×
Ad

ಡೋ ಕೆಮಿಕಲ್ಸ್‌ಗೆ ರಕ್ಷಣೆ ನೀಡುವುದನ್ನು ನಿಲ್ಲಿಸಿ

Update: 2016-06-13 23:59 IST

ವಾಶಿಂಗ್ಟನ್, ಜೂ. 13: 1984ರ ಭೋಪಾಲ್ ಅನಿಲ ದುರಂತ ಪ್ರಕರಣಕ್ಕೆ ಸಂಬಂಧಿಸಿ ಕಾರ್ಪೊರೇಟ್ ಅಪರಾಧಗಳ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಅಮೆರಿಕದ ಬಹುರಾಷ್ಟ್ರೀಯ ಕಂಪೆನಿ ಡೋ ಕೆಮಿಕಲ್ಸ್ ನಡೆಸುತ್ತಿರುವ ಪ್ರಯತ್ನಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸುವಂತೆ ಒಬಾಮ ಆಡಳಿತಕ್ಕೆ ಕರೆ ನೀಡುವ ಆನ್‌ಲೈನ್ ಮನವಿಯೊಂದು ಶ್ವೇತಭವನದ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದೆ.

ಮನವಿಗೆ ಸಹಿ ಹಾಕಿದವರ ಸಂಖ್ಯೆ ಈಗ ಒಂದು ಲಕ್ಷವನ್ನು ದಾಟಿದ್ದು, ಶ್ವೇತಭವನ ಇದಕ್ಕೆ ಪ್ರತಿಕ್ರಿಯೆ ನೀಡುವುದು ಅಗತ್ಯವಾಗಿದೆ.

‘ಅಂತಾರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯಿರಿ! ಭಾರತದ ಭೋಪಾಲ್‌ನಲ್ಲಿ ನಡೆಸಿದ ಕಾರ್ಪೊರೇಟ್ ಅಪರಾಧಗಳ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಅಮೆರಿಕದ ಬಹುರಾಷ್ಟ್ರೀಯ ಕಂಪೆನಿ ಡೋ ಕೆಮಿಕಲ್ಸ್ ನಡೆಸುತ್ತಿರುವ ಪ್ರಯತ್ನಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಿ’ ಎಂಬ ತಲೆಬರಹವನ್ನು ಮೇ 15ರ ದಿನಾಂಕದ ಮನವಿ ಹೊಂದಿದೆ. ಮೂರು ದಶಕಗಳಿಗೂ ಅಧಿಕ ಅವಧಿಯಿಂದ ಯೂನಿಯನ್ ಕಾರ್ಬೈಡ್ (ಈಗ ಇದನ್ನು ಡೋ ಕೆಮಿಕಲ್ಸ್ ಖರೀದಿಸಿದೆ)ಗೆ ನೀಡಲಾಗುತ್ತಿರುವ ರಕ್ಷಣೆ ಕೊನೆಗೊಳ್ಳಬೇಕು ಎಂಬುದಾಗಿ ಮನವಿ ಒತ್ತಾಯಿಸಿದೆ.

‘‘ಒಪ್ಪಂದ ಮತ್ತು ಅಂತಾರಾಷ್ಟ್ರೀಯ ಕಾನೂನಿನಡಿ ಬರುವ ತನ್ನ ಬದ್ಧತೆಯನ್ನು ಅಮೆರಿಕ ಈಡೇರಿಸಬೇಕೆಂದು ನಾವು ಬಯಸುತ್ತೇವೆ. ಆ ಪ್ರಕಾರ, 2016 ಜುಲೈ 13ರಂದು ಭೋಪಾಲ್‌ನಲ್ಲಿ ನಡೆಯಲಿರುವ ವಿಚಾರಣೆಗೆ ಹಾಜರಾಗುವಂತೆ ಅಮೆರಿಕ ಡೋ ಇಂಟರ್‌ನ್ಯಾಶನಲ್‌ಗೆ ಕೂಡಲೇ ನೋಟಿಸ್ ಜಾರಿಗೊಳಿಸಬೇಕು’’ ಎಂದು ಮನವಿ ಒತ್ತಾಯಿಸಿದೆ.

ಜೂನ್ 12ರ ವೇಳೆಗೆ ಈ ಮನವಿಗೆ 1.02 ಲಕ್ಷ ಸಹಿಗಳು ಬಿದ್ದಿವೆ. 1984ರ ಡಿಸೆಂಬರ್ 2-3ರ ರಾತ್ರಿ ಯೂನಿಯನ್ ಕಾರ್ಬೈಡ್‌ನ ಭೋಪಾಲ್ ಕಾರ್ಖಾನೆಯಿಂದ ವಿಷಕಾರಿ ಮಿಥೈಲ್ ಐಸೋಸಯನೇಟ್ ಅನಿಲ ಟನ್‌ಗಟ್ಟಳೆ ಪ್ರಮಾಣದಲ್ಲಿ ಸೋರಿಕೆಯಾಗಿತ್ತು. ದುರಂತದಲ್ಲಿ ಸುಮಾರು 25,000 ಮಂದಿ ಪ್ರಾಣ ಕಳೆದುಕೊಂಡರೆ, 5 ಲಕ್ಷಕ್ಕೂ ಅಧಿಕ ಮಂದಿ ಗಾಯಗೊಂಡರು.

‘‘ಯೂನಿಯನ್ ಕಾರ್ಬೈಡ್ ವಿರುದ್ಧ ಭಾರತ ನರಹತ್ಯೆ ಆರೋಪವನ್ನು ಹೊರಿಸಿತು. ಆದರೆ, ಅದು ವಿಚಾರಣೆಗೆ ಹಾಜರಾಗಲು ನಿರಾಕರಿಸಿತು. ಡೋ ಕೆಮಿಕಲ್ಸ್ 2001ರಲ್ಲಿ ಯೂನಿಯನ್ ಕಾರ್ಬೈಡನ್ನು ಖರೀದಿಸಿತು. ಆದರೆ, ಆರೋಪಗಳನ್ನು ಎದುರಿಸಲು ಅದು ಯೂನಿಯನ್ ಕಾರ್ಬೈಡನ್ನು ಕಳುಹಿಸಿಕೊಡಲಿಲ್ಲ’’ ಎಂದು ಮನವಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News