ಕೈರಾನಾದಿಂದ ಹಿಂದು ಕಟುಂಬಗಳ ಸಾಮೂಹಿಕ ಗುಳೆ
ಹೊಸದಿಲ್ಲಿ,ಜೂ.12: ಉತ್ತರ ಪ್ರದೇಶದ ಕೈರಾನಾದಲ್ಲಿ ದುಷ್ಕರ್ಮಿಗಳ ಉಪಟಳ ತಡೆಯಲಾರದೆ 250ಕ್ಕೂ ಅಧಿಕ ಹಿಂದು ಕುಟುಂಬಗಳು ತಮ್ಮ ಆಸ್ತಿಪಾಸ್ತಿಗಳನ್ನು ತೊರೆದು ಸಾಮೂಹಿಕ ಗುಳೆ ಹೋಗಿದ್ದು, ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಕೈರಾನಾದ ಬಿಜೆಪಿ ಸಂಸದ ಹುಕುಂ ಸಿಂಗ್ ಅವರು ಗೃಹಸಚಿವ ರಾಜನಾಥ ಸಿಂಗ್ ಅವರನ್ನು ಆಗ್ರಹಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಶುಕ್ರವಾರ ಅಖಿಲೇಶ ಯಾದವ ಸರಕಾರಕ್ಕೆ ನೋಟಿಸನ್ನು ಹೊರಡಿಸಿದೆ.
ರಾಜಕೀಯ ಬೆಂಬಲ ಹೊಂದಿರುವ ಕ್ರಿಮಿನಲ್‌ಗಳ ಭೀತಿಯಿಂದ 2014ರಿಂದ ಈ ಕುಟುಂಬಗಳು ತಮ್ಮ ಊರುಗಳನ್ನು ತೊರೆದಿವೆ.
ರವಿವಾರ ಅಲಹಾಬಾದ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ರವಿಶಂಕರ ಪ್ರಸಾದ್ ಅವರು, ವಿಷಯವು ಗಂಭೀರವಾಗಿದ್ದರೂ ಉತ್ತರ ಪ್ರದೇಶ ಸರಕಾರವು ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಕಾಶ್ಯಪ ಜಾತಿಯ ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿ ಬಳಿಕ ಹತ್ಯೆಗೈಯಲಾಗಿತ್ತು. ಆದರೆ ಪೊಲೀಸರು ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು 2016,ಜೂನ್ 10ರಂದು ಸಲ್ಲಿಸಿರುವ ದೂರಿನಲ್ಲಿ ಆರೋಪಿಸಲಾಗಿದೆ.
2014ರಲ್ಲಿ ಹಫ್ತಾ ನೀಡದ್ದಕ್ಕಾಗಿ ಮುಸ್ಲಿಮ ಗ್ಯಾಂಗೊಂದು ಹಾಡಹಗಲೇ ಮಾರುಕಟ್ಟೆಯಲ್ಲಿ ಇಬ್ಬರು ಉದ್ಯಮಿ ಸೋದರರನ್ನು ಗುಂಡಿಟ್ಟು ಹತ್ಯೆಗೈದಿತ್ತು. ಪ್ರದೇಶದಲ್ಲಿ ಪೆಟ್ರೋಲ್ ಬಂಕ್‌ವೊಂದನ್ನೂ ದೋಚಿದ್ದ ಗುಂಪು ಓರ್ವ ಪೊಲೀಸ್‌ನನ್ನು ಹತ್ಯೆಗೈದು ಪರಾರಿಯಾಗಿತ್ತು ಎಂದೂ ದೂರಿನಲ್ಲಿ ತಿಳಿಸಲಾಗಿದೆ.
ಪ್ರದೇಶದಲ್ಲಿ ಹಾವಳಿಯೆಬ್ಬಿಸಿರುವ ಮುಸ್ಲಿಮ ಗ್ಯಾಂಗಿಗೆ ತನ್ನ ಸಹಚರರೊಂದಿಗೆ ಜೈಲಿನಲ್ಲಿರುವ ಮುಕೀಂ ಕಾಲಾ ಎಂಬಾತ ನಾಯಕನಾಗಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.