ಯಹೂದಿ ಗುರುವಿನ ಎಂಟು ನಿಮಿಷಗಳ ಕ್ರಾಂತಿಕಾರಿ ಭಾಷಣ

Update: 2016-06-12 08:08 GMT

ಇಪ್ಪತ್ತು ವರ್ಷಗಳ ಹಿಂದೆ (1996) ಪ್ರಕಟವಾದ 'ಜೀವ್ಸ್ ಅನ್ದ್  ಬ್ಲ್ಯಾಕ್ಸ್  - ಎ ಡಯಲಾಗ್ ಅನ್ ರೇಸ್ ರಿಲಿಜನ್ ಆನ್ದ್ ಕಲ್ಚರ್ ಇನ್ ಅಮೆರಿಕಾ' ಎಂಬ ಪುಸ್ತಕ ಆ ಕಾಲದಲ್ಲಿ ಬಹಳಷ್ತು ಚರ್ಚೆಗೆ ಒಳಗಾಗಿತ್ತು. ಅದನ್ನು ಬರೆದವರು ತೀರಾ ಭಿನ್ನ

ಹಿನ್ನೆಲೆಯ ಇಬ್ಬರು ಅಮೇರಿಕನ್ ಸಾಹಿತಿಗಳು. ಮೈಕೆಲ್ ಲರ್ನರ್ ಮತ್ತು ಕರ್ನೆಲ್ ವೆಸ್ಟ್. ಈ ಪೈಕಿ ವೆಸ್ಟ್ ಕರಿ ಜನಾಂಗದವರ ಹಕ್ಕು ಗಳ ಕುರಿತು ಕಾಳಜಿ ಉಳ್ಳವರು ಹಾಗೂ ಆ ಕುರಿತು ಸಾಕಷ್ಟು ಅಧ್ಯಯನ ನಡೆಸಿದವರು ಮತ್ತು ಲರ್ನರ್ ಅಮೆರಿಕದ ಯಹೂದಿ ಜನಾಂಗದ ಅ ನುಭವಗಳನ್ನು ಪ್ರತಿ ನಿಧಿಸುವವರು. ಪ್ರಸ್ತುತ ಕೃತಿಯಲ್ಲಿ ಅವರು ಒಂದು ಹಂತದಲ್ಲಿ  ಅಮೇರಿಕದ ಕರಿಯರು ಮತ್ತು ಯಹೂದಿಗಳು ಎಂಬ ಎರಡು ತೀರಾ ಭಿನ್ನ ಸಮುದಾಯಗಳ ಜನರು ಅನುಭವಿಸಿದ ತೀರಾ ಭಿನ್ನ ರೀತಿಯ ಪಕ್ಷಪಾತ, ಅಪಮಾನ, ವಂಚನೆ ಇತ್ಯಾದಿಗಳ ಕುರಿತು ಚರ್ಚಿಸಿದ್ದರು ಮತ್ತು ತಾವು ಮರ್ದಿತರು ಮತ್ತು ವಂಚಿತರು ಎಂಬ ನೆಲೆಯಲ್ಲಿ ತಮ್ಮ ಎರಡು ಸಮುದಾಯಗಳ ಮಧ್ಯೆ ಬೆಳೆದಿದ್ದ ಶತಮಾನಗಳ ನಂಟು ಯಾವ ರೀತಿಯಾಗಿ ಕ್ರಮೇಣ ಕ್ಷೀಣವಾಗುತ್ತಾ ಸಾಗಿತು ಎಂಬುದನ್ನು ಚೆನ್ನಾಗಿ ನಿರೂಪಿಸಿದ್ದರು.

ಈ ಪೈಕಿ ಮೈಕೆಲ್ ಲರ್ನರ್ ಇಂದು ಬಾಕ್ಸಿಂಗ್ ದಂತಕತೆ ಮುಹಮ್ಮದ್ ಅಲಿ ಅವರ ಅಂತ್ಯ ಕ್ರಿಯೆಯ ಐತಿಹಾಸಿಕ ಸಂದರ್ಭದಲ್ಲಿ  ಅತಿಥಿಯಾಗಿ ಆಮಂತ್ರಿತ ರಾಗಿದ್ದರು. ಅವರು ಕೂಡಾ ಮುಹಮ್ಮದ್  ಅಲಿ ಅವರಂತೆಯೇ ತಮ್ಮ ಆತ್ಮ

ಸಾಕ್ಷಿಗೆ ವಿಧೇಯರಾಗಿ  ವಿಯೆಟ್ನಾಮ್ ಯುದ್ಧ ವನ್ನು ವಿರೋಧಿಸಿದವರು ಮತ್ತು ಆ ಯುಧ್ಧದಲ್ಲಿ ಭಾಗವಹಿಸಲು ನಿರಾಕರಿಸಿದ್ದಕ್ಕಾಗಿ ಜೈಲಿಗೆ ಹೋದವರು. ಸದ್ಯ ಅವರು ಕ್ಯಾಲಿಫ಼ೋರ್ನಿಯಾ ಪ್ರಾಂತ್ಯದ ಬರ್ಕ್ ಲೀ ಯಲ್ಲಿರುವ ಬೈತ್ ಟಿಕ್ಕುನ್ ಎಂಬ ಯಹೂದಿ ಸಿನೆಗಾಗ್ ನಲ್ಲಿ ಧರ್ಮ ಗುರುವಾಗಿದ್ದಾರೆ. ಅಲೀ ಅವರ ವಿದಾಯ ಸಮಾವೇಶದಲ್ಲಿ ಅವರು ಮಾಡಿದ ಸುಮಾರು ಎಂಟು ನಿಮಿಷಗಳ ಭಾಷಣ ಹಲವು ಕಾರಣಗಳಿಗಾಗಿ ಇದೀಗ ಜಗತ್ತಿನಾದ್ಯಂತ ಚರ್ಚಾ ವಿ ಷಯವಾಗಿದೆ.

ಅವರ ಐತಿಹಾಸಿಕ ಭಾಷಣದ ಕನ್ನಡ ಭಾಷಾಂತರ ಇಲ್ಲಿದೆ.


 ಪರಮ ವಾತ್ಸಲ್ಯ ಮಯಿ  ಹಾಗೂ ದಯಾಳು ವಾದ ಪ್ರಭುವೇ, ಮುಹಮ್ಮದ್ ಅಲೀಯನ್ನು ಅನುಗ್ರಹಿಸು. ಅಲಿ ಅವರಿಗಾಗಿ ದುಃಖಿಸುತ್ತಿರುವ ಈ ಭೂ ಮಂಡಲದ ಮೇಲಿನ ಲಕ್ಷಾಂತರ ಜನರನ್ನು ಅನುಗ್ರಹಿಸು. ನಾನು ಅಮೆರಿಕಾದ ಯಹೂದಿ ಸಮುದಾಯದ ಪ್ರತಿನಿಧಿಯಾಗಿ ಇಲ್ಲಿಗೆ ಬಂದಿದ್ದೇನೆ. ಅಮೇರಿಕದ ಯಹೂದಿಗಳು ಇಲ್ಲಿನ ಆಫ್ರಿಕನ್ ಅಮೇರಿಕನ್ ಜನಾಂಗದವರ ಹೋರಾಟದಲ್ಲಿ ಅವರ ಜೊತೆ ಸೇರಿ ಬಹಳ ಪ್ರಾಮುಖ್ಯ ಪಾತ್ರ ವಹಿಸಿದ್ದಾರೆ ಮತ್ತು ಇಂದು ನಾವು  ಭಾವೈಕ್ಯ ದೊಂದಿಗೆ ಈ ದೇಶದಲ್ಲಿ ಹಾಗೂ ಜಗತ್ತಿನೆಲ್ಲೆಡೆ ಇರುವ ಇಸ್ಲಾಮೀ ಸಮುದಾಯದ ಜೊತೆಗೆ ನಿಂತಿದ್ದೇವೆ ಎಂಬುದನ್ನು ತಿಳಿಸಲಿಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ. 

  ರಾಜಕಾರಣಿಗಳಾಗಲಿ  ಬೇರೆ ಯಾರೇ ಆಗಲಿ, ಮುಸ್ಲಿಮರನ್ನು  ಕೀಳಾಗಿಸುವುದನ್ನು ಅಥವಾ  ಕೇವಲ ಕೆಲವರ ಕೃತ್ಯ ಗಳಿಗಾಗಿ ಎಲ್ಲ ಮುಸ್ಲಿಮರನ್ನು ದೂಷಿಸುವುದನ್ನು ನಾವು ಖಂಡಿತಾ ಸಹಿಸಲಾರೆವು. ಅಪಮಾನ ಏನೆಂಬುದು ನಮಗೆ ತಿಳಿದಿದೆ. ಕೇವಲ ಕೆಲವರು ನಮ್ಮ ಅತ್ಯುನ್ನತ ಪರಂಪರೆಗೆ ವಿರುಧ್ಧವಾದ ಕೆಲಸಗಳನ್ನು ಮಾಡಿದಾಗ ಅದನ್ನೆ ನಮ್ಮ ಸಂಪೂರ್ಣ ಪರಂಪರೆ  ಮತ್ತು ನಮ್ಮ ಮೌಲ್ಯ ಎಂದು ಗುರುತಿಸುವ ಕೃತ್ಯ ದಿಂದ ಉಂಟಾಗುವ ನೋವಿನ ಪರಿಚಯ ನಮಗಿದೆ. ನಮ್ಮ ಟಿಕ್ಕುನ್ ಪತ್ರಿಕೆ ಕೇವಲ ಪ್ರಗತಿಪರ ಯಹೂದಿಗಳ ಪತ್ರಿಕೆಯಲ್ಲ. ಅದು ಅಂತರ್ ಧರ್ಮೀಯ ಪತ್ರಿಕೆ. ಅಮೇರಿಕದ ಸರಕಾರವು  ಪ್ಯಾಲೆಸ್ತೇನ್  ಸರಕಾರದ ಪರವಾಗಿ ನಿಲ್ಲಬೇಕೆಂದು ನಾವು ಸರಕಾರಕ್ಕೆ ಕರೆ ನೀಡಿದ್ದೇವೆ. ಯಹೂದ್ಯರಾಗಿ ನಾವು, ಪ್ರತಿಯೊಬ್ಬ ಮನುಷ್ಯನನ್ನೂ ದೇವರು ತನ್ನ ಸ್ವರೂಪದ ಪ್ರಕಾರ ಸೃಷ್ಟಿಸಿದ್ದಾನೆಂದು, ಹಾಗೂ  ಪ್ರತಿಯೊಬ್ಬರೂ ಸಮಾನವಾಗಿ ಅಮೂಲ್ಯರಾಗಿರುತ್ತಾರೆಂದೂ ನಂಬುತ್ತೇವೆ.
 ಈ ಮಾತು ಪ್ಯಾಲೆಸ್ಟೈನ್ ನ ಜನರಿಗೆ ಮತ್ತು ಈ ಭೂಮಂಡಳದ ಮೇಲಿರುವ ಎಲ್ಲ ಜನರಿಗೆ ಅನ್ವಯ ವಾಗುತ್ತದೆ.  

 ಲೂಯಿವಿಲ್ಲಿಯ ಜನತೆಗೆ ಮುಹಮ್ಮದ್ ಅಲೀ ಜೊತೆ ಒಂದು ವಿಶೇಷ ಬಗೆಯ ಬಾಂಧವ್ಯ ಇತ್ತು ಎಂಬುದು ನನಗೆ ತಿಳಿದಿದೆ. ಮುಹಮ್ಮದ್ ಅಲೀ ಜೊತೆ ನನಗೆ ಒಂದು ವಿಶೇಷ  ವೈಯಕ್ತಿಕ ಸಂಬಂಧವಿತ್ತು. ಅರುವತ್ತರ ದಶಕದಲ್ಲಿ ವಿಯೆಟ್ನಾಮ್ ಯುಧ್ಧದ ಸಂದರ್ಭದಲ್ಲಿ ನಾವು ಭಿನ್ನ ನಿಲುವು ತಾಳಿದ್ದಕ್ಕಾಗಿ ನಮ್ಮನ್ನು ಅಪರಾಧಿಗಳೆಂದು ಪರಿಗಣಿಸಲಾಗಿತ್ತು. 

  ಬಾಕ್ಸಿಂಗ್ ರಂಗದ ಹೆವಿ ವೈಟ್  ಚಾಂಪಿಯನ್ ಎಂಬ ಕಾರಣಕ್ಕಾಗಿ ಹಲವರು ಮುಹಮ್ಮದ್ ಅಲಿ ಬಗ್ಗೆ ಅಭಿಮಾನ ಪಡುತ್ತಾರೆ. ಆದರೆ ನಿಜವಾಗಿ ಮುಹಮ್ಮದ್ ಅಲೀ ಅದಕ್ಕಿಂತಲೂ ತುಂಬಾ ಎತ್ತರದ ವ್ಯಕ್ತಿ ಯಾಗಿದ್ದರು. ವಿಶ್ವ ಚಾಂಪಿಯನ್ ಗಳು ಬರುತ್ತಿರುತ್ತಾರೆ, ಹೋಗುತ್ತಿರುತ್ತಾರೆ. ಆದರೆ ಮುಹಮ್ಮದ್ ಅಲೀ ಭಿನ್ನ ರಾಗಿದ್ದರು. ಅವರಿಗೆ ಆ ಪದವಿ ಸಿಕ್ಕಿದ ಕ್ಷಣದಲ್ಲೇ ಅವರು ಅದನ್ನು ಅಕ್ರಮ ಯುಧ್ಧದ ವಿರುದ್ಧ ಧ್ವನಿ ಎತ್ತಲು ಬಳಸಿ ಕೊಂಡರು. ಇಲ್ಲ, ನಾನು ಆ ಯುದ್ಧದಲ್ಲಿ ಭಾಗ ವಹಿಸುವುದಿಲ್ಲ ಎಂದು ಘೋಷಿಸುವುದಕ್ಕಾಗಿ ಅವರು ಆ ಪದವಿಯನ್ನು ಬಳಸಿ ಕೊಂಡರು.   

 ಆದ್ದರಿಂದಲೇ ಬಾಕ್ಸಿಂಗ್ ನಲ್ಲಿ ಆಸಕ್ತಿ ಇಲ್ಲದ ಲಕ್ಷಾಂತರ ಅಮೆರಿಕನ್ನರು ಕೂಡಾ ಮುಹಮ್ಮದ್ ಅಲಿ ಅವರನ್ನು ಆದರಿಸುತ್ತಾರೆ. ಆ ಮನುಷ್ಯ  ತಮ್ಮ ನಂಬಿಕೆಗಳಿಗಾಗಿ,  ತಮಗೆ ದೊರೆತ ಒಂದು ದೊಡ್ಡ ಪದಕವನ್ನು ಮತ್ತು ತಮಗೆ ದೊರೆತ ಗೌರವ ಮತ್ತು ತಮ್ಮ ಜನಪ್ರಿಯತೆಯನ್ನು ತ್ಯಾಗ ಮಾಡಲು ಸಿದ್ಧರಾಗಿದ್ದರು. ತಮ್ಮ ಸುತ್ತ ಮುತ್ತಲಿದ್ದವರು, ಬೇಡ, ಬೇಡ, ಅನ್ನುತ್ತಿದ್ದಾಗ, ಮತ್ತು ನೀವು ನಿಮ್ಮ ಪದಕ ವನ್ನು ಕಳೆದು ಕೊಳ್ಳ ಬೇಕಾದೀತೆಂದು ಹೆದರಿಸುತ್ತಿದ್ದಾಗ  ಅವರು ಅಧಿಕಾರಸ್ಥರ ಮುಂದೆ ಸತ್ಯ ಹೇಳುವ ಧೈರ್ಯ ಮೆರೆದರು. ಆ ಕಾರಣಕ್ಕಾಗಿ ಐದು ವರ್ಷಗಳ ಮಟ್ಟಿಗೆ ಅವರಿಂದ ಅದನ್ನು ಕಿತ್ತು ಕೊಳ್ಳ ಲಾಯಿತು. ಅವರ ನೈತಿಕ ಔನ್ನತ್ಯದ ಹಾಗೂ ಅವರ ಶ್ರೇಷ್ಠ ಪ್ರಾಮಾಣಿಕತೆಯ ಕಾರಣ ಅವರು ಅಷ್ಟು ದೊಡ್ಡ ಸಾಹಸ ಮಾಡಿದರು. 

  ನಾವೀಗ ಮುಹಮ್ಮದ್ ಅಲೀ ಅವರನ್ನು ಗೌರವಿಸಬೇಕಾಗಿದೆ. ಹೇಗೆ ಗೊತ್ತೇ? ಇಂದು ನಾವೆಲ್ಲರೂ ಮುಹಮ್ಮದ್ ಅಲಿ ಗಳಾಗಿ  ಮಾರ್ಪಡೋಣ. ನಾವು  ಅಂದರೆ, ಇಲ್ಲಿರುವ ಎಲ್ಲರೂ ಮತ್ತು ಇದನ್ನು ಆಲಿಸುತ್ತಿರುವ ಎಲ್ಲರೂ. ಸತ್ಯ ವನ್ನು ಹೇಳುವ ಶಕ್ತಿಯನ್ನು ಮೈಗೂಡಿಸಿ ಕೊಳ್ಳುವ ಜವಾಬ್ದಾರಿ ಈಗ ನಮ್ಮೆಲ್ಲರದ್ದಾಗಿದೆ. ನಾವು ಮುಕ್ತವಾಗಿ ಮಾತನಾಡ ಬೇಕಾಗಿದೆ. ಯಥಾ ಸ್ಥಿತಿಯನ್ನು ಸಮರ್ಥಿಸುವ ಸಂಪ್ರದಾಯ ವನ್ನು ತಿರಸ್ಕರಿಸ ಬೇಕಾಗಿದೆ. ಬದುಕಿನ ಸ್ಥಾಪಿತ ನಿಯಮಗಳನ್ನು ತಿರಸ್ಕರಿಸ ಬೇಕಾಗಿದೆ. 

  ಈ ದೇಶದ ಎಂಬತ್ತು  ಶೇಕಡ ಸಂಪತ್ತಿಗೆ ಮಾಲಕ ರಾಗಿರುವ ಒಂದು ಶೇಕಡ ಜನರೊಡನೆ, ನೀವು ಆ ನಿಮ್ಮ ಸಂಪತ್ತನ್ನು ಎಲ್ಲರ ಜೊತೆ ಹಂಚಿ ಕೊಳ್ಳ ಬೇಕಾದ ಸಮಯ ಬಂದು ಬಿಟ್ಟಿದೆ ಎಂದು ನಾವು ಹೇಳ ಬೇಕಾಗಿದೆ.. ಜಗತ್ತಿನೆಲ್ಲೆಡೆ ಹಿಂಸೆ ಮೆರೆಯುತ್ತಿರುವ ಮತ್ತು ಆ ಬಳಿಕ, ಮರ್ದಿತ ಜನರಿಗೆ ಅಹಿಂಸೆಯನ್ನು ಉಪದೇಶಿಸುವ ರಾಜಕಾರಿಣಿ ಗಳೊಡನೆ, ನೀವು ತಕ್ಷಣ ನಿಮ್ಮ ಡ್ರೋನ್ ಯುದ್ಧವನ್ನು ಮತ್ತು ಎಲ್ಲ ಬಗೆಯ ಯುದ್ಧಗಳನ್ನು ನಿಲ್ಲಿಸಿ ಬಿಡಿ ಎಂದು ಹೇಳ ಬೇಕಾಗಿದೆ. ಜಗತ್ತಿನೆಲ್ಲೆಡೆ ಇರುವ ನಮ್ಮ ಸೇನಾ ನೆಲೆಗಳನ್ನು ಮುಚ್ಚಿ ನಮ್ಮ ಯೋಧರನ್ನು ನಮ್ಮ ನಾಡಿಗೆ ಮರಳಿಸಬೇಕೆಂದು ಹೇಳ ಬೇಕಾಗಿದೆ. ಸಾಮೂಹಿಕ ದಂಡನೆಯ ನಿಯಮವನ್ನು ಆವಿಷ್ಕರಿಸಿದವರೊಡನೆ, ಎಲ್ಲರಿಗೆ ಬದುಕಲು ಸಾಕಾಗುವಷ್ಟು ಆದಾಯ ಒದಗಿಸಲು ಹೇಳ ಬೇಕಾಗಿದೆ. ಜನಾಂಗವಾದಿ ಪೋಲೀಸರು ಮತ್ತು ಜನಾಂಗವಾದಿ ನ್ಯಾಯಾಧೀಶರು ಜೈಲುಗಳಿಗೆ ಅಟ್ಟಿರುವ ಆಫ್ರಿಕನ್ ಅಮೇರಿಕನ್ ಕೈದಿಗಳನ್ನು ಬಿಡುಗಡೆ ಗೊಳಿಸಬೇಕೆಂದು ನ್ಯಾಯಾಧೀಶರುಗಳಿಗೆ ಹೇಳಬೇಕಾಗಿದೆ. ಅವರಲ್ಲಿ ಹಲವರನ್ನು ಅವರ ಬಳಿ ಮರಿ ಜುವಾನ ಇತ್ತೆಂಬ ಕಾರಣಕ್ಕಾಗಿ ಜೈಲಿಗೆ ಅಟ್ಟಲಾಗಿದೆ. ಅದೇ ಮರಿಜುವಾನ ಬಿಳಿಯರ ಬಳಿಯೂ ಇರುತ್ತದೆ ಆದರೆ ಪ್ರತಿ ಬಾರಿಯೂ ಅವರು ಮುಕ್ತರಾಗಿರುತ್ತಾರೆ. 

 ನಾವೀಗ  ಚಿತ್ರ ಹಿಂಸೆಯನ್ನು ಅನುಮತಿಸುವ ಅಧಿಕಾರಿಗಳನ್ನು ಜೈಲಿಗೆ ಕಳಿಸಬೇಕೆಂದು ಆಗ್ರಹಿಸ ಬೇಕಾಗಿದೆ. ಹಾಗೆಯೇ ನಾವು 2008 ರಲ್ಲಿ ಆರ್ಥಿಕ ಮುಗ್ಗಟ್ಟಿಗೆ ಕಾರಣರಾದ ದೊಡ್ಡ ದೊಡ್ಡ ಬ್ಯಾಂಕುಗಳ ಹಾಗೂ ಹೂಡಿಕೆ ಕಂಪೆನಿಗಳ ಮಾಲಕರನ್ನು ಜೈಲಿಗೆ ಕಳಿಸಬೇಕೆಂದು ಆಗ್ರಹಿಸ ಬೇಕಾಗಿದೆ. ಕುರ್ದ್ ಜನಾಂಗದವರ ಹತ್ಯೆಯನ್ನು ತಕ್ಷಣ ನಿಲ್ಲಿಸ ಬೇಕೆಂದು ನಾವು  ಟರ್ಕಿಯ ಸರಕಾರವನ್ನು ಒತ್ತಾಯಿಸ ಬೇಕಾಗಿದೆ. ಪಶ್ಚಿಮ ದಂಡೆಯ ಮೇಲಿನ ಆಕ್ರಮಣವನ್ನು ನಿಲ್ಲಿಸಿ ಪ್ಯಾಲಸ್ತೀನ್ ಸರಕಾರವನ್ನು ಸೃಷ್ಟಿಸುವುದೆ ಇಸ್ರೇಲ್ ದೇಶದ ಭದ್ರತೆಗೆ ಇರುವ ಮಾರ್ಗ ಎಂದು  ನಾವು  ಇಸ್ರೇಲ್ ಪ್ರಧಾನಿ ನೆತನ್ಯಾಹುರಿಗೆ ಹೇಳ ಬೇಕಾಗಿದೆ. 

 ಅದೇರೀತಿ, ನಮ್ಮ ಮುಂದಿನ ರಾಷ್ಟ್ರಪತಿ, ಆಕೆ ಸಂಸತ್ತು, ಶಾಸಕಾಂಗ ಮತ್ತು ಇತರೆಲ್ಲ ಚುನಾವಣೆಗಳು ಸಾರ್ವಜನಿಕ ರ ಹಣದಿಂದ ಮಾತ್ರ ನಡೆಯುವಂತೆ  ನೋಡಿ ಕೊಳ್ಳುವ ಕಾನೂನನ್ನು ಜಾರಿ ಗೊಳಿಸ ಬೇಕೆಂದು  ನಾವು ಆಗ್ರಹಿಸಬೆಕು. ಆಕೆ  ನಮ್ಮ ನಾಡಿನ ಆಂತರಿಕ ಭದ್ರತೆಗಾಗಿ ಇತರರ ಮೇಲೆ ನಮ್ಮ ಸ್ವಾಮ್ಯವನ್ನು ಹೇರುವ ಪರಂಪರೆಯನ್ನು ಕೊನೆಗೊಳಿಸಲಿ. ನಮ್ಮ ಭದ್ರತೆಗಾಗಿ ಇತರರನ್ನು ಆಕ್ರಮಿಸುವ ಕಾರ್ಯ ತಂತ್ರ ಕಳೆದ  ಹತ್ತು ಸಾವಿರ ವರ್ಷಗಳಿಂದ ಚಲಾವಣೆಯಲ್ಲಿದೆ. ಆದರೆ ಅದು ಸಫಲವಾಗಿಲ್ಲ. ನಮ್ಮ ಭದ್ರತೆಗೆ ಇರುವ ಒಂದೇ ಮಾರ್ಗವೇನೆಂದರೆ ನಾವು ಜಗತ್ತಿನ ಅತ್ಯಂತ ಉದಾರ ದೇಶ ವಾಗಬೇಕು, ಜಗತ್ತಿನ ಅತ್ಯಧಿಕ  ಹಿತಚಿಂತಕ  ದೇಶವಾಗ ಬೇಕು. ಜಗತ್ತಿನ ಅತ್ಯಂತ ಶಕ್ತಿಶಾಲಿ ದೇಶವಾಗುವ ಮೂಲಕ ಇದನ್ನು ಸಾಧಿಸಲು ಸಾಧ್ಯವಿಲ್ಲ. 

  ನಮ್ಮ ದೇಶದೊಳಗಿನ ಮತ್ತು ಜಗತ್ತಿನೆಲ್ಲೆಡೆ ಇರುವ ಬಡತನ, ನಿರಾಶ್ರಯ, ಹಸಿವು, ಶಿಕ್ಷಣದ ಕೊರತೆ, ಆರೋಗ್ಯದ ಕೊರತೆ ಇವೆಲ್ಲವನ್ನೂ ಶಾಶ್ವತವಾಗಿ ಕೊನೆ ಗೊಳಿ ಸುವ ಒಂದು ಸಮಗ್ರ ಯೋಜನೆ ರೂಪಿಸಬೇ ಕಾಗಿದೆ. ಆಧ್ಯಾತ್ಮಿಕ ಉನ್ನತಿಗಾಗಿ ನಾವೆಲ್ಲಾ ಜೊತೆಗೂಡಿ ಶ್ರಮಿಸ ಬೇಕಾಗಿದೆ.  ಈ ಸಂದರ್ಭದಲ್ಲಿ ನಾನು ನಮ್ಮ ಬಧ್ಧತೆಗಳನ್ನು ಪುನರುಚ್ಚರಿಸಲು ಬಯಸುತ್ತೇನೆ. ಜಗತ್ತಿನಲ್ಲಿರುವ ಎಲ್ಲ ಮುಸ್ಲಿಮರ, ಎಲ್ಲ ಧರ್ಮಗಳ ಜನರ, ಎಲ್ಲ ಜಾತ್ಯತೀತ, ಮಾನವತಾವಾದಿ ಗಳ ಹಿತ ರಕ್ಷಣೆಗೆ ನಾವು ಬಧ್ಧ ರಾಗಿದ್ದೇವೆ. ಮುಸ್ಲಿಮರು  ರಮಝಾನ್ ತಿಂಗಳ ಉಪವಾಸ ಆಚರಿಸುತ್ತಿದ್ದಾರೆ. ಅವರಿಗೆ ನಾನು ಗೌರವ ಸಲ್ಲಿಸ ಬಯಸುತ್ತೇನೆ. ಮುಹಮ್ಮದ್ ಅಲೀಯವರ ನಿರ್ಗಮನದ ದುಖವನ್ನು ನಾನು ಅವರೆಲ್ಲರ ಜೊತೆ ಹಂಚಿ ಕೊಳ್ಳ ಬಯಸುತ್ತೇನೆ. ಆತ ನ್ಯಾಯ ಹಾಗೂ ಶಾಂತಿಗಾಗಿ ಹೋರಾಡಿದ ಮಹಾನ್ ಹೋರಾಟ ಗಾರರಾಗಿದ್ದರು.  ನಾನು ಅವರಿಗೆ  ಶಾಂತಿಯನ್ನು ಕೋರುತ್ತೇನೆ, ಪ್ರವಾದಿ ಮುಹಮ್ಮದ್ ರಿಗೆ ಶಾಂತಿ ಯನ್ನು ಕೋರುತ್ತೇನೆ. ಮತ್ತು ಸಂಪೂರ್ಣ ಮಾನವ ಕುಲಕ್ಕೆ ಶಾಂತಿಯನ್ನು ಕೋರುತ್ತೇನೆ. ನಮಗೆಲ್ಲರಿಗೂ ಶಾಂತಿಯನ್ನು ಕೋರುತ್ತೇನೆ. ಆಮೆನ್.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News