ಆಕಾಶವಾಣಿಗೆ 80
ಇದು ಆಕಾಶವಾಣಿ,
ವಾರ್ತೆಗಳು, ಓದುತ್ತಿರುವವರು..........
ಆಕಾಶವಾಣಿಗೆ ಇಂದು ಎಂಬತ್ತರ ಪ್ರಾಯ.... ಎಂಚಿತ್ತಾದರೂ ನಿತ್ಯ ನೂತನೆ, ನವನವೋನ್ಮೇಷಶಾಲಿನಿ....
ಹೌದು, ಈಗ್ಗೆ ಸರಿಯಾಗಿ ಎಂಬತ್ತು ವರ್ಷಗಳ ಹಿಂದೆ, 1936ರಲ್ಲಿ ಬ್ರಿಟಿಷ್ ಸರಕಾರ ‘ಇಂಡಿಯನ್ ಸ್ಟೇಟ್ ಬ್ರಾಡ್ಕಾಸ್ಟಿಂಗ್’ ಎಂಬ ಹೆಸರಿನಲ್ಲಿ ಪ್ರಸಾರ ಕೇಂದ್ರ ಆರಂಭಿಸಿತು. ಫೀಲ್ಡನ್ ಎಂಬ ಆಂಗ್ಲ ಅಧಿಕಾರಿ ಆಗ ಇದರ ಕಂಟ್ರೊಲರ್ ಆಗಿದ್ದು ಅವನೇ ಈ ಪ್ರಸಾರ ಸಂಸ್ಥೆಗೆ ‘ಆಲ್ ಇಂಡಿಯಾ ರೇಡಿಯೋ’ ಎಂದು ನಾಮಕರಣ ಮಾಡಿದ. ಆಲ್ ಇಂಡಿಯಾ ರೇಡಿಯೋ ಸುದ್ದಿ ಪ್ರಸಾರ ಆರಂಭವಾದದ್ದು 1936ರಲ್ಲಿ. ಎರಡನೆ ಮಹಾ ಯುದ್ಧದ ಕಾಲದಲ್ಲಿ ಸುದ್ದಿ ಪ್ರಸಾರವನ್ನು ಹೆಚ್ಚಿಸಲಾಯಿತು. ದಿನಕ್ಕೊಮ್ಮೆ ಪ್ರಸಾರಮಾಡಲಾಗುತ್ತಿತ್ತು. ಯುದ್ಧ ಶುರುವಾದದ್ದೇ ಎರಡು ಮೂರು ಬಾರಿ ಸುದ್ದಿ ಪ್ರಸಾರ ಶುರುವಾಯಿತು.
ಇಟಲಿಯ ವಿಜ್ಞಾನಿ ಮಾರ್ಕೋನಿ 1901ರಲ್ಲಿ ವಿಶ್ವದಲ್ಲೇ ಪ್ರಪ್ರಥಮವಾಗಿ ಇಂಗ್ಲೆಂಡ್‌ನಲ್ಲಿ ರೇಡಿಯೋ ಪ್ರಸಾರ ಪ್ರಾರಂಭಿಸಿ ‘ರೇಡಿಯೋ ಜನಕ’ನೆಂದು ವಿಖ್ಯಾತನಾದ. ಭಾರತದಲ್ಲಿ ಆಕಾಶವಾಣಿ ಹೆಜ್ಜೆ ಗುರುತುಗಳನ್ನು ಕಾಣಲು ನಾವು 1920ರ ದಶಕದತ್ತ ಹಿಂದಿರುಗಿ ನೋಡಬೇಕಾಗುತ್ತದೆ. ಮೊದಲಿಗೆ ಹವ್ಯಾಸಿ ಕ್ಲಬ್ಬುಗಳು ರೇಡಿಯೋ ಕ್ಲಬ್ಬುಗಳನ್ನು ಸ್ಥಾಪಿಸುವುದರೊಂದಿಗೆ ಭಾರತದಲ್ಲಿ ರೇಡಿಯೋ ಶಕೆ ಶುರುವಾಯಿತು. ಕಲ್ಕತ್ತ, ಮುಂಬೈ, ಮದ್ರಾಸ್ ಮತ್ತು ಲಾಹೋರ್‌ಗಳಲ್ಲಿ ಹವ್ಯಾಸಿ ರೇಡಿಯೋ ಕ್ಲಬ್ಬುಗಳಿದ್ದವು. ಮುಂಬೈಯ ಮಹಡಿಯೊಂದರ ಮೇಲೆ ಖಾಸಗಿಯ ಕೆಲವರು 1921ರ ಆಗಸ್ಟ್ 20ರಂದು ರೇಡಿಯೋ ಕೇಂದ್ರ ಸ್ಥಾಪಿಸಿದರೆಂದು ಟೈಮ್ಸ್ ಆಫ್ ಇಂಡಿಯಾ ದಾಖಲಿಸಿರುವುದಾಗಿ ವರದಿಯಾಗಿದೆ. ಆದರೆ ರೇಡಿಯೋ ಕ್ಲಬ್ ಸ್ಥಾಪಿಸಲು ಅಧಿಕೃತವಾಗಿ ಪರವಾನಿಗೆ ದೊರೆತದ್ದು 1922ರ ಫೆಬ್ರವರಿ 23ರಂದು. 1923ರಲ್ಲಿ ಕಲ್ಕತ್ತಾ ರೇಡಿಯೋ ಕ್ಲಬ್ ಕೆಲಸ ಮಾಡಲಾರಂಭಿಸಿತು. 1924ರ ಜುಲೈ 31ರಂದು ಮದ್ರಾಸ್ ಪ್ರೆಸಿಡೆನ್ಸಿ ರೇಡಿಯೋ ಕ್ಲಬ್ ಪ್ರಸಾರ ಕಾರ್ಯ ಪ್ರಾರಂಭಿಸಿತು. ಹಣಕಾಸಿನ ಮುಗ್ಗಟ್ಟಿನಿಂದಾಗಿ ಈ ಎಲ್ಲ ಹವ್ಯಾಸಿ ಕ್ಲಬ್ಬುಗಳೂ ಒಂದುಗೂಡಿ 1927ರಲ್ಲಿ ‘ಇಂಡಿಯನ್ ಬ್ರಾಡ್ಕಾಸ್ಟಿಂಗ್ ಕಂಪೆನಿ’ ಎಂಬ ಪ್ರಸಾರ ಸಂಸ್ಥೆಯೊಂದನ್ನು ಸ್ಥಾಪಿಸಿದವು.
ಮೈಸೂರಿನಲ್ಲಿ....
ಮೈಸೂರಿನಲ್ಲಿ ಆಕಾಶವಾಣಿಯ ಪಿತಾಮಹ ಎಂ.ವಿ. ಗೋಪಾಲಸ್ವಾಮಿಯವರು ಎಂದರೆ ತಪ್ಪಾಗದು. ಮಹಾರಾಜಾ ಕಾಲೇಜಿನಲ್ಲಿ ಮನ:ಶ್ಶಾಸ್ತ್ರದ ಪ್ರಾಧ್ಯಾಪಕ ರಾಗಿದ್ದ ಎಂ.ವಿ.ಗೋಪಾಲಸ್ವಾಮಿಯವರು 1935ರಲ್ಲಿ ಮೈಸೂರಿನಲ್ಲಿ ರೇಡಿಯೋ ಕೇಂದ್ರ ಸ್ಥಾಪಿಸಿದರು. ತಮ್ಮ ಸ್ವಂತ ಖರ್ಚಿನಲ್ಲಿ ರೇಡಿಯೋ ಕೇಂದ್ರ ಸ್ಥಾಪಿಸಿದ ಗೋಪಾಲಸ್ವಾಮಿಯವರ ಮುಖ್ಯ ಉದ್ದೇಶ ಸಂಸ್ಕೃತಿ ಪ್ರಸಾರವಾಗಿತ್ತು. ಬಲುಬೇಗ ಗೋಪಾಲಸ್ವಾಮಿಯವರ ‘ಮೈಸೂರು ಆಕಾಶವಾಣಿ’ ಜನಪ್ರಿಯವಾಯಿತು. ರೇಡಿಯೋಗೆ ‘ಆಕಾಶವಾಣಿ’ ಎಂದು ನಾಮಕರಣ ಮಾಡಿದವರು ಗೋಪಾಲಸ್ವಾಮಿಯವರೇ. ನಂತರ ದೇಶದ ಎಲ್ಲೆಡೆ ರೇಡಿಯೋವನ್ನು ಅಕಾಶವಾಣಿ ಎಂದೇ ಕರೆಯಲಾರಂಭಿಸಿದರು. ಹಾಗಾಗಿಯೇ ಕನ್ನಡ ನಾಡಿಗಷ್ಟೇ ಅಲ್ಲ ಭಾರತಕ್ಕೇ ಮೊದಲು ‘ಆಕಾಶವಾಣಿ’ ಹೆಸರನ್ನು ಕೊಟ್ಟ ಕೀರ್ತಿ ಗೋಪಾಲಸ್ವಾಮಿಯವರಿಗೆ ಸಂದಿದೆ. ಸ್ವಾತಂತ್ರ್ಯಾನಂತರ ಮೈಸೂರು ಸರಕಾರ ಗೋಪಾಲಸ್ವಾಮಿಯವರ ಆಕಾಶವಾಣಿಯನ್ನು ವಹಿಸಿಕೊಂಡಿತು. 1950ರ ಎಪ್ರಿಲ್ 1ರಂದು ಮೈಸೂರು ಆಕಾಶವಾಣಿ ‘ಆಲ್ ಇಂಡಿಯಾ ರೇಡಿಯೋ’ದಲ್ಲಿ ವಿಲೀನವಾಯಿತು.
ಸ್ವಾತಂತ್ರ್ಯ ಹೋರಾಟದಲ್ಲೂ ಆಕಾಶವಾಣಿ ಮಹತ್ವದ ಪಾತ್ರ ನಿರ್ವಹಿಸಿದೆ. ಕಾಂಗ್ರೆಸ್ ಭೂಗತ ರೇಡಿಯೋ ಕೇಂದ್ರವನ್ನು ಸ್ಥಾಪಿಸಿತ್ತು. ಉಷಾ ಮೆಹ್ತಾ, ವಿಠಲದಾಸ್ ಖಕರ್, ಚಂದ್ರಕಾಂತ ಝಾವೇರಿ ಮೊದಲಾದ ಯುವ ಕಾಂಗ್ರೆಸ್ ನಾಯಕರು 1942ರ ಸೆಪ್ಟಂಬರ್ 3ರಂದು ಸ್ವಾತಂತ್ರ್ಯ ಹೋರಾಟದ ಸಂದೇಶ ಮತ್ತು ಮಾಹಿತಿ ನೀಡಲು ರೇಡಿಯೋ ಕೇಂದ್ರ ಸ್ಥಾಪಿಸಿದ್ದರು. ಕಾಂಗ್ರೆಸ್‌ನ ಈ ರೇಡಿಯೋ ಕೇಂದ್ರ ಮುಂಬೈಯ ಗುಪ್ತ ನೆಲೆಯಿಂದ ಪ್ರಸಾರ ಮಾಡುತ್ತಿತ್ತು. ಸ್ವಾತಂತ್ರ್ಯ ಹೋರಾಟದ ಸುದ್ದಿಯನ್ನು ಜನತೆಗೆ ಮುಟ್ಟಿಸುವುದು ಮತ್ತು ಹೋರಾಟಕ್ಕೆ ಜನತೆಯನ್ನು ಸಂಘಟಿಸುವುದು ಇದರ ಮುಖ್ಯ ಧ್ಯೇಯವಾಗಿತ್ತು. ಬ್ರಿಟಿಷ್ ಸರಕಾರಿ ಸ್ವಾಮ್ಯದ ಆಲ್ ಇಂಡಿಯಾ ರೇಡಿಯೋ ಸ್ವಾತಂತ್ರ್ಯ ಸಂಗ್ರಾಮದ ಸುದ್ದಿಗಳನ್ನು ಭಿತ್ತರಿಸುತ್ತಿರಲಿಲ್ಲವಾದ್ದರಿಂದ ಹೋರಾಟ ಗಾರರಿಗೆ ಕಾಂಗ್ರೆಸ್ ರೇಡಿಯೋ ಅನಿವಾರ್ಯವಾಗಿತ್ತು.
1946ನೆ ಇಸವಿಯಲ್ಲಿ ಆಲ್ ಇಂಡಿಯಾ ರೇಡಿಯೋವನ್ನು ವಾರ್ತಾ ಮತ್ತು ಪ್ರಸಾರ ಇಲಾಖೆಗೆ ವಹಿಸಲಾಯಿತು. 1947ರ ನವೆಂಬರ್ 12ರಂದು ಆಕಾಶವಾಣಿಗೆ ಐತಿಹಾಸಿಕ ಮಹತ್ವದ ದಿನ. ಅಂದು ಮಹಾತ್ಮಾ ಗಾಂಧಿಯವರು ದಿಲ್ಲಿ ಆಕಾಶವಾಣಿ ಕೇಂದ್ರಕ್ಕೆ ಭೇಟಿಕೊಟ್ಟು ಅಲ್ಲಿಂದ ಪಾಕಿಸ್ತಾನದಿಂದ ಬಂದು ಕುರುಕ್ಷೇತ್ರದಲ್ಲಿ ಬೀಡುಬಿಟ್ಟಿದ್ದ ನಿರಾಶ್ರಿತರನ್ನುದ್ದೇಶಿಸಿ ನೇರ ಪ್ರಸಾರ ಭಾಷಣ ಮಾಡಿದರು. ಇಪ್ಪತ್ತು ನಿಮಿಷ ಮಾತನಾಡಿದ ಗಾಂಧಿಯವರು, ಸಹನೆ ಮತ್ತು ಧೃಢ ಚಿತ್ತದಿಂದ ಕಷ್ಟಗಳನ್ನು ಎದುರಿಸುವಂತೆ ಮನವಿ ಮಾಡಿಕೊಂಡಿದ್ದರು. ಆಕಾಶವಾಣಿಯ 80 ವರ್ಷಗಳ ಬದುಕಿನಲ್ಲಿ ಇದೊಂದು ಬಂಗಾರದ ಪಾನು. ಈ ಸುದೀರ್ಘ ಅವಧಿಯಲ್ಲಿ ಆಕಾಶವಾಣಿ ಹಲವಾರು ಮಹತ್ವದ ಮಜಲುಗಳನ್ನು ದಾಟಿ ಬಂದಿದೆ, ಹತ್ತಾರು ಸಾಧನೆಗಳನ್ನು ಮೆರೆದಿದೆ.
ಸಾಧನೆಯ ಹಾದಿಯಲ್ಲಿ ಸಾಗಿಬರುವಾಗ ಅದು ಅನೇಕ ಏರು-ಇಳಕಲುಗಳು ಮತ್ತು ಇಕ್ಕಟ್ಟುಗಳನ್ನು ಎದುರಿಸದೇ ಇಲ್ಲ.
ಆಲ್ ಇಂಡಿಯಾ ರೇಡಿಯೋ ಯಾನೆ ಆಕಾಶವಾಣಿಗೆ ಹುಟ್ಟಿದಾರಭ್ಯದಿಂದ ಬಾಲಗ್ರಹದ ಬಾಧೆಯ ಪೀಡನೆ. ಒಂಬತ್ತು ಬಗೆಯ ಗ್ರಹಗಳು ಪೀಡೆಯಾಗಿ ಕಾಡುತ್ತ ಮಕ್ಕಳ ಬೆಳವಣಿಗೆಗೆ ತೊಡಕಾಗುತ್ತವಂತೆ. ಹಾಗೆಯೇ ಆಕಾಶವಾಣಿಯ ಪುರೋಗಾಮಿ ಬೆಳವಣಿಗೆಗೆ ತೊಡಕಾಗಿ ಪರಿಣಮಿಸಿದ್ದು ಸರಕಾರವೆಂಬ ಗ್ರಹ. ಹುಟ್ಟಿದಂದಿನಿಂದ ಅದಕ್ಕೆ ಸ್ವಾಯತ್ತತೆಯ ಪೌಷ್ಟಿಕಾಂಶದ ಕೊರತೆ. 1977ರ ಸೆಪ್ಟಂಬರ್ 15ರವರೆಗೆ ಆಕಾಶವಾಣಿ ಸಂಪೂರ್ಣವಾಗಿ ಕೇಂದ್ರ ಸರಕಾರದ ಸ್ವಾಮ್ಯದಲ್ಲೇ ಇತ್ತು. ಎ.ಐ.ಆರ್. ಸ್ವಾಯತ್ತ ಸಂಸ್ಥೆಯಾಗಬೇಕೆಂಬುದು ನಮ್ಮ ರಾಷ್ಟ್ರ ನಾಯಕರ ಅಭಿಮತವಾಗಿತ್ತು. ಅದು ಸಾಧ್ಯವಾದಷ್ಟೂ ಬಿ.ಬಿ.ಸಿ. ಮಾದರಿಯಲ್ಲಿರಬೇಕೆಂಬುದು ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಬಯಕೆಯಾಗಿತ್ತು.
ಆಲ್ ಇಂಡಿಯಾ ರೇಡಿಯೋ ನಿರ್ವಹಣೆ ಮತ್ತು ಸ್ಥಾನಮಾನ ಕುರಿತು ಅಧ್ಯಯನ ಮಾಡಲು ಚಂದಾ ಸಮಿತಿ ರಚಿಸಲಾಯಿತು. ಆಕಾಶವಾಣಿ ಸರಕಾರಿ ಇಲಾಖೆಯೊಂದರ ಅಧೀನ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಾಗದೆಂದು ಅಭಿಪ್ರಾಯಪಟ್ಟ ಚಂದಾ ಸಮಿತಿ ಆಕಾಶವಾಣಿ ಮತ್ತು ದೂರದರ್ಶನಗಳಿಗಾಗಿ ಪ್ರತ್ಯೇಕ ಕಾರ್ಪೊರೇಷನ್ ಸ್ಥಾಪಿಸುವಂತೆ 1966ರ ಎಪ್ರಿಲ್‌ನಲ್ಲಿ ಸಲ್ಲಿಸಿದ ವರದಿಯಲ್ಲಿ ಶಿಅರಸು ಮಾಡಿತು. ಆಕಾಶವಾಣಿಯನ್ನು ಸ್ವಾಯತ್ತ ಕಾರ್ಪೊರೇಷನ್ ಆಗಿ ಮಾಡಲು ಇದು ಸಕಾಲವಲ್ಲ ಎಂದು ಇಂದಿರಾಗಾಂಧಿಯವರ ಅಂದಿನ ಸರಕಾರ ನಿರ್ಧರಿಸಿತು. ಆದಾಗ್ಯೂ ಆಕಾಶವಾಣಿ-ದೂರದರ್ಶನಗಳಿಗೆ ಸ್ವಾಯತ್ತತೆ ಬೇಕೆಂಬ ಬೇಡಿಕೆಯ ಕೂಗು ನಿಲ್ಲಲಿಲ್ಲ. ಅಧ್ಯಯನಕ್ಕಾಗಿ ಖ್ಯಾತ ಪತ್ರಕರ್ತ ವರ್ಗಿಸ್ ಅವರ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿ ರಚಿಸಲಾಯಿತು. ಈ ಎರಡು ಮಾಧ್ಯಮಗಳಿಗೆ ಸ್ವಾಯತ್ತತೆ ನೀಡಿ ಅವುಗಳ ಆಡಳಿತ ನಿರ್ವಹಣೆಗಾಗಿ ‘ಆಕಾಶಭಾರತಿ’ ಎಂಬ ರಾಷ್ಟ್ರೀಯ ಟ್ರಸ್ಟ್ ಒಂದನ್ನು ಸ್ಥಾಪಿಸಲು ವರ್ಗಿಸ್ ಸಮಿತಿ 1978ರ ಫೆಬ್ರವರಿಯಲ್ಲಿ ಶಿಅರಸು ಮಾಡಿತು. ಆದರೆ ಆಗಿನ ಜನತಾ ಸರಕಾರದಲ್ಲಿ ಈ ಬಗ್ಗೆ ಭಿನ್ನಾಭಿಪ್ರಾಯವಿತ್ತು. ಕೊನೆಗೆ 1990ರಲ್ಲಿ ಸಂಸತ್ತು ಪ್ರಸಾರ ಭಾರತಿ ಮಸೂದೆಯನ್ನು ಅಂಗೀಕರಿಸಿತು. 1997ರಲ್ಲಿ ಪ್ರಸಾರ ಭಾರತಿ ಅಸ್ತಿತ್ವಕ್ಕೆ ಬಂತು. ಪ್ರಸಾರ ಭಾರತಿ ಏನೋ ಅಸ್ತಿತ್ವಕ್ಕೆ ಬಂತು. ಆದರೆ ಆಕಾಶವಾಣಿ ದೂರದರ್ಶನಗಳಿಗೆ ಸ್ವಾಯತ್ತತೆ ಬಂತೆ? ಇದೊಂದು ಲಕ್ಷ ಕೋಟಿ ರೂಗಳ ಪ್ರಶ್ನೆ. ಇತ್ತೀಚೆಗಿನ ದಿನಗಳಲ್ಲಿನ ಆಕಾಶವಾಣಿ/ದೂರದರ್ಶನಗಳ ಕಾರ್ಯವೈಖರಿ ಗಮನಿಸಿದಾಗ ಅವುಗಳಿಗೆ ಸ್ವಾಯತ್ತತೆ ಎಂಬುದು ಮರೀಚಿಕೆಯಾಗಿದೆ ಎನ್ನ್ನುವುದು ಸ್ಪಷ್ಟವಾಗುತ್ತದೆ. ಆಕಾಶವಾಣಿ/ದೂರದರ್ಶನಗಳು ಸರಕಾರದ ಮುಖವಾಣಿಯಾದಾಗ ಅವುಗಳನ್ನು ಸ್ವಾಯತ್ತ ಸಂಸ್ಥೆಗಳೆಂದು ಕರೆಯುವುದೆಂತು? ಅವುಗಳನ್ನು ಸ್ವಾಯತ್ತವಾಗಿ ನಡೆಸಲು, ಅವುಗಳ ಸ್ವಾತಂತ್ರ್ಯ ರಕ್ಷಿಸಲು ಸ್ವಾಯತ್ತ ಪ್ರಸಾರ ಭಾರತಿ ಇರುವಾಗ ಅದೇಕೆ ಸಾಧ್ಯವಾಗಬಾರದು? ಪ್ರಸಾರ ಭಾರತಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುವ ಅಧಿಕಾರ ಕೇಂದ್ರ ಸರಕಾರದ ಬಿಗಿಮುಷ್ಟಿಯಲ್ಲಿದೆ. ತನ್ನ ‘ಹೌದಪ್ಪ’ಗಳನ್ನು ಸರಕಾರ ಈ ಸ್ಥಾನಗಳಿಗೆ ನೇಮಿಸಿದರೆ ಅದರ ರೊಟ್ಟಿ ತುಪ್ಪದಲ್ಲಿ ಜಾರಿಬಿದ್ದಂತೆಯೇ. ಹೀಗೆ ನೇಮಕಗೊಂಡವರು ದೊರೆಗಿಂತ ಹೆಚ್ಚು ಉತ್ಸಾಹಶಾಲಿಗಳಾಗಿದ್ದರಂತೂ ಮುಗಿಯಿತು. ಇವು ನಿರ್ಲಜ್ಜೆಯಿಂದ ಸರಕಾರದ ತುತ್ತೂರಿಗಳಾಗಲು ಯಾವುದೇ ಅಡ್ಡಿ ಆತಂಕಗಳಿರುವುದಿಲ್ಲ. ಈಗ ನಾವು ಕೇಳಿನೋಡಿ ಅನುಭವಿಸುತ್ತಿರುವದು ಇದನ್ನೇ.
ತನ್ನ ಸುದೀರ್ಘ ಅಸ್ತಿತ್ವದ ಅವಧಿಯಲ್ಲಿ ಅಕಾಶ ವಾಣಿ ಕಾರ್ಯಕ್ರಮ ವೈವಿಧ್ಯತೆಯಲ್ಲಿ ಮತ್ತು ತಾಂತ್ರಿಕ ಗುಣಮಟ್ಟ ಪಾಲನೆಯಲ್ಲಿ ಶ್ಲಾಘನೀಯವಾದುದನ್ನು ಸಾಧಿಸಿದೆ ಎಂಬುದರಲ್ಲಿ ಎರಡು ಮಾತಿರಲಾರದು. ಮನರಂಜನೆ ಇರಲಿ, ಶೈಕ್ಷಣಿಕವಿರಲಿ ಆಕಾಶವಾಣಿಯ ಸಾಧನೆ ಗಣನೀಯವಾದುದು. ಎಫ್.ಎಂ. ಮತ್ತು ಡಿಜಿಟಲ್ ಆಧುನಿಕ ತಂತ್ರಜ್ಞಾನಗಳ ಪ್ರಯೋಜನ ಪಡೆದು ಪ್ರಸಾರದ ವೈವಿಧ್ಯತೆ ಮತ್ತು ಪ್ರಸಾರ ಗುಣಮಟ್ಟದಲ್ಲಿ ಸಾಧಿಸಿರುವ ಪ್ರಗತಿಯನ್ನು ಯಾರೂ ಅಲ್ಲಗಳೆಯಲಾಗದು. ಸಂಗೀತ, ಸಾಹಿತ್ಯ, ನಾಟಕ ಮೊದಲಾದ ಕಲೆಗಳಿಗೆ ನೀಡುತ್ತಿರುವ ಪ್ರಾಶಸ್ತ್ಯ, ಕಲೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಶ್ರೋತೃಗಳಲ್ಲಿ ಹೊಸ ಅಭಿರುಚಿ ಬೆಳೆಸುವ ನಿಟ್ಟಿನಲ್ಲೂ ಸಹಕಾರಿಯಾಗಿದೆ. ಸಂಗೀತದ ಪೆಟ್ಟಿಗೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಆಕಾಶವಾಣಿಯಲ್ಲಿ ಸಂಗೀತಕ್ಕೆ ಸಿಂಹಪಾಲು. ಶಾಸ್ತ್ರೀಯ, ಸುಗಮ, ಚಲನಚಿತ್ರ, ಪಾಶ್ಚಾತ್ಯ ಇತ್ಯಾದಿ ಎಲ್ಲ ಬಗೆಯ ಸಂಗೀತ ಪ್ರಸಾರಕ್ಕೆ ಆದ್ಯತೆ ನೀಡಿರುವುದು ಶ್ರೋತೃಗಳ ಅಪೇಕ್ಷೆ-ಬೇಡಿಕೆಗಳಿಗನುಗುಣವಾಗಿಯೇ ಇದೆ. ಅಮೃತವರ್ಷಿಣಿ ಅಭಿಜಾತ ಸಂಗೀತದ ರಸಿಕರಿಗೆ ಒಂದು ಸ್ವಾಗತಾರ್ಹ ವಾಹಿನಿಯಾಗಿದೆ. ಗ್ರಾಮಾಂತರ, ವಾಣಿಜ್ಯ, ಶೈಕ್ಷಣಿಕ ಪ್ರಸಾರಗಳೂ ಉದ್ದೇಶ ಈಡೇರಿಕೆಯಲ್ಲಿ ಸಫಲವಾಗಿವೆ. ಆದರೆ ಇಷ್ಟೇ ಉತ್ಸಾಹದ ಮಾತುಗಳನ್ನು ರಾಜಕೀಯ ಮತ್ತು ಪ್ರಚಲಿತ ವಿಷಯಗಳ ಪ್ರಸಾರದ ಬಗ್ಗೆ ಹೇಳಲಾಗದು. ಈ ಬಾಬುಗಳ ವಸ್ತುನಿಷ್ಠತೆ ಮತ್ತು ಔಚಿತ್ಯಜ್ಞಾನ, ವೃತ್ತಿ ಧರ್ಮಗಳು ಬಿ.ಜೆ.ಪಿ ಸರಕಾರಕ್ಕೆ ಮೊದಲ ಆಹುತಿಯಾಗಿದ್ದು ಆಕಾವಾಣಿ/ದೂರದರ್ಶನಗಳು ನೂರಕ್ಕೆ ನೂರು ಕೇಂದ್ರ ಸರಕಾರ ಮತ್ತು ಬಿಜೆಪಿ ಪಕ್ಷಪಾತಿಯಾಗಿವೆ ಎಂದರೆ ಅದು ಉತ್ಪ್ರೇಕ್ಷೆಯಾಗದು.
ಕೇಂದ್ರ ಸರಕಾರ ಮತ್ತು ಅಧಿಕಾರಾರೂಢ ಪಕ್ಷದ ತುತ್ತೂರಿಯಾಗಿರುವುದರಲ್ಲಿ ಹಾಗೂ ಪ್ರಧಾನಿ ಮೋದಿಯವರ ಮುಖವಾಣಿಯಾಗಿರುವುದರಲ್ಲಿ ಇಂದು ಈ ಎರಡು ಮಾಧ್ಯಮಗಳು ತುರ್ತುಪರಿಸ್ಥಿತಿಯ ಇಂದಿರಾಪರ ಭಟ್ಟಂಗಿತನವನ್ನೂ ಮೀರಿಸಿವೆ. ಸರ್ವಂ ಮೋದಿಮಯಂ. ಮೋದಿಯವರ ಚುನಾವಣಾ ಭಾಷಣಗಳಿರಬಹುದು, ವಿದೇಶಿ ಪ್ರವಾಸವಿರಬಹುದು, ‘ಮನ್ ಕಿ ಬಾತ್’ ಇರಬಹುದು ಇವೆಲ್ಲವೂ ವಸ್ತುನಿಷ್ಠತೆ ಮತ್ತು ಸತ್ಯನಿಷ್ಠತೆ ಮರೆತ, ವೃತ್ತಿ ನಡಾವಳಿ ಮರೆತ ಪ್ರಸಾರ ಭಾರತಿಯ ಭಟ್ಟಂಗಿತನದ ಕಾರ್ಯವೈಖರಿಗೆ ನಿದರ್ಶನಗಳಾಗಿವೆ. ‘ಮನ್ ಕಿ ಬಾತ್’ ಪ್ರಸಾರವಂತೂ ಏಕವ್ಯಕ್ತಿಯ ಅಹಮಿಕೆ ಮೆರೆಸುವುದರ ಜೊತೆಗೆ ಪ್ರಜಾಪ್ರಭುತ್ವದಲ್ಲಿ ಸಲ್ಲದ ವ್ಯಕ್ತಿಪೂಜೆ ಪ್ರವೃತ್ತಿಯನ್ನು ಬೆಳೆಸುವ ರೀತಿಯದಾಗಿದೆ. ಮೋದಿಯವರ ಭಾಷಣದ ಸಲುವಾಗಿ ಪ್ರದೇಶ ಸಮಾಚಾರದಂಥ ಪೂರ್ವನಿಶ್ಚಿತ ಕಾರ್ಯಕ್ರಮಗಳನ್ನು ಹಠಾತ್ತಾಗಿ ನಿಲ್ಲಿಸಿದ ಉದಾಹರಣೆಗಳೂ ಇವೆ. ಇನ್ನು ಕೇಂದ್ರ ಸರಕಾರದ ಜನಧನ್, ಸುಕನ್ಯಾ, ಫಸಲು ವಿಮೆ, ಬೇಟಿ ಬಚಾವೊ, ಮೇಕಿನ್ ಇಂಡಿಯಾ-ಇಂಥ ಹಲವಾರು ಯೋಜನೆಗಳನ್ನು ಕುರಿತ ಪ್ರಸಾರಗಳು ವಸ್ತುನಿಷ್ಠ ವಿಮರ್ಶೆ, ವಿಶ್ಲೇಷಣೆಗಳ ಕೊರತೆಯಿಂದಾಗಿ ವಂದಿಮಾಗಧರು ಉಲಿಯುವ ಬಹುಪರಾಕುಗಳೇ ಆಗಿರುತ್ತವೆ. ಇಂದಿನ ಈ ಪರಿಸ್ಥಿತಿಯಲ್ಲಿ 80 ತುಂಬಿದ ಆಕಾಶವಾಣಿಗೆ ಅಭಿನಂದನೆ ಹೇಳುವುದೋ ಸಂತಾಪ ಸೂಚಿಸುವುದೋ ಎನ್ನುವ ಸಂದಿಗ್ಧ ಕಾಡುತ್ತದೆ.
ಭರತ ವಾಕ್ಯ:
‘ಸ್ವಾತಂತ್ರ್ಯ’ಎಂದರೇನು ರಂಗಯ್ಯ? ಹೊಸ ಹೊಸ ಬಂಧನವ ಮತ್ತೆ ಮತ್ತೆ ಪಡೆಯುವುದು ಅಲ್ಲವೆ?
-ಎಸ್.ವಿ.ರಂಗಣ್ಣ, ರಂಗಬಿನ್ನಪ