಗರದ ಪ್ರಪಾತದಿಂದ 200 ಅಡಿ ಕೆಳಗೆ ಕಾರೊಂದು ಉರುಳಿದ ಪರಿಣಾಮ ಒಬ್ಬಳು ಸಾವನ್ನಪ್ಪಿದ್ದು, ಇನ್ನೊಬ್ಬಳು ಗಂಭೀರ ಗಾಯಗೊಂಡ ದುರ್ಘಟನೆ ಮೇ 29 ರಂದು ನಡೆದಿದ್ದು ಬದುಕುಳಿದ ಯುವತಿ ಈಗ ಜೈಲು ಕಂಬಿಯೆಣಿಸುತ್ತಿದ್ದಾಳೆ.

ಅವಳಿ ಸಹೋದರಿಯರಾದ ಅಲಿಸನ್ ಹಾಗೂ ಆನ್ನ್ ಡಾಡೋವ್ ಯೋಗ ತರಬೇತಿ ಕೇಂದ್ರವೊಂದನ್ನು ನಡೆಸುತ್ತಿದ್ದು, ಆ ದಿನ ಅದ್ಯಾವುದೋ ಕಾರಣಕ್ಕೆ ಅವರಿಬ್ಬರ ನಡುವೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಜಗಳ ನಡೆದಿತ್ತು. ಪ್ಯಾಸೆಂಜರ್ ಸೀಟಿನಲ್ಲಿ ಕುಳಿತವಳು ಚಾಲಕನ ಸೀಟಿನಲ್ಲಿದ್ದವಳ ತಲೆಗೂದಲನ್ನು ಹಿಡಿದೆಳೆಯುತ್ತಿರುವುದನ್ನು ನೋಡಿದವರಿದ್ದಾರೆ. ಈ ಸಂದರ್ಭ ನಿಯಂತ್ರಣ ತಪ್ಪಿದ ಕಾರು ಪ್ರಪಾತದಿಂದ ಉರುಳಿಬಿದ್ದಿತ್ತು. ಆನ್ನ್ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಳು. ಅಲಿಸನ್‌ಗೆ ಇದೀಗ ಸೆಕೆಂಡ್ ಡಿಗ್ರಿ ಮರ್ಡರ್‌ಗಾಗಿ ಜಾಮೀನುರಹಿತ ಜೈಲು ಶಿಕ್ಷೆ ವಿಧಿಸಲಾಗಿದೆ.

ಅಲಿಸನ್ ಹಾಗೂ ಆನ್ನ್ ಅವರ ಮೂಲ ಹೆಸರಾಗಿದ್ದರೂ ಅವರು ಹವಾಯಿಗೆ ನಿವಾಸ ಬದಲಿಸುವಾಗ ತಮ್ಮ ಹೆಸರುಗಳನ್ನು ಅಲೆಕ್ಸಾಂಡ್ರಿಯಾ ಹಾಗೂ ಆನಸ್ತಸಿಯಾ ದುವಲ್ ಎಂದು ಬದಲಿಸಿಕೊಂಡಿದ್ದರು. ಅವರೇಕೆ ತಮ್ಮ ಹೆಸರು ಬದಲಾಯಿಸಿದ್ದಾರೆಂದು ತಿಳಿದಿಲ್ಲವಾದರೂ ಅವರ ಚಾಲನಾ ಪರವಾನಿಗೆಯಲ್ಲಿ ಅಲೆಕ್ಸಾಂಡ್ರಿಯಾ ಹಾಗೂ ಆನಸ್ತಸಿಯಾ ಎಂದೇ ಬರೆಯಲಾಗಿತ್ತು.

ಘಟನೆ ನಡೆದ ದಿನ ಮಧ್ಯಾಹ್ನ ಅವರು ಹನ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಯಣಿಸುತ್ತಿದ್ದಾಗ ಅವರ ನಡುವೆ ಕಲಹವೇರ್ಪಟ್ಟಿತ್ತೆನ್ನಲಾಗಿದೆ. ಈ ಹಿಂದೊಮ್ಮೆ ಅಲಿಸನ್ ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಕ್ಕೆ ಬಂಧನಕ್ಕೊಳಗಾಗಿದ್ದಳು.

ಆಕೆಯ ಸಹೋದರಿ ಕೂಡ ಸಾರ್ವಜನಿಕವಾಗಿ ಮದ್ಯ ಸೇವಿಸಿ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆಗೈದಿದ್ದಕ್ಕಾಗಿ ಜೈಲು ಶಿಕ್ಷೆಯನ್ನನುಭವಿಸಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News