"ದಾಲ್‌ಗೆ ನೀರು ಬೆರೆಸಿ, ಕಡಿಮೆ ಸೇವಿಸಿ"

Update: 2016-06-19 03:57 GMT

ಹೊಸದಿಲ್ಲಿ,ಜೂ.19: ವಿವಾದಾತ್ಮಕ ಯೋಗಗುರು ಹಾಗೂ ಸ್ವಯಂಘೋಷಿತ ಪವಾಡ ಪುರುಷ ಮತ್ತೆ ಮೋದಿ ಬೆಂಬಲಕ್ಕೆ ನಿಂತಿದ್ದಾರೆ. ದೇಶಾದ್ಯಂತ ಬೇಳೆಕಾಳುಗಳ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ, ಬೇಳೆ ಕಾಳು ಬಳಕೆಯನ್ನೇ ಕಡಿಮೆ ಮಾಡುವಂತೆ ಅವರು ನಾಗರಿಕರಿಗೆ ಸಲಹೆ ಮಾಡಿದ್ದಾರೆ. ಬೇಳೆಕಾಳುಗಳ ಬೆಲೆ ಏರಿಕೆಗೆ ಪ್ರಧಾನಿಯನ್ನು ಟೀಕಿಸಿ ಯಾವ ಪ್ರಯೋಜನವೂ ಇಲ್ಲ ಎಂದು ಹೇಳಿದ್ದಾರೆ.

ಬೆಲೆ ಏರಿಕೆ ತಡೆಯಲು ಇರುವ ಏಕೈಕ ಪರಿಹಾರವೆಂದರೆ, ಬಳಕೆ ಕಡಿಮೆ ಮಾಡುವುದು. ನಿಮಗೆ ಪ್ರಮಾಣ ಅಧಿಕ ಆಗಬೇಕಿದ್ದರೆ ದಾಲ್‌ಗೆ ನೀರು ಸೇರಿಸಿ, ಹೆಚ್ಚು ಮಾಡಿಕೊಳ್ಳಿ ಎಂದು ಸೂಚಿಸಿದ್ದಾರೆ.

ಫರಿದಾಬಾದ್‌ನಲ್ಲಿ ಯೋಗ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದಾಲ್‌ಗೆ ನೀರು ಹೆಚ್ಚು ಸೇರಿಸುವುದರಿಂದ ಬೊಜ್ಜು ಕಡಿಮೆಯಾಗುವುದು ಮಾತ್ರವಲ್ಲದೇ, ಧೀರ್ಘಾವಧಿಯಲ್ಲಿ ಆರೋಗ್ಯಕ್ಕೂ ಉತ್ತಮ. ಇದು ದೇಶದಲ್ಲಿ ಬೇಳೆ ಬಳಕೆಯನ್ನು ಕಡಿಮೆ ಮಾಡಲೂ ಸಹಕಾರಿಯಾಗುತ್ತದೆ ಎಂದು ಪುಕ್ಕಟೆ ಸಲಹೆ ನೀಡಿದ್ದಾರೆ.

ರಾಮ್‌ದೇವ್ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಏಜೆಂಟ್‌ನಂತೆ ವರ್ತಿಸುವುದು ಇದೇ ಮೊದಲಲ್ಲ. 2014ರ ಲೋಕಸಭಾ ಚುನಾವಣೆಯಲ್ಲೂ ಬಾಬಾ, ಮೋದಿ ಬೆಂಬಲಕ್ಕೆ ನಿಂತಿದ್ದರು. ಈ ಮೊದಲು ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ, ಬೆಲೆ ಏರಿಕೆ, ರೂಪಾಯಿ ಅಪಮೌಲ್ಯ ಮತ್ತು ಕಪ್ಪು ಹಣ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿಸಿದ್ದರು. ಆದರೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ತಾವು ಹಿಂದೆ ಹೋರಾಡುತ್ತಿದ್ದ ವಿಷಯಗಳ ಬಗ್ಗೆಯೇ ಯು ಟರ್ನ್ ನಿಲುವು ತಾಳಿದ್ದಾರೆ. ರಾಮ್‌ದೇವ್ ಅವರ ಈಗಿನ ಹೇಳಿಕೆ, ಬೇಳೆಕಾಳುಗಳ ಬೆಲೆ ಕೆ.ಜಿ.ಗೆ 200 ರೂಪಾಯಿ ತಲುಪಿದಾಗ ಡಿಸೆಂಬರ್‌ನಲ್ಲಿ ನೀಡಿದ ಹೇಳಿಕೆಗೆ ವಿರುದ್ಧವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News